ಮಲಗುವ ಮುನ್ನ ಫೋನ್ ಸ್ಕ್ರಾಲ್ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಈ ಕಹಿ ಸತ್ಯ ನಿಮಗೆ ತಿಳಿದಿರಲೇಬೇಕು! Smart Phone

ಮಲಗುವ ಮುನ್ನ ಫೋನ್ ಸ್ಕ್ರಾಲ್ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಈ ಕಹಿ ಸತ್ಯ ನಿಮಗೆ ತಿಳಿದಿರಲೇಬೇಕು! Smart Phone
ಮಲಗುವ ಮುನ್ನ ಫೋನ್ ಸ್ಕ್ರಾಲ್ ಮಾಡುವ ಅಭ್ಯಾಸವಿದೆಯೇ? ಹಾಗಾದರೆ ಈ ಕಹಿ ಸತ್ಯ ನಿಮಗೆ ತಿಳಿದಿರಲೇಬೇಕು! Smart Phone
Published on: 

ಪ್ರಮುಖ ಮುಖ್ಯಾಂಶಗಳು

  • ಮಲಗುವ ಮುನ್ನ ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಬೀರುತ್ತೆ ಎಚ್ಚರ
  • ಮೊಬೈಲ್ ಸ್ಕ್ರೀನ್​ನಿಂದ ಹೊರಹೊಮ್ಮುವ ಬೆಳಕಿನಿಂದ ನಿದ್ರೆಗೆ ಸಹಾಯ ಮಾಡುವ ಹಾರ್ಮೋನ್ ಉತ್ಪಾದನೆಗೆ ತೊಂದರೆ
  • ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಿದುಳಿಗೆ ವಿಶ್ರಾಂತಿ ಸಿಗದೆ ನಿದ್ರೆಯ ಗುಣಮಟ್ಟ ಕುಂಠಿತ
  • ರಾತ್ರಿ ವೇಳೆ ಫೋನ್ ನೋಡುವುದರಿಂದ ಮರುದಿನದ ಚುರುಕುತನ ಕಡಿಮೆಯಾಗಿ ಕೆಲಸಗಳಲ್ಲಿ ಆಯಾಸ ಉಂಟಾಗುವುದು
Smart Phone : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಕೈಯಲ್ಲೇ ಇರುವಂತಾಗಿದೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೀನಿ ಆದರೆ, ಮೊಬೈಲ್​ ಬಿಟ್ಟು ಇರಲಾರೆನು ಅನ್ನೋ ಜನರು ಕೂಡ ನಮ್ಮ ನಡುವೆ ಇದಾರೆ. ಅಷ್ಟರ ಮಟ್ಟಿಗೆ ಇಂದು ಮೊಬೈಲ್​ ಮನುಷ್ಯನನ್ನು ಆವರಿಸಿಕೊಂಡುಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ತಡರಾತ್ರಿವರೆಗೂ ಮೊಬೈಲ್​ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿದ್ರೆಗೆ ಜಾರುವ ಮುನ್ನ ಮೊಬೈಲ್ ನೋಡುವ ಅಭ್ಯಾಸ ಇಂದು ಸಾಮಾನ್ಯವಾಗಿದೆ. ಆದರೆ, ಹಾಸಿಗೆಯಲ್ಲಿ ಮಲಗಿ ಗಂಟೆಗಟ್ಟಲೆ ಸ್ಕ್ರೀನ್ ನೋಡುವುದು ನಿಮ್ಮ ಆರೋಗ್ಯದ ಮೇಲೆ ಅನೇಕ ಪರಿಣಾಮ ಬೀರಬಹುದು.
ಹೌದು, ನಿದ್ರೆ ಮಾಡುವ ಸಮಯದಲ್ಲಿ ನಮ್ಮ ದೇಹಕ್ಕೆ ವಿಶ್ರಾಂತಿ ಬೇಕಿರುವಾಗ, ಮೊಬೈಲ್ ಸ್ಕ್ರೀನ್‌ಗೆ ನಿಮ್ಮ ಕಣ್ಣು ಮತ್ತು ಮಿದುಳನ್ನು ಮೀಸಲಿಡುವುದು ನಿಜವಾಗಿಯೂ ಸರಿಯಲ್ಲ. ರಾತ್ರಿ ಸಮಯದಲ್ಲಿ ನಿರಂತರವಾಗಿ ಮೊಬೈಲ್ ಬಳಸುವುದರಿಂದ ನಿದ್ರೆ ಬರಲು ತಡವಾಗುವುದಷ್ಟೇ ಅಲ್ಲದೆ, ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮಲಗುವ ಮುನ್ನ ಮೊಬೈಲ್ ಬಳಸುವ ಅಭ್ಯಾಸ ನಿದ್ರೆಯ ಸಮಯ, ಮಿದುಳಿನ ವಿಶ್ರಾಂತಿ ಮತ್ತು ಮರುದಿನದ ಚಟುವಟಿಕೆಯ ಮೇಲೆ ಅನೇಕ ಪರಿಣಾಮ ಬೀರುತ್ತದೆ. ಈ ಅಭ್ಯಾಸವನ್ನು ಕಡಿಮೆ ಮಾಡಲು ಯಾವ ಸರಳ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ತಿಳಿದುಕೊಳ್ಳೊಣ.

ನಿದ್ರೆಗೆ ತೊಂದರೆ

ರಾತ್ರಿ ಮೊಬೈಲ್‌ ಬಳಸುವಾಗ ಸ್ಕ್ರೀನ್‌ನಿಂದ ಹೊರಹೊಮ್ಮುವ ಬೆಳಕು ಮಿದುಳಿಗೆ ಇನ್ನೂ ಎಚ್ಚರವಾಗಿರಬೇಕೆಂಬ ಸೂಚನೆಯನ್ನು ನೀಡಬಹುದು. ಇದರಿಂದ ದೇಹದಲ್ಲಿ ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ ಹಾರ್ಮೋನ್‌ (Melatonin Hormone) ಉತ್ಪಾದನೆ ಮತ್ತು ನಿದ್ರೆಯ ಸಮಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಣಾಮವಾಗಿ ನಿದ್ರೆ ಬರಲು ಹೆಚ್ಚು ಸಮಯ ಬೇಕಾಗಬಹುದು.

ನಿದ್ರೆಯ ಗುಣಮಟ್ಟ ಕಡಿಮೆಯಾಗಬಹುದು

ಮಲಗುವ ಮುನ್ನ ಸಾಮಾಜಿಕ ಜಾಲತಾಣಗಳು (social media), ರೀಲ್‌, ಗೇಮ್ ಅಥವಾ ಚಾಟ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮನಸ್ಸು ಚಟುವಟಿಕೆಯಿಂದಲೇ ಇರುತ್ತದೆ. ಇದರಿಂದ ದೇಹ ಹಾಸಿಗೆಯಲ್ಲಿದ್ದರೂ ಮೆದುಳು ವಿಶ್ರಾಂತಿ ಪಡೆಯಲು ಕಷ್ಟವಾಗಬಹುದು. ನಿದ್ರೆ ಬಂದರೂ ಆಗಾಗ ಎಚ್ಚರವಾಗುವುದು ಅಥವಾ ಬೆಳಗ್ಗೆ ಎದ್ದಾಗ ಪೂರ್ಣ ವಿಶ್ರಾಂತಿ ಸಿಗದಿರುವ ಅನುಭವ ಉಂಟಾಗಬಹುದು.

ಮುಂದಿನ ದಿನದ ಕಾರ್ಯಕ್ಷಮತೆಯ ಮೇಲೂ ಪರಿಣಾಮ

ಸಾಕಷ್ಟು ಮತ್ತು ಗುಣಮಟ್ಟದ ನಿದ್ರೆ ದೇಹಕ್ಕೆ ಮಾತ್ರವಲ್ಲ, ಮೆದುಳಿಗೂ ಅಗತ್ಯ. ರಾತ್ರಿ ತಡವಾಗಿ ಮೊಬೈಲ್ ಬಳಸುವುದರಿಂದ ನಿದ್ರೆ ಕಡಿಮೆಯಾದರೆ ಮರುದಿನ ಬೆಳಗ್ಗೆ ಎದ್ದಾಗ ದೇಹದಲ್ಲಿ ಆಯಾಸ, ಆಲಸ್ಯ ಮತ್ತು ಚುರುಕುತನದ ಕೊರತೆ ಕಾಣಿಸಿಕೊಳ್ಳಬಹುದು. ದಿನವಿಡೀ ನಿದ್ದೆ ಬರುತ್ತಿರುವಂತೆ ಅನಿಸುವುದು, ಯಾವುದೇ ಕೆಲಸ ಮಾಡಲು ಆಸಕ್ತಿ ಕಡಿಮೆಯಾಗುವುದು ಹಾಗೂ ಸಣ್ಣ ವಿಷಯಗಳಿಗೂ ಕಿರಿಕಿರಿ ಉಂಟಾಗುವುದು ಸಾಮಾನ್ಯ. ನಿದ್ರೆಯ ಕೊರತೆಯಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರಬಹುದು. ವಿದ್ಯಾರ್ಥಿಗಳಿಗೆ ಪಾಠದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಉದ್ಯೋಗಿಗಳಿಗೆ ಕೆಲಸದಲ್ಲಿ ತಪ್ಪುಗಳು ಹೆಚ್ಚಾಗುವುದು, ನಿರ್ಧಾರ ತೆಗೆದುಕೊಳ್ಳಲು ಸಮಯ ಬೇಕಾಗುವುದು ಹಾಗೂ ಕೆಲಸದ ವೇಗ ಕಡಿಮೆಯಾಗುವ ಸಾಧ್ಯತೆಯಿದೆ. ದಿನನಿತ್ಯದ ಚಟುವಟಿಕೆಗಳಲ್ಲೂ ಉತ್ಸಾಹ ಕಡಿಮೆಯಾಗಬಹುದು.

ಹಾಗಾದರೆ ಏನು ಮಾಡಬೇಕು?

ಮಲಗುವ ಮುನ್ನ ಮೊಬೈಲ್ ಬಳಸುವ ಅಭ್ಯಾಸವನ್ನು ಒಂದೇ ದಿನದಲ್ಲಿ ಸಂಪೂರ್ಣವಾಗಿ ಬಿಡುವುದು ಕಷ್ಟವಾಗಬಹುದು. ಆದ್ದರಿಂದ, ನಿಧಾನವಾಗಿ ಬಳಕೆಯ ಸಮಯವನ್ನು ಕಡಿಮೆ ಮಾಡುವುದು ಉತ್ತಮ. ಮಲಗುವ ಕನಿಷ್ಠ 30–60 ನಿಮಿಷಗಳ ಮುನ್ನ ಮೊಬೈಲ್, ಟ್ಯಾಬ್ಲೆಟ್ ಹಾಗೂ ಇತರ ಸ್ಕ್ರೀನ್‌ಗಳಿಂದ ದೂರವಿರಲು ಪ್ರಯತ್ನಿಸಿ. ಫೋನ್‌ ಅನ್ನು ಹಾಸಿಗೆಯ ಪಕ್ಕದಲ್ಲೇ ಇಟ್ಟುಕೊಳ್ಳುವ ಬದಲು ಸ್ವಲ್ಪ ದೂರದಲ್ಲಿ ಇಡುವುದು, ಪದೇಪದೇ ನೋಟಿಫಿಕೇಶನ್ ಪರಿಶೀಲಿಸುವ ಅಭ್ಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಮಾಜಿಕ ಜಾಲತಾಣಗಳು, ರೀಲ್ಸ್, ಗೇಮ್ಸ್ ಅಥವಾ ಹೆಚ್ಚು ಕುತೂಹಲ ಮೂಡಿಸುವ ವಿಡಿಯೋಗಳನ್ನು ನೋಡುವುದನ್ನು ತಪ್ಪಿಸುವುದು ಉತ್ತಮ.