

ಬೆಂಗಳೂರು: ಬಹುತೇಕ ಜನರು ಮನೆಯ ಅಲಂಕಾರಕ್ಕೆ ಹೆಚ್ಚಿನ ಗಮನ ನೀಡುತ್ತಾರೆ. ಲೀವಿಂಗ್ ರೂಮ್‌ನಿಂದ ಹಿಡಿದು ಬಾಲ್ಕನಿ ಸೌಂದರ್ಯವನ್ನು ಹೆಚ್ಚಿಸಲು ಅನೇಕ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ಹಳ್ಳಿಯಿರಲಿ, ಪಟ್ಟಣವಿರಲಿ ಮನೆಯ ಬದಿ ವಿವಿಧ ರೀತಿಯ ಹೂವುಗಳನ್ನು ನೆಡುವುದರಿಂದ ಮನೆಯ ಸೌಂದರ್ಯವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಹೂವಿನ ಗಿಡ ನೆಡಲು ಮಣ್ಣಿನಿಂದ ಮಾಡಿದ ಮಡಕೆಗಳನ್ನು ಬಳಸುತ್ತೇವೆ ಅಲ್ಲವೇ, ಆದರೆ ಇಂದು ನಾವು ನಿಮಗೆ ಮಡಕೆಗಳ ಬದಲಾಗಿ ಮನೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಹಳೆಯ ವಸ್ತುಗಳನ್ನು ಉಪಯೋಗಿಸಿಕೊಂಡು ಹೂಗಳನ್ನು ಹೇಗೆ ಬೆಳೆಯಬಹುದು ಎಂಬ ಐಡಿಯಾ ಕೊಡಲಾಗಿದೆ. ಹೌದು, ನಿಮ್ಮ ಮನೆಯಲ್ಲಿ ಹಳೆಯ ವಸ್ತುಗಳಿದ್ದು, ನೀವದನ್ನು ಎಸೆಯಲು ಬಯಸದಿದ್ದರೆ ಅದನ್ನು ಪಾಟ್ (ಕುಂಡ) ಆಗಿ ಹೇಗೆ ಬದಲಾಯಿಸಬಹುದು?, ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ...
ತಂಪು ಪಾನೀಯ ಬಾಟಲಿ
ತಂಪು ಪಾನೀಯ ಬಾಟಲಿಗಳು ನಮ್ಮ ಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅದನ್ನು ಬಳಸಿದ ನಂತರ ಅದು ತ್ಯಾಜ್ಯವಾಗುತ್ತದೆ. ಈ ಬಳಸಿದ ತಂಪು ಪಾನೀಯಗಳ ಬಾಟಲಿಯಿಂದ ನೀವು ಪಾಟ್ ತಯಾರಿಸಬಹುದು. ಮೊದಲಿಗೆ ಈ ಬಾಟಲಿಯನ್ನು ಮಧ್ಯದಿಂದ ಕತ್ತರಿಸಿ, ಹೊರಗಿನಿಂದ ಬಣ್ಣ ಹಾಕಿದರೆ ಮುಗಿಯಿತು.
ಬೂಟುಗಳು
ಬಟ್ಟೆ ಬಿಟ್ಟರೆ ಮನೆಗಳಲ್ಲಿ ಹೆಚ್ಚಾಗಿ ಕಂಡುಬರುವುದು ಚಪ್ಪಲಿಗಳು ಮತ್ತು ಬೂಟುಗಳು. ನಿಮ್ಮ ಬೂಟುಗಳು ಹಾಳಾಗಿದ್ದರೆ, ಅವುಗಳನ್ನು ಎಸೆಯಬೇಡಿ. ನೀವು ಅದನ್ನು ಪಾಟ್ ಆಗಿ ಬಳಸಬಹುದು. ಇದು ಬಹಳ ವಿಶಿಷ್ಟವಾಗಿ ಕಾಣುತ್ತದೆ.
ಹಳೆಯ ಆಟಿಕೆಗಳು
ನಾವು ಮಕ್ಕಳಿಗೆ ಅನೇಕ ದುಬಾರಿ ಆಟಿಕೆಗಳನ್ನು ಖರೀದಿಸುತ್ತೇವೆ. ಕೆಲವೊಮ್ಮೆ ಈ ಆಟಿಕೆಗಳು ಸಹ ಒಡೆಯುತ್ತವೆ. ಆಗ ನಾವು ಅವುಗಳನ್ನು ಎಸೆಯುತ್ತೇವೆ. ಆದರೆ ಅವುಗಳನ್ನು ಬಿಸಾಡುವುದಕ್ಕಿಂತ ಪಾಟ್ ಆಗಿ ಬಳಸುವುದು ಉತ್ತಮ. ಈ ಆಟಿಕೆಗಳಲ್ಲಿ ನೀವು ಒಳಾಂಗಣ ಸಸ್ಯಗಳನ್ನು ಸಹ ನೆಡಬಹುದು. ಈ ಕುಂಡಗಳಿಂದ ಮನೆಯ ಸೌಂದರ್ಯವನ್ನು ಹೆಚ್ಚಿಸಬಹುದು.
ಹಳೆಯ ಟೈರುಗಳು
ಹಳೆಯ ಟೈರುಗಳನ್ನು ಕುಂಡಗಳಾಗಿಯೂ ಬಳಸಬಹುದು. ಇದು ತುಂಬಾ ಚೆನ್ನಾಗಿಯೂ ಕಾಣುತ್ತದೆ. ವಾಹನಗಳ ಹಳೆಯ ಟೈರ್ ಗಳಿಗೆ ನಿಮ್ಮ ನೆಚ್ಚಿನ ಬಣ್ಣ ಬಳಿದು, ಗಾರ್ಡನ್ ಏರಿಯಾದಲ್ಲಿ ನೇತು ಹಾಕಬಹುದು. ಇದಕ್ಕೆ ಬಣ್ಣಬಣ್ಣದ ಹೂಗಳನ್ನು ಸೇರಿಸಿದರೆ ಅದ್ಭುತ ಲುಕ್ ಸಿಗುತ್ತದೆ.