

ಮಹಾಭಾರತದ ರೋಚಕ ಪ್ರಸಂಗ. ಕೌರವ-ಪಾಂಡವರೆಲ್ಲರೂ ಗುರು ದ್ರೋಣಾಚಾರ್ಯರಿಂದ ಕಲಿತ ಅಸ್ತ್ರ-ಶಸ್ತ್ರಗಳ ವಿದ್ಯೆಗಳನ್ನು ಎಲ್ಲರೆದುರು ಪ್ರದರ್ಶನ ಮಾಡುವ ಸಂದರ್ಭ. ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ವಿದ್ಯಾಪ್ರಾವೀಣ್ಯವನ್ನು ತೋರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ಣನ ರಂಗಪ್ರವೇಶ. ತಾನು ಪರಶುರಾಮರಿಂದ ಕಲಿತ ವಿದ್ಯೆಯನ್ನು ಪ್ರದರ್ಶಿಸಲು ಮುಂದಾದ. ರಾಜಪುತ್ರರಿಗೆ ಮಾತ್ರ ವಿದ್ಯಾಪ್ರದರ್ಶನದ ಅವಕಾಶವೆಂಬ ಮಾತು ಕೇಳಿಬಂದಾಗ, ಅರ್ಜುನನಿಗೆ ಸರಿಸಾಟಿ ಧನುರ್ಧಾರಿಯನ್ನು ಹುಡುಕುತ್ತಿದ್ದ ದುರ್ಯೋಧನ ಆ ಸಂದರ್ಭದಲ್ಲೇ ಕರ್ಣನಿಗೆ ಪಟ್ಟಾಭಿಷೇಕ ಮಾಡಿ ಅಂಗದೇಶದ ರಾಜನನ್ನಾಗಿ ಮಾಡಿದ. ಕರ್ಣನ ಸಾಕುತಂದೆ ಅಧಿರಥ. ಒಬ್ಬ ಸೂತ. ತನ್ನ ಮಗನಿಗೆ ಪಟ್ಟಾಭಿಷೇಕವಾಗುತ್ತಿರುವ ವಾರ್ತೆ ಕೇಳಿ, ನೋಡಬೇಕೆಂಬ ಹಂಬಲದಿಂದ ಧಾವಿಸಿ ಬಂದ. ತಂದೆ ಬಂದುದನ್ನು ದೂರದಿಂದಲೇ ಗಮನಿಸಿದ ಕರ್ಣ, ಯಾವ ಸಂಕೋಚ ಮಾಡಿಕೊಳ್ಳದೆ, ಸಿಂಹಾಸನದಿಂದ ಧರಧರನೇ ಇಳಿದುಬಂದು ಎಲ್ಲರೆದುರು ತಂದೆಗೆ ನಮಸ್ಕರಿಸಿದ. ಆ ದೃಶ್ಯ ಕಂಡು ಎಲ್ಲರೂ ಪುಳಕಿತರಾದರು.
ಶ್ರೀಮಧ್ವಾಚಾರ್ಯರು ಹೇಳಿದ್ದು-
ತುತುಷುಃ ಕರ್ಮಣಾ ತಸ್ಯ ಸಂತಃ ಸರ್ವೆ ಸಮಾಗತಾಃ |
ಕರ್ಣ ತಾನು ರಾಜನಾದರೇನಂತೆ, ಪಿತೃಭಕ್ತಿಯನ್ನು ಬಿಡಲಿಲ್ಲ. ಯಾರು ಏನು ಅಂದುಕೊಳ್ಳುವರೋ ಎಂಬ ಸಂಕೋಚವನ್ನೂ ಮಾಡಿಕೊಳ್ಳಲಿಲ್ಲ. ತಾನು ಇಂದು ಈ ಸ್ಥಾನಕ್ಕೇರಲು ತನ್ನ ತಂದೆ-ತಾಯಿಗಳೇ ಕಾರಣ ಎಂಬ ಸದೃಢವಿಶ್ವಾಸದಿಂದ, ತಂದೆಯ ಪಾದಕ್ಕೆ ಎರಗಿದ. ಕರ್ಣನ ಈ ಸತ್ಕಾರ್ಯವನ್ನು ಸಂತರೆಲ್ಲರೂ ಶ್ಲಾಘಿಸಿದರು.
ಕರ್ಣನ ಈ ನಡೆ ಇಂದು ನಮ್ಮೆಲ್ಲರಿಗೂ ದೊಡ್ಡ ಸಂದೇಶ ನೀಡುತ್ತಿದೆ. ‘ನಾನು ದೊಡ್ಡ ಸ್ಥಾನದಲ್ಲಿದ್ದೇನೆ, ಸಾವಿರಾರು ಜನ ನನ್ನ ಕೈಕೆಳಗಿದ್ದಾರೆ, ತಂದೆತಾಯಿಗಳಿಗೆ ಬಾಗಿ ನಮಸ್ಕರಿಸುವುದು ಹೇಗೆ?’ ಎಂಬ ಯೋಚನೆ-ಸಂಕೋಚ ಅನೇಕರಿಗೆ. ಹೆತ್ತ ತಂದೆ-ತಾಯಿಗಳಿಗೆ ನಮಸ್ಕರಿಸಲು ಸಮಾಜದ ಸಂಕೋಚವೇಕೆ?
ಇಂದು ನಾವೆಲ್ಲ ವಿದ್ಯಾವಂತರಾಗಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರಬಹುದು. ದೊಡ್ಡ ಸ್ಥಾನ, ಉನ್ನತ ಅಧಿಕಾರ ಇರಬಹುದು. ಆದರೆ ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ನುಡಿಯಂತೆ ಇಂದು ನಾವು ವಿದ್ಯಾವಂತರಾಗಿ ಸಮಾಜದ ಸತ್ಪ್ರಜೆಯಾಗಿ ಬಾಳಬೇಕಾದರೆ ಅದರ ಹಿನ್ನೆಲೆಯಲ್ಲಿ ತಂದೆ-ತಾಯಿಗಳ ದೈಹಿಕ-ಮಾನಸಿಕ ಶ್ರಮವಿದೆ ಎನ್ನುವುದನ್ನು ಮರೆಯಬಾರದು. ನಮಗಾಗಿ ಅದೆಷ್ಟು ಕಷ್ಟಪಟ್ಟಿದ್ದಾಳೆ ತಾಯಿ! ನಮ್ಮ ವಿದ್ಯಾಭ್ಯಾಸಕ್ಕಾಗಿ ಅದೆಷ್ಟು ಸಾಲಸೋಲಗಳನ್ನು ಮಾಡಿ ದಣಿದಿದ್ದಾನೆ ತಂದೆ! ಎಂಬ ಅರಿವು ಇರಲೇಬೇಕು. ನದಿ ದಾಟಿದ ಮೇಲೆ ಅಂಬಿಗನನ್ನು ಮರೆಯುವಂತಾಗಬಾರದು.
‘ಆರಾಧ್ಯೌ ಮಾತಾಪಿತರೌ ಉಪಾಧ್ಯಾಯಸ್ತಥೈವ ಚ’ ಎನ್ನುತ್ತದೆ ಮಹಾಭಾರತ. ‘ಮಾತೃದೇವೋ ಭವ- ಪಿತೃದೇವೋ ಭವ’ ಎನ್ನುತ್ತದೆ ವೇದ. ಪ್ರತಿನಿತ್ಯ ತಂದೆ-ತಾಯಿಗಳಿಗೆ ನಮಸ್ಕರಿಸಬೇಕು, ಅಭಿವೃದ್ಧಿಯ ವಿಶೇಷ ಸಂದರ್ಭಗಳಲ್ಲಂತೂ ತಪ್ಪದೇ ಮೊದಲು ತಂದೆ-ತಾಯಿಗಳಿಗೆ ವಂದಿಸಬೇಕು. ಇದು ಮಕ್ಕಳ ಮುಖ್ಯಕರ್ತವ್ಯ. ಅದನ್ನು ಬಿಟ್ಟು ತಂದೆ-ತಾಯಿಗಳ ಮನಸ್ಸು ನೋಯಿಸಿದರೆ, ಅನಾದರದಿಂದ ನಡೆಸಿಕೊಂಡರೆ ಅದರ ಕರ್ಮಫಲವನ್ನು ಮಕ್ಕಳೇ ಅನುಭವಿಸಬೇಕಾಗುತ್ತದೆ. ಹಾಗಾಗಿ, ಹಿರಿಯರ ತ್ಯಾಗವನ್ನು ಗೌರವಿಸಿ, ಅವರು ತೋರಿದ ಆದರ್ಶಗಳ ದಾರಿಯಲ್ಲಿ ನಡೆಯಲು ಸಂಕಲ್ಪಿಸೋಣ.
(ಲೇಖಕರು ಸಂಸ್ಕೃತ ಸಂಶೋಧಕರು)