

Mosquitoes : ಮಕ್ಕಳು ಮತ್ತು ವಯಸ್ಕರು ಸಾಮಾನ್ಯವಾಗಿ ಮನೆಯಲ್ಲಿ ಎದುರಿಸುವ ದೊಡ್ಡ ಕಿರಿಕಿರಿಗಳಲ್ಲಿ ಸೊಳ್ಳೆಗಳು ಕೂಡ ಒಂದು. ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡುಬರುತ್ತವೆ. ಗುಯ್ ಎಂದು ಶಬ್ಧ ಮಾಡುವುದಲ್ಲದೆ, ತನ್ನ ಕೊಂಡಿಯಿಂದ ರಕ್ತ ಹೀರುವ ಮೂಲಕ ನಿದ್ರೆಗೆ ಭಂಗ ತರುವುದಲ್ಲದೆ, ಚಿಕೂನ್ ಗುನ್ಯಾ, ಡೆಂಘೆ ಜ್ವರ ಮತ್ತು ಮಲೇರಿಯಾ ಸೇರಿದಂತೆ ಅನೇಕ ರೋಗಳನ್ನು ಸಹ ಹರಡುತ್ತವೆ. ಈ ರೋಗಗಳು ಕೆಲವೊಮ್ಮೆ ಜನರ ಪ್ರಾಣಗಳನ್ನು ಸಹ ಕಸಿದುಕೊಳ್ಳುತ್ತವೆ.
ಈ ಸೊಳ್ಳೆಗಳ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಬತ್ತಿಗಳು ಮತ್ತು ಸ್ಪ್ರೇಗಳು ಸೇರಿದಂತೆ ಸೊಳ್ಳೆ ನಿವಾರಕಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ನಿವಾರಕಗಳು ಕೆಮಿಕಲ್ಯುಕ್ತವಾಗಿರುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದು. ಆದರೆ, ಮನೆಯಲ್ಲಿ ಕೆಲವು ಸಸ್ಯಗಳನ್ನು ಬೆಳೆಸುವುದರಿಂದ ಸೊಳ್ಳೆಗಳ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.
ನಿಂಬೆ ಹುಲ್ಲು ಸೊಳ್ಳೆಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನಿಂಬೆ ಹುಲ್ಲಿನಿಂದ ಹೊರತೆಗೆಯಲಾದ ಸುಗಂಧ ದ್ರವ್ಯವನ್ನು ವಿವಿಧ ಔಷಧಿಗಳಲ್ಲಿ ಬಳಸಲಾಗುತ್ತದೆ. ಈ ಸಸ್ಯ ನಿಮ್ಮ ಮನೆಯ ಬಳಿಯಿದ್ದರೆ ಯಾವುದೇ ಕಾರಣಕ್ಕೂ ಸೊಳ್ಳೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.
ಇನ್ನೊಂದು ಸಿಟ್ರೊನೆಲ್ಲಾ ಸಸ್ಯ. ಇದು ಆಹ್ಲಾದಕರ ಪರಿಮಳವನ್ನು ಹೊಂದಿದ್ದರೂ, ಅದರ ವಾಸನೆಯು ಕೆಲವು ಪ್ರಾಣಿಗಳಿಗೆ ಆಹ್ಲಾದಕರವಲ್ಲ. ತರಕಾರಿಗಳೊಂದಿಗೆ ಸಿಟ್ರೊನೆಲ್ಲಾವನ್ನು ಬೆಳೆಸುವುದರಿಂದ ಹುಳುಗಳು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ ಮತ್ತು ಮನೆಯ ಅಂಗಳದಲ್ಲಿ ಸಿಟ್ರೊನೆಲ್ಲಾ ನೆಡುವುದು ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಬೇವಿನ ಔಷಧೀಯ ಗುಣಗಳು ಎಲ್ಲರಿಗೂ ತಿಳಿದಿವೆ. ಬೇವು ಕೂಡ ಒಂದು ಶಕ್ತಿಶಾಲಿ ಸೊಳ್ಳೆ ನಿವಾರಕವಾಗಿದೆ. ಸೊಳ್ಳೆ ನಿವಾರಕಗಳು ಮತ್ತು ಬೇವು ಹೊಂದಿರುವ ಮುಲಾಮುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸೊಳ್ಳೆಗಳ ಕಾಟವನ್ನು ತೊಡೆದುಹಾಕಲು, ಅಂಗಳದಲ್ಲಿ ಬೇವು ಬೆಳೆಸಿ.
ಮತ್ತೊಂದು ಔಷಧೀಯ ಸಸ್ಯವಾದ ತುಳಸಿ ಕೂಡ ಸೊಳ್ಳೆಗಳ ಕಾಟವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮನೆಯ ಒಳಗೆ ಮತ್ತು ಹೊರಗೆ ತುಳಸಿ ಎಲೆಗಳನ್ನು ಪುಡಿಮಾಡಿ ತಯಾರಿಸಿದ ನೀರನ್ನು ಸಿಂಪಡಿಸುವುದರಿಂದ ಸೊಳ್ಳೆಗಳ ಕಾಟ ದೂರವಾಗುತ್ತದೆ. ಅಂಗಳದಲ್ಲಿ ನೆಡುವುದು ಪರಿಣಾಮಕಾರಿ ಮಾರ್ಗವಾಗಿದೆ.