ಬಿಡಿಸುವವರು ಯಾರು?: ಮನೋಲ್ಲಾಸ

Manollasa
Published on
| ಗಣೇಶ್ ಮೂರ್ತಿ ನಾಗರಕೊಡಿಗೆ

ಒಬ್ಬ ರಾಜನಿಗೆ ಕಷ್ಟಗಳ ಮೇಲೆ ಕಷ್ಟಗಳು ಎದುರಾದವು. ಯುದ್ಧಗಳು, ಬರಗಾಲ, ಪ್ರಜೆಗಳ ಬಂಡುಕೋರತನ, ಸಂಸಾರದಲ್ಲಿ ವಿರಸ, ಮಂತ್ರಿಗಳ ಬೇಜವಾಬ್ದಾರಿತನ- ಇತ್ಯಾದಿಗಳಿಂದ ರಾಜ ರೋಸಿಹೋದ. ನಂತರದಲ್ಲಿ ಅದನ್ನೆಲ್ಲ ಹೇಗೋ ಸರಿಪಡಿಸಿಕೊಂಡ. ಆದರೂ ಅವನಿಗೆ ಒಂದು ರೀತಿಯ ಭಯ, ಖಿನ್ನತೆ ಕಾಡತೊಡಗಿತು. ಅಶಾಂತಿಯಿಂದ ದುಃಖಿತನಾದ. ಮಂತ್ರಿಯ ಸಲಹೆಯ ಮೇರೆಗೆ ಆಸ್ಥಾನದ ವಿದ್ವಾಂಸ ವಿಶ್ವೇಶ್ವರ ದೀಕ್ಷಿತರನ್ನು ಕರೆಸಿ ಪರಿಹಾರ ಕೇಳಿದ. ಅದಕ್ಕೆ ಅವರು ‘ಮಹಾರಾಜ, ನೀನು ಭಾಗವತ ಸಪ್ತಾಹ ಮಾಡಿಸಿದರೆ ಸರಿಹೋಗುವುದು’ಎಂದು ಸಲಹೆ ಕೊಟ್ಟರು. ರಾಜ ಒಪ್ಪಿ ಅದನ್ನು ತಾವೇ ಮಾಡಿಸಿ ಕೊಡಬೇಕೆಂದು ಪ್ರಾರ್ಥಿಸಿದ.

ಅನೇಕ ಪಂಡಿತರನ್ನೊಡಗೂಡಿಕೊಂಡು ದೀಕ್ಷಿತರು ಏಳು ದಿನಗಳ ಕಾಲ ಶ್ರದ್ಧೆಯಿಂದ ಸಪ್ತಾಹ ಮಾಡಿದರು. ಮಹಾರಾಜ ಸಕುಟುಂಬ ಸಮೇತನಾಗಿ ಕುಳಿತು ಕೇಳಿ ಎಲ್ಲರಿಗೂ ಸಂಭಾವನೆ ದಾನ-ಧರ್ಮಗಳನ್ನು ನೀಡಿದ. ಆದರೆ ಮರುದಿನ ಬೆಳಿಗ್ಗೆ ಎಚ್ಚರವಾಗುತ್ತಿದ್ದಂತೆ ನೋಡುತ್ತಾನೆ ಅದೇ ಬೇಸರ ಅದೇ ಖಿನ್ನತೆ! ಅಧೈರ್ಯದಿಂದ ಮನಸ್ಸು ಚಡಪಡಿಸುತ್ತಿತ್ತು. ಮಹಾರಾಜನ ಸಿಟ್ಟು ನೆತ್ತಿಗೇರಿತು. ರಾಜಭಟರನ್ನು ಕರೆದು ಭಾಗವತ ಸಪ್ತಾಹ ಮಾಡಲು ಹೇಳಿದ ದೀಕ್ಷಿತರನ್ನು ಎಳೆದು ತರಲು ಆಜ್ಞೆಮಾಡಿದ. ಮಹಾರಾಜನು ಕೋಪದಿಂದ ‘ನಿಮ್ಮ ಸಲಹೆಯ ಸಪ್ತಾಹದಿಂದ ಯಾವ ಪ್ರಯೋಜನವೂ ಆಗಿಲ್ಲ. ನನ್ನ ಮನಸ್ಸು ಕಳವಳದಲ್ಲಿಯೆ ಇದೆ. ಈ ರೀತಿ ಸಲಹೆ ನೀಡಿದ್ದಕ್ಕೆ ನಿಮಗೆ ಇಂದು ಸಂಜೆ ಶಿರಚ್ಛೇದನ ಶಿಕ್ಷೆ ವಿಧಿಸುತ್ತಿದ್ದೇನೆ’ ಎಂದು ಹೇಳಿ ತೆರಳಿದ. ದೀಕ್ಷಿತರು ನಡುಗಿ ಹೋದರು. ಮನೆಗೆ ಬಂದು ದುಃಖಿಸುತ್ತಾ ಮಲಗಿಬಿಟ್ಟರು. ಅಜ್ಜನ ಪರಿಸ್ಥಿತಿ ನೋಡಿ ಮೊಮ್ಮಗಳು ಕಾರಣವೇನೆಂದು ಕೇಳಿದಳು. ದೀಕ್ಷಿತರು ಅನಿವಾರ್ಯವಾಗಿ ಪರಿಸ್ಥಿತಿಯನ್ನು ಹೇಳಿಕೊಂಡರು. ಈ ಹತ್ತು ವರ್ಷದ ಬಾಲಕಿ ಏನು ಮಾಡಿಯಾಳು ಎಂದು ಸುಮ್ಮನಾದರು. ಆಕೆ ತನ್ನನ್ನೂರಾಜಸಭೆಗೆ ಕರೆದುಕೊಂಡು ಹೋಗಲು ಆಗ್ರಹಿಸಿದಳು. ಸಂಜೆ ರಾಜಸಭೆ ಪ್ರಾರಂಭವಾಯಿತು. ದೀಕ್ಷಿತರು ಮೊಮ್ಮಗಳೊಡನೆ ಸಭೆಗೆ ಆಗಮಿಸಿದ್ದರು. ರಾಜಾಜ್ಞೆಯಂತೆ ದೀಕ್ಷಿತರಿಗೆ ಇನ್ನೇನು ಶಿಕ್ಷೆಯಾಗಬೇಕು ಆಗ ಅವರ ಮೊಮ್ಮಗಳು ಒಂದು ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡು ‘ಬಿಡಿಸಿ ಬಿಡಿಸಿ’ ಎಂದು ಕೂಗಹತ್ತಿದಳು. ಇದನ್ನು ನೋಡಿ ಮಹಾರಾಜ, ‘ನೀನೇ ಕಂಬವನ್ನು ಹಿಡಿದುಕೊಂಡು ಬಿಡಿಸಿ ಬಿಡಿಸಿ ಎಂದು ಕೂಗುತ್ತಿದ್ದೀಯಲ್ಲ ನಿನ್ನನ್ನು ಯಾರು ಬಿಡಿಸಬೇಕು. ಬಿಡು ಅದನ್ನು’ ಎಂದು ಗದರಿದ. ಆಗ ಆಕೆ ನಮ್ರತೆಯಿಂದ ಹೇಳಿದಳು-‘ರಾಜ ನೀವೂ ಹಾಗೇ ಅಲ್ಲವೆ? ತಲೆಯೊಳಗೆ ಯಾವುದೋ ಹಳೆಯ ವಿಷಯಗಳನ್ನು ತುಂಬಿಕೊಂಡು ನನ್ನ ಅಜ್ಜನನ್ನು ಶಿಕ್ಷಿಸುವುದು ಸರಿಯೇ?’ ಎಂದಳು. ರಾಜನಿಗೆ ಜ್ಞಾನೋದಯವಾಯಿತು. ತನ್ನ ತಪ್ಪಿನ ಅರಿವಾಗಿ ಅಜ್ಜ-ಮೊಮ್ಮಗಳಲ್ಲಿ ಕ್ಷಮೆಯಾಚಿಸಿದ.

ಈ ಕಥೆಯನ್ನು ಶ್ರೀ ಬ್ರಹ್ಮಾನಂದರು ಪ್ರವಚನವೊಂದರಲ್ಲಿ ಹೇಳಿದ್ದರು. ನಾವು ಸಹ ಎಷ್ಟೋ ವಿಷಯಗಳನ್ನು ತಲೆಯಲ್ಲಿ ಸಾಕಿಕೊಂಡು ದ್ವೇಷ, ಅಸೂಯೆ, ಸಿಟ್ಟಿನಿಂದ ಬಳಲುತ್ತೇವೆ. ನಮ್ಮ ತಲೆಯಿಂದ ಅನಗತ್ಯ ರಗಳೆಗಳನ್ನು ತೆಗೆದುಬಿಟ್ಟರೆ ನೆಮ್ಮದಿ, ನಿರಾಳತೆ ತನ್ನಿಂದ ತಾನೇ ಲಭಿಸುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net