

ಬೇವು ಎಂದಾಗ ಮೊದಲು ನೆನಪಾಗುವುದು ಕಹಿ. ಹಿಂದೆ ಹಲ್ಲುಜ್ಜಲು ಕಹಿಬೇವಿನ ಕಡ್ಡಿಯನ್ನು ಉಪಯೋಗಿಸುತ್ತಿದ್ದರು. ಕಹಿಬೇವು ದೊಡ್ಡ ಮರವಾಗಿ ಬೆಳೆಯುತ್ತದೆ. ಇದರಲ್ಲಿ ಸಣ್ಣ ಸಣ್ಣ ಹೂವು, ಕಾಯಿಗಳಾಗುತ್ತವೆ.
ಮನೆಯ ಸುತ್ತ ಕಹಿಬೇವಿನ ಮರ ಬೆಳೆಸುವುದರಿಂದ ಆರೋಗ್ಯಕರ ಗಾಳಿ ದೊರೆಯುತ್ತದೆ. ಬೇವಿನ ರುಚಿ ಕಹಿಯಾದರೂ ಇದರ ಎಲೆ, ತೊಗಟೆ, ಹೂ, ಕಡ್ಡಿ, ಬೀಜ, ಬೇರುಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಹಾಲಿನಲ್ಲಿ ಅರೆದ ಕಹಿಬೇವಿನ ಎಲೆಗಳ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಎರಡೂ ಅಂಗಾಲುಗಳಿಗೆ ಹಚ್ಚಿಕೊಂಡು ಮಲಗುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಕಹಿಬೇವಿನ ಎಲೆಗಳನ್ನು ಹಾಕಿ ಕುದಿಸಿ ಆರಿಸಿದ ಕೊಬ್ಬರಿ ಎಣ್ಣೆಯನ್ನು ಸಂದುನೋವು, ಸ್ನಾಯು ನೋವಿರುವ ಜಾಗಕ್ಕೆ ಪ್ರತಿದಿನ ಹಚ್ಚಿ, ಮಸಾಜ್ ಮಾಡುವುದರಿಂದ ನೋವು ಶಮನವಾಗುತ್ತದೆ.
ಕಹಿಬೇವಿನ ತೊಗಟೆ ಮತ್ತು ಎಲೆಯನ್ನು ಅರೆದು ಲೇಪಿಸಿಕೊಳ್ಳುವುದರಿಂದ ಸಂದುನೋವು, ಬಾವು ಕಡಿಮೆಯಾಗುತ್ತದೆ. ಕಹಿಬೇವಿನ ಚಿಗುರೆಲೆಗಳನ್ನು ಅರೆದು ಸ್ವಲ್ಪ ಸ್ವಲ್ಪ ತಿನ್ನುವುದರಿಂದ ದೇಹದಲ್ಲಿನ ಸಕ್ಕರೆಪ್ರಮಾಣವನ್ನು ನಿಯಂತ್ರಿಸಬಹುದು. ವಾರಕ್ಕೊಮ್ಮೆ ಮುಖಕ್ಕೆ ಕಹಿಬೇವಿನ ಎಲೆಯ ಪೇಸ್ಟ್ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಮೊಡವೆ ಕಡಿಮೆಯಾದ ಬಳಿಕ ಉಳಿಯುವ ಕಲೆಗಳನ್ನೂ ನಿವಾರಿಸಿ ಮೊಡವೆ ಆಗದಂತೆ ತಡೆಯುತ್ತದೆ. ಕಾಯಿಸಿದ ಬಿಸಿನೀರಿಗೆ ಕಹಿಬೇವಿನ ಎಲೆಗಳನ್ನು ಹಾಕಿ ಬರುವ ಉಗಿಯನ್ನು ಮುಖಕ್ಕೆ ಮುಖದಲ್ಲಿ ಕಲೆಗಳು ನಿವಾರಣೆಯಾಗಿ ಕಾಂತಿ ವೃದ್ಧಿಸುತ್ತದೆ. ಕಹಿಬೇವಿನ ಎಲೆಯಿಂದ ತಯಾರಿಸಿದ ಎಣ್ಣೆಯನ್ನು ಬಳಸಿದರೆ ಚರ್ಮದ ಮೇಲಿನ ತುರಿಕೆ, ಗಂದೆ, ಸಿಡುಬು ಮೊದಲಾದ ತೊಂದರೆಗಳು ಕಡಿಮೆಯಾಗುತ್ತವೆ.
ಕಹಿಬೇವಿನ ಎಲೆಯ ರಸವನ್ನು ಸೇವಿಸುವುದರಿಂದ ಮತ್ತು ಕಷಾಯ ಕುಡಿಯುವುದರಿಂದ, ತುರಿಕೆ, ಸಿಡುಬು ಇರುವಲ್ಲಿ ಪೇಸ್ಟ್ ಮಾಡಿ ಹಚ್ಚುವುದರಿಂದ ದೇಹದಲ್ಲಿರುವ ಬ್ಯಾಕ್ಟೀರಿಯಾಗಳು ತೊಲಗಿ ರೋಗಮುಕ್ತರಾಗಬಹುದು. ಪ್ರತಿದಿನ ಕಹಿಬೇವಿನ ಎಲೆಗಳನ್ನು ಹಾಕಿದ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಚರ್ಮರೋಗದ ಸಮಸ್ಯೆ ದೂರವಾಗುತ್ತದೆ. ಕಹಿಬೇವಿನ ಬೀಜದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಹಾಗೂ ಹೊಟ್ಟಿನ ಸಮಸ್ಯೆ ಪರಿಹಾರವಾಗುತ್ತದೆ. ಪ್ರತಿದಿನ 4-5 ಕಹಿಬೇವಿನ ಎಲೆಗಳನ್ನು ಹಸಿಯಾಗಿ ತಿನ್ನುವುದರಿಂದ ರಕ್ತ ಶುದ್ಧಿಯಾಗಿ ರಕ್ತದೊತ್ತಡವನ್ನು ನಿಯಂತ್ರಿಸಲ್ಪಡುತ್ತದೆ.