ಮನೋಲ್ಲಾಸ: ಸತ್ಯದ ಶಕ್ತಿ ಅರಿಯೋಣ

Edit-3
Published on

ಡಾ.ಕೆ.ಪಿ.ಪುತ್ತೂರಾಯ

ಒಮ್ಮೆ ಸತ್ಯ ಮತ್ತು ಸುಳ್ಳು ವಾಯುವಿಹಾರಕ್ಕೆಂದು ಜೊತೆಯಾಗಿ ಹೊರಟವು. ಸತ್ಯವು ಸರಳ ಶುಭ್ರ ನೋಡುವವರಿಗೆ ಗೌರವವನ್ನು ಹುಟ್ಟಿಸುವಂಥ ಶ್ವೇತವರ್ಣದ ಉಡುಪನ್ನು ಧರಿಸಿತ್ತು. ಆದರೆ ಸುಳ್ಳು ನೋಡುವವರ ಕಣ್ಣು ಕುಕ್ಕುವಂಥ ರಂಗುರಂಗಿನ ಬಟ್ಟೆಗಳನ್ನು ಹಾಕಿಕೊಂಡಿತ್ತು. ದಾರಿಯಲ್ಲೊಂದು ಸುಂದರ ಕೊಳ ಕಾಣಿಸಿತು. ಸತ್ಯ ಹಾಗೂ ಸುಳ್ಳುಗಳು ಸ್ನಾನ ಮಾಡಲೆಂದು ನೀರಿಗಿಳಿದವು. ಈಜುತ್ತ ಮೈಮರೆತವು. ಸ್ಪಲ್ಪ ಹೊತ್ತಿನ ಬಳಿಕ ಸುಳ್ಳು ಕೊಳದಿಂದ ಮೇಲೆ ಎದ್ದು ಬಂತು, ಸತ್ಯ ಮೈಮರೆತು ಈಜುತ್ತಲೇ ಇತ್ತು. ಸುಳ್ಳು ಅತ್ತಿತ್ತ ನೋಡಿ ಮೆಲ್ಲಗೆ ಸತ್ಯವು ಕಳಚಿಟ್ಟು ಹೋಗಿದ್ದ ಅದರ ಬಟ್ಟೆಗಳನ್ನು ಧರಿಸಿ ಹೊರಟೇ ಹೋಯಿತು. ಸ್ಪಲ್ಪ ಸಮಯದ ನಂತರ ಕೊಳದಿಂದ ಮೇಲೆದ್ದು ಬಂದ ಸತ್ಯ ತನ್ನ ಬಟ್ಟೆಗಳನ್ನು ಕಾಣದಾಯಿತು. ಸತ್ಯಕ್ಕೆ ಸುಳ್ಳಿನ ಬಟ್ಟೆಗಳನ್ನು ಧರಿಸಿಕೊಳ್ಳಲು ಅಸಹ್ಯವೆನಿಸಿತು. ಬೇರೆ ವಿಧಿಯಿಲ್ಲದೆ ಒಳಉಡುಪಿನೊಂದಿಗೆ ಅರೆನಗ್ನಾವಸ್ಥೆಯಲ್ಲಿ ಹೊರಟಿತು. ಅಂದಿನಿಂದ ಇಂದಿನವರೆಗೆ ಸತ್ಯ ಅರೆಬೆತ್ತಲಾಗಿ ತೆರೆಮರೆಯಲ್ಲಿ ಓಡಾಡುತ್ತಿದೆ. ಸುಳ್ಳು ಮಾತ್ರ ಸತ್ಯದ ಹೊದಿಕೆಗಳನ್ನು ತೊಟ್ಟುಕೊಂಡು ಎಲ್ಲರ ನಂಬಿಕೆಗೆ ದ್ರೋಹವೆಸಗುತ್ತ ರಾಜಾರೋಷವಾಗಿ ಯಾರ ಭಯ ವಿಲ್ಲದೇ ತಿರುಗಾಡುತ್ತಲೇ ಇದೆ.

ತಾತ್ಪರ್ಯ ಇಷ್ಟೇ, ಸುಳ್ಳು ಹೇಳುವವರು ಜನರಿಗೆ ಮೋಸ ಮಾಡುತ್ತಿರುತ್ತಾರೆ. ತಾವಾಡಿದ ಒಂದು ಸುಳ್ಳನ್ನು ಸಮರ್ಥಿಸಿಕೊಳ್ಳಲು ಹಲವಾರು ಸುಳ್ಳುಗಳನ್ನು ಹೇಳಬೇಕಾದ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸುಳ್ಳು ಹೇಳುವವರನ್ನು ಅವರ ಮುಖದ ಹಾವಭಾವದಿಂದಲೇ ಅರಿತುಕೊಳ್ಳಬಹುದು. ಅವರ ದನಿಯಲ್ಲಿ ದೃಢತೆ ಇರುವುದಿಲ್ಲ. ಬದಲಾಗಿ ನಡುಕ ಇರುತ್ತದೆ. ಅವರ ಮಾತಿನಲ್ಲಿ ಆತ್ಮವಿಶ್ವಾಸ ಇರುವುದಿಲ್ಲ. ಕಾರಣ ಆತ್ಮವೆಂದೂ ಸುಳ್ಳನ್ನು ಅರುಹಲು ಒಪ್ಪಿಗೆ ನೀಡದು.

ಸತ್ಯವಾದರೋ ಎಂದೂ ಹೇಳಲು ಕಹಿ, ಯಾವಾಗಲೂ ನಿಷ್ಠುರವನ್ನೇ ತಂದೊಡ್ಡುತ್ತದೆ. ಸತ್ಯವನ್ನೇ ಹೇಳಿದರೆ ಕೇಳುವವರಿಗೆ ಅದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಸತ್ಯ ಹೇಳಿದವರು ಇಷ್ಟವಾಗುವುದಿಲ್ಲ. ಎಷ್ಟಾದರೂ ‘ಕಂಡದ್ದನ್ನು ಕಂಡ ಹಾಗೇ ಹೇಳಿದರೆ ಕೆಂಡದಂಥ ಸಿಟ್ಟಲ್ಲವೇ?’ ಆದುದರಿಂದ ಜನ ಸತ್ಯ ಹೇಳುವುದರಿಂದ ಹಿಂದೆ ಸರಿಯುತ್ತಾರೆ. ಸತ್ಯ ಹೇಳಿ ನಾವೇಕೆ ಕೆಟ್ಟವರಾಗಬೇಕೆಂದು ತಿಳಿದು ಸುಮ್ಮನಾಗುತ್ತಾರೆ. ಪರಿಣಾಮವಾಗಿ ಸತ್ಯ ಮೂಲೆಗುಂಪಾಗುತ್ತದೆ. ಆದರೆ ನಮ್ಮ ಹಿತಚಿಂತಕರು ಸತ್ಯವನ್ನು ಹೇಳಲು ಹಿಂದೆಮುಂದೆ ನೋಡುವುದಿಲ್ಲ. ಸತ್ಯವನ್ನೇ ನುಡಿಯುವುದರಿಂದ ಆಗುವ ಒಂದು ಲಾಭ ಏನೆಂದರೆ, ಏನನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸತ್ಯ ಎಷ್ಟೇ ಕಹಿಯಾಗಿದ್ದರೂ, ಕಟುವಾಗಿದ್ದರೂ, ನಯವಾದ ಕೇಳಲು ಸಿಹಿಯಾದ ಸುಳ್ಳಿಗಿಂತ ಎಂದೆಂದೂ ಮೇಲು. ನೀರು ಎಷ್ಟೇ ಬಿಸಿಯಾಗಿದ್ದರೂ ಬೆಂಕಿಯನ್ನು ಆರಿಸಬಲ್ಲದು. ಅಂತೇಯೆ ಸತ್ಯ ಎಷ್ಟೇ ಕಠೋರವಾಗಿದ್ದರೂ ಸುಳ್ಳನ್ನು ನಾಶಮಾಡಬಲ್ಲದು. ಸತ್ಯದ ಶಕ್ತಿ ಅಪಾರ ಮತ್ತು ಅಗಾಧ. ಸುಳ್ಳು ತಾತ್ಕಾಲಿಕವಾಗಿ ಪರಿಹಾರ ನೀಡಿದರೂ ಶಾಶ್ವತವಾಗಿ ಸುಖ, ನೆಮ್ಮದಿಯನ್ನು ನೀಡೋದು ಸತ್ಯವೊಂದೆ. ಸತ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬಹುದು. ಆದರೆ ಯಾವ ಕಾರಣಕ್ಕೂ ಸತ್ಯವನ್ನು ತ್ಯಾಗ ಮಾಡಬಾರದು.

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net