

ಗುರುಗಳೊಬ್ಬರು ಬಡ ವಿದ್ಯಾರ್ಥಿಗಳಿಗಾಗಿಯೇ ಆಶ್ರಮ ನಡೆಸುತ್ತಿದ್ದರು. ಅವರೊಳಗೊಬ್ಬ ದಡ್ಡ ವಿದ್ಯಾರ್ಥಿ ಇದ್ದ. ಆತ ಕಲಿಕೆಯಲ್ಲಿ ಹಿಂದಿದ್ದರೂ ಸ್ವಭಾವದಲ್ಲಿ ಗುಣದ ಗಣಿಯಾಗಿದ್ದ. ಆ ಕಾರಣ ಆತ ಗುರುಗಳ ಪ್ರೀತಿಪಾತ್ರನಾಗಿದ್ದ. ಅದೊಮ್ಮೆ ಆ ಆಶ್ರಮವಿರುವ ಪ್ರದೇಶಕ್ಕೆ ಬರಗಾಲ ಬಂದು, ಆಶ್ರಮ ಮುಚ್ಚಬೇಕಾಯಿತು. ಗುರುಗಳು ಶಿಷ್ಯರನ್ನು ಕರೆದು- ‘ಆಶ್ರಮದಲ್ಲಿ ನಿಮಗೆ ಅಗತ್ಯವಿರುವ ವಸ್ತುವನ್ನು ಎತ್ತಿಕೊಂಡು ಹೊರಟು ಜೀವನ ನೋಡಿಕೊಳ್ಳಿ’ ಎಂದು ದುಃಖದಿಂದ ಬೀಳ್ಕೊಟ್ಟರು. ಗುರುಗಳು ದಡ್ಡ ಶಿಷ್ಯನನ್ನು ಕರೆದು, ‘ಈ ಬಡಕಲು ಕತ್ತೆಯನ್ನು ಕೊಂಡೊಯ್ದು ನಿನ್ನ ಜೀವನ ನೀನು ನೋಡಿಕೋ’ ಎಂದರು.
ಕತ್ತೆಯೊಂದಿಗೆ ಹೊರಟ ಆ ಹುಡುಗ ಎಲ್ಲಿಗೆ ಹೋಗಬೇಕೆನ್ನುವುದನ್ನು ತಿಳಿಯದಾದ. ಮಾರ್ಗಮಧ್ಯೆಯಲ್ಲಿ ಆ ಕತ್ತೆಯೂ ಹಸಿವಿನಿಂದ ಪ್ರಾಣ ಕಳೆದುಕೊಂಡಿತು. ಕತ್ತೆ ಗುರುಗಳ ಉಡುಗೊರೆ ಆಗಿದ್ದರಿಂದ ಶ್ರದ್ಧಾ-ಭಕ್ತಿಯಿಂದ ಅದರ ಅಂತ್ಯಸಂಸ್ಕಾರ ನಡೆಸಿ, ಅದರ ಸಮಾಧಿಗೆ ಪೂಜೆ ಸಲ್ಲಿಸಿಸುವ ಉದ್ದೇಶದಿಂದ ಆ ಸ್ಥಳದಲ್ಲೇ ನೆಲೆ ನಿಂತ. ಅವನ ಭಕ್ತಿಯನ್ನು ಗಮನಿಸಿದ ದಾರಿಹೋಕರು ಯಾವುದೋ ಮಹಾತ್ಮನ ಸಮಾಧಿಯೇ ಅದಾಗಿರಬೇಕೆಂದು ಅವರೂ ಅವನ ಜೊತೆಗೂಡಿದರು. ಬರಬರುತ್ತ ಅಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು ಮಾತ್ರವಲ್ಲ ಅವರೆಲ್ಲ ಅಲ್ಲಿನ ಭಕ್ತರಾಗಿ ಬಿಟ್ಟರು. ಶ್ರದ್ಧೆಯಿಂದ ಮಾಡಿದ ಪೂಜೆ ಫಲ ಕೊಡುತ್ತದೆ ಎಂಬಂತೆ ಅಲ್ಲಿಗೆ ಹರಕೆ ಹೊತ್ತು ಬರುವವರ ಸಂಖ್ಯೆ ಹೆಚ್ಚಳವಾಗಿ, ತರುವಾಯ ಅದೊಂದು ಕ್ಷೇತ್ರವಾಗಿ ಮಾರ್ಪಟ್ಟು ಯಾತ್ರಿಗಳಿಗೆ ಅನ್ನುದಾಸೋಹ ಶುರುವಾಯಿತು. ಆ ದಡ್ಡ ಶಿಷ್ಯನದು ಮೌನವೇ ಮಾತಾಗಿದ್ದರಿಂದ ಪರಮಜ್ಞಾನಿ ಎಂದು ಭಾವಿಸಿದ ಅಲ್ಲಿನ ಜನರು ಅವನನ್ನು ಗುರುವೆಂದು ಕರೆದರೂ ತನ್ನೊಳಗೆ ಅಹಂಕಾರ ನುಸುಳದಂತೆ ಸರಳ ಜೀವನವನ್ನೇ ಆತ ನಡೆಸುತ್ತ ಬಂದ.
ಅದೊಮ್ಮೆ ಊರೂರು ಸುತ್ತಿ ಬಂದ ಗುರುಗಳು ಆ ಕ್ಷೇತ್ರಕ್ಕೆ ಬಂದು ಅಲ್ಲಿನ ಸಮಾಧಿಗೆ ಪ್ರದಕ್ಷಿಣೆ ಹಾಕುವಾಗ ಗುರುಗಳನ್ನು ಪತ್ತೆ ಹಚ್ಚಿದ ಆ ಶಿಷ್ಯ ಗುರುಗಳ ಕಾಲಿಗೆರಗಿ ಅವರನ್ನು ಗೌರವಾದರದಿಂದ ತನ್ನ ನಿವಾಸಕ್ಕೆ ಆಹ್ವಾನವಿತ್ತದ್ದಲ್ಲದೆ ಅವರು ಅಲ್ಲೇ ನೆಲೆನಿಂತು ತನಗೆ ಮಾರ್ಗದರ್ಶನ ಮಾಡಬೇಕೆಂದು ಕೋರಿದ. ತಾವು ಕೊಟ್ಟ ಆ ಕತ್ತೆಯ ಸಮಾಧಿಯೇ ಈಗಿನ ಭಕ್ತರ ಆರಾಧ್ಯದೈವವಾಗಿರುವ ಸಂಗತಿ ತಿಳಿಸಿದ. ಹೌದು, ಭಕ್ತನ ಭಾವನೆ ಶಿಲೆ ಮಾತ್ರವಲ್ಲ, ಕತ್ತೆಯ ಸಮಾಧಿಯೂ ದೇವರೂಪ ಪಡೆಯುತ್ತದೆ ಎನ್ನುವುದಕ್ಕೆ ಇದು ದೃಷ್ಟಾಂತ. ಹಾಗಾಗಿ ನಮ್ಮ ಪ್ರಾಚೀನರ ಜ್ಞಾನ ಹೇಳುತ್ತದೆ- ‘ಪುಷ್ಪಮಾಲ ಪ್ರಸಂಗೇನ ಸೂತ್ರಂ ಶಿರಸ ಧಾರಯೇತಿ| ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ||’ ಅಂದರೆ ‘ಹೂವನ್ನು ಹೆಣೆದ ದಾರವೂ ಮುಡಿಯೇರುವಂತೆ, ಅರ್ಚಕನ ಪ್ರಭಾವದಿಂದ ಶಿಲೆಯೂ ಶಿವರೂಪ ತಾಳುತ್ತದೆ’ ಎಂದು. ಮುಗ್ಧಭಕ್ತಿ ತಪ್ಪಲ್ಲ, ಆದರೆ ವಂಚಿಸುವ ನಟನೆಯ ಭಕ್ತಿ ಸರಿಯಲ್ಲ, ಅಲ್ಲವೇ?
(ಲೇಖಕರು ಅಧ್ಯಾಪಕರು)