

Health Tips : ನಮ್ಮ ದೈನಂದಿನ ಅಡುಗೆಮನೆಯಲ್ಲಿ ರುಚಿ ಮತ್ತು ಪರಿಮಳಕ್ಕಾಗಿ ಬಳಸುವ ಬೆಳ್ಳುಳ್ಳಿಯು ಕೇವಲ ಮಸಾಲೆ ಪದಾರ್ಥವಲ್ಲ, ಅದೊಂದು ಅದ್ಭುತ ಔಷಧೀಯ ಗುಣಗಳ ಖಜಾನೆಯಾಗಿದೆ. ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6 ಹಾಗೂ ಅಲ್ಪ ಪ್ರಮಾಣದಲ್ಲಿ ವಿಟಮಿನ್ ಇ ಮತ್ತು ಕೆ ಅಂಶಗಳಿವೆ. ಅಲ್ಲದೆ ಪೊಟ್ಯಾಸಿಯಮ್, ಕಬ್ಬಿಣಾಂಶ (Iron), ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳನ್ನೂ ಇದು ಹೊಂದಿದೆ.
ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಆದರೆ, ಇಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಎಲ್ಲರೂ ಸೇವಿಸುವುದು ಸುರಕ್ಷಿತವಲ್ಲ; ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆ ಇರುವವರು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು.
ಬೆಳ್ಳುಳ್ಳಿಯು ರಕ್ತದೊತ್ತಡ (Blood pressure) ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಲು ಅತ್ಯಂತ ಸಹಕಾರಿಯಾಗಿದೆ. ಆದಾಗ್ಯೂ, ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಬೆಳ್ಳುಳ್ಳಿಯನ್ನು ಅತಿಯಾಗಿ ಅಥವಾ ಹಸಿಯಾಗಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ, ಬೆಳ್ಳುಳ್ಳಿಯು ನೈಸರ್ಗಿಕವಾಗಿ ರಕ್ತವನ್ನು ತೆಳುಗೊಳಿಸುವ (Natural blood thinner) ಗುಣವನ್ನು ಹೊಂದಿದೆ. ಹೀಗಾಗಿ, ಈಗಾಗಲೇ ರಕ್ತ ತೆಳುವಾಗಲು ವಾರ್ಫರಿನ್ (Warfarin) ಮತ್ತು ಆಸ್ಪಿರಿನ್ (Aspirin) ನಂತಹ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಬೆಳ್ಳುಳ್ಳಿ ಸೇವನೆಯನ್ನು ಕಡ್ಡಾಯವಾಗಿ ತಪ್ಪಿಸಬೇಕು; ಇಲ್ಲದಿದ್ದರೆ ದೇಹದಲ್ಲಿ ರಕ್ತಸ್ರಾವವಾಗುವ ಅಪಾಯ ಹೆಚ್ಚಾಗುತ್ತದೆ.
ಅದೇ ರೀತಿ, ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗುತ್ತಿರುವವರು ಆಪರೇಷನ್‌ಗೂ ಮುನ್ನ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ತಿನ್ನುವುದನ್ನು ನಿಲ್ಲಿಸಬೇಕು. ಬೆಳ್ಳುಳ್ಳಿಯಲ್ಲಿರುವ ರಕ್ತ ತೆಳುಗೊಳಿಸುವ ಗುಣದಿಂದಾಗಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಅತಿಯಾದ ರಕ್ತಸ್ರಾವ ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಗಿಂತ ಕೆಲವು ದಿನಗಳ ಮೊದಲೇ ಬೆಳ್ಳುಳ್ಳಿ ಸೇವನೆಗೆ ಕಡಿವಾಣ ಹಾಕುವುದು ಅತ್ಯಗತ್ಯ.
ಹೊಟ್ಟೆಯ ಹುಣ್ಣು (Ulcers), ಎದೆಯುರಿ (Heartburn) ಮತ್ತು ಗ್ಯಾಸ್ಟ್ರಿಕ್‌ನಂತಹ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಬೆಳ್ಳುಳ್ಳಿ ಸೇವನೆಯನ್ನು ಮಿತಿಗೊಳಿಸಬೇಕು. ವಿಶೇಷವಾಗಿ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಉರಿ ಹೆಚ್ಚಾಗಿ, ಈ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ, ಕಡಿಮೆ ರಕ್ತದೊತ್ತಡ (Low blood pressure) ಸಮಸ್ಯೆ ಇರುವವರೂ ಸಹ ಬೆಳ್ಳುಳ್ಳಿ ಬಳಕೆಯನ್ನು ಕಡಿಮೆ ಮಾಡಬೇಕು; ಏಕೆಂದರೆ ಬೆಳ್ಳುಳ್ಳಿಯು ರಕ್ತದೊತ್ತಡವನ್ನು ಮತ್ತಷ್ಟು ಇಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ತಲೆತಿರುಗುವಿಕೆ ಅಥವಾ ಸುಸ್ತಿಗೆ ಕಾರಣವಾಗಬಹುದು.
ಇನ್ನು ಕೆಲವರಿಗೆ ಬೆಳ್ಳುಳ್ಳಿ ತಿಂದ ನಂತರ ಚರ್ಮದ ತುರಿಕೆ, ಅಲರ್ಜಿ ಅಥವಾ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು; ಅಂತಹವರು ಬೆಳ್ಳುಳ್ಳಿಯಿಂದ ಸಂಪೂರ್ಣವಾಗಿ ದೂರವಿರುವುದು ಉತ್ತಮ. ಹಾಗೆಯೇ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಹೆಚ್ಚಾಗಿ ಅಥವಾ ಔಷಧೀಯ ರೂಪದಲ್ಲಿ ಸೇವಿಸುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆಯಬೇಕು.
ಒಟ್ಟಿನಲ್ಲಿ, ಅಮೃತವೂ ಅತಿಯಾದರೆ ವಿಷವಾಗುವಂತೆ, ಬೆಳ್ಳುಳ್ಳಿಯನ್ನು ನಿಮ್ಮ ದೇಹದ ಪ್ರಕೃತಿ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಮಿತವಾಗಿ ಬಳಸುವುದೇ ಜಾಣತನ, (ಏಜೆನ್ಸೀಸ್).