ಮನಃಶಾಂತಿಯ ಮೂಲವೆಲ್ಲಿದೆ?

Manollasa
Published on
ದಿವ್ಯಾ ಹೆಗಡೆ, ಕಬ್ಬಿನಗದ್ದೆ

ವ್ಯಾಪಾರಿಯೊಬ್ಬ ಹಣಗಳಿಕೆಯೊಂದೇ ಜೀವನದ ಗುರಿಯೆಂದು ತಿಳಿದು ಹಗಲಿರುಳೆನ್ನದೇ ದುಡಿಯುತ್ತಿದ್ದ. ತನ್ನ ಸಂಪತ್ತನ್ನು ಯಾರಾದರೂ ದೋಚಿಬಿಟ್ಟರೆ? ಎಂಬ ಭಯದಲ್ಲಿಯೇ ಸದಾಕಾಲ ಬದುಕುತ್ತಿದ್ದ ಆತನಿಗೆ ಬದುಕಿನಲ್ಲಿ ಹಣವೊಂದನ್ನು ಬಿಟ್ಟು ಬೇರಾವುದರ ಮೌಲ್ಯವೂ ತಿಳಿದಿರಲಿಲ್ಲ. ಸಂಪತ್ತಿನ ಚಿಂತೆಯಲ್ಲಿಯೇ ಮುಳುಗಿರುತ್ತಿದ್ದ ಆತ ನೆಮ್ಮದಿಯಿಂದ ನಿದ್ರೆಯನ್ನೂ ಮಾಡುತ್ತಿರಲಿಲ್ಲ. ಅದೆಷ್ಟೇ ಸಿರಿತನವಿದ್ದರೂ ಆತನ ಬದುಕಿನಲ್ಲಿ ಸಂತೋಷದ ಸುಳಿವೇ ಇರಲಿಲ್ಲ. ಎಲ್ಲವೂ ತನ್ನ ಬಳಿಯಿದ್ದರೂ ಅವುಗಳ ಸುಖವನ್ನು ಅನುಭವಿಸುವ ಮನಸ್ಥಿತಿಯೇ ಇಲ್ಲದೇ ದುಃಖಿಸುತ್ತಿದ್ದ. ಒಮ್ಮೆ ಅವನಿಗೆ, ತಾನು ಎಲ್ಲವನ್ನೂ ಪಡೆದಿದ್ದರೂ ಶಾಂತಿ-ನೆಮ್ಮದಿಗಳಿಂದ ಜೀವನವನ್ನು ನಡೆಸುತ್ತಿಲ್ಲ, ಅದೆಷ್ಟೇ ಪ್ರಯತ್ನ ಪಟ್ಟರೂ ಮನಸ್ಸಿಗೆ ಸಮಾಧಾನ ಎಂಬುದಿಲ್ಲ. ಇದಕ್ಕೆ ಕಾರಣವೇನಿರಬಹುದು ಎಂಬ ಚಿಂತೆ ಪ್ರಾರಂಭವಾಯಿತು.

ಒಂದು ದಿನ ಬೆಳಗ್ಗೆ ಆಶ್ರಮಕ್ಕೆ ತೆರಳಿ ಗುರುಗಳಿಗೆ ನಮಸ್ಕರಿಸಿ ಅವರ ಎದುರಲ್ಲಿಯೇ ಕುಳಿತುಕೊಂಡ. ಅವನ ಧಾವಂತ, ಕಸಿವಿಸಿ ಮತ್ತು ದುಗುಡಗಳನ್ನು ಕಂಡು ಮುಗುಳ್ನಕ್ಕ ಗುರುಗಳು-‘ನಿನ್ನ ಬಳಿ ಮನಃಶಾಂತಿಯೊಂದನ್ನು ಬಿಟ್ಟು ಎಲ್ಲವೂ ಇದೆ. ಅಲ್ಲವೇನಪ್ಪ?’ ಎಂದು ಪ್ರಶ್ನಿಸಿದರು. ಅವರ ಮಾತನ್ನು ಕೇಳಿ ತಲೆಯಾಡಿಸಿದ ವ್ಯಾಪಾರಿ-‘ಹೌದು ಗುರುಗಳೇ, ಪರಿಶ್ರಮದಿಂದ ದುಡಿಯುತ್ತಿರುವೆ. ಬೇಕಾದಷ್ಟು ಸಿರಿ-ಸಂಪತ್ತು ನನ್ನದಾಗಿವೆ. ಆದರೆ ನೆಮ್ಮದಿ ಎಂಬುದೇ ಇಲ್ಲ. ಪರಿಹಾರ ತಿಳಿಸಿ’ ಎಂದು ಅಂಗಲಾಚಿದ.

ವ್ಯಾಪಾರಿಯನ್ನು ಆಶ್ರಮದಿಂದ ಹೊರಗಡೆ ಕರೆದುಕೊಂಡು ಹೋದ ಗುರುಗಳು ಒಂದು ಮರದಲ್ಲಿದ್ದ ಗುಬ್ಬಿಗೂಡನ್ನು ತೋರಿಸಿ-‘ಅಲ್ಲಿ ಗೂಡುಕಟ್ಟಿಕೊಂಡಿರುವ ಗುಬ್ಬಿಗಳನ್ನು ನೋಡಪ್ಪಾ.., ಚಿಲಿಪಿಲಿಗುಟ್ಟುತ್ತ ಖುಷಿಯಿಂದ ಹಾರಾಡುತ್ತಿರುವ ಅವುಗಳ ಸಂತೋಷಕ್ಕೆ ಕಾರಣ ಗೊತ್ತೇನು? ಅಷ್ಟು ಪುಟ್ಟ ಗೂಡನ್ನು ಕಟ್ಟಿಕೊಂಡಿದ್ದರೂ ಅವುಗಳಿಗೆ ಮಳೆಗೋ, ಗಾಳಿಗೋ ಅಥವಾ ಇನ್ಯಾರಿಂದಲೋ ತನ್ನ ಗೂಡಿಗೆ ಹಾನಿಯುಂಟಾಗಬಹುದೆಂಬ ಭೀತಿಯಿಲ್ಲ. ಇವತ್ತಿಗೆ ಬೇಕಾದಷ್ಟೇ ಆಹಾರವನ್ನು ಹುಡುಕುವ ಅವುಗಳಿಗೆ ಮುಂದಿನ ಪೀಳಿಗೆಗಾಗಿ ಸಂಪತ್ತನ್ನು ಕೂಡಿಡುವ ಆಸೆಯಿಲ್ಲ. ಭವಿಷ್ಯದ ಕುರಿತಾಗಿಯೇ ಚಿಂತಿಸುತ್ತ ಅವು ಎಂದಿಗೂ ಈ ಕ್ಷಣದ ಸಂತೋಷವನ್ನು ಹಾಳುಮಾಡಿಕೊಳ್ಳುವುದಿಲ್ಲ. ನಾವು ಮಾತ್ರ ಇವನ್ನೆಲ್ಲ ಮರೆತು ಅತಿಯಾಸೆಯಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ’ ಎಂದು ತಿಳಿ ಹೇಳಿದರು. ಅವರ ಮಾತನ್ನು ಕೇಳಿದ ವ್ಯಾಪಾರಿ ಅತಿಯಾಸೆಯಿಂದ, ಸಂಪತ್ತಿನ ಮೋಹದಿಂದ ಹೊರಬಂದು ನೆಮ್ಮದಿಯ ಬದುಕನ್ನು ನಡೆಸತೊಡಗಿದ.

ನಮ್ಮ ಜೀವನದಲ್ಲೂ ಹೀಗೆಯೇ. ಹಣಗಳಿಕೆಯೇ ಸಂತೋಷದ ಮೂಲವೆಂದು ತಿಳಿದು ಬದುಕಿನ ಎಲ್ಲ ಸಂತಸಗಳಿಂದ ವಂಚಿತರಾಗಿಬಿಡುತ್ತೇವೆ. ಆಸ್ತಿ, ಸಂಪತ್ತನ್ನು ಗಳಿಸುವ ಧಾವಂತದಲ್ಲಿ ಮನಃಶಾಂತಿಯನ್ನು ಕಳೆದುಕೊಂಡು ತೊಳಲಾಡುತ್ತೇವೆ. ನಮ್ಮಲ್ಲಿಯೇ ಇರುವ ನೆಮ್ಮದಿಯನ್ನು ಹುಡುಕಿಕೊಳ್ಳಲಾರದೆ ಲೌಕಿಕ ವಸ್ತುಗಳ ಸಂಗ್ರಹವೇ ದೊಡ್ಡ ಸಾಧನೆಯೆಂಬ ಭ್ರಮೆಯಲ್ಲಿ ಮುಳುಗಿಬಿಡುತ್ತೇವೆ. ಸಣ್ಣ ಸಣ್ಣ ಸಂಗತಿಗಳಲ್ಲೂ ಖುಷಿಯನ್ನು ಹುಡುಕುವ ಮನಸ್ಥಿತಿಯನ್ನು ರೂಢಿಸಿಕೊಂಡರೆ ಶಾಂತಿ-ನೆಮ್ಮದಿಗಳು ತಾನೇ ತಾನಾಗಿ ನೆಲೆಸುತ್ತವೆ ಎಂಬ ಸತ್ಯವನ್ನು ಅರಿಯದೆ ಚಿಂತಿಸುತ್ತೇವೆ, ಪರಿತಪಿಸುತ್ತೇವೆ. ನಮ್ಮೊಳಗೇ ಇರುವ ಸಂತೋಷದ ಒಳಗುಟ್ಟನ್ನು ಅರಿತರೆ ಬದುಕಿನ ಚಿತ್ರ ವರ್ಣಮಯವಾಗುತ್ತದೆ. ಮನಸ್ಸು ಆನಂದದ ಗೂಡಾಗುತ್ತದೆ. ಹಾಗಾಗಿ ಸಂತೃಪ್ತಿಯೆಂಬ ನೂಲಿನಿಂದ ಸೊಗಸಾದ ಬದುಕನ್ನು ನೇಯುವ ಕಲೆಯನ್ನು ನಾವೂ ಕರಗತ ಮಾಡಿಕೊಳ್ಳೋಣ ಅಲ್ಲವೇ?

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net