

ಕೆ.ಪಿ.ಪುತ್ತೂರಾಯ
ಆಸ್ಪತ್ರೆ: ಒಂದು ಬಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ನಾನಾ ಥರದ ನೋವಿನಿಂದ ಬಳಲುತ್ತಿರುವ ಹಾಗೂ ಜೀವನ-ಮರಣಗಳ ಮಧ್ಯೆ ಹೋರಾಡುತ್ತಿರುವ ರೋಗಿಗಳನ್ನು ಭೇಟಿ ಮಾಡಿ. ಬದುಕಿನಲ್ಲಿ ಆರೋಗ್ಯದ ಮಹತ್ವ ಎಷ್ಟೆಂಬುದು ಆಗ ಗೊತ್ತಾಗುತ್ತದೆ. ಸಾಮಾನ್ಯವಾಗಿ ತಾರುಣ್ಯದಲ್ಲಿ ನಾವು ಆರೋಗ್ಯವನ್ನು ಲೆಕ್ಕಿಸದೆ ಹಣ ಸಂಪಾದನೆಗಾಗಿ ಹಗಲಿರುಳು ದುಡಿಯುತ್ತಿರುತ್ತೇವೆ, ಮುಂದೆ ನಾನಾ ರೋಗಗಳಿಗೆ ಚಿಕಿತ್ಸೆ ಮಾಡಿಸಲು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತೇವೆ.
ಕಾರಾಗೃಹ: ಕೈದಿಗಳು ಹೊರ ಪ್ರಪಂಚದಿಂದ ದೂರವಾಗಿ ನಾಲ್ಕು ಗೋಡೆಯ ಮಧ್ಯೆ ಇದ್ದು, ಬಿಡುಗಡೆಯ ಭಾಗ್ಯವನ್ನು ಎದುರು ನೋಡುತ್ತಿರುತ್ತಾರೆ. ಸ್ವಾತಂತ್ರ್ಯ, ಸ್ವಚ್ಛಂದದ ಬೆಲೆ ಏನೆಂಬುದು ಆಗಲೇ ನಮಗೆ ಅರ್ಥವಾದೀತು. ಏನೂ ಬಂಧನವಿಲ್ಲದೆ ಹಾಯಾಗಿರುವ ಸ್ವತಂತ್ರ ಜೀವನದ ಎದುರು ಕಾರಾಗೃಹ ವಾಸ ಎಷ್ಟೊಂದು ಕಷ್ಟ, ಕಠಿಣವೆಂಬುದರ ಅರಿವು ಕಾರಾಗೃಹದ ಭೇಟಿಯಿಂದಲೇ ಪ್ರಾಪ್ತವಾಗುತ್ತದೆ.
ಸ್ಮಶಾನ: ಸ್ಮಶಾನಕ್ಕೆ ಭೇಟಿ ನೀಡುವುದರಿಂದ ನಮ್ಮೆಲ್ಲರ ಅಂತಿಮ ಸ್ಥಳದ ನೆನಪಾಗುತ್ತದೆ ಹಾಗೂ ‘ಜೀವನದಲ್ಲಿ ಏರಿದರೆ ಹೆಚ್ಚೆಂದರೆ ಎರಡುಮೂರು ಅಡಿ ಮೇಲೆ ಗದ್ದುಗೆ ಸಿಂಹಾಸನ: ಜಾರಿರದೆ ಹೆಚ್ಚೆಂದರೆ ಎರಡುಮೂರು ಅಡಿ ಕೆಳಗೆ ಗೋರಿ ಸ್ಮಶಾನ’ ಎಂಬ ಕವಿವಾಣಿಯು ಚೆನ್ನಾಗಿ ಅರ್ಥವಾಗುತ್ತದೆ. ‘ಅಲ್ಲಿದೆ ನಮ್ಮನೆ ಇಲ್ಲಿ ಇರೋದು ಸುಮ್ಮನೆ’ ಎಂಬ ದಾಸವಾಣಿಯು ಸತ್ಯವೆಂದೆನಿಸುತ್ತದೆ. ತನ್ನ 33ನೇ ವಯಸ್ಸಿನಲ್ಲಿಯೇ ಅರ್ಧ ಜಗತ್ತನ್ನು ಗೆದ್ದ ಅಲೆಕ್ಸಾಂಡರ್ ಸಾಯುವ ಮುನ್ನ ತನ್ನ ಸೇನಾಧಿಪತಿಗಳಿಗೆ ಆದೇಶಿಸಿದ- ‘ನನ್ನ ಶವವನ್ನು ಶವಪೆಟ್ಟಿಗೆಯೊಳಗೆ ಇಳಿಸುವ ಮುನ್ನ ನನ್ನ ಎರಡು ಕೈಗಳು ಹೊರಗೆ ಚಾಚಿರುವಂತೆ ನೋಡಿಕೊಳ್ಳಿ. ತನ್ಮೂಲಕ ಖಾಲಿ ಕೈಗಳಿಂದ ಈ ಭೂಮಿಗೆ ಬಂದ ವ್ಯಕ್ತಿ ಚಕ್ರವರ್ತಿಯಾದರೂ ಖಾಲಿ ಕೈಗಳಿಂದಲೇ ಹೊರಟು ಹೋಗಬೇಕಾಗುತ್ತದೆ ಎಂಬ ಸಂದೇಶ ರವಾನೆ ಆಗಲಿ’ ಎಂತಹ ಅರ್ಥಗರ್ಭಿತವಾದ ಮಾತು! ನಮ್ಮ ಜನನ ಉಚಿತ, ಆದರೆ ಸಾವು ಖಚಿತ. ಹುಟ್ಟಿನ ಜೊತೆಗೆ ಸಾವು ಜನಿಸುತ್ತದೆ ಎಂಬುದನ್ನು ಸ್ಮಶಾನದ ಭೇಟಿ ಅರ್ಥ ಮಾಡಿಸುತ್ತದೆ.
ಪ್ರವಚನಕಾರರ ಮಾತುಗಳಲ್ಲಿ ಭಾರಿ ಅರ್ಥವಿದೆ; ಜೀವನದ ತತ್ತ್ವವಿದೆಯಲ್ಲವೇ! ಬದುಕಿನ ಹಾದಿಯಲ್ಲಿ ಸಾಗುವಾಗ ಇಂಥ ವಿಚಾರಗಳನ್ನು ಅರ್ಥಮಾಡಿಕೊಂಡು, ಅವಲೋಕಿಸಿಕೊಂಡರೆ, ಮುಂದಿನ ಪಯಣ ಸಾರ್ಥಕವಾದೀತು.
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)