Kaun Banega Crorepati 15: ಒಂದು ಕೋಟಿ ಪ್ರಶ್ನೆಗೆ ಸರಿಯಾಗಿ ಉತ್ತರಿಸುವಿರಾ?

kbc
Published on

ಮುಂಬೈ: ಕೌನ್‌ ಬನೇಗಾ ಕರೋಡ್‌ಪತಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ. ಬಾಲಿವುಡ್ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಈ ಕಾರ್ಯಕ್ರಮವನ್ನು ದೇಶದಾದ್ಯಂತ ಪ್ರೇಕ್ಷಕರು ಇಷ್ಟಪಡುತ್ತಾರೆ. ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ಅವರು ಕೊಡುವ ಉತ್ತರಗಳು ತುಂಬಾ ಆಸಕ್ತಿದಾಯಕವಾಗಿರುತ್ತವೆ. ಸದ್ಯ ಕೌನ್‌ ಬನೇಗಾ ಕರೋಡ್‌ಪತಿ 15ನೇ ಸೀಸನ್ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಈ ಸೀಸನ್​​​ನಲ್ಲಿ ಪಂಜಾಬ್‌ನಿಂದ ಜಸ್ಕರನ್ ಸಿಂಗ್ ಕೋಟಿ ಗೆದ್ದು ತಮ್ಮ ಬುದ್ಧಿಶಕ್ತಿ ಪ್ರದರ್ಶಿಸಿದರು. ಇತ್ತೀಚೆಗೆ ಈ ಶೋನಲ್ಲಿ ಭಾಗವಹಿಸಿದ್ದ ಇಂದೋರ್ ಯುವಕ ಶುಭಂ ಕೂಡ ಒಂದು ಕೋಟಿ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರಿಗೆ ಕೋಟಿ ರೂಪಾಯಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. 50 ಲಕ್ಷ ರೂ. ತೆಗೆದುಕೊಂಡು ಕಾರ್ಯಕ್ರಮದಿಂದ ಹಿಂದೆ ಸರಿದರು.

ಹಾಗಾದರೆ ಆ ಕೋಟಿ ರೂಪಾಯಿ ಪ್ರಶ್ನೆ ಏನು?
ಕೌನ್‌ ಬನೇಗಾ ಕರೋಡ್‌ಪತಿ ಇತ್ತೀಚಿನ ಸೀಸನ್‌ನಲ್ಲಿ ಶುಭಂ ಉತ್ತರ ನೀಡುವ ರೀತಿ ನೋಡಿದ ಅವರು ಖಂಡಿತ ಕೋಟಿ ರೂ.ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ ಅವರು 14ನೇ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಈ ಪ್ರಶ್ನೆಯನ್ನು ಜಪಾನ್‌ನ ಹಿರೋಷಿಮಾದ ಮೇಲೆ ಹಾಕಲಾದ ಮೊದಲ ಪರಮಾಣು ಬಾಂಬ್ ಕುರಿತು ಕೇಳಲಾಯಿತು. ಆದರೆ ಹಿರೋಷಿಮಾ ಬಾಂಬ್ ದಾಳಿಯ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯವಾಗಲಿಲ್ಲ. ಆ ಪ್ರಶ್ನೆ ಹೀಗಿದೆ...

ಆಗಸ್ಟ್ 6, 1945 ರಂದು ಹಿರೋಷಿಮಾದಲ್ಲಿ ಮೊದಲ ಪರಮಾಣು ಬಾಂಬ್ ಅನ್ನು ಬೀಳಿಸಿದ ವಿಮಾನದ ಹೆಸರೇನು? ಎಂಬುದು ಪ್ರಶ್ನೆಯಾಗಿದೆ. ವಿಮಾನಕ್ಕೆ ಪೈಲಟ್ ಅವರ ತಾಯಿ (ಎನೋಲಾ ಗೇ) ಹೆಸರಿಡಲಾಗಿದೆ ಎಂದು ಬಿಗ್ ಬಿ ಬಹಿರಂಗಪಡಿಸಿದರು. ಇದರೊಂದಿಗೆ 50 ಲಕ್ಷ ರೂ. ತೆಗೆದುಕೊಂಡು ಶುಭಂ ಕಾರ್ಯಕ್ರಮದಿಂದ ನಿರ್ಗಮಿಸಿದರು.

ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾದ ಬಿಗ್ ಬಿ
ಅಮಿತಾಬ್ ಬಚ್ಚನ್ ಕೊನೆಯ ಬಾರಿಗೆ ಅನುಪಮ್ ಖೇರ್, ಪರಿಣಿತಿ ಚೋಪ್ರಾ ಮತ್ತು ಬೋಮನ್ ಇರಾನಿ ಅವರೊಂದಿಗೆ ಕೌಟುಂಬಿಕ ಮನರಂಜನಾ ಚಿತ್ರ 'ಉಂಚೈ' ನಲ್ಲಿ ಕಾಣಿಸಿಕೊಂಡಿದ್ದರು. ಸೂರಜ್ ಬರ್ಜಾತ್ಯಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ 'ಕಲ್ಕಿ 2898 ಎಡಿ' ಚಿತ್ರದಲ್ಲಿಯೂ ಬಿಗ್​​​​ಬಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್ ಅವರಂತಹ ದೊಡ್ಡ ತಾರಾಬಳಗದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ಗಳು, ಮೇಕಿಂಗ್ ವಿಡಿಯೋಗಳು ಮತ್ತು ಗ್ಲಿಂಪ್ಸ್‌ಗಳು ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿವೆ. ಈ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಿಭು ದಾಸ್‌ಗುಪ್ತಾ ನಿರ್ದೇಶಿಸಲಿರುವ 'ಸೆಕ್ಷನ್ 84' ನಲ್ಲಿ ಅವರು ನಟಿಸಲಿದ್ದಾರೆ. ಕೆಬಿಸಿಯ ಇಂದಿನ (ಶುಕ್ರವಾರ) ಸಂಚಿಕೆಯಲ್ಲಿ ವಿಕ್ಕಿ ಕೌಶಲ್ ಮತ್ತು ಮಾನುಷಿ ಚಿಲ್ಲರ್ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net