ಮಾಡುವ ಕೆಲಸವನ್ನು ಪ್ರೀತಿಸೋಣ

1401fc20-7b44-441b-96c4-65683a35514f
Published on

| ಗೀತಾ ವಿ. ಹೆಗಡೆ

ಅದೊಂದು ಊರು. ಅಲ್ಲಿ ಕೊಂಚ ಹೆಚ್ಚು ಓದಿಕೊಂಡಿದ್ದ ಮೂರು ಯುವಕರಿದ್ದರು. ಆದರೆ ಆ ಮೂವರೂ, ‘ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ಸಿಗುತ್ತಿಲ್ಲ, ಹೆಚ್ಚಿನ ಹಣ ಗಳಿಸಲಾಗುತ್ತಿಲ್ಲ’ ಎಂದೆಲ್ಲ ಕಂಡವರ ಬಳಿ ಹೇಳುತ್ತ ತಿರುಗುತ್ತಿದ್ದರು. ಯಾವ ಕೆಲಸಕ್ಕೆ ಹೋದರೂ ಇದು ಕಡಿಮೆ ದರ್ಜೆಯದು, ತಮ್ಮ ವಿದ್ಯಾರ್ಹತೆಗೆ ತಕ್ಕವಾದುದಲ್ಲ ಎಂದು ತಿರಸ್ಕರಿಸುತ್ತಿದರು. ಹೀಗಿರುವಾಗ ಯಾರೋ ಪುಣ್ಯಾತ್ಮರು ಇವರ ಬಳಿ ಬಂದು, ‘ಈ ನದಿಯಾಚೆ ಇರುವ ಕಾಡಿನಲ್ಲಿ ಒಬ್ಬ ಯೋಗಿ ಇದ್ದಾರೆ. ಅವರು ನಿಶ್ಚಿತವಾಗಿ ನಿಮ್ಮ ಕ್ಲೇಶಗಳಿಗೆ ಸಮಾಧಾನ ಹೇಳುತ್ತಾರೆ’ ಎಂದರು. ಒಪ್ಪಿಕೊಂಡ ಆ ಯುವಕರು ಯೋಗಿಯನ್ನು ಹುಡುಕುತ್ತ ಹೊರಟರು.

ದೋಣಿ ನಡೆಸುವ ಒಬ್ಬ ವೃದ್ಧ ನದಿಯ ದಡದಲ್ಲಿ ಹಾಡುತ್ತ ಕುಳಿತಿದ್ದ. ಅವನ ಬಳಿ ಹೋಗಿ, ’ನಮ್ಮನ್ನು ಆಚೆ ದಡಕ್ಕೆ ಕರೆದುಕೊಂಡು ಹೋಗು’ ಎಂದರು. ನಾವಿಕನು ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಅವರಲ್ಲೊಬ್ಬ, ‘ಏನಯ್ಯ ನಿನ್ನ ವಿದ್ಯಾರ್ಹತೆ ಏನು? ಬರೀ ದೋಣಿ ನಡೆಸುವುದರಿಂದ ಬರುವ ಸಂಪಾದನೆ ಸಾಕಾಗುವುದೇನು?’ ಎಂದು ಪ್ರಶ್ನಿಸಿದ. ಆತ, ‘ಸ್ವಾಮಿ, ನಾನು ಅಕ್ಷರಜ್ಞಾನವನ್ನು ಹೊಂದಿಲ್ಲ, ಆದರೆ ಈ ಕೆಲಸದಿಂದ ಬರುವ ಸಂಪಾದನೆಯಿಂದ ತೃಪ್ತನಾಗಿದ್ದೇನೆ’ ಎಂದ. ಆಗ ಮೂವರೂ ನಗುತ್ತ, ‘ಈ ಅವಿದ್ಯಾವಂತನ ಬಳಿ ನಾವೇನು ಮಾತನಾಡುವುದು’ ಎಂದಾಗ ವೃದ್ಧನ ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ ಮುಗುಳ್ನಗುತ್ತ ಇವರನ್ನು ಸುರಕ್ಷಿತವಾಗಿ ದಡ ಸೇರಿಸಿದ.

ದಡ ತಲುಪಿದ ಅವರಿಗೆ ಅನತಿ ದೂರದಲ್ಲಿ ದನಗಳನ್ನು ಮೇಯಿಸುತ್ತಿದ್ದ ಒಬ್ಬ ಯುವಕ ಕಂಡನು. ‘ಇವನೊಬ್ಬ ದನ ಕಾಯುವವನು. ಇವನಿಗೆಲ್ಲ ಮಹಾತ್ಮರ ವಿಳಾಸವೇನು ತಿಳಿದಿರಲಾರದು’ ಎಂದುಕೊಂಡು ಮುಂದೆ ಸಾಗಿದರು. ಹಾಗೆ ಸ್ವಲ್ಪ ಮುಂದೆ ಸಾಗಿದಾಗ ಅಕಸ್ಮಾತ್ ಯೋಗಿಗಳ ದರ್ಶನ ಇವರಿಗಾಯ್ತು. ಇದನ್ನೂ ಓದಿ: ಮನೋಲ್ಲಾಸ: ಹೀಗಿರಬೇಕು ವ್ಯವಹಾರ ಸೂತ್ರ

ಜ್ಞಾನಚಕ್ಷುವಿನಿಂದ ಯುವಕರ ಮನಸ್ಥಿತಿ ಅರಿತಿದ್ದ ಯೋಗಿಗಳು ನಗುತ್ತ ಇವರನ್ನು ಸ್ವಾಗತಿಸಿದರು. ಯುವಕರು ಸಮಸ್ಯೆಯನ್ನು ಹೇಳಿಕೊಂಡಾಗ ಯೋಗಿಗಳು-‘ನೀವು ಮೊದಲು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ. ಧರ್ಮದಿಂದ ಮಾಡುವ ಯಾವುದೇ ಕೆಲಸಗಳಲ್ಲಿ ಮೇಲು-ಕೀಳೆಂಬುದಿಲ್ಲ. ದೋಣಿ ನಡೆಸುವುದಿರಲಿ, ದನ ಕಾಯುವುದಿರಲಿ... ಪ್ರಪಂಚ ಸುಲಲಿತವಾಗಿ ಮುನ್ನಡೆಯಲು ಎಲ್ಲ ಉದ್ಯೋಗಗಳೂ ಅವಶ್ಯಕ. ದನ ಕಾಯುವವನನ್ನು ಯಕಶ್ಚಿತ್ ಎಂದು ಭಾವಿಸಿದ ನಿಮಗೆ ಅವನಿಗಿರುವ ಗಿಡಮೂಲಿಕೆಗಳ ಜ್ಞಾನದ ಕುರಿತು ಅರಿವಿದೆಯೇ? ಕೇವಲ ಹೆಚ್ಚು ಹಣ ಗಳಿಸುವ ಉದ್ಯೋಗವೊಂದೇ ಶ್ರೇಷ್ಠ, ಉಳಿದವುಗಳೆಲ್ಲ ಕನಿಷ್ಠ ಎಂಬ ಭಾವನೆಯನ್ನು ತೊಡೆದು ಹಾಕಿ. ಮೊದಲು ನೀವು ಮಾಡುತ್ತಿರುವ ಕೆಲಸವನ್ನು ಪ್ರೀತಿಸಿ, ಪ್ರಾಮಾಣಿಕವಾಗಿ ಮಾಡಿರಿ. ಅದರಿಂದಲೇ ಗೊಂದಲಗಳು ಸರಿದು ಮನಸ್ಸು ಪ್ರಶಾಂತವಾಗುವುದು’ ಎಂದರು. ಇದನ್ನೂ ಓದಿ:  ಮನೋಲ್ಲಾಸ: ರಾಮಾಯಣವೆಂಬ ಮಹಾಫಲ

ಹೌದಲ್ಲವೇ? ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಯಾವುದೇ ಕೆಲಸವೂ ಶ್ರೇಷ್ಠವಾದುದ್ದೇ ಆಗಿದೆ. ಆತ್ಮಗೌರವದಿಂದ ಬದುಕುವ ಎಲ್ಲ ಕಾಯಕ ಜೀವಿಗಳಿಗೂ ಸಮಾನ ಗೌರವ ನೀಡಬೇಕಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net