

ಆ ತಂದೆ-ಮಗಳು ದೂರದ ಊರಿನಿಂದ ವೈದ್ಯರನ್ನು ಕಾಣಲು ಬಂದಿದ್ದರು. ವಿಷಯವಿಷ್ಟೇ ಆ ತಂದೆ ಕಳೆದ ವರ್ಷವಷ್ಟೇ ಮಗಳ ಮದುವೆ ಮಾಡಿದ್ದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ಆಕೆಗೆ ವಿಪರೀತ ತಲೆನೋವು ಶುರುವಾಗಿತ್ತು. ಅವರು ತೋರಿಸದ ವೈದ್ಯರಿಲ್ಲ, ಆಕೆ ತೆಗೆದುಕೊಳ್ಳದ ಔಷಧ ಇಲ್ಲ, ಆದರೆ ಫಲ ಶೂನ್ಯ! ಪರೀಕ್ಷೆ ಮಾಡಿದ ವೈದ್ಯರೆಲ್ಲ ಹೇಳುತ್ತಿದ್ದದ್ದು ‘ಈಕೆಗೆ ಯಾವುದೇ ಸಮಸ್ಯೆ ಇಲ್ಲ’ ಎಂದು. ಆದರೆ ತಲೆನೋವು ಇದ್ದದ್ದಂತೂ ನಿಜ. ಕೊನೆಗೆ ಯಾರೋ ಹೇಳಿದರು-‘ಶಿವಮೊಗ್ಗದಲ್ಲಿ ಒಬ್ಬ ಹೆಸರಾಂತ ಜನಸ್ನೇಹಿ ವೈದ್ಯರಿದ್ದಾರೆ. ಅವರನ್ನು ಭೇಟಿ ಮಾಡಿ’ ಎಂದು. ಅದರಂತೆ ತಂದೆ-ಮಗಳು ಆ ವೈದ್ಯರಲ್ಲಿಗೆ ಬಂದಿದ್ದರು. ಪರೀಕ್ಷಿಸಿದ ವೈದ್ಯರು ಕೆಲವು ಪ್ರಶ್ನೆ ಕೇಳಿ ಉತ್ತರ ಪಡೆದರು. ಹೆಣ್ಣುಮಗಳ ಕಡೆಗೆ ತಿರುಗಿ-‘ಮಗು, ನಿನ್ನ ಮೂಗುಬೊಟ್ಟನ್ನು ಬಿಚ್ಚಿ ಕೊಡಬಹುದೆ?’ ಎಂದು ಕೇಳಿದರು. ಒಮ್ಮೆ ಆಕೆ ಅವಕ್ಕಾದರೂ ತಂದೆಯ ಸಮ್ಮತಿಯೊಂದಿಗೆ ಅದನ್ನು ಬಿಚ್ಚಿಕೊಟ್ಟಳು. ಮೂಗುಬೊಟ್ಟನ್ನು ಪಡೆದ ವೈದ್ಯರು, ‘ಅರ್ಧಗಂಟೆ ಹೊರಗೆ ಸುತ್ತಾಡಿ ಬಾ ಕಂದ’ ಎಂದು ಹೇಳಿದರು. ಆಕೆ ಮರು ಮಾತಾಡದೆ ಹೊರಗಿನ ಸುಂದರ ಪರಿಸರದಲ್ಲಿ ಅಡ್ಡಾಡಿ ಉತ್ಸಾಹದಿಂದ ಒಳ ಬಂದಳು. ಹೊರಗಿನ ಬಿಸಿಲಿನ ಝುಳಕ್ಕೆ ಆಕೆ ಬೆವರಿದ್ದರೂ ಮುಖದಲ್ಲಿ ಸಂತಸದ ಕಳೆ ಇತ್ತು. ಆಕೆಯ ತಲೆನೋವು ಮಾಯವಾಗಿತ್ತು. ‘ಈಗ ಹೇಗನಿಸುತ್ತೆ ಕಂದಾ?!’ ಎಂದು ಕೇಳಿದರು. ‘ಈಗ ತಲೆನೋವಿಲ್ಲ’ ಎಂದಳು. ವೈದ್ಯರು ತಂದೆ ಕಡೆಗೆ ತಿರುಗಿ,‘ತಲೆನೋವಿಗೆ ಕಾರಣ ಆಕೆ ಧರಿಸಿದ ಮೂಗುತಿ. ಅದರ ವಜ್ರಭಾಗದ ಪ್ರತಿಫಲನದಿಂದ ಆಕೆಯ ಕಣ್ಣು ಆಯಾಸಗೊಂಡು ತಲೆನೋವು ಬರುತ್ತಿತ್ತು’ ಎಂದು ಮೂಗುತಿಯನ್ನು ಹಿಂದುರುಗಿಸಿದರು. ತಂದೆಯ ಆನಂದಕ್ಕೆ ಪಾರವೇ ಇರಲಿಲ್ಲ. ವೈದ್ಯರಿಗೆ ಧನ್ಯವಾದ ಸಮರ್ಪಿಸಿ, ನೋಟಿನ ಕಟ್ಟೊಂದನ್ನು ಅವರ ಮುಂದಿರಿಸಿದಾಗ ವೈದ್ಯರು ಹೇಳಿದ್ದು-‘ನನ್ನ ಫೀಸ್ ಹತ್ತು ರೂಪಾಯಿ ಮಾತ್ರ’. ಎಷ್ಟೇ ಒತ್ತಾಯ ಮಾಡಿದರೂ ಹೆಚ್ಚಿನ ಹಣ ಅವರು ಪಡೆಯಲಿಲ್ಲ. ತಂದೆ-ಮಗಳ ಕಣ್ಣಲ್ಲಿ ಕೃತಜ್ಞತೆಯ ಭಾವ! ಜಗತ್ತಿನಲ್ಲಿ ಇಂಥ ಅದ್ಭುತ ವ್ಯಕ್ತಿಗಳು ಇದ್ದಾರಲ್ಲ ಎಂಬ ತೃಪ್ತಭಾವ ಹೊತ್ತು ಅವರು ಹೊರ ನಡೆದಿದ್ದರು.
ಹೌದು, ಉತ್ತಮ ಸಂಸ್ಕಾರದ ಫಲವದು. ಕರ್ತವ್ಯದಲ್ಲಿ ಸೇವಾಭಾವ ಮತ್ತು ತನ್ನಶ್ರಮಕ್ಕೆ ಸಿಗಬಹುದಾದ ಸಾಮಾನ್ಯ ಫಲ ದೊರಕಿದರೆ ಸಾಕೆನ್ನುವ ಉದಾತ್ತ ವಿಚಾರ, ಇರುವುದರಲ್ಲಿ ತೃಪ್ತಿಕಾಣುವ ಮನೋ ವೈಶಾಲ್ಯ ವ್ಯಕ್ತಿಯ ವ್ಯಕ್ತಿತ್ವನ್ನು ಎತ್ತರಕ್ಕೆ ಕೊಂಡೊಯ್ಯತ್ತದೆ ಎನ್ನುವುದಕ್ಕೆ ಇದು ನಿದರ್ಶನ.
ಇದನ್ನೇ ದಾರ್ಶನಿಕ ಭರ್ತೃಹರಿ ಹೇಳುತ್ತಾರೆ-
ಕಿಂ ಧನೇನ ಕರಿಷ್ಯಂತಿ ದೇಹಿನೋ ಭಂಗರಾಶಯಾಃ|
ಯದರ್ಥಂ ಧನಮಿಚ್ಛಂತಿ ತಚ್ಛರೀರಮಶಾಶ್ವತಮ್ ||
ಅಂದರೆ ಕೆಲವರಿಗೆ ನಾರುಮಡಿ ಉಡುವುದರಲ್ಲಿ ತೃಪ್ತಿ. ಮತ್ತೆ ಕೆಲವರಿಗೆ ರೇಷ್ಮೆ ಉಡುವುದರಲ್ಲಿ ತೃಪ್ತಿ. ಆದರೆ ತೃಪ್ತಿ ಇಬ್ಬರಿಗೂ ಒಂದೇ. ಯಾರಿಗೆ ಹೆಚ್ಚಾದ ಆಸೆಗಳಿವೆಯೋ ಅವರ ದರಿದ್ರರು. ಮಾನಸಿಕ ತೃಪ್ತಿ ಇರುವವರಿಗೆ ಬಡತನ ಎಲ್ಲಿಯದು ಎಂದು. ಇರುವುದರಲ್ಲಿ ತೃಪ್ತಿ ಪಡುವ ಮನಸ್ಥಿತಿಗೆ ಬೆಲೆ ಕಟ್ಟುವುದುಂಟೆ?!
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)