ಮನೋಲ್ಲಾಸ: ಸುಖಕ್ಕಾಗಿ ಅಲೆದಾಟ ಬೇಡ

manollasa
Published on
ಅನಿತಾ ನಾಗರಾಜ ಹೆಗಡೆ

ಬಹುಶಃ ನಾವೆಲ್ಲರೂ ನಮ್ಮ ಜೀವನದಲ್ಲಿ ಹಣ ಮತ್ತು ಆರೋಗ್ಯದ ನಂತರ ಬೆನ್ನಟ್ಟಿ ಹೋಗುವ ಅಂಶವೆಂದರೆ ಅದು ಸಂತೋಷ ಅಲ್ಲವೇ?! ಬಾಳಿನಲ್ಲಿ ಸಂತೋಷವೇ ಇಲ್ಲವಾದರೆ ಹಣದ ಬಗ್ಗೆ ಚಿಂತಿಸುವವರಾರು? ಜೀವನವೆಂಬುದು ಅಲ್ಪ, ಕಾಲವೆಂಬುದು ವೇಗ. ಇವೆರಡು ಸರಿದು ಹೋದರೆ ಮತ್ತೆ ಬರಲಾರವು ಎಂಬುದು ವಾಸ್ತವ. ಆದ್ದರಿಂದ ಬರುವ ಪ್ರತಿ ಕ್ಷಣವನ್ನೂ ಬಂದಂತೆ ಅನುಭವಿಸುವುದು ಮಾತ್ರ ನಮ್ಮ ಮುಂದಿರುವ ದಾರಿ.

ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧನಿದ್ದ. ಅವನು ಜಗತ್ತಿನಲ್ಲಿಯೇ ಅತಿ ಹೆಚ್ಚು ದುರದೃಷ್ಟವಂತನಾಗಿದ್ದ. ಆ ಇಡೀ ಹಳ್ಳಿಯ ಜನರು ಅವನಿಂದ ಬೇಸತ್ತಿದ್ದರು. ಅವನು ಸದಾ ಮಂಕಾಗಿರುತ್ತಿದ್ದ. ಯಾವಾಗಲೂ ಒಂದಿಲ್ಲೊಂದು ವಿಷಯದ ಬಗ್ಗೆ ದೂರುವುದು ಅವನ ದಿನಚರಿಯಲ್ಲಿ ಒಂದಾಗಿತ್ತು. ಒಟ್ಟಿನಲ್ಲಿ ಅವನು ಯಾವಾಗಲೂ ಕೆಟ್ಟ ಮನಸ್ಥಿತಿಯಲ್ಲಿ ಇರುತ್ತಿದ್ದ. ದಿನಕಳೆದಂತೆ ಅವನ ಸಿಡುಕುತನವನ್ನು ಸಹಿಸಲಾಗದೆ ಊರಿನ ಜನರೆಲ್ಲ ಅವನಿಂದ ದೂರ ಇರುವುದಕ್ಕೆ ಪ್ರಾರಂಭಿಸಿದರು. ಆ ವೃದ್ಧ ಅವನೂ ಸುಖವಾಗಿ ಇರದೆ ಇತರರಿಗೂ ಸುಖದಿಂದಿರಲು ಬಿಡುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಂಬಲಾಗದ ಸಂಗತಿ ನಡೆಯಿತು. ‘80 ವರ್ಷದ ಇಳಿ ವಯಸ್ಸಿನ ವೃದ್ಧ ಇಂದು ತುಂಬ ಸಂತೋಷದಿಂದ ಇದ್ದು, ಯಾವುದರ ಬಗ್ಗೆಯೂ ದೂರದೇ ಹಸನ್ಮುಖಿಯಾಗಿದ್ದಾನೆ, ಮೊದಲಿಗಿಂತ ಕ್ರಿಯಾಶೀಲ ಆಗಿದ್ದಾನೆ’ ಎಂಬ ಸುದ್ದಿ ಕ್ಷಣಮಾತ್ರದಲ್ಲಿ ಊರಿನ ತುಂಬೆಲ್ಲ ಹಬ್ಬಿತು. ಈ ವಿಷಯವನ್ನು ಕೇಳಿ ಕುತೂಹಲದಿಂದ ಗ್ರಾಮಸ್ಥರೆಲ್ಲರೂ ನೇರವಾಗಿ ವೃದ್ಧನ ಬಳಿ ಬಂದು ಈ ಬದಲಾವಣೆಗೆ ಕಾರಣವನ್ನು ಕೇಳಿದಾಗ ಅವನ ಉತ್ತರ ಈ ರೀತಿಯಾಗಿತ್ತು- ‘ಅಂಥದ್ದೇನೂ ಇಲ್ಲ, ಕಳೆದ 80 ವರ್ಷಗಳಿಂದ ನಾನು ಸಂತೋಷವನ್ನು ಬೆನ್ನಟ್ಟುತ್ತಿದ್ದೆ. ಆದರೆ ಅದು ನಿಷ್ಪ್ರಯೋಜಕವೆಂದು ಜ್ಞಾನೋದಯ ಆಯಿತು. ಆಮೇಲೆ ನನ್ನ ಉಳಿದ ಸ್ವಲ್ಪ ಸಮಯವನ್ನಾದರೂ ಸಂತೋಷವನ್ನು ಹುಡುಕುವ ಅನುಪಯುಕ್ತ ಕೆಲಸವನ್ನು ಮಾಡದೇ ಬಂದದ್ದನ್ನು ಆನಂದಿಸಬೇಕೆಂದು ನಿರ್ಧರಿಸಿದೆ. ಆದ್ದರಿಂದ ಇಂದು ಇಷ್ಟು ನಿರಾಳವಾಗಿ ಖುಷಿಯಿಂದಿರುವೆ’.

ಯಾರ ಜೀವನ ಎಷ್ಟು ದೊಡ್ಡದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಜೀವನ ನಮ್ಮ ಮುಂದಿಡುವ ಸವಾಲನ್ನು ಸ್ವೀಕರಿಸಲು ನಮ್ಮ ಮನಸ್ಥಿತಿಯನ್ನು ನಾವೇ ರೂಪಿಸಿಕೊಳ್ಳುವುದನ್ನು ಮೊದಲ ಆದ್ಯತೆಯನ್ನಾಗಿ ಮಾಡಿಕೊಳ್ಳಬೇಕು. ಜೀವನದಲ್ಲಿ ಕಷ್ಟವೇ ಬರಲಿ ಸುಖವೇ ಬರಲಿ ಎರಡನ್ನೂ ಸಮಾನ ಮನಸ್ಥಿತಿಯಿಂದ ಎದುರಿಸೋಣ. ಕೇವಲ ಸುಖವನ್ನು ಅರಸಿ ಹೋಗುವುದರಿಂದ ಸಮಯ ವ್ಯರ್ಥವಾಗುವುದರೊಂದಿಗೆ ನಮ್ಮ ಕೈಸೇರುವುದು ಕೇವಲ ಶೂನ್ಯ ಫಲಿತಾಂಶ. ಆದ್ದರಿಂದ, ಜೀವನದಲ್ಲಿ ಬಂದ ಕ್ಷಣಗಳನ್ನು ಹಾಗೇ ಸ್ವೀಕರಿಸೋಣ, ಅವುಗಳಲ್ಲೇ ನೆಮ್ಮದಿ ಅರಿಸೋಣ. ಸುಖದ ಅಲೆದಾಟದಲ್ಲಿ ಇರುವ ನೆಮ್ಮದಿಯನ್ನೂ ದೂರ ಮಾಡಿಕೊಳ್ಳದೆ, ಸಂತೃಪ್ತಿಯಿಂದ ಬದುಕುವ ಸಂಕಲ್ಪ ನಮ್ಮದಾಗಲಿ.

(ಲೇಖಕಿ ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net