ದೀಪಾವಳಿ ಹಬ್ಬದ ಅತಿಯಾದ ಸಿಹಿ, ನಿದ್ದೆಗೆಟ್ಟ ರಾತ್ರಿಗಳು ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರುತ್ತಾ? ತಜ್ಞರ ಎಚ್ಚರಿಕೆ ಏನು? Womens Health

ದೀಪಾವಳಿ ಹಬ್ಬ ಎಂದರೆ ಸಿಹಿ ತಿಂಡಿಗಳು, ಕರಿದ ತಿನಿಸುಗಳು, ಕುಟುಂಬದೊಂದಿಗೆ ಸಂಭ್ರಮ, ತಡರಾತ್ರಿಯವರೆಗೂ ಹರಟೆ ಮತ್ತು ನಿದ್ದೆಗೆಡುವ ದಿನಗಳು. ಹಬ್ಬದ ಸಂಭ್ರಮದಲ್ಲಿ ಆಹಾರ ಸೇವನೆ ಹಾಗೂ ದೈನಂದಿನ ದಿನಚರಿ ಬದಲಾಗುವುದು ಸಹಜ. ಆದರೆ ಹಬ್ಬ ಮುಗಿದ ಬಳಿಕ ಕೆಲವು ಮಹಿಳೆಯರಲ್ಲಿ ಸುಸ್ತು, ಹೊಟ್ಟೆ ಉಬ್ಬರ, ನಿದ್ರಾಹೀನತೆ, ಮನಸ್ಥಿತಿಯಲ್ಲಿ ಬದಲಾವಣೆ ಹಾಗೂ ಮುಟ್ಟಿನ ದಿನಚರಿಯಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಹಾಗಾದರೆ ಕೆಲವೇ ದಿನಗಳ ಹಬ್ಬದ ಆಚರಣೆ ಮಹಿಳೆಯರ ಹಾರ್ಮೋನ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? Womens Health
ದೀಪಾವಳಿ ಹಬ್ಬದ ಅತಿಯಾದ ಸಿಹಿ,ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರುತ್ತಾ?
ದೀಪಾವಳಿ ಹಬ್ಬದ ಅತಿಯಾದ ಸಿಹಿ,ಮಹಿಳೆಯರ ಋತುಚಕ್ರದ ಮೇಲೆ ಪರಿಣಾಮ ಬೀರುತ್ತಾ? WEB
Published on: 

WomensHealth : ದೀಪಾವಳಿ ಹಬ್ಬ ಎಂದರೆ ಸಿಹಿ ತಿಂಡಿಗಳು, ಕರಿದ ತಿನಿಸುಗಳು, ಕುಟುಂಬದೊಂದಿಗೆ ಸಂಭ್ರಮ, ತಡರಾತ್ರಿಯವರೆಗೂ ಹರಟೆ ಮತ್ತು ನಿದ್ದೆಗೆಡುವ ದಿನಗಳು. ಹಬ್ಬದ ಸಂಭ್ರಮದಲ್ಲಿ ಆಹಾರ ಸೇವನೆ ಹಾಗೂ ದೈನಂದಿನ ದಿನಚರಿ ಬದಲಾಗುವುದು ಸಹಜ. ಆದರೆ ಹಬ್ಬ ಮುಗಿದ ಬಳಿಕ ಕೆಲವು ಮಹಿಳೆಯರಲ್ಲಿ ಸುಸ್ತು, ಹೊಟ್ಟೆ ಉಬ್ಬರ, ನಿದ್ರಾಹೀನತೆ, ಮನಸ್ಥಿತಿಯಲ್ಲಿ ಬದಲಾವಣೆ ಹಾಗೂ ಮುಟ್ಟಿನ ದಿನಚರಿಯಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಬಹುದು. ಹಾಗಾದರೆ ಕೆಲವೇ ದಿನಗಳ ಹಬ್ಬದ ಆಚರಣೆ ಮಹಿಳೆಯರ ಹಾರ್ಮೋನ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ?

ಮಹಿಳೆಯರ ಋತುಚಕ್ರವು ಮೆದುಳು ಮತ್ತು ಅಂಡಾಶಯಗಳ ನಡುವಿನ ಹಾರ್ಮೋನ್ ಸಂಕೇತಗಳ ಸಮನ್ವಯದಿಂದ ನಿಯಂತ್ರಿಸಲ್ಪಡುತ್ತದೆ. ಈ ಪ್ರಕ್ರಿಯೆಯಲ್ಲಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಪ್ರಮುಖ ಪಾತ್ರ ವಹಿಸುತ್ತವೆ. ಒತ್ತಡ, ನಿದ್ರೆ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳು ಈ ಹಾರ್ಮೋನ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದು. ಆದರೆ ಕೆಲವೇ ದಿನ ಸಿಹಿ ತಿನ್ನುವುದು ಅಥವಾ ತಡರಾತ್ರಿಯವರೆಗೆ ಎಚ್ಚರವಾಗಿರುವುದರಿಂದಲೇ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ ಎಂದರ್ಥವಲ್ಲ. ದೀಪಾವಳಿ ಮುಗಿದ ಬಳಿಕ ದೇಹವನ್ನು ಶುದ್ಧೀಕರಿಸುವ ಹೆಸರಿನಲ್ಲಿ ವಿಶೇಷ ಡಿಟಾಕ್ಸ್ ಅಥವಾ ಹಾರ್ಮೋನ್ ರೀಸೆಟ್ ಮಾಡುವ ವೈದ್ಯಕೀಯ ಅಗತ್ಯವೂ ಇಲ್ಲ. ಬದಲಿಗೆ ಆರೋಗ್ಯಕರ ದಿನಚರಿಗೆ ಮರಳುವುದು ಮುಖ್ಯ.

ಇದನ್ನೂ ಓದಿ : ರಾತ್ರಿ ಲೇಟಾಗಿ ಊಟ ಮಾಡೋ ಮುನ್ನ ಎಚ್ಚರ, ಸದ್ದಿಲ್ಲದೇ ನಿಮ್ಮ ಆರೋಗ್ಯವನ್ನು ಕಾಡುವ ಕಾಯಿಲೆಗಳಿವು! Late Night Dinner

ದೀಪಾವಳಿ ಸಂದರ್ಭದಲ್ಲಿ ಲಡ್ಡು, ಜಿಲೇಬಿ, ಮೈಸೂರು ಪಾಕ್ ಸೇರಿದಂತೆ ವಿವಿಧ ಸಿಹಿತಿಂಡಿಗಳು ಹಾಗೂ ಕರಿದ ತಿಂಡಿಗಳ ಸೇವನೆ ಹೆಚ್ಚಾಗುತ್ತದೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚಿನ ಕ್ಯಾಲೊರಿ ಇರುವ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಇನ್ಸುಲಿನ್ ಸಂವೇದನೆ ಮತ್ತು ದೇಹದಲ್ಲಿನ ಉರಿಯೂತದ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಏಕೆಂದರೆ ಇನ್ಸುಲಿನ್ ಪ್ರತಿರೋಧವು ಈ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರಬಹುದು. ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರ ಸೇವನೆಯು ಚಯಾಪಚಯ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ತಡರಾತ್ರಿಯ ನಿದ್ದೆ ಹಾರ್ಮೋನ್ ಸಮತೋಲನ ಕೆಡಿಸುತ್ತಾ?

ಹಬ್ಬದ ಆಚರಣೆ, ಪ್ರಯಾಣ ಮತ್ತು ತಡರಾತ್ರಿಯ ಕಾರ್ಯಕ್ರಮಗಳಿಂದ ನಿದ್ರೆಯ ಸಮಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಸಾಕಷ್ಟು ನಿದ್ರೆ ದೇಹದ ಚೇತರಿಕೆ, ಮಾನಸಿಕ ಆರೋಗ್ಯ ಮತ್ತು ಹಾರ್ಮೋನ್ ಸಮತೋಲನಕ್ಕೆ ಅತ್ಯಗತ್ಯ. ಬಿ ಎಮ್​ ಸಿ ವುಮೆನ್ಸ್​ ಹೆಲ್ತ್​ ನಲ್ಲಿ ಪ್ರಕಟವಾದ ವಿಮರ್ಶಾತ್ಮಕ ಅಧ್ಯಯನದಲ್ಲಿ 35 ಸಂಶೋಧನೆಗಳನ್ನು ವಿಶ್ಲೇಷಿಸಲಾಗಿದ್ದು, ನಿದ್ರೆಯ ಸಮಸ್ಯೆಗಳು ಮತ್ತು ಋತುಚಕ್ರದ ಅಸ್ವಸ್ಥತೆಗಳ ನಡುವೆ ಸಂಬಂಧವಿರುವುದು ಕಂಡುಬಂದಿದೆ. ಆದರೆ ಕೆಲವೇ ದಿನ ನಿದ್ದೆಗೆಡುವುದರಿಂದ ಋತುಚಕ್ರದಲ್ಲಿ ಬದಲಾವಣೆ ಆಗಲೇಬೇಕು ಎಂದಿಲ್ಲ. ನಿರಂತರ ನಿದ್ರಾಹೀನತೆಯು ಸುಸ್ತು ಹೆಚ್ಚಿಸುವುದರ ಜತೆಗೆ ಮುಟ್ಟಿನ ಸಮಯದ ಅಸ್ವಸ್ಥತೆಗಳನ್ನೂ ತೀವ್ರಗೊಳಿಸಬಹುದು.

ಹಬ್ಬದ ಸಿದ್ಧತೆ, ಪ್ರಯಾಣದಿಂದ ಹೆಚ್ಚಾಗುವ ಒತ್ತಡ

ಹಬ್ಬದ ಸಿದ್ಧತೆ, ಖರೀದಿ, ಪ್ರಯಾಣ ಹಾಗೂ ರಜೆಯ ಬಳಿಕ ಮತ್ತೆ ಕೆಲಸಕ್ಕೆ ಮರಳುವ ಒತ್ತಡ ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು. ದೇಹದಲ್ಲಿನ ಒತ್ತಡ ಪ್ರತಿಕ್ರಿಯೆಯನ್ನು ನಿಯಂತ್ರಿಸುವ ಹೈಪೋಥಾಲಮಸ್-ಪಿಟ್ಯುಟರಿ-ಅಡ್ರಿನಲ್ ವ್ಯವಸ್ಥೆಯು ಸಂತಾನೋತ್ಪತ್ತಿ ಹಾರ್ಮೋನ್ ವ್ಯವಸ್ಥೆಯೊಂದಿಗೂ ಸಂಬಂಧ ಹೊಂದಿದೆ. ತೀವ್ರ ಅಥವಾ ದೀರ್ಘಕಾಲದ ಒತ್ತಡವು ಅಂಡೋತ್ಪತ್ತಿ ಮತ್ತು ಋತುಚಕ್ರದ ನಿಯಮಿತತೆಯ ಮೇಲೆ ಪರಿಣಾಮ ಬೀರಬಹುದು. 41 ಅಧ್ಯಯನಗಳನ್ನು ಒಳಗೊಂಡ ವ್ಯವಸ್ಥಿತ ವಿಮರ್ಶೆಯಲ್ಲಿ ಬಹುತೇಕ ಸಂಶೋಧನೆಗಳು ಮಾನಸಿಕ ಒತ್ತಡ ಮತ್ತು ಋತುಚಕ್ರದ ಅನಿಯಮಿತತೆಯ ನಡುವಿನ ಸಂಬಂಧವನ್ನು ಗುರುತಿಸಿವೆ. ಆದರೆ ಪ್ರತಿಯೊಬ್ಬ ಮಹಿಳೆಯ ದೇಹವೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಒಂದು ವಾರದ ಒತ್ತಡದಿಂದಲೇ ಮುಟ್ಟಿನ ದಿನಾಂಕ ಮುಂದೂಡಲ್ಪಡುತ್ತದೆ ಎಂದರ್ಥವಲ್ಲ.

ಕರುಳು, ಮೆದುಳು ಮತ್ತು ಹಾರ್ಮೋನ್‌ಗಳ ನಡುವಿನ ಸಂಬಂಧ

ಕರುಳು ಮತ್ತು ಮೆದುಳು ಪರಸ್ಪರ ನಿರಂತರ ಸಂಪರ್ಕದಲ್ಲಿರುತ್ತವೆ. ಇದನ್ನು ಗಟ್-ಬ್ರೈನ್ ಆಕ್ಸಿಸ್ ಎಂದು ಕರೆಯಲಾಗುತ್ತದೆ. ಆಹಾರ ಪದ್ಧತಿಯ ಬದಲಾವಣೆ, ನಿದ್ರೆಯ ಕೊರತೆ ಮತ್ತು ಒತ್ತಡವು ಜೀರ್ಣಕ್ರಿಯೆ ಹಾಗೂ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇವು ದೇಹದ ಚಯಾಪಚಯ ಮತ್ತು ಒಟ್ಟಾರೆ ಹಾರ್ಮೋನ್ ನಿಯಂತ್ರಣದೊಂದಿಗೂ ಸಂಬಂಧ ಹೊಂದಿವೆ. ಹೀಗಾಗಿ ಹಬ್ಬದ ಬಳಿಕ ಹಣ್ಣುಗಳು, ತರಕಾರಿಗಳು ಮತ್ತು ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಉತ್ತಮ. ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲಿತ ಆಹಾರ ಪದ್ಧತಿ ಅನುಸರಿಸುವುದರಿಂದ ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ : ಮಲಗುವ ಅರ್ಧ ಗಂಟೆಗೂ ಮುನ್ನ ಕುಡಿಯಿರಿ ಅರಿಶಿನ ಬೆರೆತ ಹಾಲು; ಈ ಅಭ್ಯಾಸದಿಂದ ಈ ಆರೋಗ್ಯ ಪ್ರಯೋಜನ ಖಂಡಿತ ನಿಮ್ಮ ಪಾಲು..Health Tips

ಯಾವಾಗ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಬೇಕು?

ಕೆಲವೊಮ್ಮೆ ಮುಟ್ಟಿನ ದಿನಾಂಕ ಸ್ವಲ್ಪ ಮುಂದೂಡಿಕೆಯಾಗುವುದು ಆತಂಕಪಡುವ ವಿಷಯವಾಗಿರಬೇಕಿಲ್ಲ. ಆದರೆ ಸತತವಾಗಿ ಹಲವು ತಿಂಗಳು ಮುಟ್ಟು ಕಾಣಿಸದಿದ್ದರೆ, ಅತಿಯಾದ ರಕ್ತಸ್ರಾವವಾಗುತ್ತಿದ್ದರೆ, ತೀವ್ರ ಹೊಟ್ಟೆನೋವು ಕಾಣಿಸಿಕೊಂಡರೆ ಅಥವಾ ಮೊಡವೆ ಹಾಗೂ ಅಸಾಮಾನ್ಯವಾಗಿ ಕೂದಲು ಬೆಳೆಯುವಂತಹ ಲಕ್ಷಣಗಳು ಮುಂದುವರಿದರೆ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಅಗತ್ಯ. ಪಿಸಿಒಎಸ್, ಥೈರಾಯ್ಡ್ ಸಮಸ್ಯೆ ಮತ್ತು ಎಂಡೊಮೆಟ್ರಿಯೊಸಿಸ್‌ನಂತಹ ಆರೋಗ್ಯ ಸಮಸ್ಯೆಗಳು ಋತುಚಕ್ರದಲ್ಲಿ ಬದಲಾವಣೆ ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಸ್ವಯಂ ಔಷಧ ಸೇವನೆ ಅಥವಾ ಕಠಿಣ ಆಹಾರ ಪದ್ಧತಿ ಅನುಸರಿಸುವ ಬದಲು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು.

ಹಾರ್ಮೋನ್ ಆರೋಗ್ಯ ಎಂದರೆ ಇಷ್ಟದ ಆಹಾರಗಳನ್ನು ತ್ಯಜಿಸುವುದು ಅಥವಾ ಪ್ರತಿದಿನ ಪರಿಪೂರ್ಣ ದಿನಚರಿ ಪಾಲಿಸುವುದಲ್ಲ. ಪೌಷ್ಟಿಕ ಆಹಾರ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ಮುಖ್ಯ. ಹಬ್ಬವನ್ನು ಆತಂಕವಿಲ್ಲದೆ ಸಂಭ್ರಮಿಸಿ, ಬಳಿಕ ನಿಧಾನವಾಗಿ ಆರೋಗ್ಯಕರ ದಿನಚರಿಗೆ ಮರಳುವುದು ಉತ್ತಮ. ಪರಿಪೂರ್ಣತೆಗಿಂತ ನಿರಂತರವಾಗಿ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದೇ ಮುಖ್ಯ, (ಏಜೆನ್ಸೀಸ್​).