
ಚಳಿಗಾಲವು ಪ್ರವಾಸಕ್ಕೆ ಸರಿಯಾದ ಸಮಯ. ಹೀಗಾಗಿ, ಈ ಸಮಯದಲ್ಲಿ ನಿಮಗಾಗಿ ನೀವು ಸಮಯ ಕೊಟ್ಟುಕೊಳ್ಳಲು ಮೀಸಲಿಡಿ. ಟ್ರಾಫಿಕ್, ಕೆಲಸದ ಒತ್ತಡಗಳಿಂದ ದೂರ ಇರಲು, ನಮ್ಮಲ್ಲಿರುವ ಸಾಕಷ್ಟು ಪ್ರಶ್ನೆ, ಗೊಂದಲಕ್ಕೆ ಅಂತ್ಯವಾಡಲು ಇದು ಸೂಕ್ತ ಸಮಯ. ಹೀಗಾಗಿ ಒಂಟಿಯಾಗಿ ಪ್ರವಾಸ ಮಾಡಲು ಭಾರತದ ಯಾವ ಸ್ಥಳ ಬೆಸ್ಟ್ ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.
ಹಂಪಿಯನ್ನು ಒಬ್ಬರೆ ಸುತ್ತಾಡಬಹುದು. ಸ್ಕೂಟರ್ ಬಾಡಿಗೆಗೆ ಪಡೆದು ಸೂರ್ಯೋದಯಕ್ಕಾಗಿ ಮಾತಂಗ ಬೆಟ್ಟಕ್ಕೆ ಏರಬಹುದು. ಸಂಜೆ ನದಿ ತೀರದ ಕೆಫೆಯಲ್ಲಿ ಕಾಲ ಕಳೆಯಬಹುದು. ಇಲ್ಲಿನ ಕೆತ್ತನೆ, ಹಂಪಿ ದೇವಾಲಯ ಕಣ್ತುಂಬಿಕೊಳ್ಳಬಹುದಾಗಿದೆ. ಬೆಂಗಳೂರಿನಿಂದ ರಾತ್ರಿ ಬಸ್ ಅಥವಾ ರೈಲಿನ ಮೂಲಕವೂ ಹಂಪಿಗೆ ತಲುಪಬಹುದು.
ರಾಜಸ್ಥಾನ ಪಿಂಕ್ ಸಿಟಿ ಜೈಪುರ. ಜನಸಂದಣಿಯನ್ನು ತಪ್ಪಿಸಲು ಬೆಳಗ್ಗೆಯೇ ಅಂಬರ್ ಕೋಟೆಗೆ ಭೇಟಿ ನೀಡಿ ಮತ್ತು ಮಧ್ಯಾಹ್ನ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಇಲ್ಲಿನ ಹೆರಿಟೇಜ್ ಗೇಸ್ಟ್ಹೌಸ್ಗಳು ಅತ್ಯುತ್ತಮ ಆತಿಥ್ಯ ಹಾಗೂ ಭದ್ರತೆಯನ್ನು ಒದಗಿಸುತ್ತವೆ.
ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಿಗೆ ಹೆಸರುವಾಸಿಯಾಗಿರುವ ರಿಷಿಕೇಶವು ಮನಸ್ಸಿಗೆ ಶಾಂತಿ ಹಾಗೂ ಸಾಹಸ ಎರಡನ್ನೂ ನೀಡುತ್ತದೆ. ಇಲ್ಲಿ ನೀವು ಸೂರ್ಯೋದಯದ ಯೋಗ ಅವಧಿಯಲ್ಲಿ ಪಾಲ್ಗೊಳ್ಳಬಹುದು, ಗಂಗಾನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡಬಹುದು ಅಥವಾ ಸಂಜೆ ಘಾಟ್ಗಳಲ್ಲಿ ಕುಳಿತು ಪ್ರಶಾಂತತೆಯನ್ನು ಅನುಭವಿಸಬಹುದು. ಸಾಮಾಜಿಕ ಹಾಸ್ಟೆಲ್ಗಳು ಮತ್ತು ಕೆಫೆಗಳಲ್ಲಿ ಇತರ ಪ್ರವಾಸಿಗರೊಂದಿಗೆ ಸುಲಭವಾಗಿ ಬೆರೆಯಬಹುದು.
ಆರಾಮಾದಾಯಕ ಪ್ರಯಾಣ, ಪರಿಸರವನ್ನು ಕಣ್ತುಂಬಿಕೊಳ್ಳಲು, ಹಿತಕರ ಪ್ರಯಾಣಕ್ಕೆ ಕೇರಳ ಪ್ರವಾಸ ಬೆಸ್ಟ್. ಅಲೆಪ್ಪಿಯ ಹಿನ್ನೀರಿನಲ್ಲಿ, ಮುನ್ನಾರದ ಚಹಾ ತೋಟಗಳಲ್ಲಿ ಸಂಚರಿಸಬಹುದು. ವರ್ಕಾಲದ ಬಂಡೆಗಳ ಮೇಲೆ ಸೂರ್ಯಸ್ತ ವೀಕ್ಷಿಸಬಹುದು.
ಸ್ವಚ್ಛ ನದಿಗಳು ಮತ್ತು ಮಂಜಿನ ಜಲಪಾತಗಳಿಗೆ ಮೇಘಾಲಯ ಹೆಸರುವಾಸಿಯಾಗಿದೆ. ಇಲ್ಲಿನ ದಾವ್ಕಿ ನದಿ ಮತ್ತು ಚೆರಾಪುಂಜಿ ಅತ್ಯಂತ ಪ್ರಸಿದ್ಧ ಸ್ಥಳಗಳಾಗಿವೆ. ಇಲ್ಲಿನ ಸ್ಥಳೀಯರು ಅತ್ಯಂತ ಸ್ನೇಹಪರರಾಗಿದ್ದು, ಏಕಾಂಗಿ ಪ್ರಯಾಣಿಕರಿಗೆ ಸಹಾಯ ಮಾಡುತ್ತಾರೆ.