ಮಾನಸಿಕ ಆರೋಗ್ಯಕ್ಕೆ ಬೇಕು ಆರೋಗ್ಯಕರ ವಾತಾವರಣ...

Fish
Published on

| ರೇಖಾ ಬೆಳವಾಡಿ ಆಪ್ತ ಸಲಹೆಗಾರರು

ಒಂದು ಸಣ್ಣ ಕಥೆ.. ಹುಡುಗನೊಬ್ಬ ನದಿಯಿಂದ ಪುಟ್ಟ ಮೀನೊಂದನ್ನು ಹಿಡಿದು ತಂದು ಮನೆಯಲ್ಲಿದ್ದ ಸಣ್ಣ ಗಾಜಿನ ಪಾತ್ರೆಯಲ್ಲಿ ಹಾಕುತ್ತಾನೆ. ಬಹಳ ಎಚ್ಚರದಿಂದ ಮೀನಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕುತ್ತಾನೆ.

ಸಣ್ಣ ಸಣ್ಣ ನುಣುಪಾದ ದುಂಡಗಿನ ಕಲ್ಲುಗಳು, ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳನ್ನು ಗಾಜಿನ ಪಾತ್ರೆಯಲ್ಲಿ ಇರಿಸುತ್ತಾನೆ. ಮೀನು ಚುರುಕಾಗಿ ಈಜುತ್ತಿರುವುದನ್ನು ನೋಡಿ ಹುಡುಗ ತಾನೂ ಖುಷಿಪಡುತ್ತಾನೆ. ಜವಾಬ್ದಾರಿಯಿಂದ ಮೀನಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಅದನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಎಂದು ತನ್ನ ಮೇಲೆ ತಾನೇ ಸಂತೋಷ ಪಡುತ್ತಾನೆ.

ಸ್ವಲ್ಪ ದಿನಗಳಿಂದ ಮೀನು ತಾನು ಹಾಕಿದ ಊಟ ಮಾಡುತ್ತಿಲ್ಲ. ಮೊದಲಿನ ಚುರುಕಿಲ್ಲ, ಏಕೋ ಮಂಕಾಗಿದೆ ಎಂದು ತಿಳಿದು ಹುಡುಗ ಮೀನನ್ನು ಆ ಗಾಜಿನ ಪಾತ್ರೆಯಿಂದ ತೆಗೆದು ಮತ್ತೊಂದು ಗಾಜಿನ ಪಾತ್ರೆಯಲ್ಲಿ ಇರಿಸಿ ಉಪಚರಿಸುತ್ತಾನೆ.

ಸ್ವಲ್ಪ ಸಮಯದ ನಂತರ ಮೀನು‌ ಸುಧಾರಿಸಿಕೊಂಡು‌ ಮತ್ತೆ ಮೊದಲಿನಂತೆ ಚುರುಕಾಗುತ್ತದೆ. ಹುಡುಗ ಮೀನನ್ನು ಮತ್ತೆ ಮೊದಲಿದ್ದ ಗಾಜಿನ ಪಾತ್ರೆಗೆ ಹಾಕುತ್ತಾನೆ ಮತ್ತು ಅಲಂಕಾರಿಕ ವಸ್ತುಗಳನ್ನು ಬದಲಿಸುತ್ತಾನೆ.

ಸ್ವಲ್ಪ ದಿನಗಳ ಬಳಿಕ ಮೀನು ಮತ್ತೆ ಮಂಕಾಗಿಬಿಡುತ್ತದೆ. ಹುಡುಗ ಮತ್ತೆ ಮೀನನ್ನು ಆ ಗಾಜಿನ ಪಾತ್ರೆಯಿಂದ ತೆಗೆದು ಮತ್ತೊಂದೆಡೆ ಶುಶ್ರೂಷೆ ಮಾಡುತ್ತಾನೆ. ಮೀನು‌ ಮತ್ತೆ ಚುರುಕಾಗುತ್ತದೆ. ಪುನಃ ಮೀನನ್ನು ಮೊದಲಿದ್ದ ಗಾಜಿನ ಪಾತ್ರೆಯಲ್ಲಿ ಬಿಡುತ್ತಾನೆ. ಹಿಂದಿನಂತೆ ಮತ್ತೆ ಮೀನು ಸ್ವಲ್ಪ ದಿನಗಳ ಬಳಿಕ ಮಂಕಾಗಿಬಿಡುತ್ತದೆ. ಇದನ್ನು ಕಂಡು ಹುಡುಗ ಏಕೆ ಹೀಗಾಗುತ್ತಿದೆ? ಎಲ್ಲಿ? ಏನು ತಪ್ಪಾಗುತ್ತಿದೆ ಎಂದು ಚಿಂತಿತನಾಗುತ್ತಾನೆ.

ಪದೇಪದೆ ಹೀಗಾಗುತ್ತಿರಲು ಕಾರಣವೇನಿರಬಹುದು? ನೀವೂ ಒಮ್ಮೆ ಯೋಚಿಸಿ!!

* ಮೀನಿನಲ್ಲೇ ದೋಷವಿದೆಯೇ?

* ಗಾಜಿನ ಪಾತ್ರೆಯಲ್ಲಿ ದೋಷವಿದೆಯೇ?

* ಮತ್ತಾವ ಅಂಶಗಳು ಕಾರಣವಿರಬಹುದು?

ಈ ಕೆಳಗಿನ ಅಂಶಗಳನ್ನು ಒಮ್ಮೆ ಗಮನಿಸಿ

ಮೀನು ಮಂಕಾದಾಗ ಹುಡುಗ ಮೀನನ್ನು‌ ಮಾತ್ರವೇ ಉಪಚರಿಸುತ್ತಾನೆ. ಆದರೆ ಬಹಳ‌ ಮುಖ್ಯವಾದ ಗಾಜಿನ ಪಾತ್ರೆಯಲ್ಲಿದ್ದ ನೀರನ್ನು ಬದಲಿಸಿರುವುದಿಲ್ಲ. ಮತ್ತೊಂದು ವಾತಾವರಣದಲ್ಲಿ ಮೀನು ಸುಧಾರಿಸಿಕೊಂಡರೂ, ಮತ್ತೆ ಮೊದಲಿನ ವಾತಾವರಣ (ಕಲುಷಿತಗೊಂಡ ನೀರಿದ್ದ ಗಾಜಿನ ಪಾತ್ರೆಗೆ) ಸೇರುತ್ತಿದ್ದ ಕಾರಣ ಮೀನು ಪುನಃ ಮಂಕಾಗಿಬಿಡುತ್ತದೆ. ಅದರ ಆರೋಗ್ಯದಲ್ಲಿ ಏರುಪೇರು ಕಾಣುತ್ತದೆ.

ಮೀನು ಸಂಪೂರ್ಣವಾಗಿ ಗುಣಮುಖವಾಗಲು ಮೀನಿನ ಶುಶ್ರೂಷೆಯೊಂದಿಗೆ, ಗಾಜಿನ ಪಾತ್ರೆಯಲ್ಲಿದ್ದ ನೀರನ್ನು ಬದಲಿಸಿ ಗುಣಮಟ್ಟದ ನೀರನ್ನು ಒದಗಿಸಿ ಆರೋಗ್ಯಕರ ವಾತಾವರಣ ನಿರ್ಮಿಸುವುದೂ ಮುಖ್ಯವಾಗಿತ್ತು. ಇದು ಹುಡುಗನ ಗಮನಕ್ಕೆ ಬಾರದೇ ಹೋಯಿತು. ಇದು ಸಹ ಹುಡುಗನ ಜವಾಬ್ದಾರಿ.

ಮೀನಿಗೆ ನೀರೇ ಜೀವಾಳ. ಮೀನಿನ ಉತ್ತಮ ಬದುಕಿಗೆ, ಮೀನು ಚಟುವಟಿಕೆಯಿಂದಿರಲು, ಇತರರೊಂದಿಗೆ ಸ್ಪಂದಿಸಲು ಆರೋಗ್ಯಕರ ಪೌಷ್ಟಿಕ ವಾತಾವರಣ ಬಹಳ ಅಗತ್ಯ. ಇದು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ ಎನಿಸುವುದಿಲ್ಲವೇ?

ಇಲ್ಲಿ ಮೀನು ಪ್ರತಿಯೊಬ್ಬ ಮನುಷ್ಯ ಹಾಗೂ ನೀರು ನಾವಿರುವ ವಾತಾವರಣದ ( ಕುಟುಂಬ ಮತ್ತು ಸಮಾಜ) ಹಾಗೆ. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಹಾಗೂ ಸವಾಲುಗಳು ಎದುರಾಗುತ್ತವೆ, ಅದು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ಅಥವಾ ಸಾಮಾಜಿಕವಾಗಿ ಇತ್ಯಾದಿ ಇರಬಹುದು.

ಕಹಿ ಘಟನೆಗಳು/ ಸಮಸ್ಯೆಗಳು, ಮಾನಸಿಕ ಆಘಾತಗಳು ಅನೇಕರ ಮನಸಿನಲ್ಲಿ ದೀರ್ಘ ಕಾಲದ ಗಾಯವನ್ನುಂಟುಮಾಡಿರುತ್ತದೆ. ಇದರಿಂದ..
* ಕೀಳರಿಮೆ ಉಂಟಾಗಿರಬಹುದು
* ಆತ್ಮವಿಶ್ವಾಸ ಕುಗ್ಗಿರುತ್ತದೆ.
* ತಮ್ಮ ಸಾಮರ್ಥ್ಯದ ಮೇಲೆ ಅಪನಂಬಿಕೆ ಉಂಟಾಗಿರಬಹುದು.
* ಖಿನ್ನತೆ (depression)
* ಹೆಚ್ಚಿನ ಆತಂಕ ( Anxiety) ಯನ್ನು ಅನುಭವಿಸುತ್ತಿರುತ್ತಾರೆ.
* ಯಾವುದರಲ್ಲೂ ಆಸಕ್ತಿ ಇಲ್ಲದಂತಾಗುತ್ತದೆ.

ಪರಿಣಾಮವಾಗಿ ಸಮಾಜದಿಂದ ದೂರವಾಗಿ ಬಿಡುತ್ತಾರೆ. ಹೀಗಿರುವಾಗ, ಮಾನಸಿಕ ತಜ್ಞರ ಸಹಾಯ ಪಡೆದುಕೊಳ್ಳುವುದು ಉತ್ತಮ. ಮಾನಸಿಕ‌ ತಜ್ಞರ ಹಾಗೂ ಆಪ್ತಸಲಹೆ/ ಮನೋಚಿಕಿತ್ಸೆ ಕಾರಣ ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ಕಾಣಲು ಸಾಧ್ಯ.

ಮಾನಸಿಕವಾಗಿ ದುರ್ಬಲಗೊಂಡವರು ಸಮಸ್ಯೆ / ಪರಿಸ್ಥಿತಿಯಿಂದ ಸುಧಾರಿಸಿಕೊಂಡು ಹೊರಬರಲು ಅಥವಾ ನಿರ್ವಹಣೆಯ ಕ್ರಮಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಬಹಳ ಸಮಯ ಹಿಡಿದಿರುತ್ತದೆ.

ಮಾನಸಿಕವಾಗಿ ಚೇತರಿಕೆ ಹೊಂದುತ್ತಿರುವಾಗ ಮತ್ತು ನಂತರ ಕುಟುಂಬ ಹಾಗೂ ಸಮಾಜದ ಪಾತ್ರ ಬಹಳ ಮುಖ್ಯ. ಈ ಹಂತದಲ್ಲಿ ಅಗತ್ಯವಿದ್ದಲ್ಲಿ ಕುಟುಂಬದ ಆಪ್ತಸಮಾಲೋಚನೆ ಸಹ ಮುಖ್ಯವಾಗುತ್ತದೆ. ಇದು ವ್ಯಕ್ತಿ ‌ಮತ್ತು ಕೌಟುಂಬಿಕ ಸ್ವಾಸ್ಥ್ಯಕ್ಕೆ ಸಹಕಾರಿ. ಮಾನಸಿಕ ಚೇತೋಹಾರಿ ವಾತಾವರಣ ನಿರ್ಮಿಸಲು ಕೂಡ ಸಹಾಯಕಾರಿ.

ಹಾಗಾದರೆ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕುಟುಂಬದ/ ಸಮಾಜದ ಪಾತ್ರ.
* ಸುರಕ್ಷತೆಯ ಭಾವನೆ (Sense of safety) ಮೂಡಿಸುವುದು.

* ಶಾಂತತೆ ಕಾಪಾಡುವುದು.

* ಒಪ್ಪಿಗೆ (Acceptances Important)
- ವ್ಯಕ್ತಿಯು ಸ್ವಯಂ ಸಂಶಯ ಮತ್ತು ಆತಂಕದಿಂದ ಹೊರಬಂದು ತಮ್ಮ ಗುರಿ ಮುಟ್ಟಲು ಸಹಕಾರಿ.

* ಪೌಷ್ಟಿಕ ವಾತಾವರಣ ನಿರ್ಮಿಸಿ
- ಸದಾ ವ್ಯಕ್ತಿಯ ದುರ್ಬಲತೆಯ ಬಗ್ಗೆ ಮಾತನಾಡುವುದಕ್ಕಿಂತಲೂ, ವ್ಯಕ್ತಿಯ ಸಬಲತೆಗಳು, ಸಾಮರ್ಥ್ಯಗಳು, ಸವಾಲುಗಳನ್ನು ಎದುರಿಸಿದ ರೀತಿ ಬಗ್ಗೆ ಮಾತನಾಡುವುದು ಉತ್ತಮ.

* ಆತ್ಮವಿಶ್ವಾಸ ಹೆಚ್ಚಿಸುವುದು

* ಧನಾತ್ಮಕತೆ ವರ್ತನೆ ( positive attitude)

* ವ್ಯಕ್ತಿಯ ಬದಲಾದ ನವೀನ ಧನಾತ್ಮಕ ವರ್ತನೆಗಳನ್ನು ಗಮನಿಸಿ. ಅವರ ಹೊಸ ಆಲೋಚನೆಗಳು, ಆಯ್ಕೆಗಳ ‌ಮೇಲೆ ಗೌರವವಿರಲಿ.

* ಮೆಚ್ಚುಗೆ ವ್ಯಕ್ತಪಡಿಸಿ.

* ನಗು ಹಾಗೂ ತಿಳಿ ವಾತಾವರಣ ಇರಲಿ

* ಮುಕ್ತಮಾತುಕತೆ ಉತ್ತೇಜಿಸಿ.

ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಮೀನು ಮತ್ತು ವಾತಾವರಣ. ಆರೋಗ್ಯಕರ ವಾತಾವರಣದ ಪ್ರಾಮುಖ್ಯತೆ ಬಗ್ಗೆ ಈಗಾಗಲೇ ಓದಿದ್ದೇವೆ. ಮೀನಿನ ವಿಚಾರಕ್ಕೆ ಬಂದರೆ ಕಥೆಯಲ್ಲಿದ್ದ ಮೀನಿಗೆ ತನಗೆ ಯಾವ ಅಂಶ ಪದೇಪದೆ ಆರೋಗ್ಯ ತಪ್ಪಿಸುತ್ತಿದೆ ಎಂದು ತಿಳಿದಿದ್ದರೂ ಮತ್ತೆ ಮತ್ತೆ ಕಲುಷಿತ ನೀರಿಗೆ (ವಾತಾವರಣಕ್ಕೆ) ಹೋಗುವುದಿಲ್ಲ ಎಂದು ಹುಡುಗನಿಗೆ ಹೇಳಲಾಗಲಿಲ್ಲ. ಕಾರಣ ಅದು ಮೂಕ‌ಪ್ರಾಣಿ.

ಆದರೆ ಮಾನವರು ಅನಾರೋಗ್ಯಕರ/ ವಿಷಕಾರಿ ವಾತಾವರಣಕ್ಕೆ, ಹಿಂದಿರುಗುವುದಿಲ್ಲ. ವಿಷಕಾರಿ ಜನರಿಂದ ದೂರವಿದ್ದು ಆರೋಗ್ಯವಾಗಿ ಇರುತ್ತೇವೆ ಎಂದು ನಿರ್ಧರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ಅನೇಕರು (ಮೀನಿನಂತೆ) ಅನಾರೋಗ್ಯಕರ ವಾತಾವರಣದಲ್ಲಿ (ಕುಟುಂಬದವರು, ಸಮಾಜ, ಚುಚ್ಚುಮಾತುಗಳು, ಆತ್ಮವಿಶ್ವಾಸ ಕುಗ್ಗಿಸುವ ವರ್ತನೆಗಳು, ನಿರ್ಲಕ್ಷ್ಯ) ಇರುವುದು ತಿಳಿದಿದ್ದರೂ ಯಾವುದೇ ಕ್ರಮ‌ಕೈಗೊಳ್ಳುದೇ ಇರಬಹುದು.

ಆದರೆ ಧೈರ್ಯದಿಂದ ಆರೋಗ್ಯಕರ ವಾತಾವರಣದಲ್ಲಿರುವ ಆಯ್ಕೆ ಮಾಡಿ ಮತ್ತು ಅದರ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಉತ್ತಮ. ಇದರ ಬಗ್ಗೆ ತಿಳಿದುಕೊಂಡು ಪರಿಸ್ಥಿತಿಗಳಿಗೆ ಸಜ್ಜಾಗಿರಿ. ಇದು ಖಂಡಿತವಾಗಿಯೂ ಸ್ವಾರ್ಥವಲ್ಲ. ಇದು ನಿಮ್ಮ‌ ಆಲೋಚನೆ, ನಿರ್ಧಾರ, ಬದುಕಿಗೆ ನೀವು ಸಲ್ಲಿಸುವ ಗೌರವ.

ಆದ ಗಾಯವನ್ನು ಪದೇಪದೆ ಮುಟ್ಟುತ್ತಿದ್ದರೆ, ಗಾಯ ಮಾಯಲು ಬಹಳ ಕಾಲ ತೆಗೆದುಕೊಳ್ಳಬಹುದು ಅಥವಾ ಸೋಂಕು (infection) ಇನ್ನೂ ತೀವ್ರಗೊಳ್ಳಬಹುದು. ಸರಿಯಾಗಿ ಸಮಯಕ್ಕೆ ಸೂಕ್ತ ಶುಶ್ರೂಷೆ ಮತ್ತು ಆರೋಗ್ಯಪೂರಕ ವಾತಾವರಣ ಕಲ್ಪಿಸುವುದು ಹಿತಕಾರಿ ಅಲ್ಲವೇ??? ಒಮ್ಮೆ ಯೋಚಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net