ಎನರ್ಜಿ ಡ್ರಿಂಕ್ಸ್​ ಹೆಸರಲ್ಲಿ ನೀವು ಕುಡಿತ್ತಿರುವುದು ಕಂಪ್ಲೀಟ್​ ವಿಷ? ಅಧ್ಯಯನದಲ್ಲಿ ಬಯಲಾಯ್ತು ನಡುಕ ಹುಟ್ಟಿಸೋ ಸತ್ಯ! Enargy drinks

ಕೆಲಸದ ಒತ್ತಡ, ರಾತ್ರಿ ಪೂರ್ತಿ ಎಚ್ಚರವಿರುವುದು ಅಥವಾ ತಕ್ಷಣದ ಎನರ್ಜಿಗಾಗಿ 18ರಿಂದ 34 ವರ್ಷದ ಯುವಜನತೆ ಈ ಕೆಫೀನ್‌ಯುಕ್ತ ಪಾನೀಯಗಳಿಗೆ ದಾಸರಾಗುತ್ತಿದ್ದಾರೆ. ಆದರೆ, ನೀವು ರೀಚಾರ್ಜ್ ಆಗಲು ಕುಡಿಯುವ ಇದೇ ಕೆಫೀನ್‌ಗಳು ನಿಮ್ಮ ಹೃದಯಕ್ಕೆ ಸೈಲೆಂಟ್ ಕಿಲರ್ ಆಗಿ ಬದಲಾಗುತ್ತಿವೆಯಾ? ಇತ್ತೀಚಿನ ಜಾಗತಿಕ ಅಧ್ಯಯನವೊಂದು ಎನರ್ಜಿ ಡ್ರಿಂಕ್ಸ್ ಸೇವನೆಯಿಂದ ಯುವಜನರಲ್ಲಿ ಹೃದಯ ಸಂಬಂಧಿ ( Heart Attack ) ಮತ್ತು ಗಂಭೀರ ಹೃದ್ರೋಗಗಳ ಅಪಾಯ ದಿಢೀರ್ ಏರಿಕೆಯಾಗಿರುವ ಆತಂಕಕಾರಿ ಸತ್ಯವನ್ನು ಹೊರಹಾಕಿದೆ!Enargy drinks
ಎನರ್ಜಿ ಡ್ರಿಂಕ್ಸ್​ ಹೆಸರಲ್ಲಿ ನೀವು ಕುಡಿತ್ತಿರುವುದು ಕಂಪ್ಲೀಟ್​ ವಿಷ
ಎನರ್ಜಿ ಡ್ರಿಂಕ್ಸ್​ ಹೆಸರಲ್ಲಿ ನೀವು ಕುಡಿತ್ತಿರುವುದು ಕಂಪ್ಲೀಟ್​ ವಿಷAI image WEB
Published on: 

Enargy drink : ಕೆಲಸದ ಒತ್ತಡ, ರಾತ್ರಿ ಪೂರ್ತಿ ಎಚ್ಚರವಿರುವುದು ಅಥವಾ ತಕ್ಷಣದ ಎನರ್ಜಿಗಾಗಿ 18ರಿಂದ 34 ವರ್ಷದ ಯುವಜನತೆ ಈ ಕೆಫೀನ್‌ಯುಕ್ತ ಪಾನೀಯಗಳಿಗೆ ದಾಸರಾಗುತ್ತಿದ್ದಾರೆ. ಆದರೆ, ನೀವು ರೀಚಾರ್ಜ್ ಆಗಲು ಕುಡಿಯುವ ಇದೇ ಕೆಫೀನ್‌ಗಳು ನಿಮ್ಮ ಹೃದಯಕ್ಕೆ ಸೈಲೆಂಟ್ ಕಿಲರ್ ಆಗಿ ಬದಲಾಗುತ್ತಿವೆಯಾ? ಇತ್ತೀಚಿನ ಜಾಗತಿಕ ಅಧ್ಯಯನವೊಂದು ಎನರ್ಜಿ ಡ್ರಿಂಕ್ಸ್ ಸೇವನೆಯಿಂದ ಯುವಜನರಲ್ಲಿ ಹೃದಯ ಸಂಬಂಧಿ ( Heart Attack ) ಮತ್ತು ಗಂಭೀರ ಹೃದ್ರೋಗಗಳ ಅಪಾಯ ದಿಢೀರ್ ಏರಿಕೆಯಾಗಿರುವ ಆತಂಕಕಾರಿ ಸತ್ಯವನ್ನು ಹೊರಹಾಕಿದೆ!

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (AHA) ಬಿಡುಗಡೆ ಮಾಡಿರುವ ಸಂಶೋಧನೆಯಲ್ಲಿ ಕೆಫೀನ್ ಮತ್ತು ಇತರ ಉತ್ತೇಜಕ ಅಂಶಗಳನ್ನು ಹೊಂದಿರುವ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದ ಹೃದಯ ಸಮಸ್ಯೆಗಳ ವರದಿಗಳನ್ನು ವಿಶ್ಲೇಷಿಸಲಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಗೆ ಸಲ್ಲಿಕೆಯಾಗಿದ್ದ 28 ಸಾವಿರಕ್ಕೂ ಹೆಚ್ಚು ವರದಿಗಳನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಈ ವಿಶ್ಲೇಷಣೆಯಲ್ಲಿ ಹೃದಯಾಘಾತ, ಅಸಹಜ ಹೃದಯ ಬಡಿತ, ಎದೆನೋವು, ಹೃದಯ ಬಡಿತ ಹೆಚ್ಚಾಗುವುದು ಹಾಗೂ ಮೂರ್ಛೆ ಹೋಗುವಂತಹ ಸಮಸ್ಯೆಗಳನ್ನು ಪರಿಗಣಿಸಲಾಗಿದೆ.

ಕೆಫೀನ್ ಮತ್ತು ಇತರ ಉತ್ತೇಜಕ ಅಂಶಗಳಿರುವ ಉತ್ಪನ್ನಗಳಿಗೆ ಸಂಬಂಧಿಸಿದ ವರದಿಗಳಲ್ಲಿ, ಇಂತಹ ಅಂಶಗಳಿಲ್ಲದ ಉತ್ಪನ್ನಗಳ ವರದಿಗಳಿಗೆ ಹೋಲಿಸಿದರೆ ಹೃದಯ ಸಂಬಂಧಿ ಕಾಯಿಲೆ ಉಲ್ಲೇಖ ಸುಮಾರು 11 ಪಟ್ಟು ಹೆಚ್ಚಾಗಿ ಕಂಡುಬಂದಿದೆ. ಇದಲ್ಲದೆ, ವರದಿಯಾದ ಹೃದಯ ಸಂಬಂಧಿ ಘಟನೆಗಳಲ್ಲಿ ಸುಮಾರು ಶೇ.45ರಷ್ಟು ಪ್ರಕರಣಗಳು 18ರಿಂದ 34 ವರ್ಷದ ಯುವ ವಯಸ್ಕರಿಗೆ ಸಂಬಂಧಿಸಿದ್ದಾಗಿವೆ. ಆದರೆ ಇದು ಯುವಜನರಲ್ಲಿ ಶೇ.45ರಷ್ಟು ಮಂದಿಗೆ ಹೃದಯ ಸಮಸ್ಯೆ ಎದುರಾಗಿದೆ ಎಂದರ್ಥವಲ್ಲ.

ಎನರ್ಜಿ ಡ್ರಿಂಕ್ಸ್ ಸೇವನೆಯ ಬಳಿಕ ಎದೆನೋವು, ಹೃದಯ ಬಡಿತ ಹೆಚ್ಚಾಗುವುದು,
ಎನರ್ಜಿ ಡ್ರಿಂಕ್ಸ್ ಸೇವನೆಯ ಬಳಿಕ ಎದೆನೋವು, ಹೃದಯ ಬಡಿತ ಹೆಚ್ಚಾಗುವುದು,AI image WEB

ಎನರ್ಜಿ ಡ್ರಿಂಕ್ಸ್‌ನಲ್ಲಿರುವ ಅಂಶಗಳೇನು?

ಸಂಶೋಧನೆಯಲ್ಲಿ ಕೆಫೀನ್ ಮಾತ್ರವಲ್ಲದೆ ಮೆಥೈಲ್‌ಕ್ಸಾಂಥಿನ್‌ಗಳು, ಗ್ವಾರಾನಾ, ಯರ್ಬಾ ಮೇಟ್, ಸಿನೆಫ್ರಿನ್ ಮತ್ತು ಯೋಹಿಂಬೈನ್‌ನಂತಹ ಉತ್ತೇಜಕ ಅಂಶಗಳನ್ನೂ ಪರಿಶೀಲಿಸಲಾಗಿದೆ. ಇವು ಎನರ್ಜಿ ಡ್ರಿಂಕ್ಸ್ ಮಾತ್ರವಲ್ಲದೆ ತಂಪು ಪಾನೀಯಗಳು, ಪ್ರೋಟೀನ್ ಬಾರ್‌ಗಳು, ಸ್ಮೂಥಿಗಳು, ಮೀಲ್ ರಿಪ್ಲೇಸ್‌ಮೆಂಟ್ ಶೇಕ್ಸ್ ಮತ್ತು ಕೆಲವು ವಿಟಮಿನ್ ಉತ್ಪನ್ನಗಳಲ್ಲಿಯೂ ಇರಬಹುದು. ಕೆಲವು ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಸಾಮಾನ್ಯ ಕಾಫಿಗಿಂತ ಪ್ರತಿ ಔನ್ಸ್‌ಗೆ ಮೂರು ಪಟ್ಟು ಹೆಚ್ಚು ಕೆಫೀನ್ ಇರಬಹುದು. ಹೀಗಾಗಿ ಇವುಗಳ ಸಣ್ಣ ಪ್ರಮಾಣವೂ ದೈನಂದಿನ ಶಿಫಾರಸು ಮಿತಿಯನ್ನು ಮೀರಿಸುವ ಸಾಧ್ಯತೆಯಿದೆ. ಇತರ ಉತ್ತೇಜಕ ಅಂಶಗಳು ಕೆಫೀನ್‌ನೊಂದಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ.

ದಿನಕ್ಕೆ ಎಷ್ಟು ಕೆಫೀನ್ ಸೇವಿಸಬಹುದು?

2026ರ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ವೈಜ್ಞಾನಿಕ ಹೇಳಿಕೆಯ ಪ್ರಕಾರ, ವಯಸ್ಕರು ಸಾಮಾನ್ಯವಾಗಿ ದಿನಕ್ಕೆ 400 ಮಿಲಿಗ್ರಾಂವರೆಗೆ ಕೆಫೀನ್ ಸೇವಿಸಬಹುದು. ಇದು ಸುಮಾರು ಐದು ಕಪ್ ಸಾಮಾನ್ಯ ಕಾಫಿಯಲ್ಲಿರುವ ಕೆಫೀನ್‌ಗೆ ಸಮಾನವಾಗಿದೆ. ಆದರೆ ಎನರ್ಜಿ ಡ್ರಿಂಕ್ಸ್ ಮತ್ತು ಆಹಾರ ಪೂರಕಗಳಲ್ಲಿ ಕೆಫೀನ್ ಪ್ರಮಾಣ ಹೆಚ್ಚಿರಬಹುದು. ಈಗಾಗಲೇ ಹೃದಯ ಕಾಯಿಲೆ ಅಥವಾ ಹೃದಯ ಬಡಿತದ ಲಯದಲ್ಲಿ ಸಮಸ್ಯೆ ಇರುವವರು ಕೆಫೀನ್ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ವಯಸ್ಸಾದವರೂ ಈ ವಿಚಾರದಲ್ಲಿ ಜಾಗರೂಕರಾಗಿರಬೇಕು.

ಇದನ್ನೂ ಓದಿ : ಚಳಿಗಾಲದಲ್ಲಿ ಸೋಲೋ ಟ್ರಿಪ್​ಗೆ ಹೇಳಿ ಮಾಡಿಸಿದ ಸ್ಥಳಗಳಿವು

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಎನರ್ಜಿ ಡ್ರಿಂಕ್ಸ್ ಸೇವನೆಯ ಬಳಿಕ ಎದೆನೋವು, ಹೃದಯ ಬಡಿತ ಹೆಚ್ಚಾಗುವುದು, ಅಸಹಜ ಹೃದಯ ಬಡಿತ, ತಲೆಸುತ್ತು ಅಥವಾ ಮೂರ್ಛೆ ಕಾಣಿಸಿಕೊಂಡರೆ ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಆದರೆ ಈ ಅಧ್ಯಯನವು ಎನರ್ಜಿ ಡ್ರಿಂಕ್ಸ್ ಸೇವನೆಯೇ ನೇರವಾಗಿ ಹೃದಯ ಸಮಸ್ಯೆಗಳಿಗೆ ಕಾರಣ ಎಂದು ಸಾಬೀತುಪಡಿಸುವುದಿಲ್ಲ. ಇದು ಅವಲೋಕನ ಆಧಾರಿತ ಸಂಶೋಧನೆಯಾಗಿದ್ದು, FDAಗೆ ಸಲ್ಲಿಕೆಯಾದ ವರದಿಗಳು ಸ್ವಯಂಪ್ರೇರಿತವಾಗಿವೆ. ಮದ್ಯಪಾನ, ಮಾದಕ ವಸ್ತುಗಳ ಬಳಕೆ, ತೀವ್ರ ವ್ಯಾಯಾಮ ಹಾಗೂ ಪತ್ತೆಯಾಗದ ಹೃದಯ ಕಾಯಿಲೆಗಳೂ ಈ ಘಟನೆಗಳಿಗೆ ಕಾರಣವಾಗಿರಬಹುದು.

ಇತ್ತ ಅಮೆರಿಕನ್ ಬೆವರೇಜ್ ಅಸೋಸಿಯೇಷನ್ ಎನರ್ಜಿ ಡ್ರಿಂಕ್ಸ್‌ಗಳ ಸುರಕ್ಷತೆಯನ್ನು ಸಮರ್ಥಿಸಿಕೊಂಡಿದೆ. ಸಂಶೋಧನೆಯಲ್ಲಿ ಉತ್ಪನ್ನಗಳ ನಿಖರ ಸೇವನೆಯ ಪ್ರಮಾಣ ಮತ್ತು ಗ್ರಾಹಕರ ಸಂಖ್ಯೆಯನ್ನು ಪರಿಗಣಿಸಿಲ್ಲ ಎಂದು ಕೌನ್ಸಿಲ್ ಫಾರ್ ರೆಸ್ಪಾನ್ಸಿಬಲ್ ನ್ಯೂಟ್ರಿಷನ್‌ನ ವಿಜ್ಞಾನ ವಿಭಾಗದ ಮುಖ್ಯಸ್ಥೆ ಆಂಡ್ರಿಯಾ ವಾಂಗ್ ಕೂಡ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ, ಎನರ್ಜಿ ಡ್ರಿಂಕ್ಸ್ ಸೇವಿಸುವ ಮೊದಲು ಅದರಲ್ಲಿರುವ ಕೆಫೀನ್ ಪ್ರಮಾಣ ಮತ್ತು ಇತರ ಉತ್ತೇಜಕ ಅಂಶಗಳನ್ನು ಪರಿಶೀಲಿಸುವುದು ಅಗತ್ಯ. ವಿಶೇಷವಾಗಿ ನಿದ್ರೆ ತಡೆಯಲು ಅಥವಾ ಚುರುಕು ಹೆಚ್ಚಿಸಿಕೊಳ್ಳಲು ಇವುಗಳನ್ನು ಅತಿಯಾಗಿ ಅವಲಂಬಿಸುವುದನ್ನು ಯುವಕರು ತಪ್ಪಿಸಬೇಕು, ( ಏಜೆನ್ಸೀಸ್​).