

ಈ ವಿಷಯ ತಿಳಿದ ಕುಬೇರನು ಅಲ್ಲಿಗೆ ಓಡಿಬಂದು, ನಾರದರ ಬಳಿ ಕ್ಷಮೆಯಾಚಿಸಿ ತನ್ನ ಮಕ್ಕಳನ್ನು ಶಾಪದಿಂದ ವಿಮುಕ್ತಗೊಳಿಸಬೇಕೆಂದು ಪರಿ-ಪರಿಯಾಗಿ ಬೇಡಿಕೊಂಡನು. ಆಗ ನಾರದರ ಮನಸ್ಸು ಕರಗಿ ಅವರ ಶಾಪವಿಮೋಚನೆಯ ಮಾರ್ಗವನ್ನು ತಿಳಿಸಿದರು. ‘ಭಗವಂತನಾದ ಶ್ರೀಕೃಷ್ಣನು ಮುಂದೆ ತನ್ನ ಬಾಲಲೀಲೆಗಳ ಸಂದರ್ಭದಲ್ಲಿ ಈ ನಿನ್ನ ಇಬ್ಬರು ಮಕ್ಕಳ ಶಾಪವಿಮೋಚನೆ ಮಾಡುತ್ತಾನೆ’ ಎಂದು ತಿಳಿಸಿ ಅಲ್ಲಿಂದ ಹೊರಟುಹೋದರು. ಕಾಲಾನಂತರದಲ್ಲಿ, ಶ್ರೀಕೃಷ್ಣನು ಬಾಲ್ಯದಲ್ಲಿ ತನಗೆ ಕಟ್ಟಿದ್ದ ಹಗ್ಗದಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ, ಈ ಎರಡು ವೃಕ್ಷಗಳು ಬೇರುಸಹಿತ ಕೆಳಗೆ ಉರುಳುವಂತೆ ಮಾಡಿ, ಇವರಿಬ್ಬರ ಶಾಪವಿಮೋಚನೆ ಮಾಡಿದನು.
ಈ ಘಟನೆಯಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ, ಕುಬೇರನ ಮಕ್ಕಳಿಬ್ಬರು ಬಾಲ್ಯದಿಂದ ಒಳ್ಳೆಯ ಸಂಸ್ಕಾರ ಕಲಿಯದೆ, ಕೊನೆಗೆ ಶಾಪಗ್ರಸ್ತರಾಗಿ ಸುದೀರ್ಘ ಕಾಲದವರೆಗೆ ವೇದನೆ ಅನುಭವಿಸುವಂತಾಯಿತು. ಇದಕ್ಕೆ ಅವರ ತಂದೆ ಕುಬೇರನ ಅತಿಯಾದ ಪುತ್ರವ್ಯಾಮೋಹ ಮತ್ತು ಸಲುಗೆಯಲ್ಲಿ ಮಕ್ಕಳನ್ನು ಬೆಳೆಸಿದ್ದು ಪ್ರಮುಖ ಕಾರಣ. ರಾಮಾಯಣದಲ್ಲೂ ಇಂಥದ್ದೊಂದು ಉದಾಹರಣೆ ಕಾಣಬಹುದು. ಮಾರೀಚ-ಸುಬಾಹುವೆಂಬ ಇಬ್ಬರು ದುಷ್ಟರಾಕ್ಷಸರ ನಿವಾರಣೆಗೆ ರಾಮ-ಲಕ್ಷ್ಮಣರನ್ನು ಕಳುಹಿಸಲು ದಶರಥನು ಅತಿಯಾದ ಪುತ್ರಪ್ರೇಮದ ಕಾರಣದಿಂದ ಹಿಂದೇಟು ಹಾಕಿದ್ದನು. ನಂತರ ಕುಲಗುರುಗಳಾದ ವಸಿಷ್ಠರ ಮಾರ್ಗದರ್ಶನದಿಂದ ಸಮಸ್ಯೆ ನಿವಾರಣೆ ಆಗಿತ್ತು. ದುರ್ಯೋಧನನ ಧರ್ಮವಿರೋಧಿ ಕಾರ್ಯಗಳಿಗೆ ಅವನ ತಂದೆ ಧೃತರಾಷ್ಟ್ರನ ಪೋಷಣೆ, ಪ್ರೋತ್ಸಾಹಕ್ಕೆ ಅತಿಯಾದ ಪುತ್ರವ್ಯಾಮೋಹವೇ ಕಾರಣ. ಈ ಆಧುನಿಕ ಯುಗದಲ್ಲೂ ಮಕ್ಕಳ ಮೇಲಿನ ಅತೀ ಪ್ರೀತಿಯಿಂದಾಗಿ ಅವರನ್ನು ಸವಾಲಿಗೆ ಒಡ್ಡಲು ಪಾಲಕರು ಹಿಂಜರಿಯುವುದನ್ನು ಕಾಣಬಹುದು. ಶಾಲೆಯಲ್ಲಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಮಗು ತಾಯಿಗೆ ಹೇಳಿದಾಗ, ಮಗನ ಬಗ್ಗೆ ಅತೀವ ಕಾಳಜಿ ಹೊಂದಿದ್ದ ತಾಯಿ- ‘ನಿಧಾನವಾಗಿ ಓಡು ಮಗೂ...’ ಎಂದಳಂತೆ. ನಿಧಾನವಾಗಿ ಓಡಿದರೆ ಅವನು ಸ್ಪರ್ಧೆ ಗೆಲ್ಲಲು ಹೇಗೆ ಸಾಧ್ಯ. ಮಕ್ಕಳು ಸೈಕಲ್, ಈಜು ಕಲಿಯುವುದು, ವಿದ್ಯಾಭ್ಯಾಸದಲ್ಲಿ ಐಚ್ಛಿಕ ವಿಷಯಗಳ ಆಯ್ಕೆ ನಿರ್ಧಾರ ಇವುಗಳಲ್ಲೆಲ್ಲ ಪ್ರಾರಂಭಿಕ ಹಂತದಲ್ಲಿ ಪಾಲಕರ ಸಹಾಯ, ಮಾರ್ಗದರ್ಶನ ಅವಶ್ಯವಾದರೂ ಮುಂದಿನ ಹಂತಗಳಲ್ಲಿ ಅವರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ಮಕ್ಕಳನ್ನು ವಯಸ್ಸಿಗೆ ಮೀರಿದ ಸಾಹಸಗಳಿಗೆ ದೂಡಬೇಕು ಎಂದಲ್ಲ, ಆಯಾ ವಯಸ್ಸಿಗೆ ತಕ್ಕಂತೆ ಅವರಿಗೆ ಸೂಕ್ತವಾದ ಆಟೋಟ, ಆಚಾರ-ವಿಚಾರ-ಸಂಸ್ಕಾರಗಳನ್ನು ಕಲಿಸಿದಾಗ ಅವರು ಬೆಳೆದು ದೊಡ್ಡವರಾದ ಮೇಲೆ ಸತ್ಪ್ರಜೆಗಳಾಗುತ್ತಾರೆ.
(ಲೇಖಕರು ಸಾಫ್ಟ್ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು)