

ನಮ್ಮೆಲ್ಲರ ಜೀವಿತಾವಧಿಯಲ್ಲಿ ಕಂಡು ಕೇಳರಿಯದಂತಹ ಕಾಯಿಲೆ ಜಗತ್ತನ್ನೇ ಆವರಿಸಿ ನಿದ್ದೆಗೆಡಿಸಿದೆ. ಎಲ್ಲ ದೇಶಗಳ ಆರ್ಥಿಕತೆಯನ್ನು ಬುಡಮೇಲು ಮಾಡಿದೆ. ಏಕಕಾಲಕ್ಕೆ ವಿಶ್ವದಾದ್ಯಂತ ಪಸರಿಸಿ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಂಡಿದೆ. ದಿನೇದಿನೆ ರೋಗದಿಂದ ಸೋಂಕಿತರ ಹಾಗೂ ಶಂಕಿತರ ಸಂಖ್ಯೆ ಏರುತ್ತಿದೆ. ದೂರದಲ್ಲಿ ಸದ್ದು ಮಾಡುತ್ತಿದ್ದ ಕೋವಿಡ್-19 ಮನೆಯ ಎದುರಿಗೇ ಬಂದು ನಿಂತಿದೆ. ಜನರೆಲ್ಲ ಭಯಭೀತರಾಗಿದ್ದಾರೆ. ನೌಕರಿಯ ಊರು ಬಿಟ್ಟು ಹುಟ್ಟೂರಿಗೆ ಗುಳೆಹೋಗುವ ಪರಿಸ್ಥಿತಿಯನ್ನು ತಂದೊಡ್ಡಿದೆ. ಪ್ರತಿನಿತ್ಯದ ವ್ಯವಹಾರ ಕೆಲಸಕಾರ್ಯಗಳಿಗೆ ತಡೆಯೊಡ್ಡಿ ಮುಂದಿನ ದಿಕ್ಕು ತೋಚದಂತೆ ಮನಸ್ಸನ್ನು ತಲ್ಲಣಗೊಳಿಸಿದೆ. ವೈಜ್ಞಾನಿಕವಾಗಿ ಈ ವೈರಾಣುವನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದೆ ಜೀವನವೇ ಹೈರಾಣಾಗಿ ಹೋಗಿದೆ. ಶತಮಾನ ಕಂಡ ಅತಿ ಪ್ರಭಾವಿ ವೈರಾಣು ಎಂಬುದನ್ನು ನಿಸ್ಸಂಶಯವಾಗಿ ಒಪ್ಪಿಕೊಳ್ಳಲೇಬೇಕಾಗುತ್ತದೆ.
ಇನ್ನು ಉಸಿರಾಟದ ತೊಂದರೆ ತೀವ್ರಗೊಂಡಿರುವ ಮೂರ್ನಾಲ್ಕು ಪ್ರತಿಶತ ರೋಗಿಗಳಲ್ಲೂ ಅನೇಕರು ಗುಣಮುಖ ಆಗಿರುವುದರಿಂದ ವೈರಾಣು ಹೇಗೆ ಪ್ರಬಲವಾಗುತ್ತದೆ? ರೋಗ ಬಂದ ಮೇಲೆ ಚಿಕಿತ್ಸೆಗೆ ಹಲವಾರು ದಿನಗಳ ಅವಕಾಶ ಕೊಡುವ ವೈರಾಣು ಬಹಳ ಶಕ್ತಿಯುತವೇ? ಹಿಂದೆ ಬಂದ ಡೆಂಘೀ, ಚಿಕುನ್ಗುನ್ಯಾ, ಹೆಚ್1ಎನ್1ನಂತಹ ರೋಗಗಳು ರೋಗಕ್ಕೊಳಗಾದ ಎಲ್ಲರನ್ನೂ ತೀವ್ರ ಲಕ್ಷಣಗಳಿಂದ ಬಹುವಾಗಿ ಕಾಡಿದ್ದವು. ಕನಿಷ್ಠಪಕ್ಷ ಅಂತಹ ತೊಂದರೆಯನ್ನೂ ಕೊಡಲಾರದ ಕರೊನಾ ಅದು ಹೇಗೆ ಪ್ರಬಲವೆನ್ನುತ್ತೀರಿ? ಹಿಂದಿನೆಲ್ಲ ಈ ರೋಗಗಳು ಯುವಕರನ್ನು, ಮಕ್ಕಳನ್ನು, ಬೇರೆ ಯಾವುದೇ ಕಾಯಿಲೆಗಳಿರದ ಅನೇಕ ಸದೃಢರನ್ನೂ ಬಲಿತೆಗೆದುಕೊಂಡಿತು. ಈ ಕರೊನಾ ವೈರಾಣು ದುರ್ಬಲರನ್ನು, ವಯಸ್ಸಾದವರನ್ನು, ತೀವ್ರ ಉಸಿರಾಟದ ತೊಂದರೆ ಇರುವವರನ್ನೇ ಹುಡುಕುತ್ತ ಹೋಗುವುದು ಅದರ ಬಲಹೀನತೆ ಎನಿಸುವುದಿಲ್ಲವೇ? ನಿಜಕ್ಕೂ ಶಕ್ತಿಯಿದ್ದರೆ ಶಕ್ತಿವಂತರನ್ನೂ ಮಟ್ಟಹಾಕುವ ಗಟ್ಟಿತನ ಇರಬೇಕು ಹೊರತು ದುರ್ಬಲರನ್ನು ಹುಡುಕಿ ಕಾದಾಡುವುದಲ್ಲ. ಹೆಚ್ಚು ಜನರಲ್ಲಿ ಪರೀಕ್ಷಿಸಿದರೆ ರೋಗಿಷ್ಟರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಪ್ರಾಣ ಬಿಟ್ಟವರ ಸಂಖ್ಯೆ ಅಷ್ಟೇ ಇರುತ್ತದೆ. ಮರಣದ ವಾಸ್ತವ ಪ್ರಮಾಣ ಈಗ ಕಾಣುತ್ತಿರುವುದಕ್ಕಿಂತಲೂ ಅದೆಷ್ಟೋ ಕಡಿಮೆಯಿದೆ! ನಿಜಪ್ರಮಾಣ ಐನೂರರಲ್ಲಿ ಒಂದಿರಬಹುದೇನೋ. ನೀವೇ ಹೇಳಿ, ಕರೊನಾ ಪ್ರಾಣ ತೆಗೆಯುವ ವಿಚಾರದಲ್ಲಿ ಪ್ರಬಲವೇ? ಈ ದುರ್ಬಲ ವೈರಾಣು ವಿಚಾರದಲ್ಲಿ ಅತಿ ಎಚ್ಚರದ ನಡೆ ಬೇಕೇ ಹೊರತು ಪ್ರಾಣಭಯವಲ್ಲ.