ಮನೆಯಲ್ಲಿ ಕನ್ನಡಿ ಎಲ್ಲೆಂದರಲ್ಲಿ ಇಡ್ತೀರಾ? ಹಾಗಿದ್ರೆ, ವಾಸ್ತುವಿನಲ್ಲಿ ಹೇಳುವ ಈ ವಿಷಯಗಳು ನಿಮಗೆ ಗೊತ್ತಿರಲಿ | Mirror

ಇದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರ, ಮಲಗುವ ಕೋಣೆ, ಅಡುಗೆಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನ್ನಡಿಯನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂಬ ಮಾತಿದೆ.
Mirror
ಎಐ ಚಿತ್ರ
Published on: 

Mirror Vastu: ಮನೆಯ ಅಂದವನ್ನು ಹೆಚ್ಚಿಸುವ ಕನ್ನಡಿಗಳು ಕೇವಲ ಮುಖ ನೋಡಿಕೊಳ್ಳಲು ಮಾತ್ರವಲ್ಲ, ಒಂದು ರೀತಿ ನಮ್ಮಲ್ಲಿರುವ ಬಲ ಮತ್ತು ನ್ಯೂನ್ಯತೆಗಳನ್ನು ಹಾಗೆಯೇ ತೋರಿಸುವ ತಿಳಿ ನೀರಿನಂತೆಯೂ ಹೌದು. ಇದನ್ನೂ ಮೀರಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾತಾವರಣದ ಮೇಲೂ ಕನ್ನಡಿಗಳು ಪ್ರಭಾವ ಬೀರುತ್ತವೆ ಎನ್ನುತ್ತಾರೆ. ಇದರ ಕುರಿತಾಗಿ ಒಂದಿಷ್ಟು ಮಾಹಿತಿಗಳು ಇಲ್ಲಿವೆ ನೋಡಿ.

ಮನೆಯಲ್ಲಿ ಪಾಸಿಟಿವ್ ವಾತಾವರಣ ಮತ್ತು ಸುಖ-ಸಮೃದ್ಧಿಗೆ ಕನ್ನಡಿಯು ಪ್ರಮುಖ ಪಾತ್ರ ವಹಿಸುತ್ತೆ ಎಂಬ ನಂಬಿಕೆ ನಮ್ಮಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೇಕ್ ಅಪ್ ಮಾಡಿಕೊಂಡು ಕನ್ನಡಿಯನ್ನು ಮನಬಂದಂತೆ ಎಲ್ಲೆಂದರಲ್ಲಿ ಇಡುವವರ ಗಣನೀಯವಾಗಿ ಹೆಚ್ಚಿದೆ. ಇದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರ, ಮಲಗುವ ಕೋಣೆ, ಅಡುಗೆಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನ್ನಡಿಯನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು ಎಂಬ ಮಾತಿದೆ.

ಹಾಗಾದರೆ ಮನೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿರಬೇಕು? ಕನ್ನಡಿ ಇಡುವಾಗ ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು? ಒಡೆದ ಕನ್ನಡಿಯಿದ್ದರೆ ಏನು ಸಮಸ್ಯೆ, ಅದನ್ನೇಕೆ ಮನೆಯಲ್ಲಿ ಇಟ್ಟುಕೊಳ್ಳಬಾರದು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಹೀಗಿದೆ ನೋಡಿ ಉತ್ತರ.

ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದು ಶುಭಕರ ಎಂದು ನಂಬಲಾಗುತ್ತದೆ. ಈ ದಿಕ್ಕುಗಳು ಸಕಾರಾತ್ಮಕ ಶಕ್ತಿ, ಪ್ರಗತಿ ಮತ್ತು ಸಮೃದ್ಧಿಗೆ ಸಂಬಂಧಿಸಿವೆ ಎಂಬ ನಂಬಿಕೆಯಿದೆ. ಆದ್ದರಿಂದ, ಮನೆಯ ಗೋಡೆಗೆ ಕನ್ನಡಿ ಹಾಕುವಾಗ ಈ ದಿಕ್ಕುಗಳನ್ನೇ ಆಯ್ಕೆ ಮಾದುವುದು ಸೂಕ್ತ. ಮನೆಯ ಒಳಾಂಗಣಕ್ಕೆ ಹೆಚ್ಚು ಬೆಳಕು ಬರುವಂತೆ ಕನ್ನಡಿ ಇರಿಸಿದರೆ ಕೋಣೆ ವಿಶಾಲವಾಗಿ ಮತ್ತು ಪ್ರಕಾಶಮಾನವಾಗಿ ಕಾಣಲು ಸಹಾಯವಾಗುತ್ತದೆ. ಆದರೆ, ಕನ್ನಡಿ ಅಳವಡಿಸುವಾಗ ಮನೆಯ ವಿನ್ಯಾಸ ಹಾಗೂ ಅನುಕೂಲತೆಗೂ ಆದ್ಯತೆ ನೀಡುವುದು ಸೂಕ್ತ.

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗ ಎಚ್ಚರ

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅಗತ್ಯ. ವಿಶೇಷವಾಗಿ ಹಾಸಿಗೆಯ ಎದುರು ನೇರವಾಗಿ ಕನ್ನಡಿ ಇಡುವುದನ್ನು ತಪ್ಪಿಸುವುದು ಒಳ್ಳೆಯದು. ಮಲಗಿರುವ ವ್ಯಕ್ತಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸುವುದು ನೆಮ್ಮದಿಯ ನಿದ್ರೆಗೆ ಅಡ್ಡಿಯಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆದ್ದರಿಂದ, ಕನ್ನಡಿಯನ್ನು ಹಾಸಿಗೆಯ ಪಕ್ಕದ ಗೋಡೆಯ ಮೇಲೆ ಅಳವಡಿಸಬಹುದು ಅಥವಾ ಅಗತ್ಯವಿದ್ದಾಗ ಮಾತ್ರ ಬಳಸುವಂತೆ ವ್ಯವಸ್ಥೆ ಮಾಡಿಕೊಳ್ಳಬಹುದು.

ಮನೆಯ ಮುಖ್ಯ ಬಾಗಿಲಿನ ಎದುರು ಕನ್ನಡಿ ಇಡಬೇಡಿ

ಮನೆಯ ಮುಖ್ಯ ಬಾಗಿಲಿಗೆ ನೇರವಾಗಿ ಎದುರಾಗುವಂತೆ ಕನ್ನಡಿಯನ್ನು ಇಡುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯು ಕನ್ನಡಿಯಿಂದ ಪ್ರತಿಬಿಂಬಿಸಿ ಹೊರಹೋಗುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯ ಬಾಗಿಲಿನ ಎದುರಿನ ಗೋಡೆಯ ಬದಲಿಗೆ ಪಕ್ಕದ ಗೋಡೆಯ ಮೇಲೆ ಕನ್ನಡಿಯನ್ನು ಅಳವಡಿಸಬಹುದು. ಇದರಿಂದ ಮನೆಯ ಪ್ರವೇಶದ್ವಾರವೂ ಅಚ್ಚುಕಟ್ಟಾಗಿ ಕಾಣುತ್ತದೆ.

ಒಡೆದ ಕನ್ನಡಿಯನ್ನು ಇಡಬೇಡಿ

ಒಡೆದ, ಬಿರುಕು ಬಿಟ್ಟ ಅಥವಾ ಮಸುಕಾದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಹೇಳಲಾಗಿದೆ. ಇಂತಹ ಕನ್ನಡಿಗಳು ಮನೆಯ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ನಂಬಿಕೆಯೂ ಇದೆ. ಹೀಗಾಗಿ, ಕನ್ನಡಿ ಹಾನಿಗೊಳಗಾಗಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯ ನಿರ್ಧಾರ.

Also Read
ಕಣ್ಣೆದುರೇ ಅಸಭ್ಯ ವರ್ತನೆ ತೋರಿದರೂ ಸಿಬ್ಬಂದಿ ಅಲ್ಲೇ ಕೂರಿಸಿದ್ರು: ವಿಮಾನದಲ್ಲಿ ನಡೆದ ಘಟನೆ ನೆನೆದು ಮಹಿಳೆ ಕಣ್ಣೀರು | Women Passenger
Mirror

ಅಡುಗೆ ಮನೆಯಲ್ಲಿ ಕನ್ನಡಿ ಓಕೆನಾ?

ಅಡುಗೆ ಮನೆಯಲ್ಲಿ, ವಿಶೇಷವಾಗಿ ಗ್ಯಾಸ್ ಒಲೆ ಅಥವಾ ಅಡುಗೆ ಮಾಡುವ ಸ್ಥಳದ ಎದುರು ಕನ್ನಡಿ ಇಡುವುದನ್ನು ತಪ್ಪಿಸಬೇಕು. ಬೆಂಕಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸುವುದು ಸೂಕ್ತವಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಾಗಿದೆ. ಅಡುಗೆ ಮನೆಯು ಮನೆಯ ಪ್ರಮುಖ ಭಾಗವಾಗಿರುವುದರಿಂದ ಅಲ್ಲಿ ವಸ್ತುಗಳನ್ನು ಜೋಡಿಸುವಾಗ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು. ಕನ್ನಡಿ ಅಳವಡಿಸುವುದರಿಂದ ಅಡುಗೆ ಮಾಡುವಾಗ ಗಮನ ಬೇರೆಡೆಗೆ ಸೆಳೆಯುವಂತಿರಬಾರದು,(ಮಾಹಿತಿ ಸಂಗ್ರಹ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net