ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

Ramesh Pokhriyal
Published on

ನವದೆಹಲಿ: ಬಾಡಿಗೆ ಪಾವತಿ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಮುಂದುವರಿಸದಂತೆ ಸುಪ್ರೀಂ ಕೋರ್ಟ್​ ಸೋಮವಾರ ತಡೆ ನೀಡಿದೆ. ಇದರೊಂದಿಗೆ ಬಾಡಿಗೆ ಪಾವತಿ ವಿಚಾರದಲ್ಲಿ ಪೋಖ್ರಿಯಾಲ್ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಮುಖ್ಯಮಂತ್ರಿಯಾಗಿದ್ದ ಅವಧಿಯ ನಂತರವೂ ಸರ್ಕಾರಿ ವಸತಿ ಬಳಸಿ ಅದಕ್ಕೆ ಬಾಡಿಗೆ ಪಾವತಿಸದೇ ಇದ್ದ ಪ್ರಕರಣದಲ್ಲಿ ಮಾರುಕಟ್ಟೆ ದರದಲ್ಲಿ ಬಾಡಿಗೆ ಮತ್ತು ಇತರೆ ಬಾಕಿ ಶುಲ್ಕವನ್ನು ಪಾವತಿಸುವಂತೆ ಉತ್ತರಾಖಂಡ ಹೈಕೋರ್ಟ್​ ಕಳೆದ ವರ್ಷ ಮೇ 3ರಂದು ತೀರ್ಪು ನೀಡಿತ್ತು. ಅಲ್ಲದೆ, 2001ರಿಂದೀಚೆಗೆ ಮಾಜಿ ಮುಖ್ಯಮಂತ್ರಿಗಳಿಗೆ ವಸತಿ ಮತ್ತು ಇತರೆ ವ್ಯವಸ್ಥೆ ಒದಗಿಸಿ ನೀಡಿದ್ದ ಸರ್ಕಾರದ ಆದೇಶಗಳೆಲ್ಲವೂ ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಕೋರ್ಟ್ ಘೋಷಿಸಿತ್ತು.

ಅದೇ ರೀತಿ, ನಾಲ್ಕು ತಿಂಗಳೊಳಗೆ ಬಾಡಿಗೆ ಮತ್ತು ಇತರೆ ಶುಲ್ಕವನ್ನು ಲೆಕ್ಕಹಾಕಿ ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೆ ನೋಟಿಸ್ ಮೂಲಕ ತಿಳಿಸಬೇಕು. ನೋಟಿಸ್ ಪಡೆದು ಆರು ತಿಂಗಳೊಳಗೆ ಎಲ್ಲರೂ ಬಾಕಿ ಲೆಕ್ಕ ಚುಕ್ತಾ ಮಾಡಬೇಕು. ಅವರು ಬಾಕಿ ಚುಕ್ತಾ ಮಾಡಿದ ದಾಖಲೆಗಳನ್ನು ಸರ್ಕಾರ ಕೋರ್ಟ್​ಗೆ ಸಲ್ಲಿಸಬೇಕು ಎಂದು ಕೋರ್ಟ್​ ಸೂಚಿಸಿತ್ತು. ಡೆಹ್ರಾಡೂನ್ ಮೂಲದ ಎನ್​​ಜಿಒ ಸಲ್ಲಿಸಿದ ಅರ್ಜಿ ವಿಚಾರಣೆಗೆ ಎತ್ತಿಕೊಂಡಿರುವ ಕೋರ್ಟ್​, ಈ ಆದೇಶ ನೀಡಿತ್ತು. ಪೋಖ್ರಿಯಾಲ್ ಅವರು 2009ರ ಜೂನ್​ 27ರಿಂದ 2011ರ ಸೆಪ್ಟೆಂಬರ್ 11 ರ ತನಕ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net