ಹಲೋ ಡಾಕ್ಟರ್ | ಅರಳುವ ಹೂವುಗಳಿಗೆ ಆಸರೆಯಾಗಿ

child april 03
Published on
ಅಭಿವೃದ್ಧಿಶೀಲ ದೇಶಗಳಲ್ಲಿ ಒಂದಾದ ಭಾರತದ ಭವಿಷ್ಯದ ಶಿಲ್ಪಿಗಳು ನಮ್ಮ ಮಕ್ಕಳು. ಸ್ವಸ್ಥ ಸಮಾಜದ ಆಶಯ ಈಡೇರಲು ಅವರ ಕನಸುಗಳು ಪೂರಕವಾಗಿರಬೇಕು. ದೇಶದ ಭದ್ರತೆ ಮತ್ತು ಪ್ರಗತಿಗೆ ಶ್ರಮಿಸುವ ಮಕ್ಕಳು ಎಲ್ಲ ರೀತಿಯಿಂದ ಸ್ವಸ್ಥರಾಗಿರಬೇಕು, ಸಶಕ್ತರಾಗಿರಬೇಕು. ಹಾಗಾಗಬೇಕೆಂದರೆ ಅವರ ಮುಗ್ಧ ಮನಸ್ಸು ಅರಳಬೇಕು. ಪಾಲಕರು ಅವರ ಆಪ್ತಸ್ನೇಹಿತರಾಗಿ, ಹಿತೈಷಿಯಾಗಿ ಹಾಗೂ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದರೆ ಅದೇ ಅವರಿಗೆ ಕೊಡುವ ದೊಡ್ಡ ಕಾಣಿಕೆ.

ಆಧುನಿಕತೆಯ ಅಬ್ಬರಕ್ಕೆ ಸಿಲುಕಿರುವ ನಾವು ಇಂದು ತಂತ್ರಜ್ಞಾನದ ನಾಗಾಲೋಟದಲ್ಲಿ ಸಾಗುತ್ತಿದ್ದೇವೆ. ಸಾಗುತ್ತಿದ್ದೇವೆ ಎನ್ನುವುದಕ್ಕಿಂತ ಓಡುತ್ತಿದ್ದೇವೆ. ಬದಲಾವಣೆಗೆ ಹೊಂದಿಕೊಂಡು ಯಂತ್ರದಂತಾಗಿರುವ ನಾವು ಬ್ಯಾಂಕ್ ಬ್ಯಾಲನ್ಸ್ ಸೇರಿದಂತೆ ಕೆಲವು ಆಸೆಗಳನ್ನು ಇಟ್ಟುಕೊಂಡಿದ್ದೇವೆ. ಇದು ತಪ್ಪಲ್ಲ. ದುಡಿಮೆ ಮತ್ತು ಗಳಿಕೆಯ ಭರದಲ್ಲಿ ನಾವು ನಮ್ಮ ಕುಟುಂಬ, ಮಕ್ಕಳನ್ನು ಎಲ್ಲೋ ಒಂದೆಡೆ ನಿರ್ಲಕ್ಷಿಸಿದಂತಿದೆ. ನಿರ್ಲಕ್ಷ್ಯ ಎನ್ನುವುದಕ್ಕಿಂತ ಅಷ್ಟೊಂದು ಸಮಯ ನೀಡುತ್ತಿಲ್ಲ. ಮಮತೆ ತೋರುತ್ತಿಲ್ಲ. ಅವರ ನೋವು-ನಲಿವುಗಳನ್ನು ಅರಿಯುವುದರಲ್ಲಿ ಎಡವುತ್ತಿದ್ದೇವೆ. ಅವರು ಸಾಗುತ್ತಿರುವ ದಾರಿ ಸರಿಯೇ ತಪ್ಪೇ ಎನ್ನುವದನ್ನು ನೋಡುತ್ತಿಲ್ಲ. ಬದಲಾಗಿ ನಮ್ಮ ನಿರೀಕ್ಷೆಯ ಭಾರವನ್ನು ಅವರ ಮೇಲೆ ಹೇರುತ್ತಿದ್ದೇವೆ. ಮಕ್ಕಳು ಏನು ಬಯಸುತ್ತಾರೆ? ಅವರ ಭವಿಷ್ಯದ ಕನಸುಗಳೇನು? ಅವರ ಆಸಕ್ತಿ ಏನು? ಈ ಎಲ್ಲ ಅಂಶಗಳನ್ನು ಅರಿತು ಸಾಗುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಪರಿಣಾಮ ಇಂದಿನ ಮಕ್ಕಳು ಮಾನಸಿಕ ಖಿನ್ನತೆ, ಕೀಳರಿಮೆಯಂತಹ ವ್ಯಾಧಿಗಳಿಗೆ ತುತ್ತಾಗುತ್ತಿದ್ದಾರೆ. ಅವರ ಆಯ್ಕೆ ಸರಿಯಾಗಿದ್ದಲ್ಲಿ ಪ್ರೋತ್ಸಾಹಿಸುವುದರಲ್ಲಿ ತಪ್ಪಿಲ್ಲ. ಸರಿಯಾಗಿರದಿದ್ದರೆ ಆಪ್ತ ಸಮಾಲೋಚನೆ, ಸಲಹೆ ಮೂಲಕ ತಿಳಿಹೇಳಿ. ಸಾಧಕ-ಬಾಧಕಗಳನ್ನು ವಿವರಿಸಿ. ಈ ವಿಷಯದಲ್ಲಿ ಎಂದಿಗೂ ಸಾಮಾಜಿಕ ಪ್ರತಿಷ್ಠೆ ಅಡ್ಡ ಬರದಿರಲಿ. ನಾಳೆ ಪರಿಸ್ಥಿತಿ ಕೈ ಮೀರಿದರೆ ಪಶ್ಚಾತ್ತಾಪಪಡುವವರು ನಾವೇ.

ಆರ್ಥಿಕವಾಗಿ, ಸಾಮಾಜಿಕವಾಗಿ ಒಂದಿಷ್ಟು ಬಲಿಷ್ಠರಾದ ತಕ್ಷಣ ನಾವು ಯಶಸ್ವಿಯಾಗಿದ್ದೇವೆ ಎಂದುಕೊಳ್ಳುವುದು ತಪ್ಪು. ವ್ಯಕ್ತಿತ್ವ ವಿಕಸನ ವಿಚಾರದಲ್ಲೂ ನಾವು ಮತ್ತು ನಮ್ಮ ಮಕ್ಕಳು ಬಲಿಷ್ಠರಾಗಬೇಕು. ಅವರ ಮಾನಸಿಕ ಸ್ವಾಸ್ಥ್ಯ ಸರಿಯಾಗಿದ್ದಲ್ಲಿ ಎಲ್ಲವೂ ಸಾಧ್ಯ. ಆ ನಿಟ್ಟಿನಲ್ಲಿ ನಮ್ಮ ನಡವಳಿಕೆ ಇರಬೇಕು. ವಿದ್ಯಾರ್ಥಿಹಂತದಲ್ಲಿ ಮಕ್ಕಳು ಎಲ್ಲೋ ಒಂದೆಡೆ ವೈಫಲ್ಯ ಕಾಣುತ್ತಾರೆ ಅಂದುಕೊಳ್ಳಿ. ಆಗ ಅವರನ್ನು ಬೈಯ್ಯದೆ ಅಧೀರರನ್ನಾಗಿಸದೆ, ‘ಪರವಾಗಿಲ್ಲ, ಮತ್ತೆ ಯತ್ನ ಮಾಡು’ ಎಂದು ಹುರಿದುಂಬಿಸಿ ಬೆನ್ನು ತಟ್ಟಿದರೆ ಅವರ ಯತ್ನ ಫಲಿಸುವುದರಲ್ಲಿ ಎರಡು ಮಾತಿಲ್ಲ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ನಮ್ಮದು. ಅವರಲ್ಲಿನ ಸೃಷ್ಟಿಶೀಲತೆಯನ್ನು ಹೆಕ್ಕಿ ತೆಗೆಯುವ ಮತ್ತು ಅದಕ್ಕೆ ನೀರೆರೆಯುವ ಕರ್ತವ್ಯ ಪಾಲಕರದು. ಕೌಶಲಗಳ ಪರಿಚಯದ ಜತೆಗೆ ಅವರ ಆಸಕ್ತಿದಾಯಕ ಕ್ಷೇತ್ರವನ್ನು ಅರಿತು ಅವಕಾಶ ಕಲ್ಪಿಸುವುದು ಕೂಡ ನಮ್ಮ ಕೆಲಸ.

ಹತಾಶೆಯ ಸೋಂಕು ಮಕ್ಕಳಿಗೆ ತಟ್ಟದಿರಲಿ. ಗೆಲುವಿನ ಗುರಿ ಮತ್ತು ಸತತ ಯತ್ನ ಮಾಡಬೇಕೆನ್ನುವ ಛಲ ಅವರದ್ದಾಗಬೇಕು. ಮಕ್ಕಳನ್ನು ವ್ಯಾಖ್ಯಾನಿಸುವ ನಮ್ಮ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಇತರ ಮಕ್ಕಳ ಜತೆ ಹೋಲಿಕೆ ಬೇಡ. ಅವರ ಜತೆ ಸ್ನೇಹಿತರಂತೆ ವರ್ತಿಸಿದಲ್ಲಿ ಅವರ ಮಾನಸಿಕ ತುಮುಲಗಳನ್ನು ಅರಿಯಲು ಸಾಧ್ಯ. ಅವರ ಚಲನವಲನಗಳ ಮೇಲೆ ನಿಗಾ ಇಡುವುದು, ಅವರಿಗೆಂದೇ ಒಂದಿಷ್ಟು ಸಮಯ ಮೀಸಲಿರಿಸುವುದು, ತನ್ನ ಮನೆ ಮಂದಿ ತನ್ನ ಜತೆಗಿದ್ದಾರೆ ಎನ್ನುವ ಆಪ್ತ ಭಾವವನ್ನು ಅವರಲ್ಲಿ ಬೇರೂರುವ ಹಾಗೆ ಮಾಡಿದಲ್ಲಿ ನಮ್ಮ ನಾಳಿನ ಪ್ರಜೆಗಳು ಹೆಮ್ಮೆಯ ಪುತ್ರರಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಎಂತಹದೇ ಸವಾಲು ಎದುರಾದಾಗಲೂ ಸಮರ್ಥವಾಗಿ ನಿಭಾಯಿಸಬಲ್ಲ ಶಕ್ತಿ ತುಂಬಿದಲ್ಲಿ ಪಾಲಕರಾದ ನಮ್ಮ ಜವಾಬ್ದಾರಿ ಮತ್ತು ಸ್ಥಾನ ಸಾರ್ಥಕವಾಗುತ್ತದೆ. ಎಲ್ಲರೂ ಆ ನಿಟ್ಟಿನಲ್ಲಿ ಯೋಚಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net