

ಕಾಂತೇಶಾಚಾರ್ಯ ಕದರಮಂಡಲಗಿ
ಅವನೊಬ್ಬ ವಿವಾಹಿತಪುರುಷ. ಅವನ ಅದೃಷ್ಟವೋ, ಹಿರಿಯರ ಪುಣ್ಯವೋ ಒಳ್ಳೆಯ ಸದ್ಗುಣಿಯಾದ ಹೆಂಡತಿ ಸಿಕ್ಕಿದ್ದಾಳೆ. ಆದರೆ ಅವನಿಗೆ ಮಾತ್ರ ತನ್ನ ಹೆಂಡತಿಯ ಬಗ್ಗೆ ಅಭಿಮಾನ-ಪ್ರೀತಿ ಹೆಚ್ಚಿಲ್ಲ. ಕಚೇರಿಯಲ್ಲಿ ತನ್ನ ಮೇಲಧಿಕಾರಿಯ ಜೊತೆ ಮಾತನಾಡುವಾಗ ಪ್ರಾಸಂಗಿಕವಾಗಿ ಹೆಂಡತಿಯ ವಿಚಾರ ಬಂತು. ಮೇಲಧಿಕಾರಿ ಕೇಳಿದ-‘ಹೌದು, ನಿಮ್ಮ ಪತ್ನಿ ಏನು ಓದಿದ್ದಾರೆ, ಏನು ಕೆಲಸ ಮಾಡ್ತಾರೆ...?’ ಅದಕ್ಕವನು, ‘ನನ್ನ ಹೆಂಡತಿ ಚೆನ್ನಾಗಿ ಓದಿದ್ದಾಳೆ. ಆದರೆ ಹೊರಗೆ ಕೆಲಸಕ್ಕೆ ಹೋಗಿ ದುಡಿಯುವುದಿಲ್ಲ. ಮನೆಯಲ್ಲಿಯೇ ಇದ್ದಾಳೆ’ ಎಂದು ತಿರಸ್ಕಾರದ ಭಾವನೆಯಿಂದ ಉತ್ತರಿಸಿದ.
ಕುಟುಂಬದಲ್ಲಿ ಗೃಹಿಣಿಯ ಮಹತ್ವ ತಿಳಿಸಿಕೊಡಬೇಕೆಂದೇ ಆ ಅಧಿಕಾರಿ ವಿವರಿಸಿದ-‘ನಿನ್ನ ತಂದೆ-ತಾಯಿಯನ್ನು ಹೆಂಡತಿ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅದೇ ವೃದ್ಧಾಶ್ರಮಕ್ಕೆ ಸೇರಿಸಿದ್ದರೆ ಎಷ್ಟು ಹಣ ನೀಡಬೇಕಿತ್ತು? ಪಾತ್ರೆ ತೊಳೆಯುತ್ತಾರೆ, ಬಟ್ಟೆ ಒಗೆಯುತ್ತಾರೆ. ಅದಕ್ಕಾಗಿ ಕೆಲಸದವರಿಗೆ ಎಷ್ಟು ಹಣ ನೀಡಬೇಕಿತ್ತು... ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಾರೆ. ಅಡುಗೆಯವರನ್ನು ನೇಮಿಸಿದ್ದರೆ ಅವರಿಗೆ ಎಷ್ಟು ಹಣ ನೀಡಬೇಕಿತ್ತು? ಹೀಗೆಯೇ ಪಟ್ಟಿ ಬೆಳೆಯುತ್ತ ಹೋಯಿತು. ಕೊನೆಗೆ ಆ ಗೃಹಿಣಿ ಮನೆಯಲ್ಲಿ ಮಾಡುವ ಎಲ್ಲ ಕೆಲಸಗಳಿಗೆ ಹಣದ ಲೆಕ್ಕ ಮಾಡಿದರೆ ಇವನ ಸಂಪಾದನೆಗಿಂತಲೂ ಅವಳ ಸಂಪಾದನೆಯ ಲೆಕ್ಕವೇ ಜಾಸ್ತಿ ಇತ್ತು. ಹೊರಗೆ ಹೋಗಿ ದುಡಿದು ತಾನು ಹಣ ಸಂಪಾದನೆ ಮಾಡುವುದಕ್ಕಿಂತಲೂ ಮನೆಯಲ್ಲಿ ಹೆಂಡತಿ ದುಡಿಯುವುದೇ ಹೆಚ್ಚು ಎಂಬ ಅಂಶ ಆ ಗೃಹಸ್ಥನಿಗೆ ಮನವರಿಕೆಯಾಯಿತು. ಹೆಂಡತಿಯ ಬಗ್ಗೆ ಅಭಿಮಾನ-ಪ್ರೀತಿ ನೂರ್ಮಡಿಯಾಯಿತು. ಹೆಂಡತಿ ಕೇವಲ ಮನೆಯಲ್ಲಿ ಇರುವವಳು ಎಂಬ ಉದಾಸೀನತೆ ಮಾಯವಾಯಿತು. ಅಂದಿನಿಂದ ಹೆಂಡತಿಯನ್ನು ಗೌರವ, ಪ್ರೀತಿಯಿಂದ ಕಾಣತೊಡಗಿದ.
‘ಗೃಹಿಣೀ ಗೃಹಮುಚ್ಯತೇ’ ಇದು ಬಹಳ ಪ್ರಸಿದ್ಧವಾದ ಮಾತು. ಒಂದು ಮನೆ ಸುಖಸಮೃದ್ಧಿಗಳಿಂದ ತುಂಬಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಹೆಂಡತಿಯ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಕಾರಣ, ಪತಿ-ಪುತ್ರರ ಎಲ್ಲ ಸಾಕು-ಬೇಕುಗಳನ್ನು ಅರ್ಥೈಸಿಕೊಂಡು, ಕಾಲಕಾಲಕ್ಕೆ ಎಲ್ಲವನ್ನೂ ಒದಗಿಸುತ್ತ, ಸಂಸಾರರಥವನ್ನು ಸರಿತೂಗಿಸಿಕೊಂಡು ಮುನ್ನಡೆಸುವ ಮಹಾಸಾರಥಿ ಅವಳು ಸತಿ. ಅನ್ನುವುದಕ್ಕಾಗಿಯೇ-‘ಜಾಯಾ ಶ್ರೇಷ್ಠತಮಃ ಸಖಾ’ ‘ಪತಿಗೆ ಸತಿ ಉತ್ತಮ ಗೆಳತಿ’ ಎನ್ನುತ್ತದೆ ಶಾಸ್ತ್ರ. ಕವಿಯು ಹೇಳುತ್ತಾನೆ-
ಸಂತುಷ್ಟೋ ಭಾರ್ಯಯಾ ಭರ್ತಾ, ಭರ್ತ್ರಾ ಭಾರ್ಯಾ ತಥೈವ ಚ |
ಯಸ್ಮಿನ್ನೇವ ಕುಲೇ ನಿತ್ಯಂ, ಕಲ್ಯಾಣಂ ತತ್ರ ವೈ ಧ್ರುವಮ್ ||
ಯಾವ ಕುಟುಂಬದಲ್ಲಿ ಗಂಡನಿಂದ ಹೆಂಡತಿಯೂ, ಹೆಂಡತಿಯಿಂದ ಗಂಡನೂ ತೃಪ್ತರಾಗಿ ಯಾವಾಗಲೂ ಆನಂದದಿಂದ ಇರುತ್ತಾರೆಯೋ ಆ ಕುಟುಂಬದಲ್ಲಿ ಯಾವಾಗಲೂ ಮಂಗಳವುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರ ಅಪೇಕ್ಷೆ ಒಂದೇ-ಸತಿಯು ಸಂತುಷ್ಟಳಾಗಿ ಸಮಗ್ರಕುಟುಂಬಕ್ಕೆ ಸದಾ ಸುಮಂಗಳವನ್ನು ಉಂಟುಮಾಡಲಿ.
(ಲೇಖಕರು ಸಂಸ್ಕೃತ ಸಂಶೋಧಕರು)