ಕುಣಿತ ನಮ್ಮದು, ಗೆಲುವು ನಿಮ್ಮದು; ಚಿಯರ್​ ಲೀಡರ್ಸ್​ ಒಂದು ಆವೃತ್ತಿಯ ಗಳಿಕೆ ಎಷ್ಟು?

ವಿಜಯವಾಣಿ
Published on

| ಧರ್ಮರಾಜ ಪಾಟೀಲ, ಬೆಳಗಾವಿ

ಧೋನಿ ಸಿಕ್ಸ್ ಬಾರಿಸಿದಾಗ ಬಳ್ಳಿಯಂತೆ ಬಳುಕುವ ಸೊಂಟ, ಯಶ್ ದಯಾಲ್ ಬಿರುಗಾಳಿಯಂತೆ ಮರು ಎಸೆತದಲ್ಲಿ ವಿಕೆಟ್ ಕಿತ್ತಾಗ ಚೀರುವ ಕಂಠ, ವಿರಾಟ್ ಕೊಹ್ಲಿ ಚೆಂಡನ್ನು ರಾಕೆಟ್ ವೇಗದಲ್ಲಿ ಬೌಂಡರಿಗೆ ಅಟ್ಟಿದಾಗ ಕಚಗುಳಿ ಇಡುತ್ತಿದ್ದ ಆ ಮಿಂಚುವ ಗೊಂಚಲು, ಗಾಳಿಯಲ್ಲಿ ಹಾರಿ ಬಂದ ಚೆಂಡನ್ನು ಪಾಫ್ ಡು ಪ್ಲೆಸಿಸ್ ಪಾಯಿಂಟ್​ನಲ್ಲಿ ಹಾರಿ ಗಬಕ್ಕನೆ ಹಿಡಿದು ಸಂಭ್ರಮಿಸಿದಾಗ ಹೆಜ್ಜೆ ಹಾಕುವ ನುಣುಪು ಮೈ ಹುಡುಗಿಯರು... ಹೀಗೆ ಐಪಿಎಲ್ ಪಂದ್ಯಗಳ ಮಧ್ಯೆ ತಮ್ಮ ತಂಡವನ್ನು ಹುರುದುಂಬಿಸುವ ಚಿಯರ್ ಲೀಡರ್ಸ್​ಗಳ ರೋಚಕ ಕಹಾನಿ ಇಲ್ಲಿದೆ....

‘ಚುಟುಕು ಚೆಂಡಾಟ’ದ ಮಧ್ಯೆ ಆಗಾಗ ಕುಣಿದು ಬ್ಲಾಸ್ಟರ್​ಗಳನ್ನು, ವೇಗಿಗಳನ್ನು, ಫೀಲ್ಡರ್​ಗಳನ್ನು ಹುರಿದುಂಬಿಸುವ ಇವರು ‘ಹುರುಪಿನ ಹುಡುಗಿಯರು’ ಅರ್ಥಾತ್ ಚಿಯರ್​ ಲೀಡರ್ಸ್. ಮೈದಾನದ ಹೊರಗೆ ನಿಂತು ಚೀರುವುದು, ಜಿಗಿಯುವುದು, ಕುಣಿಯುವುದರ ಮೂಲಕ ಆಟಗಾರರಲ್ಲಿ ಗೆಲ್ಲುವ ಹುರುಪು ತುಂಬುವುದು ಇವರ ಕಸಬು. ಐಪಿಎಲ್ ಕೇವಲ ಕ್ರಿಕೆಟ್ ಬಗ್ಗೆ ಅಲ್ಲ ಜತೆಗೆ ಇದು ಪ್ರದರ್ಶನದ ಬಗ್ಗೆಯೂ ಇದೆ. ಚಿಯರ್​ಲೀಡರ್ಸ್​ಗಳು ಈ ಪ್ರದರ್ಶನದ ನಿರ್ಣಾಯಕ ಭಾಗವಾಗಿದ್ದು, ಕ್ರೀಡಾಂಗಣಗಳಿಗೆ ಚೈತನ್ಯ ಮತ್ತು ಉತ್ಸಾಹ ತರುತ್ತಾರೆ. ವರ್ಣರಂಜಿತ ವೇಷಭೂಷಣ ಮತ್ತು ಕ್ರೀಡಾ ತಂಡದ ಬಣ್ಣ ಧರಿಸಿರುವ ಈ ಐಪಿಎಲ್ ಹುರುಪಿನ ಹುಡುಗಿಯರು, ಆಗಾಗ್ಗೆ ಜನಸಮೂಹವನ್ನು ಘೊಷಣೆಗಳು ಮತ್ತು ಚಿಯರ್​ಗಳಲ್ಲಿ ಮುನ್ನಡೆಸುತ್ತಾರೆ.

ವಿದ್ಯುತ್ ​ಚಾಲಿತ ವಾತಾವರಣವನ್ನು ಸೃಷ್ಟಿಸುತ್ತಾರೆ. ಐಪಿಎಲ್ ಚಿಯರ್​ ಲೀಡರ್​ಗಳ ಪಾತ್ರವು ಹೆಚ್ಚು ಮನರಂಜನೆ-ಕೇಂದ್ರಿತವಾಗಿದ್ದರೂ, ಅವರ ಉಪಸ್ಥಿತಿಯು ಕ್ರಿಕೆಟ್ ಪಂದ್ಯಗಳನ್ನು ಹೇಗೆ ಅನುಭವಿಸಲಾಗುತ್ತದೆ ಎಂಬುದರಲ್ಲಿ ಒಂದು ವಿಕಸನವನ್ನು ಸೂಚಿಸುತ್ತದೆ. 2025ರಲ್ಲಿ ಚಿಯರ್ ​ಲೀಡರ್ ತಂಡಗಳು ಹೇಗೆ ವಿಕಸನಗೊಳ್ಳುತ್ತವೆ ಮತ್ತು ಈಗಾಗಲೇ ತೀವ್ರವಾದ ಐಪಿಎಲ್ ಋತುವಿಗೆ ಕೊಡುಗೆ ನೀಡುತ್ತವೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಒಂದು ಋತುವಿನ ಗಳಿಕೆ ಎಷ್ಟು?

ಐಪಿಎಲ್ ಚಿಯರ್​ಲೀಡರ್​ಗಳ ವೇತನವು ಅವರ ಅನುಭವ, ಅವರು ಪ್ರತಿನಿಧಿಸುವ ತಂಡ ಮತ್ತು ತಂಡದ ಜನಪ್ರಿಯತೆ ಅವಲಂಬಿಸಿದೆ. ಸರಾಸರಿಯಾಗಿ ಒಬ್ಬ ಐಪಿಎಲ್ ಚಿಯರ್​ಲೀಡರ್ ಪ್ರತಿ ಪಂದ್ಯಕ್ಕೆ 14,000 ರೂಪಾಯಿಂದ 30,000 ರೂ. ಗಳಿಸಬಹುದು. ಜತೆಗೆ ಊಟ, ವಸತಿ, ಟ್ರಾವಲಿಂಗ್, ಬೋನಸ್​ಗಳನ್ನು ಸಹ ಪಡೆಯುತ್ತಾರೆ. ಪ್ರತಿನಿಧಿಸುವ ತಂಡ ತಂಡವು ಪ್ಲೇಆಫ್ ಅಥವಾ ಫೈನಲ್​ಗೆ ತಲುಪಿದರೆ, ಚಿಯರ್​ಲೀಡರ್​ಗಳು ಹೆಚ್ಚುವರಿ ಪ್ರೋತ್ಸಾಹಕಗಳನ್ನು ನಿರೀಕ್ಷಿಸಬಹುದು. ಒಂದು ಋತುವಿನಲ್ಲಿ ಗರಿಷ್ಠ ರೂ. 3.5 ರಿಂದ 4 ಲಕ್ಷ ಗಳಿಸಬಹುದು. ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಚಿಯರ್​ಲೀಡರ್​ಗಳು ಪ್ರತಿ ಪಂದ್ಯಕ್ಕೆ 25,000 ರೂ.ಪಡೆಯುತ್ತಾರೆ. ಸಿಎಸ್​ಕೆ ಚಿಯರ್​ಲೀಡರ್​ಗಳಿಗೆ ಪ್ರತಿ ಪಂದ್ಯಕ್ಕೆ ಸುಮಾರು 20,000 ರೂ. ಪಾವತಿಸಿದರೆ, ಇತರ ತಂಡಗಳು ಪ್ರತಿ ಪಂದ್ಯಕ್ಕೆ 14,000ರಿಂದ 17,000 ರೂ. ವರೆಗೆ ಪಾವತಿಸುತ್ತವೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಒಡೆತನದ ಕೆಕೆಆರ್ ಚಿಯರ್​ಲೀಡರ್​ಗಳಿಗೆ ಪ್ರತಿ ಪಂದ್ಯಕ್ಕೆ ಸುಮಾರು 30,000 ರೂ. ಪಾವತಿಸುತ್ತದೆ.

ಐಪಿಎಲ್​ನಿಂದ ಪ್ರಖ್ಯಾತಿ

ಮೊದಮೊದಲು ಅಸೋಸಿಯೇಶನ್ ಪುಟ್​ಬಾಲ್ (ಸಾಕರ್), ಐಸ್ ಹಾಕಿ, ವಾಲಿಬಾಲ್, ಬೇಸ್​ಬಾಲ್, ರೆಸ್ಲಿಂಗ್, ಬಾಸ್ಕೆಟ್​ಬಾಲ್ ಆಟಗಳಿಗೆ ಸೀಮಿತವಾಗಿದ್ದ ಚಿಯರ್ ಲೀಡರ್ಸ್​ಗಳು ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಿದ್ದಂತೆ ಪ್ರಪಂಚದ ಕೋಟ್ಯಂತರ ಜನರ ಗಮನ ಸೆಳೆದಿದ್ದಾರೆ. ಇಂಡಿಯನ್ ಪ್ರಿಮೀಯರ್ ಲೀಗ್ (ಐಪಿಎಲ್) ಮಟ್ಟಿಗಂತೂ ಈ ‘ಮೈಮಾಟದ ಆಟ’ ಅವಿಭಾಜ್ಯ ಅಂಗವೆನಿಸಿದೆ. 20 ಓವರ್​ಗಳ ರಭಸದ ಕ್ರಿಕೆಟ್​ಗೆ ಕಳೆ ತರುವುದೇ ಇವರ ಕುಣಿತ ಎನ್ನುವಷ್ಟು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಚಿಯರ್​ಲೀಡರ್ಸ್ ಸ್ಥಾನ ಗಟ್ಟಿಯಾಗಿದೆ.

ಅಪಾಯದ ಕಸರತ್ತಿಗೆ ಬ್ರೇಕ್

ಆಟಗಳ ಮಧ್ಯೆ ಕಸರತ್ತು ಪ್ರದರ್ಶಿಸುವಾಗ ಚಿಯರ್ ಲೀಡರ್ಸ್ ಮೂಳೆ ಮುರಿದುಕೊಂಡ ಹಲವು ಉದಾಹರಣೆಗಳಿವೆ. 2006 ಮಾರ್ಚ್ 5ರಂದು ನಡೆದ ಬಾಸ್ಕೆಟ್​ಬಾಲ್ ಆಟದಲ್ಲಿ ದಕ್ಷಿಣ ಇಲ್ಲಿನಾಸ್ ಯುನಿವರ್ಸಿಟಿಯ ಚಿಯರ್​ಲೀಡರ್ ಕ್ರಿಸ್ಟಿ ಯಾಮಾಒಕಾ ಗಾಯಗೊಂಡಿದ್ದರು. ಮಾನವ ಪಿರಮಿಡ್ ನಿರ್ವಿುಸುವ ಸಂದರ್ಭದಲ್ಲಿ ಇವರು ಕೆಳಗೆ ಬಿದ್ದು ಮೂಳೆ ಮುರಿದುಕೊಂಡ ವಿಷಯ ಅಮೆರಿಕದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಅಂದಿನಿಂದ ಈ ಆಟದಲ್ಲಿ ಪಿರ್ಯಾಮಿಡ್ ನಿರ್ವಿುಸುವುದು ಹಾಗೂ ಅಪಾಯಕ್ಕೆ ಆಹ್ವಾನ ನೀಡುವ ಕಸರತ್ತು ಪ್ರದರ್ಶಿಸುವುದನ್ನು ನ್ಯಾಷನಲ್ ಚಿಯರ್​ ಲೀಡರ್ಸ್ ಅಸೋಸಿಯೇಶನ್ (ಎನ್​ಸಿಎ) ನಿಷೇಧಿಸಿತು.

ಕ್ರಿಕೆಟ್​ನಲ್ಲಿ ಮೊದಲ ಬಾರಿ ಚಿಯರ್ ​ಲೀಡರ್ಸ್

2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ 20 ಟ್ವೆಂಟಿ ವಿಶ್ವ ಕಪ್ ಕ್ರಿಕೆಟ್​ನಲ್ಲಿ ಮೊದಲ ಬಾರಿ ಚಿಯರ್​ಲೀಡರ್ಸ್​ಗಳನ್ನು ಅಂತಾರಾಷ್ಟ್ರೀಯವಾಗಿ ಬಳಸಲಾಯಿತು. ಮುಂದೆ ಐಪಿಎಲ್​ನ ಪ್ರತಿ ತಂಡಗಳ ಪರವಾಗಿ ದೇಶದ ನಾನಾ ಭಾಗಗಳಿಂದ ಕುಣಿಯಲು ಮುಂದೆ ಬಂದ ಚಿಯರ್​ಲೀಡರ್ಸ್ ನಾನಾ ಹೊಸ ವಿನ್ಯಾಸಗಳ ಮೂಲಕ ಗಮನ ಸೆಳೆದರು. ಇವರಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ ಕಂಡವರು ಪುಣೆ ವಾರಿಯರ್ಸ್ ತಂಡದ ಚಿಯರ್​ಲೀಡರ್ಸ್. ಇವರು ಒಂಬತ್ತು ಮೊಳದ ಸೀರೆಯನ್ನು ಮೈತುಂಬ ಉಟ್ಟುಕೊಂಡು, ಮುಡಿಗೆ ಮಲ್ಲಿಗೆ, ಕೈತುಂಬ ಬಳೆ, ಹಣೆಯ ಮೇಲೆ ಕುಂಕುಮ, ಮೂಗಿನಲ್ಲೊಂದು ನತ್ತು, ಧರಿಸಿ ಅಪ್ಪಟ ಭಾರತೀಯ ನಾರಿಯರ ವೇಷದಲ್ಲಿ ಹೆಜ್ಜೆಹಾಕಿ ಚಿಯರ್​ಲೀಡರ್ಸ್ ಕಾನ್ಸೆಪ್ಟ್​ಗೆ ಹೊಸ ಭಾಷ್ಯ ಬರೆದರು. ಆದರೆ, ಇದುವರೆಗೆ ಒಲಿಂಪಿಕ್ಸ್​ನಲ್ಲಿ ಚಿಯರ್​ಲೀಡರ್ಸ್ ತಂಡಗಳು ಕಂಡುಬಂದಿಲ್ಲ ಎಂಬುದು ವಿಶೇಷ.

ಮತ್ತಷ್ಟು ಮಾಹಿತಿ...

  • ಸಾಮಾನ್ಯವಾಗಿ ಒಂದು ತಂಡದಲ್ಲಿ 9 ರಿಂದ 15 ಜನ ಚಿಯರ್ ಲೀಡರ್ಸ್ ಇರುತ್ತಾರೆ.
  • ಆಟದ ಮಧ್ಯೆ ಇವರು ಆಗಾಗ 30 ಸೆಕೆಂಡ್​ನಿಂದ 2 ನಿಮಿಷದವರೆಗೆ ಕುಣಿಯುತ್ತಾರೆ.
  • ಇದುವರೆಗೆ ಒಲಿಂಪಿಕ್ಸ್​ನಲ್ಲಿ ಚಿಯರ್ ಲೀಡರ್ಸ್ ತಂಡಗಳು ಕಂಡು ಬಂದಿಲ್ಲ.
  • ಇವರು ಮಾಡಲಿಂಗ್, ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುವುದರ ಜತೆಗೆ ಟಿವಿ ಕಾರ್ಯಕ್ರಮಗಳಲ್ಲಿ ಇವರು ಸಾಮಾಜಿಕ ಸಂದೇಶದ ಉಪನ್ಯಾಸವನ್ನೂ ನೀಡುತ್ತಾರೆ.
  • 2001ರಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ಭೇಟಿ ನೀಡಿದ ಚಿಯರ್ ಲೀಡರ್ಸ್ ಸಂಖ್ಯೆ ಅಂದಾಜು 25 ಸಾವಿರ.
  • ಮೈದಾನಕ್ಕೆ ಕೊಹ್ಲಿ, ರೋಹಿತ್ ಶರ್ಮ, ಧೋನಿ ಬಂದರೆ ಸಾಕು ಚಿಯರ್ ಲೀಡರ್ಸ್​ಗಳು ಖುಷಿಯಾಗಿ ಹೆಜ್ಜೆ ಹಾಕಿ ಕ್ರೀಡಾಪ್ರೇಮಿಗಳನ್ನು ರಂಜಿಸುತ್ತಾರೆ.

ಚಿಯರ್ ಲೀಡರ್ಸ್ ಕುರಿತಾದ ಸಿನೆಮಾ

2000ರಲ್ಲಿ ಚಿಯರ್​ಲೀಡರ್ಸ್ ಕುರಿತಾದ ಬ್ರಿಂಗ್ ಇಟ್ ಆನ್ ಚಿತ್ರ ತೆರೆಕಂಡಿದೆ. ಪೇಟನ್ ರೀಡ್ ಮತ್ತು ರಾಲೆ ಇದರ ನಿರ್ದೇಶಕರು. ಸಾಂಡಿಯಾಗೋ ಪ್ರೌಢಶಾಲೆಯ ‘ದ ಟೋರೋಸ್’ ಎಂಬ ಚಿಯರ್ ಲೀಡರ್ಸ್ ತಂಡದ ಕುರಿತಾದ ಈ ಚಿತ್ರ ಅಂದಾಜು 90 ಮಿಲಿಯನ್ ಡಾಲರ್ ಲಾಭವನ್ನೂ ಗಳಿಸಿತ್ತು.

ಚಿಯರ್ ಲೀಡರ್ಸ್ ಇತಿಹಾಸ

ಶತಮಾನಗಳ ಹಿಂದೆ ಈ ಕಾನ್ಸೆಪ್ಟ್ ಅಮೆರಿಕದ ಕ್ರೀಡೆಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರಿಂದು ಆಸ್ಟ್ರೇಲಿಯಾ, ಕೆನಡಾ, ಚೀನಾ, ಕೋಲಂಬಿಯಾ, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್, ನೆದರ್ಲೆಂಡ್, ನ್ಯೂಜಿಲೆಂಡ್, ಇಂಗ್ಲೆಂಡ್​ಗಳಲ್ಲೂ ‘ಹುರುಪಿನ ಹುಡುಗಿಯರು’ ಇದ್ದಾರೆ. ಪ್ರಸ್ತುತ ಇವರ ಸಂಖ್ಯೆ ಲಕ್ಷದ ಗಡಿದಾಟಿದೆ. ಆಟಗಾರರಿಗೆ ಹುರುಪು ನೀಡುವ ಈ ಪರಿಕಲ್ಪನೆಯ ಮೂಲ ಅಮೆರಿಕದ ಪ್ರಿನ್ಸ್​ಟನ್ ಯುನಿವರ್ಸಿಟಿ. ಕಪ್ಪು-ಬಿಳುಪು ಯುಗದಲ್ಲೇ ಥಾಮಸ್ ಪೀಬ್ಲೆಸ್ ಎಂಬುವರು ಫುಟ್​ಬಾಲ್ ಆಟದಲ್ಲಿ ಮೊದಲ ಬಾರಿ ಚಿಯರ್​ ಲೀಡರ್ಸ್ ಕಾನ್ಸೆಪ್ಟ್ ಪರಿಚಯಿಸಿದರು. 1877 ಫೆಬ್ರವರಿ 22, 1880 ಮಾರ್ಚ್ 12 ಹಾಗೂ 1881 ನವೆಂಬರ್ 4ರಂದು ಅಮೆರಿಕದಲ್ಲಿ ನಡೆದ ಆಟಗಳಲ್ಲಿ ಚಿಯರ್​ಲೀಡರ್ಸ್ ಕುಣಿದಿದ್ದನ್ನು ಅಲ್ಲಿನ ದಿನಪತ್ರಿಕೆ ‘ಪ್ರಿನ್ಸ್ಸ್ ಟೇನಿಯನ್’ ಪ್ರಕಟವಾಗಿತ್ತು. ನಂತರ 1898 ನವೆಂಬರ್ 2 ‘ಚಿಯರ್​ಲೀಡರ್ಸ್ ಬೆಳಕಿಗೆ ಬಂದ ದಿನ’ ಎಂದು ಘೊಷಿಸಿತು.

ಥಾಮಸ್, ಈಸ್ಟನ್ ಮತ್ತು ಗ್ಯೂರಿನ್ ಮೊದಲ ಮೂರು ಮಂದಿ ಚಿಯರ್​ಲೀಡರ್ಸ್ ಎಂದು ಪ್ರಿನ್ಸ್ ಟನ್ ಪುಟ್ಬಾಲ್ ಅಧಿಕಾರಿಗಳು ಸಾರಿದರು. ಇವರಿಂದಲೇ ಹಲವು ಚಿಯರ್​ಲೀಡರ್ಸ್ ತಂಡಗಳು ಜನ್ಮತಳೆದವು. ಒಂದು ವಿಚಿತ್ರ ಸಂಗತಿ ಎಂದರೆ ಮೊದಮೊದಲು ಚಿಯರ್​ಲೀಡರ್ಸ್ ತಂಡಗಳಲ್ಲಿ ಮಹಿಳೆಯರೇ ಇರಲಿಲ್ಲ. ಬರೀ ಯುವಕರೇ ಕುಣಿಯುತ್ತಿದ್ದರು. 1907ರಲ್ಲಿ ಮೊದಲ ಬಾರಿಗೆ ಚಿಯರ್​ಲೀಡರ್ಸ್ ಆಗಲು ಮುಂದೆ ಬಂದ ಮಹಿಳೆಯರು ಎರಡನೇ ಮಹಾಯುದ್ಧದ ಹೊತ್ತಿಗೆ ಪ್ರಾಬಲ್ಯ ಮೆರೆಯಲು ಆರಂಭಿಸಿದರು. ಮುಂದೆ ಅವರ ಸಂಖ್ಯೆಯೇ ಹೆಚ್ಚಾಯಿತು. ಈಗ ಅವರದ್ದೇ ಮೇಲುಗೈ. ಆಧುನಿಕ ಚಿಯರ್​ಲೀಡರ್ಸ್​ಗಳಲ್ಲಿ ಶೇ.97 ಮಂದಿ ಮಹಿಳೆಯರೇ ಇದ್ದಾರೆ. 1948ರಲ್ಲಿ ಟೆಕ್ಸಾಸ್​ನ ಲಾರೆನ್ಸ್ ಹೆರಕಿಮರ್ ‘ನ್ಯಾಷನಲ್ ಚಿಯರ್​ಲೀಡರ್ಸ್ ಅಸೋಸಿಯೇಶನ್’ (ಎನ್​ಸಿಎ) ರೂಪಿಸಿದರು.

1949ರಲ್ಲಿ ಮೊದಲ ಬಾರಿ ಟೆಕ್ಸಾಸ್​ನಲ್ಲೇ ಚಿಯರ್​ಲೀಡರ್ಸ್ ಕ್ಲಿನಿಕ್ ಕೂಡ ನಡೆಯಿತು. 52 ಮಂದಿ ಮಹಿಳೆಯರು ಅದರಲ್ಲಿ ಪಾಲ್ಗೊಂಡರು. 1960ರಲ್ಲಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ವರ್ಕ್​ಶಾಪ್ ಕೂಡ ಆರಂಭವಾದವು. ಇದರಲ್ಲಿ ಚಿಯರ್​ಲೀಡರ್ಸ್ ಆಗಲು ಬೇಕಾಗುವ ತಕಥೈ ಕೌಶಲಗಳ ಬಗ್ಗೆ ತರಬೇತಿ ನೀಡಲಾಯಿತು. ಸ್ಯಾಮ್ ಓವೆನ್ಸ್, ಸ್ಕಾಟ್ ಬೀಚರ್, ಎಂಬರ್ ಜಾಕ್ಸನ್, ಕ್ರಿಸ್ಟನ್ ಆಂಡರಸನ್ ಮತ್ತಿತರರು ಚಿಯರ್​ಲೀಡರ್ಸ್ ಮಟ್ಟಿಗೆ ಮೊದಲ ತರಬೇತುದಾರರಾಗಿ ಹೊರಹೊಮ್ಮಿದರು. ಅದೇ ವರ್ಷ ನ್ಯಾಷನಲ್ ಫುಟ್​ಬಾಲ್ ಲೀಗ್ (ಎನ್​ಎಫ್​ಎಲ್) ಅಧಿಕೃತ ಚಿಯರ್​ಲೀಡರ್ಸ್ ತಂಡಗಳನ್ನು ಘೋಷಿಸಿತು.

ಇಲ್ಲಿವರೆಗೆ ಅಮೆರಿಕಕ್ಕೆ ಸೀಮಿತವಾಗಿದ್ದ ಚಿಯರ್​ಲೀಡರ್ಸ್ ಪರಿಕಲ್ಪನೆಯನ್ನು 1965ರಲ್ಲಿ ಪ್ರೆಡ್ ಗ್ಯಾಸ್ಟಾಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದರು. 1967ರಲ್ಲಿ ಇಂಟರ್​ನ್ಯಾಷನಲ್ ಚಿಯರ್​ಲೀಡರ್ಸ್ ಫೌಂಡೇಶನ್ (ಐಸಿಎಪ್) ಕೂಡ ರಚನೆಯಾಯಿತು. ಮುಂದೆ 80ರ ದಶಕದಲ್ಲಿ ಮಾಡರ್ನ್ ಚಿಯರ್​ಲೀಡರ್ಸ್ ಯುಗ ಆರಂಭವಾಯಿತು. ಜಿಮ್ನಾಸ್ಟಿಕ್, ಸ್ಟಂಟ್ಸ್, ಮಾನವ ಪಿರಮಿಡ್ ಸೇರಿದಂತೆ ನಾನಾ ಕಸರತ್ತುಗಳನ್ನು ಪ್ರದರ್ಶಿಸಲು ಚಿಯರ್ ಲೀಡರ್ಸ್ ಮುಂದಾದರು. ಇಂಥ ಸಾಹಸಗಳನ್ನು ಪ್ರದರ್ಶಿಸುತ್ತ ಆಟಗಾರರಲ್ಲಿ ಹುರುಪು ತುಂಬುವ ಸಂದರ್ಭದಲ್ಲೇ ಕೆಲವು ಚಿಯರ್​ಲೀಡರ್ಸ್ ಆಯತಪ್ಪಿ ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ.

ಇಂಥ ಘಟನೆಗಳನ್ನು ತಪ್ಪಿಸಲು 1983ರಲ್ಲಿ ಅಮೆರಿಕನ್ ಅಸೋಸಿಯೇಶನ್ ಆಫ್ ಚಿಯರ್​ಲೀಡಿಂಗ್ ಕೋಚಸ್ ಎಂಡ್ ಎಡ್​ವೈಸರ್ಸ್ (ಎಎಸಿಸಿಎ) ಅಸ್ತಿತ್ವಕ್ಕೆ ಬಂದು ಚಿಯರ್ ಲೀಡರ್ಸ್ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿತು. ಜಪಾನಿನ ಟೋಕಿಯೊದಲ್ಲಿ 1998 ಜುಲೈ 5ರಂದು ಇಂಟರ್​ನ್ಯಾಷನಲ್ ಚಿಯರ್ ಲೀಡಿಂಗ್ ಫೆಡರೇಶನ್ ಸ್ಥಾಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net