

Mosquito Coil : ರಾತ್ರಿ ಮಲಗುವ ಮುನ್ನ ಸೊಳ್ಳೆಗಳ ಕಾಟ ತಪ್ಪಿಸಲು ಬಹುತೇಕ ಮನೆಗಳಲ್ಲಿ ಸೊಳ್ಳೆ ಕಾಯಿಲ್ ಹಚ್ಚಲಾಗುತ್ತದೆ. ಸೊಳ್ಳೆಗಳು ದೂರಾಗುತ್ತವೆ ಎಂಬ ನೆಮ್ಮದಿಯಲ್ಲಿ ನಾವು ಅದರ ಹೊಗೆಯನ್ನು ಉಸಿರಾಡುತ್ತಲೇ ಇರುತ್ತೇವೆ. ಆದರೆ, ಸೊಳ್ಳೆಗಳನ್ನು ಓಡಿಸುವ ಆ ಹೊಗೆ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ? ಕ್ಯಾನ್ಸರ್ ಅಪಾಯವೂ ಇದೆಯೇ? ಎಂಬ ಪ್ರಶ್ನೆ ಇದೀಗ ಅನೇಕರಲ್ಲಿ ಮೂಡಿದೆ. ಅದಕ್ಕೆ ಉತ್ತರ ಕೊಂಡುಕೊಳ್ಳೋಣ.
ಸೊಳ್ಳೆ ಕಾಯಿಲ್ ಉರಿಯುವಾಗ ಕೀಟನಾಶಕದ ಜತೆಗೆ ವಿವಿಧ ಹೊಗೆ ಮತ್ತು ಸೂಕ್ಷ್ಮ ಕಣಗಳು ಬಿಡುಗಡೆಯಾಗುತ್ತವೆ. ವಿಶೇಷವಾಗಿ ಗಾಳಿ ಸರಿಯಾಗಿ ಹರಿಯದ ಕೋಣೆಯಲ್ಲಿ ಕಾಯಿಲ್ ಹಚ್ಚಿದರೆ ಒಳಾಂಗಣ ಗಾಳಿಯ ಗುಣಮಟ್ಟ ಹೊಗೆಯಿಂದ ಹದಗೆಡಬಹುದು. ಈ ಹೊಗೆಯಲ್ಲಿ PM2.5 ಸೂಕ್ಷ್ಮ ಕಣಗಳು ಹಾಗೂ ಕೆಲವು ರಾಸಾಯನಿಕ ಮಾಲಿನ್ಯಕಾರಕಗಳು ಇರಬಹುದು. ಇವುಗಳನ್ನು ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡುವುದು ಉಸಿರಾಟದ ವ್ಯವಸ್ಥೆಗೆ ಹಾನಿಕರವಾಗುವ ಸಾಧ್ಯತೆಯಿದೆ.
ಇಲ್ಲಿಯೇ ಮುಖ್ಯವಾದ ವಿಷಯವಿದೆ. ಸೊಳ್ಳೆ ಕಾಯಿಲ್ ಬಳಸಿದರೆ ಖಂಡಿತ ಕ್ಯಾನ್ಸರ್ ಬರುತ್ತದೆ ಎಂದು ಹೇಳಲು ಪ್ರಸ್ತುತ ಸಾಕಷ್ಟು ವೈಜ್ಞಾನಿಕ ಪುರಾವೆ ಇಲ್ಲ. ಆದರೆ, ಕಾಯಿಲ್ ಹೊಗೆಯಲ್ಲಿ ಇರುವ ಕೆಲವು ಮಾಲಿನ್ಯಕಾರಕಗಳಿಗೆ ದೀರ್ಘಕಾಲ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಒಡ್ಡಿಕೊಳ್ಳುವುದು ಆರೋಗ್ಯದ ಅಪಾಯಗಳನ್ನು ಹೆಚ್ಚಿಸಬಹುದೆಂಬ ಆತಂಕವಿದೆ. ಕೆಲವು ಅಧ್ಯಯನಗಳು ಸೊಳ್ಳೆ ಕಾಯಿಲ್ ಹೊಗೆಗೆ ಹೆಚ್ಚಿನ ಪ್ರಮಾಣದಲ್ಲಿ ಒಡ್ಡಿಕೊಳ್ಳುವುದು, ದಿನನಿತ್ಯ ಸೊಳ್ಳೆ ಕಾಯಿಲ್ ಮನೆಯಲ್ಲಿ ಬಳಸುವುದರಿಂದ ಹೊಗೆಯ ಪ್ರಮಾಣ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್ ಅಪಾಯದೊಂದಿಗೆ ಸಂಬಂಧ ಹೊಂದಿರಬಹುದೆಂದು ಸೂಚಿಸಿವೆ. ಆದರೆ ಇಂತಹ ಅಧ್ಯಯನಗಳು ಕಾಯಿಲ್ ಹೊಗೆಯೇ ನೇರವಾಗಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂದು ಖಚಿತಪಡಿಸುವುದಿಲ್ಲ.
ಹೌದು, ಎಚ್ಚರಿಕೆ ಅಗತ್ಯ. ಕಿಟಕಿ, ಬಾಗಿಲು ಮುಚ್ಚಿದ ಸಣ್ಣ ಕೋಣೆಯಲ್ಲಿ ಗಂಟೆಗಟ್ಟಲೆ ಕಾಯಿಲ್ ಉರಿಯುವುದರಿಂದ ಹೊಗೆ ಮತ್ತು ಸೂಕ್ಷ್ಮ ಕಣಗಳ ಸಾಂದ್ರತೆ ಹೆಚ್ಚಬಹುದು. ಮತ್ತು ಆ ಹೊಗೆಯು ಕೋಣೆಯಲ್ಲಿಯೇ ಆವರಿಸುತ್ತದೆ. ಇದರಿಂದ ಕೆಲವರಿಗೆ ಕಣ್ಣು ಮತ್ತು ಗಂಟಲಿನಲ್ಲಿ ಉರಿ, ಕೆಮ್ಮು, ತಲೆನೋವು ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು. ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆ ಇರುವವರು ವಿಶೇಷವಾಗಿ ಜಾಗರೂಕರಾಗಬೇಕು. ಇದರಿಂದ ಅವರಿಗೆ ಉಸಿರಾಟದ ತೊಂದರೆ ಹೆಚ್ಚಾಗಬಹುದು ಮತ್ತು ಶ್ವಾಸಕೋಶದ ಸಮಸ್ಯೆ ಹೆಚ್ಚಾಗಬಹುದು.
ಸೊಳ್ಳೆ ಕಾಯಿಲ್ ಅವಲಂಬಿಸುವ ಬದಲು ಸೊಳ್ಳೆ ಪರದೆ, ಕಿಟಕಿ ಜಾಲರಿ, ದೇಹವನ್ನು ಮುಚ್ಚುವ ಬಟ್ಟೆ ಹಾಗೂ ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಂತಾದ ಕ್ರಮಗಳನ್ನು ಅನುಸರಿಸುವುದು ಉತ್ತಮ. ಒಟ್ಟಿನಲ್ಲಿ, ಸೊಳ್ಳೆ ಕಾಯಿಲ್ ಹಚ್ಚಿದರೆ ಕ್ಯಾನ್ಸರ್ ಖಚಿತ ಎಂಬುದು ಸರಿಯಲ್ಲ. ಆದರೆ ಅದರ ಹೊಗೆಯನ್ನು ಪ್ರತಿದಿನ ದೀರ್ಘಕಾಲ ಉಸಿರಾಡುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೊಳ್ಳೆ ಓಡಿಸುವುದರ ಜೊತೆಗೆ ನಮ್ಮ ಮನೆಯ ಗಾಳಿಯ ಗುಣಮಟ್ಟದ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯ, (ಏಜೆನ್ಸೀಸ್).