ಯಾವಾಗಲೂ ಸುಸ್ತು ಅನಿಸುತ್ತದೆಯೇ? ದೇಹವೇ ದುರ್ಬಲ ಅನ್ನೋ ಫೀಲ್​ ಆಗುತ್ತಾ? ಹಾಗಾದ್ರೆ ಈ ಮಾಹಿತಿ ನಿಮಗೆ...Tiredness

ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದಾಗ ಪ್ರಮುಖವಾಗಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ತೀವ್ರವಾದ ದಣಿವು (Chronic Fatigue). ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆದ ಹೊರತಾಗಿಯೂ ಸುಸ್ತು ಹಾಗೂ ಆಯಾಸ ಕಾಡುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಸಂಕೇತವಾಗಿರಬಹುದು.
Tiredness
ಸಾಂದರ್ಭಿಕ ಚಿತ್ರ
Published on: 

Tiredness : ದೇಹಕ್ಕೆ ಅತ್ಯಂತ ಅಗತ್ಯವಿರುವ ಜೀವಸತ್ವಗಳಲ್ಲಿ 'ವಿಟಮಿನ್ ಡಿ' (Vitamin D) ಪ್ರಮುಖ ಸ್ಥಾನ ಪಡೆದಿದೆ. ಮೂಳೆಗಳು ಮತ್ತು ಹಲ್ಲುಗಳು ಶಕ್ತಿಯುತವಾಗಿರಲು, ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಇದು ಅನಿವಾರ್ಯವಾಗಿದೆ. ಸೂರ್ಯನ ಬೆಳಕಿನ ಮೂಲಕ ನಮ್ಮ ಚರ್ಮದಲ್ಲಿ ಉತ್ಪತ್ತಿಯಾಗುವುದರಿಂದ ಇದನ್ನು 'ಸನ್‌ಶೈನ್ ವಿಟಮಿನ್' ಅಂತಾನೂ ಕರೆಯಲಾಗುತ್ತದೆ. ಆದರೆ, ಸೂರ್ಯನ ಬೆಳಕಿಗೆ ಸರಿಯಾಗಿ ಮೈಯೊಡ್ಡದಿರುವುದು, ಆಹಾರ ಪದ್ಧತಿ ಹಾಗೂ ಇತರೆ ಅನಾರೋಗ್ಯಕರ ಕಾರಣಗಳಿಂದಾಗಿ ದೇಹದಲ್ಲಿ ವಿಟಮಿನ್ ಡಿ ಮಟ್ಟವು ಕುಸಿಯುವ ಸಾಧ್ಯತೆಯಿದ್ದು, ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಸಿಕ್ಕಾಪಟ್ಟೆ ಸುಸ್ತು

ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದಾಗ ಪ್ರಮುಖವಾಗಿ ಕಾಣಿಸಿಕೊಳ್ಳುವ ಮೊದಲ ಲಕ್ಷಣವೆಂದರೆ ತೀವ್ರವಾದ ದಣಿವು (Chronic Fatigue). ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆದ ಹೊರತಾಗಿಯೂ ಸುಸ್ತು ಹಾಗೂ ಆಯಾಸ ಕಾಡುತ್ತಿದ್ದರೆ, ಅದು ವಿಟಮಿನ್ ಡಿ ಕೊರತೆಯ ಸಂಕೇತವಾಗಿರಬಹುದು. ಇದರೊಂದಿಗೆ ಮೂಳೆಗಳು ಮತ್ತು ಮಾಂಸಖಂಡಗಳಲ್ಲಿ ಸತತವಾಗಿ ನೋವು ಕಾಣಿಸಿಕೊಳ್ಳುವುದು ಕೂಡ ಗಮನಿಸಬೇಕಾದ ಮುಖ್ಯ ಅಂಶವಾಗಿದೆ. ಕೊರತೆಯು ತೀವ್ರಗೊಂಡಾಗ ಮೂಳೆಗಳ ಆರೋಗ್ಯ ದುರ್ಬಲಗೊಂಡು ಕೈ-ಕಾಲುಗಳಲ್ಲಿ ನೋವು ಹೆಚ್ಚಾಗುತ್ತದೆ ಮತ್ತು ಮೆಟ್ಟಿಲು ಹತ್ತುವಾಗ ಅಥವಾ ಕುರ್ಚಿಯಿಂದ ಏಳುವಾಗ ಸ್ನಾಯುಗಳ ದೌರ್ಬಲ್ಯ ಎದ್ದು ಕಾಣುತ್ತದೆ.

Also Read
ಕೂದಲು ಉದುರೋದು ನಿಲ್ಲಬೇಕು, ಚರ್ಮ ಹೊಳಿಬೇಕಾ?; ವಾರಕ್ಕೆ 2 ಬಾರಿ ತಿನ್ನಿ ಮೀನು..Health Tips
Tiredness

ಪದೇ ಪದೆ ಅನಾರೋಗ್ಯ

ಸಾಮಾನ್ಯವಾಗಿ ದೇಹದ ರೋಗನಿರೋಧಕ ಶಕ್ತಿಯು ಸರಿಯಾಗಿ ಕಾರ್ಯನಿರ್ವಹಿಸಲು ವಿಟಮಿನ್ ಡಿ ಅತ್ಯಂತ ಅವಶ್ಯಕ. ವಿಟಮಿನ್ ಡಿ ಮಟ್ಟ ಕಡಿಮೆಯಿರುವವರಲ್ಲಿ ಸೋಂಕುಗಳಿಗೆ ತುತ್ತಾಗುವ ಅಪಾಯವು ಹೆಚ್ಚಿರುತ್ತದೆ ಹಾಗೂ ಪದೇಪದೆ ಅನಾರೋಗ್ಯ ಕಾಡಬಹುದು. ಇನ್ನು ಕೆಲವರಲ್ಲಿ ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಕಂಡುಬರಬಹುದು. ಆದಾಗ್ಯೂ, ಕಬ್ಬಿಣಾಂಶದ ಕೊರತೆ, ಹಾರ್ಮೋನ್ ಬದಲಾವಣೆಗಳು ಮತ್ತು ಮಾನಸಿಕ ಒತ್ತಡ ಕೂಡ ಕೂದಲು ಉದುರಲು ಕಾರಣವಾಗಬಹುದು ಎಂಬುದು ಗಮನಾರ್ಹ.

ದೇಹದಲ್ಲಿ ಪೋಷಕಾಂಶಗಳ ಲಭ್ಯತೆಯು ಚರ್ಮದ ಆರೋಗ್ಯ ಮತ್ತು ಜೀವಕೋಶಗಳ ಕಾರ್ಯಚಟುವಟಿಕೆಯೊಂದಿಗೆ ನೇರ ಸಂಬಂಧ ಹೊಂದಿದೆ. ವಿಟಮಿನ್ ಡಿ ಕೊರತೆಯಿಂದಾಗಿ ಗಾಯಗಳು ವಾಸಿಯಾಗುವ ಪ್ರಕ್ರಿಯೆಯು ತಡವಾಗಬಹುದು. ಸಾಮಾನ್ಯಕ್ಕಿಂತ ಹೆಚ್ಚು ದಿನಗಳವರೆಗೆ ಗಾಯಗಳು ಒಣಗದೆ ಇದ್ದರೆ, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರೊಂದಿಗೆ ವಿಟಮಿನ್ ಡಿ ಕೊರತೆ ಮತ್ತು ಖಿನ್ನತೆಯ ಲಕ್ಷಣಗಳ ನಡುವೆಯೂ ನಂಟಿರುವುದನ್ನು ಕೆಲವು ಅಧ್ಯಯನಗಳು ಸೂಚಿಸಿವೆ, ಆದರೆ ಮನಸ್ಥಿತಿಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಇದು ಮಾತ್ರವೇ ಏಕೈಕ ಕಾರಣವಲ್ಲ.

ಸೂರ್ಯನ ಬೆಳಕಿಗೆ ಮೈಯೊಡ್ಡಿ

ವಿಟಮಿನ್ ಡಿ ಕೊರತೆಯನ್ನು ನಿವಾರಿಸಲು ಮತ್ತು ದೇಹದಲ್ಲಿ ಅದರ ಮಟ್ಟವನ್ನು ಕಾಯ್ದುಕೊಳ್ಳಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು. ಸುರಕ್ಷಿತವಾಗಿ ಸೂರ್ಯನ ಬೆಳಕಿಗೆ ಮೈಯೊಡ್ಡುವುದರಿಂದ ದೇಹದಲ್ಲಿ ಸ್ವಾಭಾವಿಕವಾಗಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಇದರೊಂದಿಗೆ ಸಾರ್ಡೀನ್ ಮುಂತಾದ ಕೊಬ್ಬಿನ ಮೀನುಗಳು, ಮೊಟ್ಟೆಯ ಹಳದಿ ಭಾಗ, ಹಾಲು ಹಾಗೂ ಧಾನ್ಯಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಆದಾಗ್ಯೂ, ಅತಿಯಾಗಿ ಬಿಸಿಲಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು ಮತ್ತು ಕೊರತೆಯ ಅನುಮಾನವಿದ್ದರೆ ವೈದ್ಯರ ಸಲಹೆಯ ಮೇರೆಗೆ ರಕ್ತ ಪರೀಕ್ಷೆ (Blood Test) ಮಾಡಿಸಿಕೊಳ್ಳುವುದು ಸೂಕ್ತ.

Also Read
ಪ್ರೋಟೀನ್ ಗೀಳಾ ಅಥವಾ ಆರೋಗ್ಯದ ಮಂತ್ರವಾ?: Gen Z ಯುವಜನರ ಹೊಸ ಆಹಾರ ಟ್ರೆಂಡ್! | Gen Z Protein Trend
Tiredness

ಆಯಾಸ, ಮೈಕೈ ನೋವು ಮತ್ತು ಕೂದಲು ಉದುರುವಿಕೆಯಂತಹ ಲಕ್ಷಣಗಳು ಮಾತ್ರವೇ ವಿಟಮಿನ್ ಡಿ ಕೊರತೆಯನ್ನು ಖಚಿತಪಡಿಸಲು ಸಾಕಾಗುವುದಿಲ್ಲ. ಯಾವುದೇ ಲಕ್ಷಣಗಳು ನಿರಂತರವಾಗಿ ಕಾಡುತ್ತಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಅತಿ ಅವಶ್ಯಕವಾಗಿದೆ.

ಸ್ವಯಂ ವೈದ್ಯಕೀಯ ಚಿಕಿತ್ಸೆ ಅಥವಾ ಕೇವಲ ಊಹೆಗಳ ಆಧಾರದ ಮೇಲೆ ಬೇಕಾಬಿಟ್ಟಿ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು. ಸರಿಯಾದ ವೈದ್ಯಕೀಯ ಮಾರ್ಗದರ್ಶನದೊಂದಿಗೆ ಜೀವನಶೈಲಿ ಮತ್ತು ಆಹಾರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, (ಏಜೆನ್ಸೀಸ್​).