ದೃಢಚಿತ್ತವೇ ಯೋಗ

Path diviation
Published on
 ಚಿದಂಬರ ಮುನವಳ್ಳಿ

ಇದು 500 ವರ್ಷಗಳ ಹಿಂದಿನ ಘಟನೆ. ಈಗಿನ ಪಶ್ಚಿಮ ಬಂಗಾಳದ ಒಂದೂರಿನಲ್ಲಿ ಒಬ್ಬ ವಿಧವೆತಾಯಿ ತನ್ನ 6 ವರ್ಷದ ಮಗನೊಡನೆ ದಾರಿದ್ರ್ಯದ ನಡುವೆಯೇ ಸಣ್ಣ ಮನೆಯಲ್ಲಿ ಜೀವನ ನಡೆಸುತ್ತಿದ್ದಳು. ಅದೊಂದು ದಿನ ಬೆಳಗ್ಗೆ ಅಡುಗೆ ಮಾಡೋಣವೆಂದು ಒಲೆ ಹೊತ್ತಿಸಲು ನೋಡಿದರೆ ಹಿಂದಿನ ದಿನದ ಬೆಂಕಿಯೆಲ್ಲ ಆರಿ ಹೋಗಿತ್ತು. ಕಡ್ಡಿಪೆಟ್ಟಿಗೆಗಳಿಲ್ಲದ ಆ ದಿನಗಳಲ್ಲಿ ನೆರೆಹೊರೆಯವರ ಮನೆಯಿಂದ ಬೆಂಕಿ ತಂದು ಒಲೆ ಹೊತ್ತಿಸಬೇಕಾಗುತ್ತಿತ್ತು. ಅವಳು ಮಗನನ್ನು ಎಬ್ಬಿಸಿ, ‘ರಘು! ಪಕ್ಕದ ಮನೆಗೆ ಹೋಗಿ ಸ್ವಲ್ಪ ಕೆಂಡವನ್ನು ತೆಗೆದುಕೊಂಡು ಬಾ’ ಎಂದಳು. ತಾಯಿ ಹೇಳಿದ್ದೇ ತಡ ಬಾಲಕ ಪಕ್ಕದ ಸಾರ್ವಭೌಮರ ಮನೆಗೆ ಓಡಿದ. ಆ ಮನೆಯ ನೌಕರ ಅಂಗಳದಲ್ಲಿ ಅಗ್ಗಿಷ್ಟಿಕೆ ಮುಂದೆ ಚಳಿ ಕಾಯಿಸುತ್ತ ಕುಳಿತಿದ್ದ. ಬಾಲಕ ನೌಕರನಿಗೆ ಕೇಳಿದ-‘ಸ್ವಲ್ಪ ಕೆಂಡವನ್ನು ಕೊಡುವೆಯಾ?’ ಆತ ಬಾಲಕನನ್ನು ವ್ಯಂಗ್ಯವಾಗಿ ನೋಡುತ್ತ, ‘ಮೈಮೇಲೆ ಅಂಗಿಯಂತೂ ಇಲ್ಲ, ಕೆಂಡ ಒಯ್ಯಲು ಪಾತ್ರೆಯನ್ನಾದರೂ ತರಬೇಕೆಂಬ ಬುದ್ಧಿ ಸಹ ಇಲ್ಲ ನಿನಗೆ. ತೆಗೆದುಕೋ ಈ ಬೆಂಕಿಯನ್ನು ಹೇಗೆ ಒಯ್ಯುತ್ತೀಯೋ ಒಯ್ಯು’ ಎಂದು ಸೌಟಿನಲ್ಲಿ ಕೆಂಡಗಳನ್ನು ತೆಗೆದು ಅವನ ಮುಂದೆ ಹಿಡಿದ.

ರಘು ಆ ಕಡೆ ಈ ಕಡೆ ನೋಡಿದ. ಪಕ್ಕದಲ್ಲಿ ಸ್ವಲ್ಪ ಬೂದಿ ಬಿದ್ದಿರುವುದು ಕಾಣಿಸಿತು. ಕೂಡಲೇ ಅಲ್ಲಿಯೇ ಇರುವ ನೀರಿನಲ್ಲಿ ಎರಡೂ ಕೈ ಮುಳುಗಿಸಿ ಹಸಿ ಕೈಗಳಿಗೆ ಬೂದಿಯನ್ನು ಮೆತ್ತಿಸಿಕೊಂಡು ಸ್ವಲ್ಪ ಬೂದಿಯನ್ನು ಅಂಗೈಯಲ್ಲಿ ಹಾಕಿಕೊಂಡು ಕೈ ಮುಂದೆ ಮಾಡಿದ. ಬೊಗಸೆಯಲ್ಲಿ ಕೆಂಡವನ್ನು ಹಿಡಿದುಕೊಂಡು ಮನೆಗೆ ಓಡಿದ. ಈ ದೃಶ್ಯವನ್ನು ಮಹಡಿಯ ಮೇಲಿಂದ ನೋಡಿದ ಸಾರ್ವಭೌಮರು ಕೆಳಗಿಳಿದು ಬಂದವರೇ ಆ ಬಾಲಕನ ಹಿಂದೆಯೇ ಧಾವಿಸಿದರು. ರಘು ಒಲೆಯಲ್ಲಿ ಕೆಂಡ ಸುರಿಯುತ್ತಿದ್ದ. ತನ್ನ ಮಗನ ಹಿಂದೆಯೇ ವಿದ್ವಾನ್ ಸಾರ್ವಭೌಮರು ಬಂದದ್ದು ನೋಡಿ ಹೆದರಿದ ಆ ತಾಯಿ, ‘ನನ್ನ ಮಗನೇನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿರಿ’ ಎನ್ನುವುದೇ ತಡ, ‘ಇಲ್ಲ ತಾಯಿ! ನಿನ್ನ ಮಗನ ಸಮಯಪ್ರಜ್ಞೆಗೆ ಮಾರು ಹೋದೆ. ಅವನು ಅತ್ಯಂತ ಪ್ರತಿಭಾಶಾಲಿಯಾಗಿದ್ದಾನೆ. ಅವನನ್ನು ನನಗೊಪ್ಪಿಸು. ಅವನಿಗೆ ಒಳ್ಳೆಯ ಶಿಕ್ಷಣ ಕೊಡಿಸುವೆ’ ಎಂದರು. ಆ ಬಾಲಕನೇ ಕಲಿತು ಮುಂದೆ ಮೌಲಿಕ ಚಿಂತಕ, ಪ್ರಸಿದ್ಧ ದಾರ್ಶನಿಕ, ಭಾರತೀಯ ನ್ಯಾಯಶಾಸ್ತ್ರದ ವಿದ್ವಾನ್ ರಘುನಾಥ ಶಾಸ್ತ್ರೀ ಶಿರೋಮಣಿ ಎಂದು ಪ್ರಸಿದ್ಧನಾದ.

ನಾವು ಕಷ್ಟದಲ್ಲಿದ್ದಾಗ ಗಾಯದ ಮೇಲೆ ಬರೆ ಎಳೆದಂತೆ ಮಾತನಾಡುವ ಜನ ಇದ್ದೇ ಇರುತ್ತಾರೆ. ಆದರೆ ಅವರನ್ನು ದೂಷಿಸುತ್ತ ಸಮಯ ವ್ಯರ್ಥ ಮಾಡಿದರೆ ನಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ. ‘ಸಂಸಾರದ ದುಃಖಗಳನ್ನು ಅಂಟಿಸಿಕೊಳ್ಳದೆ, ಧೈರ್ಯದಿಂದ, ತತ್ಪರತೆಯಿಂದ ಮಾಡುವ ಕರ್ತವ್ಯವೇ ಯೋಗ’ ಎಂದಿದೆ ಭಗವದ್ಗೀತೆ. ನಡೆಯುವ ಹಾದಿ ಸುಗಮವಾಗಿರಲಿಕ್ಕಿಲ್ಲ. ಆದರೆ ರಕ್ಷಣೆ ಕೊಡುವ ಪಾದರಕ್ಷೆಗಳು ಚೆನ್ನಾಗಿದ್ದರೆ ಸಾಕು. ಹೊರಗೆ ಮಳೆ ಸುರಿಯುತ್ತಿರಬಹುದು, ನಮ್ಮ ಹತ್ತಿರ ಕೊಡೆ ಇದ್ದರೆ ಸಾಕು. ಕತ್ತಲೆ ಸೀಳಿ ಪ್ರಕಾಶವು ಪ್ರವೇಶಿಸುವಂತೆ ದೃಢಮನಸ್ಸಿನಿಂದ ನಮ್ಮ ಪ್ರಯಾಣ ಸಾಗುತ್ತಿರಲಿ.

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net