

ಸೋರಿಯಾಸಿಸ್ ಬರಲು ಇಂಥದ್ದೇ ಕಾರಣ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ ಮಾನಸಿಕ ಒತ್ತಡ ಮುಖ್ಯ ಕಾರಣವಾಗುತ್ತಿದೆ ಎಂದು ಹೇಳಬಹುದು. ತಪ್ಪಾದ ಜೀವನಶೈಲಿ, ವಿಷಯುಕ್ತ ಅಂದರೆ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಆಹಾರಗಳ ಸೇವನೆ, ಹಸಿವು, ಬಾಯಾರಿಕೆ, ನಿದ್ರೆ ಮುಂತಾದ ನೈಸರ್ಗಿಕ ಕರೆಗಳನ್ನು ತಡೆಯುವುದು ಮುಂತಾದ ಕಾರಣಗಳಿಂದ ಸೋರಿಯಾಸಿಸ್ ಬರುತ್ತದೆ. ಕಾರಣ ಒಂದೇ ರೀತಿಯಾಗಿದ್ದರೂ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸೋರಿಯಾಸಿಸ್ ಕಾಡುತ್ತದೆ.
ತಲೆಬುರುಡೆಯ ಸೋರಿಯಾಸಿಸ್ ಪ್ರಾರಂಭವಾದಾಗ, ತಲೆಹೊಟ್ಟು ಆಗುತ್ತಿದೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಏಕೆಂದರೆ ಈ ಸಮಸ್ಯೆಯಲ್ಲಿ ಬಿಳಿ ಬಣ್ಣದ ಹಪ್ಪಳದಂತಹ ಚರ್ಮ ಉದುರುತ್ತದೆ. ಅದು ತೀವ್ರವಾಗಿ ಉಲ್ಬಣಿಸಿದ ನಂತರ ತಲೆಯನ್ನು ಪರೀಕ್ಷಿಸಿದಾಗ ಚರ್ಮ ಕೆಲವು ಕಡೆ ಬೆಳ್ಳಗೆ, ದಪ್ಪವಾಗಿ, ಹೊಟ್ಟಿನಂತಾಗಿ ಉದುರುತ್ತಿದೆ ಎಂಬುದು ಗೊತ್ತಾಗುತ್ತದೆ. ಎಷ್ಟು ಎಣ್ಣೆ ಹಾಕಿದರೂ ಈ ಜಾಗಗಳು ಮತ್ತೆ ಮತ್ತೆ ಒಣಗಿ ಹೊಟ್ಟು ಉದುರುತ್ತದೆ. ತುರಿಸಿಕೊಳ್ಳುವ ಕಾರಣ ಆ ಜಾಗಗಳಲ್ಲಿ ಕೂದಲು ಉದುರುವ ಪ್ರಮಾಣವೂ ಹೆಚ್ಚಿರುತ್ತದೆ. ಆದರೆ ಸೋರಿಯಾಸಿಸ್ ಕಡಿಮೆಯಾಗುತ್ತಿದ್ದಂತೆ ಕೂದಲು ಉದುರುವುದು ನಿಂತು ಹೊಸ ಕೂದಲು ಬರತ್ತದೆ. ಕೆಲವೊಮ್ಮೆ ದಪ್ಪನೆಯ ಪ್ಯಾಚ್ಗಳು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿದ್ದರೆ ಇನ್ನೂ ಕೆಲವೊಮ್ಮೆ ಕೂದಲಿರುವ ಜಾಗಗಳನ್ನೂ ಮೀರಿ ತಲೆಯ ಹಿಂದೆ ಕತ್ತಿನವರೆಗೆ, ಕಿವಿಯ ಹಿಂದೆ, ಹಣೆಯ ಮೇಲ್ಭಾಗದವರೆಗೆ ಹರಡುತ್ತದೆ. ಹೀಗೆ ಎದುರಿಗೆ ಕಾಣುವಂತಾದಾಗ ಸಾಮಾಜಿಕ ಜೀವನದಲ್ಲಿ ಮುಜುಗರವೂ ಉಂಟಾಗುತ್ತದೆ.
ಇದನ್ನೂ ಓದಿ: ಧನ್ವಂತರಿ: ಮನೆಯಂಗಳದ ಸಂಜೀವಿನಿ ಭದ್ರಮುಷ್ಟಿ
ಪ್ರತಿ ಸಮಸ್ಯೆಗೂ ಪರಿಹಾರವಿರುತ್ತದೆ. ತಲೆಬುರುಡೆಯ ಸೋರಿಯಾಸಿಸ್ ಕೂಡ ಗುಣಪಡಿಸಲಾಗದ ಸಮಸ್ಯೆಯೇನಲ್ಲ. ಸರಿಯಾದ ರೀತಿಯಲ್ಲಿ ಬಾಹ್ಯ ಮತ್ತು ಆಭ್ಯಂತರ (ಅಂತರಂಗ) ಚಿಕಿತ್ಸೆ ಮಾಡಿಕೊಂಡರೆ ಇದನ್ನು ಗುಣಪಡಿಸಿಕೊಳ್ಳಬಹುದು. ಎರಡೆರಡು ಗ್ರಾಂನಷ್ಟು ಬೇವು, ಅಮೃತಬಳ್ಳಿ, ಮಂಜಿಷ್ಟ, ಸೊಗದೆಬೇರು, ಅರಿಶಿಣಗಳನ್ನು (ಎಲ್ಲವೂ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ) ತೆಗೆದುಕೊಂಡು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟ ನೀರಿಗೆ ಬತ್ತಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಹಾಯವಾಗುತ್ತದೆ. ಇದನ್ನು ಸೇವಿಸುವ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಅಥವಾ ಶುದ್ಧವಾದ ಎಣ್ಣೆಗಳನ್ನು ಸೇವಿಸಬೇಕು. ನಿತ್ಯವೂ ನೆಲ್ಲಿಕಾಯಿಯನ್ನು ಸೇವಿಸುವುದು ಹಿತಕಾರಿ. ತಾಜಾ ಭೃಂಗರಾಜ ಸಿಕ್ಕಿದರೆ ದಿನಕ್ಕೊಮ್ಮೆ ಅದರ ರಸವನ್ನು ಊಟದ ಮಧ್ಯದಲ್ಲಿ ಎರಡು ಚಮಚದಷ್ಟು ಸೇವಿಸುವುದು ಒಳಿತು. ಇದನ್ನು ಸೇವಿಸುವಾಗ ಉಷ್ಣವಾದರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕು. ತಾಜಾ ಗಿಡ ಸಿಗದಿದ್ದರೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಒಣ ತುಂಡುಗಳನ್ನು ಒಂದು ಚಮಚದಷ್ಟು ಹಾಕಿ ಅದಕ್ಕೆ ಎರಡು ಲೋಟ ನೀರು ಸೇರಿಸಿ ಅರ್ಧ ಲೋಟಕ್ಕೆ ಬತ್ತಿಸಿ ಸೇವಿಸಬಹುದು.
ಇದನ್ನೂ ಓದಿ: ಧನ್ವಂತರಿ: ಮಲಬದ್ಧತೆ ನಿವಾರಣೆಗೆ ಸುಲಭದ ಪರಿಹಾರಗಳು
ಒಂದು ಲೋಟ ಕೊಬ್ಬರಿ ಎಣ್ಣೆಗೆ ಒಂದು ಲೋಟ ನೆಲ್ಲಿಕಾಯಿ ರಸ ಅಥವಾ ಕಷಾಯ, ಒಂದು ಲೋಟ ಭೃಂಗರಾಜದ ರಸ ಅಥವಾ ಕಷಾಯ, ಒಂದು ಲೋಟ ಹಾಲು ಮತ್ತು ಎರಡು ಚಮಚದಷ್ಟು ಜಜ್ಜಿದ ಜ್ಯೇಷ್ಠಮಧುವಿನ ತುಂಡುಗಳನ್ನು ಹಾಕಿ ಸಣ್ಣ ಬೆಂಕಿಯಲ್ಲಿ ನೀರಿನಂಶ ಪೂರ್ತಿಯಾಗಿ ಆವಿಯಾಗುವ ತನಕ ಕುದಿಸಿ ತಯಾರಿಸಿದ ತೈಲವನ್ನು ನಿತ್ಯ ರಾತ್ರಿ ತಲೆಗೆ ಹಚ್ಚುವುದರಿಂದ ತುಂಬ ಸಹಾಯವಾಗುತ್ತದೆ. ತಲೆ ತೊಳೆಯಲು ಅಂಟುವಾಳ ಕಾಯಿ ಅಥವಾ ಸೀಗೆಕಾಯಿಯನ್ನು ರಾತ್ರಿ ನೆನೆಸಿ ಮರುದಿನ ಬೆಳಗ್ಗೆ ಅದರ ಜ್ಯೂಸ್ ತಯಾರಿಸಿ ಬಳಸುವುದು ಒಳ್ಳೆಯದು. ನಂತರ ಲೋಳೆಸರ ಅಥವಾ ದಾಸವಾಳ ಸೊಪ್ಪಿನ ನೀರಿನಿಂದ ತಲೆಯನ್ನು ತೊಳೆದುಕೊಳ್ಳಬೇಕು.
ಇದನ್ನೂ ಓದಿ: ಧನ್ವಂತರಿ| ಕರೊನಾ ಪುನಃ ಬರುವುದೇ?
ಈ ಸಮಸ್ಯೆಯನ್ನು ಮನೆಮದ್ದುಗಳಿಂದಷ್ಟೇ ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲ. ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳು, ಪ್ರಕೃತಿ ಚಿಕಿತ್ಸೆಗಳು, ಯೋಗ, ಮುದ್ರೆಗಳ ಸಹಾಯವನ್ನು ಪಡೆದುಕೊಳ್ಳಬೇಕು. ತಕ್ರಧಾರಾ ಚಿಕಿತ್ಸೆಯು ಮಾನಸಿಕ ಒತ್ತಡ, ತಲೆ ತುರಿಕೆ, ಹೊಟ್ಟು, ಉರಿ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಪಥ್ಯ ಪಾಲನೆಯೂ ಅವಶ್ಯ. ಕರಿದ ಪದಾರ್ಥಗಳ ಸೇವನೆ, ಊಟ ಮಾಡಿದ ನಂತರ ಐಸ್ ಕ್ರೀಮ್ ಚಾಕಲೇಟ್ ಇತ್ಯಾದಿಗಳ ಸೇವನೆ, ಹಗಲುನಿದ್ದೆ, ರಾತ್ರಿ ನಿದ್ದೆಗೆಡುವುದು, ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಸಿದ್ಧ ತಿನಿಸುಗಳನ್ನು ಸೇವಿಸುವುದು, ಸಕ್ಕರೆ, ರೀಫೈನ್ಡ್ ಎಣ್ಣೆ, ಮೈದಾಹಿಟ್ಟುಗಳನ್ನು ಸೇವಿಸುವುದು ಇವೆಲ್ಲ ಅಪಥ್ಯಗಳು.