ತಾಜಾ ಸೌತೇಕಾಯಿ ಸಿಪ್ಪೆಯನ್ನು ವೇಸ್ಟ್​ ಮಾಡ್ಬೇಡಿ...ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಇದು ತುಂಬ ಸಹಕಾರಿ..

SOUTE
Published on

ನಾವೆಲ್ಲರೂ ದಿನನಿತ್ಯ ಅಡುಗೆಯಲ್ಲಿ ಬಳಸುವ ಸಾಮಾನ್ಯ ತರಕಾರಿಗಳಲ್ಲೊಂದು ಸೌತೆಕಾಯಿ. ಬಳ್ಳಿಯ ರೂಪದ ಸೌತೆಕಾಯಿ ಗಿಡ ನೆಲದಲ್ಲಿ ಬೇರು ಬಿಟ್ಟು ಹೋದಲ್ಲೆಲ್ಲ ಹಬ್ಬಿಕೊಳ್ಳುತ್ತದೆ.

ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಲೆಗಳು ಮೃದುವಾಗಿರುತ್ತವೆ. ಸೌತೆಕಾಯಿಯನ್ನು ಉಪಯೋಗಿಸಿ ಅನೇಕ ಖಾದ್ಯಗಳನ್ನು ತಯಾರಿಸುತ್ತಾರೆ. ಜತೆಗೆ ಕೋಸಂಬರಿ, ರೊಟ್ಟಿ, ಸಲಾಡ್, ಸಾಂಬಾರ್ ತಯಾರಿಯಲ್ಲೂ ಸೌತೆಕಾಯಿ ಬಳಸುತ್ತಾರೆ. ಸೌತೆಕಾಯಿಯಲ್ಲಿ ಶೇ. 96ರಷ್ಟು ಭಾಗ ನೀರಿದ್ದರೆ ಉಳಿದ ಶೇ. 4ರಷ್ಟು ಭಾಗದಲ್ಲಿ ಪೋಷಕಾಂಶಗಳಿರುತ್ತವೆ.

ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಸೌತೆಕಾಯಿಯಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ನಾರಿನಂಶ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಶಿಯಂ ಮ್ಯಾಂಗನೀಸ್ ಪೋಷಕಾಂಶಗಳಿವೆ. ಎರೆಸೌತೆ, ನೀರುಸೌತೆ, ಮುಳ್ಳುಸೌತೆ, ನಾಲಿಗೆ ಸೌತೆ - ಹೀಗೆ ಸೌತೆಕಾಯಿಯಲ್ಲಿ ನಾನಾ ಬಗೆಗಳಿವೆ. ಇದರ ವೈಜ್ಞಾನಿಕ ಹೆಸರು Cucumis sativus.

  • ತಾಜಾ ಸೌತೆಕಾಯಿಯನ್ನು ಸಿಪ್ಪೆ ಸಹಿತ ಬಳಸುವುದರಿಂದ ಸಿಪ್ಪೆಯಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
  • ಸೌತೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
  • ಒಂದು ಲೋಟ ಸೌತೆಕಾಯಿ ರಸಕ್ಕೆ ಒಂದು ಚಮಚ ಜೇನುತುಪ್ಪ, ಸ್ವಲ್ಪ ನಿಂಬೆರಸ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಉರಿಮೂತ್ರದ ಸಮಸ್ಯೆಯನ್ನು ದೂರವಿಡಬಹುದು.
  • ಮೂತ್ರನಾಳದ ಸಮಸ್ಯೆ, ಮೂತ್ರದಲ್ಲಿ ಕಲ್ಲಿನ ಸಮಸ್ಯೆ, ಮೂತ್ರ ಕಟ್ಟುವ ಸಮಸ್ಯೆ ಇದ್ದರೆ ಸೌತೆಕಾಯಿ ಮತ್ತು ಬಾಳೆದಿಂಡನ್ನು ಸೇರಿಸಿ ಸಲಾಡ್ ಮಾಡಿ ಸೇವಿಸಬಹುದು. ಸೌತೆಕಾಯಿ ಮತ್ತು ಬಾಳೆದಿಂಡಿನ ಜ್ಯೂಸ್ ಸೇವನೆಯು ಮೂತ್ರದಲ್ಲಿನ ಕಲ್ಲನ್ನು ಹೊರಹಾಕಲು ನೆರವಾಗುತ್ತದೆ.
  • ಅಂಗಾಲಿಗೆ ಸೌತೆಕಾಯಿ ತಿರುಳಿನಿಂದ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಉರಿ ಕಡಿಮೆಯಾಗಿ ಅಂಗಾಲು ತಂಪಾಗುತ್ತದೆ. ಸೌತೆಕಾಯಿ ಪೇಸ್ಟ್ ಕೂಡ ಅಂಗಾಲಿಗೆ ಹಚ್ಚಿಕೊಳ್ಳಬಹುದು.
  • ಸೌತೆಕಾಯಿ ತಿರುಳಿನ ಎರಡು ಚಮಚ ಪೇಸ್ಟ್​ಗೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕಲ್ಲುಪ್ಪನ್ನು ಹಾಕಿ ಜ್ಯೂಸ್ ಮಾಡಿ, ಊಟಕ್ಕಿಂತ ಸ್ವಲ್ಪ ಹೊತ್ತಿನ ಮೊದಲು ಸೇವಿಸಬೇಕು. ಇದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ.
  • ಚಳಿಗಾಲದಲ್ಲಿ ಒಣಗಿದ ಚರ್ಮದ ಭಾಗಕ್ಕೆ ಸೌತೆಕಾಯಿ ರಸವನ್ನು ಲೇಪಿಸುವುದರಿಂದ ಒಣ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net