ನಿಜವಾಗಿ ನೋಡಿದರೆ ಎದುರಿನಲ್ಲಿ ಯಾರೂ ಇಲ್ಲ; ನಮ್ಮದೇ ಪ್ರತಿಬಿಂಬ. ಇದೊಂದು ವಿಸ್ಮಯ ಅಲ್ಲವೆ?

manollasa april
Published on

ವನರಾಗ ಶರ್ಮಾ

ರಾಜನೊಬ್ಬ ಕನ್ನಡಿಯ ಅರಮನೆಯನ್ನು ಕಟ್ಟಿಸಿದ್ದ. ಅಲ್ಲಿ ಲಕ್ಷಾಂತರ ಕನ್ನಡಿಗಳು. ಅರಮನೆಯೊಳಗೆ ಹೋದರೆ ಒಬ್ಬನೇ ಆದರೂ ಲಕ್ಷಾಂತರ ಪ್ರತಿಬಿಂಬಗಳು ಕಾಣುತ್ತಿದ್ದವು. ಮಾಯಾನಗರಿಯಂತೆ! ಜಗತ್ತು ಮಾಯಾನಗರಿಯೇ ಆಗಿದೆಯೆನ್ನಿ! ಅದೊಂದು ದಿನ ನಾಯಿಯೊಂದು ಅರಮನೆಯೊಳಗೆ ಹೊಕ್ಕಿತು. ಎದುರಿನಲ್ಲಿ ಅಸಂಖ್ಯ ನಾಯಿಗಳು. ಅದಕ್ಕೆ ಭಯವಾಯಿತು. ಬೊಗಳುವುದಕ್ಕೆ ಶುರುಮಾಡಿತು. ಅವೂ ಬೊಗಳುವುದಕ್ಕೆ ಪ್ರಾರಂಭಿಸಿದವು. ಪ್ರತಿಧ್ವನಿ ಮೊಳಗಿತು. ನಾಯಿಗೆ ತಲೆಕೆಟ್ಟುಹೋಯಿತು. ಎದುರಿಗೆ ಕಂಡ ಕಂಡ ನಾಯಿಗಳ ಮೇಲೆ ಎಗರಿತು. ಆದರೆ ಆದದ್ದೇನು? ಎಗರಿ ಎಗರಿ ಕನ್ನಡಿಗೆ ಬಡಿದುಕೊಂಡಿತು.ಕನ್ನಡಿಗೋಡೆಗೆ ಡಿಕ್ಕಿಹೊಡೆದು ಸತ್ತುಹೋಯಿತು.

ಜಗತ್ತಿನಲ್ಲಿಯೂ ಹಾಗೆಯೇ ಆಗಿದೆ. ಸುತ್ತಲೂ ಶತ್ರುಗಳು ಕಾಣುತ್ತಾರೆ. ಜಗಳ, ಹೋರಾಟ, ಯುದ್ಧ-ರಣರಂಗ. ನಿಜವಾಗಿ ನೋಡಿದರೆ ಎದುರಿನಲ್ಲಿ ಯಾರೂ ಇಲ್ಲ; ನಮ್ಮದೇ ಪ್ರತಿಬಿಂಬ. ಇದೊಂದು ವಿಸ್ಮಯ ಅಲ್ಲವೆ? ದರ್ಶನಗಳು ನಮಗೆ ಇದಕ್ಕೆ ಉತ್ತರ ಕೊಟ್ಟಿವೆ. ಆ ಪರಮಸತ್ಯವನ್ನು ಕಾಣಬೇಕೆಂದರೆ ಅದೇ ಸಾಕ್ಷೀಪ್ರಜ್ಞೆ ಬೇಕು. ಹೌದು, ಸತ್ಯದರ್ಶನ ಸಾಕ್ಷೀಪ್ರಜ್ಞೆಯಿಂದ ಮಾತ್ರ ಸಾಧ್ಯ. ಅಂತರಂಗದಲ್ಲಿ ಏಕವಾದರೆ ಬಾಹ್ಯವೂ ಏಕವಾಗಿರುತ್ತದೆ. ಅನೇಕವಾದರೆ ಬಾಹ್ಯವೂ ಅನೇಕವಾಗುತ್ತದೆ. ಭ್ರಾಂತಿಯೆಂಬ ಕನ್ನಡಿಗೆ ಡಿಕ್ಕಿ ಹೊಡೆದು ನಾಶ ಆಗುವುದಕ್ಕೆ ಈ ಬೇರೆಬೇರೆ ಎಂಬ ಭಾವವೇ ಕಾರಣ.

ಸಾಕ್ಷೀಪ್ರಜ್ಞೆ ಎನ್ನುವುದು ಸೃಷ್ಟಿಯ ವಿಸ್ಮಯವನ್ನು ಕಾಣುವ ವಿಸ್ಮಯ! ಜಗತ್ತಿನಲ್ಲಿ ಎಲ್ಲವೂ ಎರಡೆರಡು ಇದೆ. ದ್ವಂದ್ವಮಯಂ ಜಗತ್; ಕಣ್ಣು, ಕಿವಿ, ಕೈ, ಕಾಲು, ಮೂಗಿನ ಹೊಳ್ಳೆ ಎರಡು, ಬಾಯಿತುಟಿಗಳು ಎರಡು, ಮಿದುಳೂ ಸಹ ಎಡ-ಬಲ ಎಂದು ಎರಡು. ಕತ್ತಲೆ-ಬೆಳಕು, ಸತ್ಯ-ಅಸತ್ಯ, ಹಗಲು-ರಾತ್ರಿ, ಗಂಡು-ಹೆಣ್ಣು, ಆಕಾಶ-ಭೂಮಿ ಯಾವುದನ್ನು ನೋಡಿದರೂ ಇಡೀ ಜಗತ್ತು ದ್ವಂದ್ವಮಯ. ಆದರೆ ಬ್ರಹ್ಮ, ದೇವರು, ಸರ್ವಶಕ್ತ ಭಗವಂತ, ಸುಪ್ರೀಂ ಪವರ್ ಅದು ಮಾತ್ರ ಒಂದೇ. ಅದು ಸಾಕ್ಷೀಪ್ರಜ್ಞೆಯ ಅರಿವಿಗೆ ಮಾತ್ರ ಬರುವಂಥದು. ಆಕಾರ ಅನೇಕ; ನಿರಾಕಾರ ಒಂದೇ. ಮರಗಳ ಆಕಾರ ಬೇರೆ ಆಗಿರುತ್ತದೆ ಆದರೆ ಒಳಗೆ ಇರುವ ನಿರಾಕಾರ ಒಂದೇ. ಮಣ್ಣು ಗಡಿಗೆ, ಹರಿವಿ, ಹೂಜಿ, ಹೂದಾನಿ, ಹಂಡೆ-ಹಣತೆ ಯಾವ ರೂಪದಲ್ಲೂ ಇರಬಹುದು. ಆದರೆ ಅದರ ಮೂಲವಸ್ತು ಒಂದೇ ಅದು ಮಣ್ಣು. ಅಂತೆಯೇ ನಾವು ಮತ್ತು ಬ್ರಹ್ಮಾಂಡ ಕೂಡ. ಮನಸ್ಸಿನಿಂದ ಆಕಾರ ಮಾತ್ರ ನೋಡಬಲ್ಲೆವು. ಮನಸ್ಸು ರಹಿತದಿಂದ ಮಾತ್ರ ನಿರಾಕಾರವನ್ನು ನೋಡಬಹುದು. ಮೂರನೆಯ ಕಣ್ಣು ಮಾತ್ರ ಒಂಟಿಯಾಗಿದೆ. ಅದೇ ಸಾಕ್ಷೀಪ್ರಜ್ಞೆ.

ಓಶೋ ಹೇಳುತ್ತಾರೆ; ‘ನಿಮ್ಮೊಳಗೆ ನೀವು ಒಂಟಿಯಾಗಿ ಇರಬೇಕಾದಲ್ಲಿ, ಸಾಕ್ಷೀಪ್ರಜ್ಞೆಯ ಅಂಶವನ್ನು ಹುಡುಕಿರಿ. ನಡೆಯುತ್ತಿರುವಾಗ ಗಮನಿಸಿ, ತಿನ್ನುತ್ತಿರುವಾಗ ಗಮನಿಸಿ, ನಿದ್ರಿಸಲು ಹೋಗುವಾಗ ಗಮನಿಸಿ, ಏನಾಗುತ್ತಿದೆಯೆಂದು ಗಮನಿಸುತ್ತ ನಿದ್ರಿಸಿ. ಇಂದಲ್ಲ ನಾಳೆ ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಿಯಾಗುವುದನ್ನು ನೀವು ಸಾಧಿಸಿರಿ’ ಎಂದು. ಅಂಥ ಸಾಕ್ಷೀಪ್ರಜ್ಞೆ ನಮ್ಮದಾಗಲಿ.

(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net