

ಬಾಯಿ ಕೆಟ್ಟಾಗ ರುಚಿ ರುಚಿಯಾದ ತಿನಿಸುಗಳು ರುಚಿ ನೀಡುವುದಿಲ್ಲ. ಕಣ್ಣೆದುರಿಗೆ ಮೃಷ್ಟಾನ್ನ ಭೋಜನವಿದ್ದರೂ ಅದು ನಾಲಿಗೆಗೆ ರುಚಿ ಕೊಡಲಾರದು. ಆ ಸಮಯದಲ್ಲಿ ಉಪ್ಪು, ಹುಳಿ, ಖಾರ ಈ ಮೂರರ ಮಿಶ್ರಣವಾಗಿರುವ ಯಾವುದಾದರೂ ಒಂದು ಪದಾರ್ಥವನ್ನು ಮನಸ್ಸು ತಿನ್ನಲು ಬಯಸುತ್ತದೆ. ಅದೇ ರೀತಿ ನಾವಿಂದು ಬಾಯಿ ಕೆಟ್ಟಾಗ ರುಚಿ ಕೊಡುವ ಒಂದು ರೆಸಿಪಿ ಬಗ್ಗೆ ತಿಳಿಯೋಣ ಬನ್ನಿ. ಈ ರೆಸಿಪಿಯ ಹೆಸರೇ ಹಸಿ ಗೊಜ್ಜು.
ಬೇಕಾಗುವ ಆಹಾರ ಪದಾರ್ಥಗಳು:
ಹಣ್ಣಾಗಿರುವ ಟೊಮೆಟೊ – 3-4
ಈರುಳ್ಳಿ – 2
ಹಸಿ ಮೆಣಸಿನಕಾಯಿ – 1 ಅಥವಾ 2
ಬೆಳ್ಳುಳ್ಳಿ – 1/2 ಗೆಡ್ಡೆ
ಹುಣಸೆಹಣ್ಣು – 1 ಗೋಲಿ ಗಾತ್ರ
ಕೊತ್ತಂಬರಿ ಸೊಪ್ಪು – 1 ಹಿಡಿ
ಸಾಂಬಾರ್ ಪುಡಿ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಗ್ಯಾಸಿನ ಮೇಲೆ ಅಥವಾ ಒಲೆಯ ಮೇಲೆ ಟೊಮೆಟೊ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿಯನ್ನು ಹಾಕಿ ಸುಟ್ಟು ತೆಗೆದಿಟ್ಟುಕೊಳ್ಳಬೇಕು. ಸುಟ್ಟ ನಂತರ ಅವುಗಳನ್ನು ನೀರಿನಲ್ಲಿ ತೊಳೆದು ತರಕಾರಿಗಳ ಸಿಪ್ಪೆಯನ್ನು ತೆಗೆದು ಒಂದು ಒಣಗಿದ ಪಾತ್ರೆಗೆ ಹಾಕಿ ಕೈಯಿಂದಲೇ ಕಿವುಚಿ ಪುಡಿ ಮಾಡಬೇಕು. ಚೆನ್ನಾಗಿ ಗ್ರೇವೀಯಾದ ನಂತರ ಅದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣಿಸ ರಸ, ಸಾಂಬಾರ್ ಪುಡಿ, ಉಪ್ಪು ಸೇರಿಸಿ ಕಲಸಬೇಕು. ಅಗತ್ಯವಾದಲ್ಲಿ ಸ್ವಲ್ಪ ನೀರು ಹಾಕಿಕೊಳ್ಳಬಹುದು. ಗಟ್ಟಿಯಾಗಿ ಬೇಕೆಂದರೆ ಹುಳಿ ನೀರೇ ಸಾಕು. ಉಪ್ಪು, ಹುಳಿ, ಸಾಂಬಾರ್ ಪುಡಿಯನ್ನು ಅಗತ್ಯ ನೋಡಿಕೊಂಡು ಹಾಕಬೇಕು. ಈ ರೀತಿ ಕಲಸಿದ ನಂತರ 5 ನಿಮಿಷಗಳ ಕಾಲ ಹಾಗೇ ಬಿಡಬೇಕು. ನಂತರ ಬಿಸಿ ಬಿಸಿ ಅನ್ನಕ್ಕೆ, ಮುದ್ದೆಗೆ ಈ ಹಸಿ ಗೊಜ್ಜು ಹಾಕಿ ತಿಂದರೆ ಇನ್ನೊಂದು ತುತ್ತು ಹೆಚ್ಚಿಗೆ ತಿನ್ನುವ ಮನಸ್ಸಾಗುತ್ತದೆ.
ಈ ರೆಸಿಪಿಯನ್ನು ಹೆಚ್ಚಾಗಿ ಮನೆಯಲ್ಲಿ ಹುಷಾರಿಲ್ಲದವರಿಗೆ ತಿನ್ನಲು ಮಾಡಿಕೊಡುತ್ತಾರೆ. ಮಕ್ಕಳಿಗೆ, ಹುಷಾರಿಲ್ಲದವರಿಗೆ ಬಾಯಿ ಕೆಟ್ಟಾಗ ಈ ಅಡುಗೆ ಮಾಡಿ ಕೊಡಬಹುದು. ಮಕ್ಕಳಿಗಂತೂ ಈ ಅನ್ನವನ್ನು ಕಲಸಿಕೊಟ್ಟರೆ ಅಜ್ಜಿಯ ಕೈತುತ್ತು ತಿಂದಷ್ಟೇ ಖುಷಿಯಾಗುತ್ತದೆ. ಇನ್ನೇಕೆ ತಡ ನೀವೂ ಒಮ್ಮೆ ಮಾಡಿ ನೋಡಿ ಬಾಯಲ್ಲಿ ನೀರೂರಿಸುವ ಈ ಹಸಿ ಗೊಜ್ಜು.