ವಿದ್ಯಾರ್ಥಿಗಳು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ

19,kkr.2
Published on

ಕಿಕ್ಕೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡುತ್ತ ಬಂದು ಅಂತಿಮವಾಗಿ ಜೂ.25ಕ್ಕೆ ಪರೀಕ್ಷೆ ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳು ಧೈರ್ಯವಾಗಿ ಎದುರಿಸಲು ಮುಂದಾಗಬೇಕು ಎಂದು ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದರು.
ಹೋಬಳಿಯ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿ ಮನೆಗಳಿಗೆ ಸಿಬ್ಬಂದಿಯೊಂದಿಗೆ ತೆರಳಿ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು, ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು.
ಕರೊನಾ ಹತೋಟಿಗೆ ಎಲ್ಲ ರೀತಿ ಮುಂಜಾಗ್ರತೆ ಕ್ರಮವನ್ನು ಸರ್ಕಾರ ವಹಿಸುತ್ತಿದ್ದು, ಆತಂಕ ಬೇಡ. ತಾಲೂಕಿನಲ್ಲಿ ಒಟ್ಟು 2741 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಪರೀಕ್ಷಾ ಕೇಂದ್ರದಲ್ಲಿ ಕರೊನಾ ವೈರಾಣು ಹರಡದಂತೆ ಎಚ್ಚರ ವಹಿಸಲಾಗುವುದು. ಪ್ರತಿ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಅಂತರ ಕಾಪಾಡುವಿಕೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಎಲ್ಲ ರೀತಿ ವ್ಯವಸ್ಥೆ ಮಾಡಲಾಗುವುದು. ಜ್ವರವಿರುವ ಮಕ್ಕಳಿಗೆ ಅಗತ್ಯವಿದ್ದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು ಎಂದರು.
ಶಿಕ್ಷಕರು ವ್ಯಾಟ್ಸ್‌ಆ್ಯಪ್ ಗ್ರೂಪ್ ಮಾಡಿ ವಿದ್ಯಾರ್ಥಿಗಳ ಗೊಂದಲ ನಿವಾರಿಸುವ ಕೆಲಸ ಮಾಡಲಾಗಿದ್ದು, ಅರ್ಧ ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಖುಷಿಯಾಗಿ ಪರೀಕ್ಷೆ ಬರೆಯಲು ಹೇಳಿದರು. ಇಸಿಒ ಜ್ಞಾನೇಶ್, ಸೋಮಶೇಖರ್, ಲೀಲಾಮಣಿ, ಶಿಕ್ಷಕರು, ಪೋಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net