Poisonous mushrooms: ಪ್ರಕೃತಿಯ ಒಡಲಿನಲ್ಲಿ ಅಡಗಿರುವ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ನೋಡಲು ಸಾಮಾನ್ಯವಾಗಿ ಕಾಣುವ ಪುಟ್ಟ ಅಣಬೆಯೊಳಗೆ ಎಂತಹ ಅಪಾಯಕಾರಿ ರಾಸಾಯನಿಕಗಳು ಅಡಗಿರಬಹುದು ಎಂಬುದಕ್ಕೆ ಅಮೆರಿಕದಲ್ಲಿ ಪತ್ತೆಯಾಗಿರುವ ಹೊಸ ಅಣಬೆಯೇ ಸಾಕ್ಷಿ. ಕಂದು ಬಣ್ಣದ ಛತ್ರಿಯಾಕಾರದ ಈ ಅಣಬೆ ಇದೀಗ ವಿಜ್ಞಾನ ಲೋಕದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ ಒಂದೇ ಅಣಬೆಯಲ್ಲಿ ಪತ್ತೆಯಾಗಿರುವ ಎರಡು ವಿಭಿನ್ನ ಗುಣದ ರಾಸಾಯನಿಕಗಳು.
ಅಮೆರಿಕದ ಫ್ಲೋರಿಡಾ ರಾಜ್ಯದ ಜೌಗು ಪ್ರದೇಶಗಳಲ್ಲಿ ಪತ್ತೆಯಾದ ಈ ಅಣಬೆಗೆ ಗ್ಯಾಲೆರಿನಾ ಇಂಡಿಕಾ ಎಂದು ಹೆಸರಿಡಲಾಗಿದೆ. ಸಂಶೋಧಕರು ಇದನ್ನು ಡಾರ್ಕ್ ಮ್ಯಾಜಿಕ್ ಮಶ್ರೂಮ್ ಎಂದು ಕರೆದಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಪ್ರತ್ಯೇಕ ಶಿಲೀಂಧ್ರ ಗುಂಪುಗಳಲ್ಲಿ ಕಂಡುಬರುವ ಎರಡು ಅಪಾಯಕಾರಿ ರಾಸಾಯನಿಕಗಳನ್ನು ಈ ಒಂದೇ ಪ್ರಭೇದ ಉತ್ಪಾದಿಸುತ್ತದೆ ಎಂಬುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.
ಈ ಅಣಬೆಯಲ್ಲಿರುವ ಪ್ರಮುಖ ಅಂಶಗಳೆಂದರೆ ಸೈಲೋಸೈಬಿನ್ ಮತ್ತು ಅಮಾಟಾಕ್ಸಿನ್ ಸೈಲೋಸೈಬಿನ್ ಮೆದುಳಿನ ಮೇಲೆ ಪರಿಣಾಮ ಬೀರುವ ಭ್ರಮೆಕಾರಕ ರಾಸಾಯನಿಕವಾಗಿದೆ. ಇದು ವ್ಯಕ್ತಿಯ ಗ್ರಹಿಕೆ, ಆಲೋಚನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಅನುಭವಿಸುವ ರೀತಿಯಲ್ಲಿ ಬದಲಾವಣೆ ಉಂಟುಮಾಡಬಹುದು.
ಇನ್ನೊಂದೆಡೆ ಅಮಾಟಾಕ್ಸಿನ್ ಅತ್ಯಂತ ವಿಷಕಾರಿ ಸಂಯುಕ್ತಗಳ ಗುಂಪಿಗೆ ಸೇರಿದೆ. ಇದು ದೇಹವನ್ನು ಸೇರಿದರೆ ಗಂಭೀರ ವಿಷಬಾಧೆ ಉಂಟಾಗಬಹುದು. ವಿಶೇಷವಾಗಿ ಯಕೃತ್ತಿನ ಮೇಲೆ ತೀವ್ರ ಪರಿಣಾಮ ಬೀರಿ ಜೀವಕ್ಕೂ ಅಪಾಯ ತಂದೊಡ್ಡಬಹುದು. ವಿಶ್ವದಾದ್ಯಂತ ಸಂಭವಿಸುವ ಮಾರಣಾಂತಿಕ ಅಣಬೆ ವಿಷಬಾಧೆಯ ಪ್ರಮುಖ ಕಾರಣಗಳಲ್ಲಿ ಅಮಾಟಾಕ್ಸಿನ್ ಕೂಡ ಒಂದು.
ಒಂದೇ ಅಣಬೆಯಲ್ಲಿ ಮನಸ್ಸಿನ ಗ್ರಹಿಕೆಯನ್ನು ಬದಲಿಸುವ ರಾಸಾಯನಿಕ ಹಾಗೂ ಜೀವಕ್ಕೆ ಅಪಾಯ ಉಂಟುಮಾಡುವ ವಿಷ ಇರುವುದು ಈ ಸಂಶೋಧನೆಯ ವಿಶೇಷತೆಯಾಗಿದೆ. ಈ ಹಿಂದೆ ಇಂತಹ ಎರಡು ರಾಸಾಯನಿಕಗಳು ಒಂದೇ ಅಣಬೆ ಪ್ರಭೇದದಲ್ಲಿ ಒಟ್ಟಿಗೆ ಕಂಡುಬಂದಿರುವುದಕ್ಕೆ ದಾಖಲೆ ಇರಲಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
2025ರಲ್ಲಿ ಫ್ಲೋರಿಡಾದ ಜೌಗು ಪ್ರದೇಶಗಳಲ್ಲಿ ಪಾಚಿ ಆವರಿಸಿದ್ದ ತಾಳೆಮರಗಳ ಕಾಂಡಗಳ ಮೇಲೆ ಈ ಅಣಬೆಗಳು ಬೆಳೆಯುತ್ತಿರುವುದು ಕಂಡುಬಂದಿತ್ತು. ರಸಾಯನಶಾಸ್ತ್ರಜ್ಞ ಹಾಗೂ ಶಿಲೀಂಧ್ರ ಜೀವಶಾಸ್ತ್ರಜ್ಞ ಆಂಡ್ರ್ಯೂ ಕುನಿಕ್ ಈ ಅಪರೂಪದ ಅಣಬೆಯನ್ನು ಗುರುತಿಸಿದ್ದರು. ಇದರ ಜೊತೆಗೆ ಸಂಬಂಧ ಹೊಂದಿರುವ ಇನ್ನೆರಡು ಅಣಬೆ ಪ್ರಭೇದಗಳನ್ನೂ ಅವರು ಪತ್ತೆಹಚ್ಚಿದ್ದಾರೆ. ಈ ಅಣಬೆಯ ಮೂಲ ಮಾದರಿಯಲ್ಲಿ ನೀಲಿ ಬಣ್ಣದ ಗಾಯದ ಗುರುತುಗಳೂ ಕಂಡುಬಂದಿದ್ದವು. ಅಣಬೆಗಳು ಏಕೆ ಇಂತಹ ರಾಸಾಯನಿಕಗಳನ್ನು ಉತ್ಪಾದಿಸುತ್ತವೆ ಎಂಬುದರ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಅಮಾಟಾಕ್ಸಿನ್ ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡಿರಬಹುದು ಎಂಬ ಊಹೆಯಿದ್ದರೂ, ಅದರ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.
ಸಂಶೋಧಕರ ಪ್ರಕಾರ, ಈ ಅಣಬೆಯ ಪೂರ್ವಜ ಶಿಲೀಂಧ್ರಗಳು ಇತರ ಪ್ರಭೇದಗಳೊಂದಿಗೆ ಡಿಎನ್ಎ ವಿನಿಮಯ ಮಾಡಿಕೊಂಡಿರಬಹುದು. ಈ ವಂಶವಾಹಿ ಬದಲಾವಣೆಗಳ ಪರಿಣಾಮವಾಗಿ ಎರಡು ವಿಭಿನ್ನ ರಾಸಾಯನಿಕಗಳನ್ನು ಉತ್ಪಾದಿಸುವ ಸಾಮರ್ಥ್ಯ ಅಣಬೆಯಲ್ಲಿ ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಶಿಲೀಂಧ್ರ ತಜ್ಞೆ ಆನ್ ಪ್ರಿಂಗಲ್ ಅವರ ಪ್ರಕಾರ, ಈ ಸಂಶೋಧನೆಯು ಶಿಲೀಂಧ್ರಗಳ ರಾಸಾಯನಿಕ ವೈವಿಧ್ಯತೆ ಮತ್ತು ಅವುಗಳ ಸಂಯೋಜನೆಯ ಕುರಿತು ವಿಜ್ಞಾನಿಗಳ ತಿಳುವಳಿಕೆಯನ್ನು ಮತ್ತಷ್ಟು ವಿಸ್ತರಿಸಿದೆ.
ಈ ಅಣಬೆಯನ್ನು ಸುಲಭವಾಗಿ ಗುರುತಿಸುವುದು ಸಾಧ್ಯವಿಲ್ಲ ಎಂಬುದು ಸಂಶೋಧಕರ ಪ್ರಮುಖ ಎಚ್ಚರಿಕೆ. ತರಬೇತಿ ಪಡೆದ ತಜ್ಞರಿಗೂ ಇಂತಹ ಅಣಬೆಗಳನ್ನು ಪ್ರತ್ಯೇಕಿಸುವುದು ಕಷ್ಟವಾಗಬಹುದು. ಹಾಗಾಗಿ ಕಾಡು, ತೋಟ ಅಥವಾ ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಅಪರಿಚಿತ ಅಣಬೆಗಳನ್ನು ಕುತೂಹಲಕ್ಕೆಂದು ಕಿತ್ತು ತಿನ್ನುವುದು ಅಪಾಯಕಾರಿ. ಈ ಸಂಶೋಧನೆಯ ವಿವರಗಳು 'Current Biology' ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ. ಪ್ರಕೃತಿಯಲ್ಲಿ ಇನ್ನೂ ಪತ್ತೆಯಾಗದ ಎಷ್ಟೋ ರಹಸ್ಯಗಳಿವೆ ಎಂಬುದನ್ನು ಈ ಪುಟ್ಟ ಅಣಬೆ ಮತ್ತೊಮ್ಮೆ ಸಾಬೀತುಪಡಿಸಿದೆ. ನೋಡಲು ಸಾಮಾನ್ಯವಾಗಿ ಕಾಣುವ ಪ್ರತಿಯೊಂದು ನೈಸರ್ಗಿಕ ವಸ್ತುವೂ ಸುರಕ್ಷಿತವಾಗಿರುತ್ತದೆ ಎಂದೇನಿಲ್ಲ ಎಂಬುದಕ್ಕೆ ಈ 'ಡಾರ್ಕ್ ಮ್ಯಾಜಿಕ್ ಮಶ್ರೂಮ್' ಎಚ್ಚರಿಕೆಯ ಉದಾಹರಣೆಯಾಗಿದೆ.