

ವಿದೇಶಗಳಲ್ಲಿ ಕೆಲವೆಡೆ ಒಮ್ಮೆ ಹತೋಟಿಗೆ ಬಂತೆಂದು ನೆಮ್ಮದಿಯ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಮತ್ತೆ ಎರಡನೇ ಬಾರಿಗೆ ಕೋವಿಡ್-19 ವಕ್ಕರಿಸಿದ್ದನ್ನೂ ಗಮನಿಸುತ್ತಿದ್ದೇವೆ. ಈ ಎಲ್ಲ ವಿಚಾರಗಳು ಕೆಲವರಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ ಉಂಟುಮಾಡುತ್ತಿರುವುದೂ ದಿಟ. ಮೇಲಿನ ಪ್ರಶ್ನೆಗೆ ಎರಡು ಮುಖ್ಯ ಆಯಾಮಗಳಿವೆ. ಈಗಾಗಲೇ ಒಮ್ಮೆ ಕರೊನಾ ಬಾಧಿತ ವ್ಯಕ್ತಿಗೆ ಮತ್ತೆ ಕರೊನಾ ಬರುವುದೇ ಎಂಬುದು ಒಂದಾದರೆ, ಒಮ್ಮೆ ನಿಯಂತ್ರಣಕ್ಕೆ ಬಂದ ಈ ಸಾಂಕ್ರಾಮಿಕ ವ್ಯಾಧಿ ಮತ್ತೆ ತಲೆ ಎತ್ತುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ.
ಹುಟ್ಟಿ ಒಂದು ವರ್ಷವಾದರೂ ಈ ರೋಗವಿನ್ನೂ ಹೊಸತೇ! ಹೊಸ ರೋಗ ಎಂದ ಮೇಲೆ ಅದರ ಬಗ್ಗೆ ತದ್ವಿರುದ್ಧ ಸಂಶೋಧನಾ ವರದಿಗಳು, ವಿರೋಧಾಭಾಸದ ಹೇಳಿಕೆಗಳು, ವಿಪರೀತ ಅರ್ಥದ ಸುದ್ದಿಗಳು ಎಲ್ಲ ರೆಕ್ಕೆಪುಕ್ಕ ಪಡೆದು ಮೊದಲೇ ಕಂಗೆಟ್ಟಿರುವ ಜನರ ಮನಸ್ಸನ್ನು ಮತ್ತಷ್ಟು ಕಾಡಲಾರಂಭಿಸುತ್ತವೆ. ಸಾಮಾನ್ಯವಾಗಿ ವೈರಾಣು ರೋಗಗಳು ಒಮ್ಮೆ ಒಬ್ಬ ವ್ಯಕ್ತಿಗೆ ಬಂತೆಂದರೆ ಮತ್ತೆ ಕಾಣಿಸಿಕೊಳ್ಳುವುದು ತೀರ ಅಪರೂಪ. ಅದು ಚಿಕನ್ಪಾಕ್ಸ್ ಇರಲಿ, ಚಿಕುನ್ಗುನ್ಯಾವೇ ಇರಲಿ. ಒಮ್ಮೆ ದೇಹವು ಚೇತರಿಸಿಕೊಂಡರೆ ವೈರಾಣುವು ಮತ್ತೆ ಮೇಲೇಳಲು ನಮ್ಮ ಶರೀರವು ಆಸ್ಪದ ನೀಡುವುದಿಲ್ಲ. ಹಾಗೆಂದು ಚಿಕನ್ಪಾಕ್ಸ್ ಥರದ ಕಾಯಿಲೆಗಳು ಎರಡು ಮೂರು ಬಾರಿ ಕಾಣಿಸಿಕೊಂಡವರೂ ವಿರಳವಾಗಿ ಕಾಣಸಿಗುತ್ತಾರೆ. ಕರೊನಾದಿಂದ ಒಮ್ಮೆ ಬಾಧಿತರಾದವರಿಗೆ ಮತ್ತೆ ಕಾಣಿಸಿಕೊಂಡಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನವಾಗಿದೆ. ಸುದೀರ್ಘಕಾಲ ಈ ವ್ಯಾಧಿಗೆ ಸಂಬಂಧಿತ ವ್ಯಾಧಿಕ್ಷಮತ್ವ ಉಳಿಯಲಿದೆ ಎಂದು ಈಗ ನಡೆಯುತ್ತಿರುವ ಸಂಶೋಧನೆಗಳು ಬೆಟ್ಟುಮಾಡುತ್ತಿರುವುದು ಆಶಾದಾಯಕ ಸಂಗತಿ.
ತಗ್ಗುತ್ತಿರುವ ರೋಗಾಣುವಿನ ಅಬ್ಬರ ಮತ್ತೆ ಫೆಬ್ರವರಿ ವೇಳೆಗೆ ಪುನಃ ಏರಲಿದೆ ಎಂಬ ವರದಿಯನ್ನು ನೋಡಿ ಕುಳಿತಲ್ಲೇ ಬೆವರಲಾರಂಭಿಸಿದವರೂ ಇದ್ದಾರೆ! ಹೀಗೆ ಗೊತ್ತಿಲ್ಲದ ವಿಚಾರವನ್ನೇರಿ ವಿಚಿತ್ರವಾಗಿ ಚಡಪಡಿಸುವ ಗೋಜಲು ನಮಗೇಕೆ ಬೇಕು? ವಾಹನ ಚಲಾಯಿಸುವಾಗ ಅಪಘಾತ ಆಯಿತೆನ್ನಿ. ಪುನಃ ಚಲಾಯಿಸಲು ಮುಂದಾದಾಗ ಇನ್ನು ಅಪಘಾತವಾಗುವುದಿಲ್ಲವೇ ಎಂದು ಪ್ರಶ್ನೆ ಕೇಳಿದಂತಾಗುತ್ತದೆ. ವಾಹನ ಚಾಲನೆಯನ್ನು ಮತ್ತೊಮ್ಮೆ ಸರಿಯಾಗಿ ಕಲಿತರೂ ಮರು ಅಪಘಾತ ಆಗುವುದಿಲ್ಲ ಎನ್ನಲು ಖಾತರಿ ಏನಾದರೂ ಇದೆಯೇ? ಹಾಗೆಂದು ಅದೆಷ್ಟು ಸಮಯ ವಾಹನ ಚಲಾಯಿಸದೆ ಹೆದರಿ ಕುಳಿತುಕೊಳ್ಳಲು ಸಾಧ್ಯವಾದೀತು? ವಿದೇಶಗಳಲ್ಲಿ ಎರಡನೇ ಬಾರಿಗೆ ರೋಗ ಪ್ರತ್ಯಕ್ಷವಾಗಿದೆ ಎಂದಾಕ್ಷಣ ಅದು ಇಲ್ಲೂ ಬರಬೇಕೆಂದೇನಿಲ್ಲ. ಅಲ್ಲಿಯ ಪರಿಸ್ಥಿತಿಗೂ ಇಲ್ಲಿಯ ವಾಸ್ತವತೆಗೂ ವ್ಯತ್ಯಾಸವಿದೆ.
ಸಾಮಾಜಿಕ ಅಂತರ ನಮ್ಮಲ್ಲೆಷ್ಟಿದೆ ಎಂದು ಒಮ್ಮೆ ಆಲೋಚಿಸಿ. ಹಬ್ಬದ ಮುಂಚಿನ ದಿನ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಹಾಗೂ ರಸ್ತೆಗಳಲ್ಲಿ ಜನರ ಜಾತ್ರೆಯನ್ನೇ ನೋಡುತ್ತಿದ್ದೇವೆ. ಆರು ಮೀಟರ್ ಅಂತರವಿರಲಿ ಎಂಬ ಜಾಹೀರಾತಿರುವ ಬಸ್ಸಿನೊಳಗೆ ಎಲ್ಲ ಸೀಟುಗಳೂ ಭರ್ತಿಯಾಗಿ ಒಬ್ಬರ ಪಕ್ಕ ಇನ್ನೊಬ್ಬರು ನಿಂತು ಪಯಣಿಸುತ್ತಿರುವ ದೃಶ್ಯಗಳೂ ನಮ್ಮ ಕಣ್ಣೆದುರಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸದಾ ಮಾಸ್ಕ್ ಹಾಕಿ ಅಭ್ಯಾಸವಿಲ್ಲದ ಕಾರಣ ಜನ ಅದನ್ನು ಕೆಳಕ್ಕೆ ಸರಿಸಿ ಆರಾಮವಾಗಿ ಉಸಿರಾಡಿ ಪರಿಚಯದವರೊಂದಿಗೆ ಹರಟುವುದನ್ನೂ ನೋಡಬಹುದು. ಚುನಾವಣೆಯೋ, ರ್ಯಾಲಿಯೋ ಮತ್ತಿತರ ಸಂದರ್ಭಗಳಲ್ಲಿ ಶರೀರದ ಅಂತರವಾಗಲಿ, ಮುಖ ಆವರಣವಾಗಲೀ ಇಲ್ಲದಿರುವುದೂ ಗೊತ್ತಿರುವ ವಿಚಾರ. ಇನ್ನು ಜನಸಾಂದ್ರತೆಯಿಂದಾಗಿ ಇಲ್ಲಿನ ಶುಚಿತ್ವದ ಮಟ್ಟವೂ ಹೇಗಿದೆ ಎಂಬುದು ತಿಳಿದಿದೆ. ಹಾಗಿದ್ದರೂ ಲಕ್ಷಲಕ್ಷಗಳಲ್ಲಿ ಹೆಚ್ಚಬೇಕಿದ್ದ ರೋಗವೇಕೆ ಇಳಿಕೆ ಕಾಣುತ್ತಿದೆ, ಎಲ್ಲ ಇರುವ ಅಲ್ಲಿ ಯಾಕೆ ಹೆಚ್ಚುತ್ತಿದೆ ಎಂಬುದೆಲ್ಲ ಜಿಜ್ಞಾಸೆಯ ವಿಷಯ. ಒಂದು ಮಾತು ನೆನಪಾಗುತ್ತಿದೆ; ‘ನಡೆಯುವವರು ಎಡವುವರಲ್ಲದೆ ಕುಳಿತವರು ಎಡವುವರೇ?’ ನಾವು ನಡೆಯಲೇಬೇಕು.