

ಬದುಕನ್ನು ಮಹಾಸಾಗರ ಎನ್ನುತ್ತಾರೆ. ಅಲೆಗಳಂತೆ ಧುತ್ತನೇ ಬಂದೆರಗುವ ನಾನಾ ಕಷ್ಟ, ಸವಾಲುಗಳನ್ನು ಉಪಾಯದಿಂದ ನೀಗಿಸಿಕೊಂಡು ಮುನ್ನಡೆಯಲು ಮನುಷ್ಯನಿಗೆ ಬೇಕಾದುದು ಮನೋಬಲ. ಉತ್ಸಾಹ ಹಾಗೂ ಸಂಯಮಗಳೆರಡೂ ಇದರ ಎರಡು ಮುಖಗಳು.
ಅಂಜನಾಸುತ ಹನುಮಂತನ ಮನೋಬಲವು ನಮಗೆ ಸುಪರಿಚಿತ. ಆತ ಮಹಾನ್ ಉತ್ಸಾಹಿ. ಅಷ್ಟೇ ಸಂಯಮಿಯೂ ಕೂಡ. ಸೀತೆಯನ್ನು ಅನ್ವೇಷಿಸುತ್ತ ಋಷ್ಯಮೂಕ ಪರ್ವತದ ಬಳಿ ಬಂದ ರಾಮ-ಲಕ್ಷ್ಮಣರನ್ನು ಕಂಡ ವಾನರೇಂದ್ರ ಸುಗ್ರೀವನಿಗೆ ಭಯವಿತ್ತು. ಅವರ್ಯಾರೆಂದು ಪತ್ತೆ ಹಚ್ಚಲು ಆತ ಸಹಾಯ ಕೇಳಿದ್ದು ಇದೇ ಹನುಮನಲ್ಲಿ. ಹನುಮಂತನಿಗಾದರೋ ಅದೆಷ್ಟು ಉತ್ಸಾಹವೆಂದರೆ ಯಾವ ಆಪತ್ತನ್ನೂ ಲೆಕ್ಕಿಸದೆ, ಮಾರುವೇಷದಲ್ಲಿ ರಾಮ-ಲಕ್ಷ್ಮಣರ ಬಳಿ ಹೋದ. ಉತ್ಸಾಹದ ಭರದಲ್ಲಿ ಸಂಯಮವನ್ನೂ ಕಳೆದುಕೊಳ್ಳಲಿಲ್ಲ. ಜಾಣ್ಮೆಯಿಂದ ಮಾತನಾಡಿದ. ಸಮಯೋಚಿತವಾದ ಹನುಮಂತನ ಉತ್ಸಾಹ ಮತ್ತು ಸಂಯಮಗುಣಗಳ ಫಲವೇ ಮುಂದೆ ರಾಮ-ಸುಗ್ರೀವರ ಮೈತ್ರಿಗೆ ಕಾರಣವಾಯಿತು.
ಸೀತೆಯನ್ನು ಹುಡುಕುತ್ತ ತೆರಳುತ್ತಿದ್ದ ವಾನರ ಸೈನ್ಯಕ್ಕೆ ಮಹಾನ್ ಸಾಗರವು ಎದುರಾಯಿತು. ನೂರಾರು ಯೋಜನಗಳಷ್ಟು ವಿಸ್ತಾರವಾದ ಸಮುದ್ರವನ್ನು ದಾಟುವುದೆಂತು ಎಂಬ ಚಿಂತೆ ಎಲ್ಲರಲ್ಲಿದ್ದಾಗ ಜ್ಯೇಷ್ಠನಾದ ಜಾಂಬುವಂತನಿಗೆ ಥಟ್ಟನೇ ನೆನಪಾದುದು ಮತ್ತದೇ ಹನುಮಂತನ ಉತ್ಸಾಹ. ಹನುಮಂತನನ್ನು ಹುರಿದುಂಬಿಸಲಾಗಿ ಆತ ಉತ್ಸಾಹದಿಂದ ಸಮುದ್ರೊಲ್ಲಂಘನವನ್ನು ಮಾಡಿಯೇ ಬಿಟ್ಟ. ಕಾರ್ಯಸಿದ್ಧಿಯಾಗಲು ಉತ್ಸಾಹವೊಂದೇ ಸಾಕೆ? ಸಮುದ್ರ ಮಾರ್ಗದಲ್ಲಿ ಸುರಸೆ ಹಾಗೂ ಸಿಂಹಿಕೆಯರು ಅವನನ್ನು ತಡೆಯಲಾಗಿ ಸಂಯಮದಿಂದ ಅವರನೆಲ್ಲ ನಿವಾರಿಸಿ ಲಂಕೆಯನ್ನು ತಲುಪಿದ. ಉತ್ಸಾಹದ ಜೊತೆಗೆ ಸಂಯಮವೂ ಇರಬೇಕಷ್ಟೆ. ಎಷ್ಟೋ ಸಲ ನಮಗೆದುರಾಗುವ ಪರಿಸ್ಥಿತಿಯು ನಮ್ಮ ಸಂಯಮವನ್ನು ಪರೀಕ್ಷೆ ಮಾಡಿಯೇ ಬಿಡುತ್ತದೆ. ಹನುಮಂತನ ಸಂಯಮ ಗುಣದ ನಿಜವಾದ ಪರೀಕ್ಷೆ ಅನೇಕ ಸಲ ಆಗುತ್ತದೆ. ಲಂಕೆಯಲ್ಲಿ ಸೀತೆಯನ್ನು ಹುಡುಕುವ ಕೆಲಸ ಒಂದೆಡೆಯಾದರೆ, ಕ್ರೂರಿಗಳ ನಡುವೆ ಸೀತೆಯ ಪರಿಸ್ಥಿತಿ ಏನಾಗಿರಬಹುದೆಂಬ ಚಿಂತೆ ಇನ್ನೊಂದೆಡೆ. ಸೀತೆಯನ್ನು ಕಾಣದೇ ಬರಿಗೈಯಲ್ಲಿ ತೆರಳಿದರೆ ರಾಮನ ಮುಂದೆ ನಿಲ್ಲಲೂ ಆಗುವುದಿಲ್ಲ. ಇಂಥ ವಿಷಮ ಸ್ಥಿತಿಯಲ್ಲೂ ಆತ ಧೈರ್ಯದಿಂದ ರಾವಣನ ಅಂತಃಪುರ ಪ್ರವೇಶಿಸಿದ. ಅಶೋಕವನದಲ್ಲಿ ಸೀತೆಯನ್ನು ಕಂಡು, ಮಾತನಾಡಿ, ಚೂಡಾಮಣಿಯನ್ನು ನೀಡಿ, ಅವಳಿಗೆ ಅಭಯ ನೀಡಿದ. ಇಲ್ಲೆಲ್ಲ ನಮಗೆ ಕಾಣಿಸುವುದು ಕೇವಲ ಹನುಮನ ಮಹಾನ್ ಸಂಯಮವಷ್ಟೇ.
ಉತ್ಸಾಹವು ಮನುಷ್ಯನಲ್ಲಿ ಇರುವ ಹುರುಪಿನ ಸಂಕೇತವಾದರೆ ಸಂಯಮವು ಮನೋನಿಗ್ರಹದ ಸೂಚಕ. ಇವೆರಡು ವಿಪರೀತವಾದ ಮನೋಗುಣಗಳು. ಅತ್ಯುತ್ಸಾಹಿಯೋರ್ವ ಸಂಯಮವನ್ನು ಕಳೆದುಕೊಂಡು ಯಡವಟ್ಟು ಮಾಡಿಕೊಳ್ಳುವುದುಂಟು. ಸಂಯಮಿಯೂ ಉತ್ಸಾಹವನ್ನೇ ತೋರದೆ ಆಪತ್ತಿನಲ್ಲಿ ಸಿಲುಕಿ ತೊಳಲಾಡಲೂ ಬಹುದು. ಉತ್ಸಾಹ ಹಾಗೂ ಸಂಯಮಗಳ ಸಂಯೋಜನೆಯೇ ನಮ್ಮ ಮನೋಬಲವು. ನಾನಾ ಸವಾಲುಗಳನ್ನು ಮೆಟ್ಟಿನಿಂತು ಕಾರ್ಯ ಸಾಧಿಸಲು ಇವೆರಡನ್ನೂ ಒಟ್ಟೊಟ್ಟಿಗೇ ಗಳಿಸುವುದು ಅನಿವಾರ್ಯ. ತಪೋಸದೃಶವಾದ ಪ್ರಯತ್ನದಿಂದಷ್ಟೇ ಇದು ಸಾಧ್ಯ ಎಂಬುದನ್ನು ಮರೆಯುವಂತಿಲ್ಲ.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)