ಮನೋಲ್ಲಾಸ: ಪೆನ್ಸಿಲ್ ಹೇಳಿದ ಕಿವಿಮಾತು

edit 3
Published on

| ಡಾ.ಕೆ.ಪಿ.ಪುತ್ತೂರಾಯ

ಇದು ಬರೆದು ಬರೆದು ಚಿಕ್ಕದಾಗಿದ್ದ ಒಂದು ಸಣ್ಣ ಪೆನ್ಸಿಲ್ ಆಗ ತಾನೇ ಬರೆಯಲು ಶುರು ಮಾಡಿದ್ದ ದೊಡ್ಡ ಪೆನ್ಸಿಲ್​ಗೆ ಹೇಳಿದ ಕಿವಿಮಾತು. ‘‘ಈಗ ನೀನು ಗಾತ್ರದಲ್ಲಿ ನನಗಿಂತ ದೊಡ್ಡವನಾಗಿರಬಹುದು, ಆದರೆ ಅನುಭವದಲ್ಲಿ ನಾನೇ ನಿನಗಿಂತ ದೊಡ್ಡವ. ಹಿಂದೊಂದು ದಿನ ನಾನು ನಿನ್ನಂತೆಯೇ ದೊಡ್ಡವನಾಗಿದ್ದೆ. ಬರೆಯುತ್ತ, ಬರೆಯುತ್ತ ಈಗ ಚಿಕ್ಕವನಾಗಿರುವೆ. ಈ ಸ್ಥಿತಿ ನಿನಗೂ ಒಂದು ದಿನ ಬರಲಿದೆ ಎಂಬುದನ್ನು ಮರೆಯದಿರು, ನನ್ನ ಅನುಭವದ ನಾಲ್ಕು ಮಾತುಗಳನ್ನು ಕೇಳಿಕೋ’.

‘‘ಆರಂಭದಲ್ಲಿ, ಸ್ವಂತವಾಗಿ ನನ್ನಿಂದ ಏನೂ ಮಾಡಲಾಗಲಿಲ್ಲ. ಜನರು ನನ್ನನ್ನು ಕೈಗೆತ್ತಿಗೊಂಡು, ಬರೆಯಲು ಬಳಸಿದಾಗ ಮಾತ್ರ ನಾನು ಉಪಯೋಗಕ್ಕೆ ಬಂದೆ. ಇಲ್ಲವಾಗಿದ್ದರೆ ನಿರುಪಯುಕ್ತ ವಸ್ತುವಾಗಿ ಬಿದ್ದಿರಬೇಕಾಗಿತ್ತು. ನಿನ್ನಲ್ಲಿರುವ ಹೊರಭಾಗದ ಮರದ ಅಂಶ ನಿನಗೆ ಉದ್ದಳತೆಯನ್ನು ಕೊಟ್ಟಿರಬಹುದು. ಆದರೆ, ನಿನ್ನ ನಿಜವಾದ ಸತ್ವ ಇರೋದು ಒಳಭಾಗದ ಸೀಸೆಯ ಕಡ್ಡಿಯಲ್ಲಿ. ಗಾತ್ರದಲ್ಲಿ ಅದು ನಿನಗಿಂತ ಚಿಕ್ಕದೇ ಇರಬಹುದು; ಪಾತ್ರದಲ್ಲಿ ಅದೇ ಹಿರಿದು! ಬರೆಯುತ್ತ ನೀನು ಸವೆದು ಹೋಗುವೆ; ಮೊಂಡಾಗುವೆ, ಆಗ ನಿನ್ನನ್ನು ಹರಿತಗೊಳಿಸಲು sharpnerಗಳನ್ನು ಬಳಸುತ್ತಾರೆ. ಈ ನೋವನ್ನು ಸಹಿಸಿಕೊಳ್ಳಲು ನೀನು ತಯಾರಾಗಬೇಕು. ಬರೆಯುವ ತಾಕತ್ತು ಇಲ್ಲವಾದಾಗ ನಿನ್ನನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ. ಬರೆಯುತ್ತಿರುವಾಗ, ನಿನ್ನಿಂದ ಹಲವಾರು ತಪ್ಪುಗಳು ನಡೆದು ಹೋಗಿರಬಹುದು. ಆಗ ಮತ್ತೊಂದು ತುದಿಯಲ್ಲಿರುವ ರಬ್ಬರ್​ನಿಂದ ಆ ತಪ್ಪುಗಳನ್ನು ಅಳಿಸುತ್ತಾರೆ. ಇಂತಹ ತಿದ್ದುಪಡಿಗಳಿಗೂ ನೀನು ಸಿದ್ಧವಾಗಿರಬೇಕು. ಇವೆಲ್ಲವನ್ನೂ ಜ್ಞಾಪಕದಲ್ಲಿಟ್ಟುಕೊಂಡು ಮುಂದುವರಿದರೆ, ನಿನ್ನ ಜೀವನ ಸಾರ್ಥಕವಾಗುತ್ತದೆ’.

ಪುಟ್ಟ ಪೆನ್ಸಿಲ್ ಹೇಳಿದ ಒಂದೊಂದು ಕಿವಿಮಾತಿನಲ್ಲೂ ಒಂದೊಂದು ಸಂದೇಶ ರವಾನೆಯಾಗಿದೆ. ‘ಅರ್ನ್ಯಘ ಮಣಿ ಮಾಣಿಕ್ಯಂ ಹೇಮಾಶ್ರಯ ನಪೇಕ್ಷತೇ’ ಎಂಬ ಮಾತಿನಂತೆ, ಎಷ್ಟೇ ಬೆಲೆ ಬಾಳುವ ಮಣಿ, ಮಾಣಿಕ್ಯಗಳನ್ನು ಧರಿಸಬೇಕಾದರೂ, ಅವನ್ನು ಮೇಲೆತ್ತಿ ಹಿಡಿಯುವ ಚಿನ್ನಾಭರಣ ಬೇಕು. ಅಂತೆಯೇ, ನಮ್ಮಲ್ಲಿ ಎಷ್ಟೇ ಪ್ರತಿಭೆ ಇದ್ದರೂ, ಅದು ಪ್ರಕಟವಾಗಿ ಪ್ರಯೋಜನಕ್ಕೆ ಬರಬೇಕಾದರೂ, ಅದನ್ನು ಗುರುತಿಸಿ, ಬಳಸಿಕೊಳ್ಳುವ ಪೋಷಕರು ಬೇಕು. ಅಂತೆಯೇ ಭಗವಂತನ ಕೃಪೆ ಇಲ್ಲದಿದ್ದರೆ, ನಾವೆಲ್ಲರೂ ಸೊನ್ನೆ. ಅವನೇ ಸೂತ್ರಧಾರಿ; ನಾವೆಲ್ಲ ಪಾತ್ರಧಾರಿಗಳು, ಅವನೇ ಅಂಬಿಗ, ನಾವೆಲ್ಲ ಪಯಣಿಗರು. ನಮ್ಮಲ್ಲಿ ಹೊರಗಡೆಯಿಂದ ಕಾಣಬರುವ ಸೊತ್ತು-ಸಂಪತ್ತುಗಳು, ಸ್ಥಾನಮಾನಗಳು ಮುಖ್ಯವಲ್ಲ; ಒಳಗಡೆ ಇರುವ ಶಾಂತಿ, ನೆಮ್ಮದಿಯೇ ಮುಖ್ಯ. ಬಾಹ್ಯಸೌಂದರ್ಯಕ್ಕಿಂತಲೂ, ಆಂತರಿಕ ಸೌಂದರ್ಯವೇ ಶ್ರೇಷ್ಠ. ಹೊರಗಿನ ಬೆಳವಣಿಗೆ ಆಧುನಿಕತೆ; ಒಳಗಿನ ಬೆಳವಣಿಗೆ ನಾಗರಿಕತೆ.

ನಾವು ಉಪಯೋಗಕ್ಕೆ ಬರುವಷ್ಟು ದಿನ, ಜನ ನಮ್ಮನ್ನು ಬಳಸಿಕೊಳ್ಳುತ್ತಾರೆ. ಆದುದರಿಂದ ಉಪಯೋಗಕ್ಕೆ ಬರುವಂತೆ ನಮಗೆ ಆಗಾಗ ಚುರುಕು ಮುಟ್ಟಿಸುತ್ತಲೇ ಇರುತ್ತಾರೆ. ಇದಕ್ಕೆ ನಾವು ತಯಾರಾಗಿರಬೇಕು. ಜ್ಞಾನವನ್ನು ಪರಿಷ್ಕೃತಗೊಳಿಸುತ್ತಲೇ ಇರಬೇಕು. ತಪ್ಪುಗಳಾಗೋದು ಸಹಜ. ಆದ ತಪ್ಪುಗಳನ್ನು ಆಗಿಂದಾಗ ಅಳಿಸುತ್ತ, ನಮ್ಮನ್ನು ತಿದ್ದಿಕೊಳ್ಳಬೇಕು. ಒಟ್ಟಿನಲ್ಲಿ ಪೆನ್ಸಿಲ್ ಜೊತೆ ರಬ್ಬರ್ ಕೂಡ ಇರಲಿ!

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net