ಲಾಕ್​ಡೌನ್ ಹಿನ್ನೆಲೆ: ಕುಟುಂಬ, ಆಪ್ತರ ಸಮ್ಮುಖದಲ್ಲಿ ನೆರವೇರಿತು ಹಿರಿಯ ನಟ ಇರ್ಫಾನ್​ ಅಂತ್ಯಕ್ರಿಯೆ

Irfan
Published on

ಮುಂಬೈ: ಕ್ಯಾನ್ಸರ್​ನಿಂದ ನಿಧನರಾದ ಬಾಲಿವುಡ್​ ಹಿರಿಯ ನಟ ಇರ್ಫಾನ್​ ಖಾನ್​ ಅವರ ಅಂತ್ಯಕ್ರಿಯೆ ಕರೊನಾ ಲಾಕ್​ಡೌನ್​ ನಡುವೆಯು ಬಿಗಿ ಪೊಲೀಸ್​ ಭದ್ರತೆಯೊಂದಿಗೆ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಬುಧವಾರ ನೆರವೇರಿತು.​

ಮಧ್ಯಾಹ್ನ 3 ಗಂಟೆಗೆ ಮುಂಬೈನ ವರ್ಸೊವಾ ಕಬ್ರಸ್ತಾನ್​ನಲ್ಲಿ ಅಂತ್ಯಕ್ರಿಯೆ ನೇರವೇರಿತು. ಲಾಕ್​ಡೌನ್ ಕಾರಣದಿಂದಾಗಿ ಪತ್ನಿ ಸುತಪಾ ಸಿಕ್ದಾರ್​, ಮಕ್ಕಳಾದ ಅಯಾನ್​ ಮತ್ತು ಬಬಿಲ್​ ಸೇರಿ ಕುಟುಂಬವರ್ಗ ಮತ್ತು ಕೆಲವೇ ಮಂದಿ ಆಪ್ತರ ಸಮ್ಮುಖದಲ್ಲಿ ಅಂತಿಮ ಕಾರ್ಯ ನಡೆಯಿತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್​ ಧರಿಸಿ ಎಲ್ಲರೂ ಇರ್ಫಾನ್​ ಅವರ ಅಗಲಿಕೆಗೆ ಕಂಬನಿ ಮಿಡಿದರು.

ಇದಕ್ಕೂ ಮುನ್ನ ಸಿನಿ ಜಗತ್ತಿನ ಅದ್ಭುತ ಪ್ರತಿಭೆ ಇನ್ನಿಲ್ಲ ಎಂಬ ಸುದ್ದಿ ಕೇಳಿದ ಸಿನಿ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದರು. ಪ್ರಧಾನಿ ಮೋದಿ, ಅಮಿತ್​ ಶಾ ಸೇರಿದಂತೆ ಅನೇಕ ಗಣ್ಯರು ಸಹ ಕಂಬನಿ ಮಿಡಿದಿದ್ದಾರೆ.

ಎರಡು ವರ್ಷಗಳ ಹಿಂದೆ ನ್ಯೂರೋಎಂಡೋಕ್ರೈನ್ ಟ್ಯೂಮರ್​ ಚಿಕಿತ್ಸೆಗೆ ಒಳಗಾದಾಗಿನಿಂದ ಇರ್ಫಾನ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಮಧ್ಯೆ ನಿನ್ನೆ ರಾತ್ರಿ ಕರುಳಿನ ಸೋಂಕಿನಿಂದ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ವಿಧಿವಶರಾದರು. ಇತ್ತೀಚೆಗಷ್ಟೇ ಅವರ ತಾಯಿ ಶಹೀದಾ ಬೇಗಂ ಸಹ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸುವುದಕ್ಕೆ ಇರ್ಫಾನ್​ಗೆ ಸಾಧ್ಯವಾಗಿರಲಿಲ್ಲ.

ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಇರ್ಫಾನ್​ ನಟನೆಯ ಅಂಗ್ರೇಜಿ ಮೀಡಿಯಂ ಚಿತ್ರ ಲಾಕ್​ಡೌನ್​ ಕಾರಣದಿಂದ ಹೆಚ್ಚು ಜನರನ್ನು ರಂಜಿಸಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ ಎರಡೇ ದಿನದಲ್ಲಿ ಕರೊನಾ ಲಾಕ್​ಡೌನ್​ ಘೋಷಣೆಯಾಯಿತು. ಚಿತ್ರದಲ್ಲಿ ಕರೀನಾ ಕಪೂರ್​ ಖಾನ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಅಂಗ್ರೇಜಿ ಮೀಡಿಯಂ ಚಿತ್ರ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಲಭ್ಯವಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net