

| ಮಹಾದೇವ ಬಸರಕೋಡ
ನಾವು ದೈನಂದಿನ ಬದುಕಿನಲ್ಲಿ ಪಡೆದ ಅನುಭವಗಳಿಂದ ಒಂದಷ್ಟು ಜ್ಞಾನವನ್ನು ಗಳಿಸಿಕೊಳ್ಳುತ್ತೇವೆ. ಇಂಥ ಜ್ಞಾನದ ಮೂಲಕವೇ ನಾವು ನಮ್ಮನ್ನು ನೋಡಿಕೊಳ್ಳುತ್ತೇವೆ. ನಮಗೆ ಬೇಕಾದ ಸುರಕ್ಷತೆ, ನಿಖರತೆಯನ್ನು ಹುಡುಕಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ಸಂಗ್ರಹಗೊಂಡ ಜ್ಞಾನ ಜಡಗೊಳ್ಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ನಮಗರಿವಿಲ್ಲದಂತೆಯೇ ನಾವು ಇಂಥ ಜಡತ್ವವನ್ನು ಅಪ್ಪಿಕೊಂಡೆ ಬದುಕನ್ನೆಲ್ಲ ಕಟ್ಟಿಕೊಳ್ಳುವ ಆಸಕ್ತಿ ತೋರುತ್ತೇವೆ. ಇನ್ನೊಂದು ಅರ್ಥದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ಪಡೆದ ಅನುಭವದ ಮೂಲಕ ಸಂಚಿತಗೊಂಡ ಜ್ಞಾನ ಪರೋಕ್ಷವಾಗಿ ಮನಸ್ಸನ್ನು ಕಟ್ಟಿಹಾಕಿ ಬಂಧನಕ್ಕೆ ಒಳಗು ಮಾಡುತ್ತದೆ. ನಮ್ಮ ವಿವೇಕವನ್ನು ಮಸುಕಾಗಿಸುತ್ತದೆ.
ರಾಜ ಕೃಷ್ಣದೇವರಾಯ ತನ್ನ ಆಸ್ಥಾನದಲ್ಲಿ ಹಲವರಿಗೆ ಒಂದೇ ತೆರನಾದ ಬೆಕ್ಕುಗಳನ್ನು ಕೊಡಿಸಿ, ಮೂರು ತಿಂಗಳಲ್ಲಿ ಯಾರು ಬೆಕ್ಕುಗಳನ್ನು ಉತ್ತಮವಾಗಿ ಸಾಕುತ್ತೀರೋ, ಹೆಚ್ಚು ದಷ್ಟಪುಷ್ಟವಾಗಿ ಬೆಳೆಸುತ್ತೀರೋ ಅವರಿಗೆ ಬಹುಮಾನ ನೀಡುತ್ತೇನೆ ಎಂದು ಹೇಳಿದ. ಬೆಕ್ಕು ಕೊಟ್ಟರೆ ಮಾತ್ರ ಸಾಲದು ಅವುಗಳನ್ನು ಬೆಳೆಸಲು ಹಾಲು ಬೇಕು; ಹಾಗಾಗಿ ಹಸುಗಳನ್ನು ಕೊಡಿ ಎಂದು ವಿನಂತಿಸಿದಾಗ ಹಸುಗಳನ್ನು ನೀಡಲಾಯಿತು. ಎಲ್ಲರೂ ತಮಗೆ ನೀಡಿದ ಬೆಕ್ಕುಗಳಿಗೆ ಮೇಲಿಂದ ಮೇಲೆ ಹಾಲು ಕುಡಿಸುತ್ತ ಬೆಳೆಸತೊಡಗಿದರು. ತೆನಾಲಿ ರಾಮಕೃಷ್ಣ ತನ್ನ ಬೆಕ್ಕಿಗೆ ಒಂದೆರಡು ದಿನ ಯಾವುದೇ ಆಹಾರ ಕೊಡದೆ ಕಟ್ಟಿ ಹಾಕಿದ. ಒಂದು ದಿನ ಹಾಲನ್ನು ಚೆನ್ನಾಗಿ ಕಾಯಿಸಿ ಬೆಕ್ಕಿನ ಮುಂದೆ ಇಟ್ಟ. ಹಸಿದ ಬೆಕ್ಕು ತಕ್ಷಣಕ್ಕೆ ಬಿಸಿಯಾದ ಹಾಲು ಕುಡಿಯತೊಡಗಿದಾಗ ಗಂಟಲನ್ನು ಸುಟ್ಟುಕೊಂಡಿತು. ಮುಂದಿನ ದಿನಗಳಲ್ಲಿ ಅದು ತಣ್ಣನೆ ಹಾಲು ಕಂಡರೂ ದೂರ ಓಡಿಹೋಗುತ್ತಿತ್ತು. ಅನಿವಾರ್ಯವಾಗಿ ಇಲಿ ಮತ್ತಿತರ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳತೊಡಗಿತು. ಇತರರ ಬೆಕ್ಕುಗಳಿಗಿಂತ ಹೆಚ್ಚು ದಷ್ಟಪುಷ್ಟವಾಗಿಯೇ ಬೆಳೆಯಿತು- ಎಂಬುದು ನಮಗೆಲ್ಲ ಗೊತ್ತಿರುವ ಒಂದು ಪ್ರಸಿದ್ಧ ಕಥೆ.
ಬಿಸಿಯಾದ ಹಾಲಿನಿಂದ ಒಂದು ಬಾರಿ ಗಂಟಲನ್ನು ಸುಟ್ಟುಕೊಂಡು ಗಳಿಸಿದ ಅವತ್ತಿನ ಸಂದರ್ಭದ ಜ್ಞಾನ ಬೆಕ್ಕಿನ ಅನುಭವವಾಗಿ ರೂಪಗೊಂಡಿತು. ಮುಂದಿನ ದಿನಗಳಲ್ಲಿ ಜಡಗೊಂಡಿತು. ಇದೇ ಕಾರಣದಿಂದಾಗಿ ಬೆಕ್ಕು ತಣ್ಣನೆಯ ಹಾಲು ಇದ್ದರೂ ಓಡಿಹೋಗುತ್ತಿತ್ತು. ಹಾಲು ತನಗೆ ಅಪಾಯ ತಂದೊಡ್ಡುತ್ತದೆ ಎಂಬ ಜ್ಞಾನದಲ್ಲಿ ಬಂಧಿಯಾಗಿ ವಿವೇಕವನ್ನು ಕಳೆದುಕೊಂಡಿತು ಎಂಬುದು ನಾವು ಗಮನಿಸಬೇಕಾದ ಸಂಗತಿ.
ನಾವು ಕೂಡ ಹಲವು ಬಾರಿ ಬೆಕ್ಕಿನ ಹಾಗೆಯೇ ವರ್ತಿಸುತ್ತೇವೆ. ನಮಗೆ ದಕ್ಕಿದ ಅನುಭವದಿಂದಾದ ಜ್ಞಾನವನ್ನು ನವೀಕರಿಸುವ ಗೊಡವೆಗೆ ಹೋಗುವುದಿಲ್ಲ. ‘ನನಗೆ ಎಲ್ಲವೂ ತಿಳಿದಿದೆ, ಎಲ್ಲವನ್ನೂ ಕಂಡುಕೊಂಡಿದ್ದೇನೆ’ ಎಂದು ಭಾವಿಸುತ್ತೇವೆ. ಇದರಿಂದಾಗಿ ಅದು ನಮ್ಮಲ್ಲಿ ಕ್ರಮೇಣ ಜಡಗೊಳ್ಳುತ್ತ ಹೋಗುತ್ತದೆ. ತನ್ನಲ್ಲಿ ಬಂಧಿಯಾಗಿಸುತ್ತದೆ. ಅದರಿಂದ ಹೊರಬಂದು ನಮಗೆ ಗೊತ್ತಿರುವ, ಪರಿಚಿತವಾದ ಹಿನ್ನೆಲೆಗೆ ಸಾಂರ್ದಭಿಕವಾಗಿ ಅಗತ್ಯವಾದ ಪ್ರತಿಕ್ರಿಯೆ ತೋರುವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಅನುಭವಿಗಳ ಮಾತಿನಂತೆ, ಬಿಡುಗಡೆಯ ಸಲುವಾಗಿ ಜ್ಞಾನದಲ್ಲಿ ಸಿಲುಕಿಕೊಂಡ ಮನಸ್ಸು ಎಂದಿಗೂ ಸ್ವಾತಂತ್ರವನ್ನು ಪಡೆದುಕೊಳ್ಳಲಾರದು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಮೊದಲು ರೂಪಗೊಂಡ ಜ್ಞಾನವನ್ನು ಮರುರೂಪಗೊಳಿಸುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿರಬೇಕು. ಎಲ್ಲ ಬಂಧನಗಳಿಂದ ಬಿಡುಗಡೆಗೊಳ್ಳುವ ಸಂವೇದನಾಶೀಲ ಮನಸ್ಸು ನಮ್ಮದಾಗಬೇಕು. ಇದು ನಮ್ಮಲ್ಲಿ ವಿವೇಕವನ್ನು ಜಾಗೃತಗೊಳಿಸುತ್ತದೆ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)