

ಭಾರತದಲ್ಲಿ ವಯಸ್ಕರಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅದರಲ್ಲಿ ಶೇ. 12 ರಷ್ಟು ಮಂದಿ ಮಾತ್ರ ತಮ್ಮ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಸರ್ವೆ -5 ರ ಪ್ರಕಾರ ದೇಶದ ಒಟ್ಟಾರೆ ಜನಸಂಖ್ಯೆ ಪೈಕಿ ಪುರುಷರಲ್ಲಿ ಶೇ. 26.96, ಮಹಿಳೆಯರಲ್ಲಿ ಶೇ. 25 ರಷ್ಟು ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕ ಮಂದಿ ಅಧಿಕ ರಕದೊತ್ತಡದಿಂದ ಬಳಲುತ್ತಿದ್ದು, ಪುರುಷರಲ್ಲಿ ಶೇ. 30.7, ಮಹಿಳೆಯರಲ್ಲಿ ಶೇ. 27. 9 ಇದ್ದಾರೆ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಇದರಲ್ಲಿ ಶೇ. 9 ರಷ್ಟು ಪುರುಷರು ಹಾಗೂ ಶೇ. 12 ರಷ್ಟು ಮಹಿಳೆಯರು ಮಾತ್ರ ತಾವು ಹೈಪರ್ ಟೆನ್ಷನ್ನಿಂದ ಬಳಲುತ್ತಿರುವ ಸಂಗತಿಯನ್ನು ತಪಾಸಣೆ ವೇಳೆ ದೃಢಪಡಿಸಿದ್ದಾರೆ. ಅಂದರೆ ಬಹುತೇಕರಿಗೆ ಹೈಪರ್ ಟೆನ್ಷನ್ನ ಅರಿವೇ ಇಲ್ಲ. ಹೆಚ್ಚು ಮಂದಿ ಹೈಪರ್ ಟೆನ್ಷನ್ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸದೇ ಅನಾಹುತ ತಂದುಕೊಳ್ಳುತ್ತಿದ್ದಾರೆ.
ಪರೀಕ್ಷೆ ಹೇಗೆ?: ಸಾಮಾನ್ಯವಾಗಿ ರಕ್ತದ ಒತ್ತಡ ಪರಿಶೀಲನೆ ಮೂಲಕ ಹೈಪರ್ ಟೆನ್ಷನ್ ಇರುವುದನ್ನು ಖಚಿತಪಡಿಸಿ ಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಜನರ ರಕ್ತದ ಒತ್ತಡ 120/80 ಇರಬೇಕು. 140/90 ಅಥವಾ ಇದಕ್ಕಿಂತಲೂಹೆಚ್ಚು ಇದ್ದರೆ, ಇದನ್ನು ಹೈಪರ್ ಟೆನ್ಷನ್ ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ರಕ್ತದ ಒತ್ತಡದಲ್ಲಿ ಏರು ಪೇರು ಕಂಡು ಬಂದಲ್ಲಿ ಒಂದು ವಾರ ಕಾಲ ನಿರಂತರ ರಕ್ತದೊತ್ತಡ ತಪಾಸಣೆ ಮಾಡಿಸಿಕೊಳ್ಳಬೇಕು. ಆನಂತರ ಇದರ ನಿಯಂತ್ರಣಕ್ಕೆ ಚಿಕಿತ್ಸೆ ಪಡೆಯಬೇಕು.
ಕಂಟ್ರೋಲ್ ಲೈನ್: ಜೀವನ ಶೈಲಿ ಬದಲಿಸಿಕೊ ಳ್ಳುವ ಮೂಲಕ ಹೈಪರ್ ಟೆನ್ಷನ್ ನಿಯಂತ್ರಿಸಬಹುದು. ಒತ್ತಡದ ಬದುಕಿಗೆ ಬ್ರೇಕ್ ಹಾಕಬೇಕು. ದೇಹದ ತೂಕವನ್ನು ಇಳಿಸಿಕೊಳ್ಳ ಬೇಕು. ಉಪ್ಪು ಸೇವನೆ ಕಡಿಮೆ ಮಾಡಬೇಕು. ಮದ್ಯಪಾನ, ತಂಬಾಕು ಸೇವನೆಗೆ ಕಡಿವಾಣ ಹಾಕಬೇಕು. ದಿನ ನಿತ್ಯ ಯೋಗ, ವ್ಯಾಯಾಮ, ಪುಸ್ತಕ ಓದುವ ಹವ್ಯಾಸ, ದೈಹಿಕ ಚಟುವಟಿಕೆಯ ಕೆಲಸಗಳನ್ನು ಕಡ್ಡಾಯವಾಗಿ
ಮಾಡುವ ಮೂಲಕ ಹೈಪರ್ ಟೆನ್ಷನ್ನಿಂದ ದೂರ ಉಳಿಯ ಬಹುದು. ಈಗಾಗಲೇ ಹೈಪರ್ ಟೆನ್ಷನ್ನಿಂದ ಬಳಲುತ್ತಿದ್ದರೆ, ನಿರಂತರವಾಗಿ ಔಷಧಗಳನ್ನು ಸ್ವೀಕರಿಸಬೇಕು, ವೈದ್ಯರ ಸಲಹೆ ಮೇರೆಗೆ. ಪ್ರತಿ ನಿತ್ಯ ರಕ್ತದ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಸಲಹೆ ಇಲ್ಲದೇ ಔಷಧ ತೆಗೆದುಕೊಳ್ಳುವುದನ್ನು ಬಿಡಬಾರದು, ಔಷಧ ಬದಲಾವಣೆ ಮಾಡಬಾರದು.
ಏನಿದರ ಲಕ್ಷಣ?: ಹೈಪರ್ ಟೆನ್ಷನ್ ಪರಾಕಾಷ್ಠೆ ತಲುಪಿದರೂ ಕೆಲವೊಮ್ಮೆ ಅದರ ರೋಗ ಲಕ್ಷಣಗಳು ಅರಿವಿಗೆ ಬರುವುದಿಲ್ಲ. ಇದರ ಪತ್ತೆಗೆ ಇರುವು ದೊಂದೇ ದಾರಿ, ಅದು ಬಿಪಿ ತಪಾಸಣೆ. ಹೀಗಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಇದರ ನಡುವೆಯೂ ಈ ಸಮಸ್ಯೆಗಳು ಕಾಣಿಸಿಕೊಂಡರೆ, ಹೈಪರ್ ಟೆನ್ಷನ್ ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ತಲೆ ನೋವು ಅಥವಾ ತಲೆಭಾರ, ದೃಷ್ಟಿ ದೋಷ, ಎದೆಯಲ್ಲಿ ನೋವು ಕಾಣಿಸಿಕೊಳ್ಳು ವುದು, ಉಸಿರಾಟದ ತೊಂದರೆ, ಮೂತ್ರದಲ್ಲಿ ರಕ್ತ ಹೋಗುವುದು, ಎದೆ, ಕುತ್ತಿಗೆ ಅಥವಾ ಕಿವಿಯಲ್ಲಿ ನೋವು ಕಾಣಿಸಿಕೊಂಡರೆ, ಹೈಪರ್ ಟೆನ್ಷನ್ ಇದೆ ಅಂತಲೇ ಭಾವಿಸತಕ್ಕದ್ದು.
ಅಧಿಕ ರಕ್ತದೊತ್ತಡದ ಸತ್ಯ ಗೊತ್ತಿರಲಿ
(ಲೇಖಕರು : AIIMSನ ತಾಂತ್ರಿಕ ಸಲಹೆಗಾರರು)