ದುರ್ಬಲ ಮನಸನ್ನು ದೂರವಿಡೋಣ...

Manollasa Image
Published on
ಮಹಾದೇವ ಬಸರಕೋಡ

ಬದುಕಿನ ಹಿನ್ನಡೆಗೆ, ಸಂಭವಿಸುವ ಒಂದಷ್ಟು ಕೆಡುಕುಗಳಿಗೆ ನಾವು ಎದುರಿಸುವ ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವಲ್ಲಿನ ವಿಫಲತೆಯೇ ಬಹುದೊಡ್ಡ ಕಾರಣಗಳಲ್ಲಿ ಒಂದು. ಒಂದು ಬಾರಿ ವ್ಯಕ್ತಿಯೊಬ್ಬ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಕಾಡಿನ ಮಧ್ಯಭಾಗದಲ್ಲಿ ತಲುಪಿದಾಗ ಕಾಲುಗಳನ್ನು ಕಳೆದುಕೊಂಡ ನರಿಯೊಂದನ್ನು ಕಂಡ. ಅದು ಒಂದೇ ಸ್ಥಳದಲ್ಲಿ ಬಿದ್ದುಕೊಂಡಿತ್ತು. ಕಾಲುಗಳನ್ನು ಕಳೆದುಕೊಂಡ ನರಿಯು ಆಹಾರವನ್ನು ಹೇಗೆ ಸಂಪಾದಿಸುತ್ತದೆ ಎಂಬ ಕುತೂಹಲ ಅವನನ್ನು ಕಾಡತೊಡಗಿತು.

ಅಷ್ಟರಲ್ಲಿಯೇ ಹುಲಿಯೊಂದು ಬೇಟೆಯಾಡಿ ತಾನು ಹೊಟ್ಟೆ ತುಂಬ ತಿಂದು ಉಳಿದ ಆಹಾರವನ್ನು ನರಿಯ ಹತ್ತಿರ ಬಿಟ್ಟು ಹೋಯಿತು. ನರಿ ಆ ಆಹಾರವನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಂಡಿತು. ಮರುದಿನವೂ ಕಾಕತಾಳೀಯವೆಂಬಂತೆ ಅದೇ ಹುಲಿ ತನ್ನ ಹೊಟ್ಟೆ ತುಂಬಿದ ನಂತರ ಒಂದಿಷ್ಟು ಆಹಾರ ನರಿಯ ಹತ್ತಿರವೇ ಬಿಟ್ಟು ಹೋಯಿತು. ನರಿ ಅದನ್ನು ತಿಂದು ಹಸಿವನ್ನು ನೀಗಿಸಿಕೊಂಡಿತು. ಈ ಘಟನೆಯನ್ನು ನೋಡಿದ ವ್ಯಕ್ತಿ ಇದನ್ನು ದೇವರ ಮಹಿಮೆ ಎಂದು ಕೊಂಡಾಡಿದ. ಹುಟ್ಟಿದ ದೇವರು ಹುಲ್ಲು ಮೇಯಿಸಲಾರದೇ ಇರಲಾರ ಎಂಬ ನಂಬಿಕೆಯಿಂದ ಅಂದಿನಿಂದ ದಿನ ತಾನು ಯಾವುದೇ ಕೆಲಸ ಮಾಡದೇ ಮೂಲೆಯಲ್ಲಿ ಬಿದ್ದುಕೊಂಡ. ಒಂದಷ್ಟು ದಿನ ಹೀಗೆಯೇ ಕಳೆದು ಹೋಯಿತು. ಯಾವ ಆಹಾರವೂ ದೊರೆಯಲಿಲ್ಲ. ಉಪವಾಸದಿಂದ ಅಶಕ್ತನಾದ. ಸಂತರೊಬ್ಬರು ಇವನನ್ನು ಗಮನಿಸಿ, ವಿಚಾರಿಸಿದರು. ಆತ ತನ್ನ ಕಥೆಯನ್ನು ವಿವರಿಸಿದ. ದೇವರನ್ನು ಹಳಿದ. ಸಂತರು-‘ನಿನ್ನ ಕಣ್ಣುಗಳನ್ನು ತೆರೆದು ನೋಡು. ದೇವರು ಹುಲಿಯನ್ನು ಅನುಕರಣೆ ಮಾಡುವ ಸಂದೇಶವನ್ನು ನಿನಗೆ ನೀಡಿದ. ಆದರೆ ನೀನು ತಪ್ಪಾಗಿ ಅರ್ಥೈಸಿಕೊಂಡು ನರಿಯನ್ನು ಅನುಕರಣೆ ಮಾಡಿದೆ’ ಎಂದರು. ವ್ಯಕ್ತಿಗೆ ತನ್ನ ತಪ್ಪಿನ ಅರಿವಾಯಿತು.

ಬದುಕಿನ ಬಹುತೇಕ ಸಂದರ್ಭದಲ್ಲಿ ನಮ್ಮ ಯೋಚನೆಗಳು ಇದಕ್ಕಿಂತ ಭಿನ್ನವಾಗಿ ಇರುವುದಿಲ್ಲ. ಸೋಮಾರಿತನ ಹಾಗೂ ದುರ್ಬಲ ಮನಸ್ಸು ಸದಾ ಸುಲಭದ ಮಾರ್ಗಗಳನ್ನೇ ಅನುಸರಿಸುವ ಹವಣಿಕೆಯಲ್ಲಿ ಇರುತ್ತದೆ. ಎಲ್ಲಿ ಪರ್ಯಾಯದ ಮಾರ್ಗ ಹಿಡಿಯಬಾರದೋ ಅಂತಹುದೇ ಮಾರ್ಗವನ್ನು ನಾವು ಬಹಳಷ್ಟು ಬಾರಿ ಆಯ್ಕೆ ಮಾಡಿಕೊಳ್ಳಲು ಇದು ಪ್ರೇರೇಪಿಸುತ್ತದೆ. ಭ್ರಾಂತಿಗಳಿಗೆ ಬಲಿಯಾಗುತ್ತದೆ. ಇದರಿಂದ ಸೋಲು, ಹತಾಶೆ ಉಂಟಾಗುತ್ತದೆ. ಸೂಕ್ತ ಆದ್ಯತೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಬದುಕಿನ ಜಾಣತನವಾಗಿದೆ. ನಮ್ಮ ಬದುಕು ನಮ್ಮ ಆಯ್ಕೆ ಮತ್ತು ನಿರ್ಧಾರಗಳ ಗುಣಮಟ್ಟದ ಮೇಲೆಯೇ ಅವಲಂಬಿತವಾಗಿರುತ್ತದೆ. ಜೀವನದ ಪಯಣವನ್ನು ಸಂತೋಷದಿಂದ ಅನುಭವಿಸಲು ನಾವು ಸಕಾರಾತ್ಮಕ ಅಂಶಗಳಿಂದ ಪ್ರೇರಣೆಗೊಳ್ಳುವುದು ತೀರಾ ಅಗತ್ಯವಾಗಿದೆ. ನಮ್ಮ ಆಯ್ಕೆಗಳು ನಮ್ಮ ಬದುಕಿಗೆ ಗಹನತೆಯನ್ನು ತಂದುಕೊಡುವಂತಿರಬೇಕು. ಹೊಸ ಸಾಮರ್ಥ್ಯಗಳನ್ನು ಇನ್ನಷ್ಟು ಇಂಬುಗೊಳಿಸುವಂತಾಬೇಕು. ಇಂಥ ವಿವೇಕದ ಆಯ್ಕೆಯನ್ನು ಮಾಡಿಕೊಳ್ಳುವುದು ಮಾತ್ರವೇ ನಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ. ಬದುಕನ್ನು ಹಸನಾಗಿಸುತ್ತದೆ.

(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net