

Chicken : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ.
ಅಂದಹಾಗೆ, ಮಾರುಕಟ್ಟೆಯಲ್ಲಿ ಚಿಕನ್ ಖರೀದಿಸುವಾಗ ಹೆಚ್ಚಿನವರಿಗೆ ಇರೋ ಒಂದು ಸಹಜ ಗೊಂದಲವೆಂದರೆ, ಯಾವ ಭಾಗದ ಮಾಂಸವನ್ನು ಖರೀದಿಸಬೇಕು ಅನ್ನೋದು. ರುಚಿಕರವಾದ ಮಾಂಸ ಬೇಕೋ ಅಥವಾ ಮೂಳೆರಹಿತ ಹಾಗೂ ಹೆಚ್ಚು ಮಾಂಸ ಸಿಗೋ ಭಾಗ ಬೇಕೋ ಎಂಬಿತ್ಯಾದಿ ಪ್ರಶ್ನೆಗಳು ಕಾಡುವುದು ಸಹಜ.
ಅರ್ಧ ಕೆಜಿ ಚಿಕನ್ ಖರೀದಿಸಿದಾಗ ಇಡೀ ಕೋಳಿ ಸಿಗುವುದಿಲ್ಲವಾದ್ದರಿಂದ, ಅಂಗಡಿಯವರು ಎದೆ ಭಾಗ ಅಥವಾ ಕಾಲು ಭಾಗದ ತುಂಡುಗಳನ್ನು ಗ್ರಾಹಕರಿಗೆ ನೀಡುತ್ತಾರೆ. ಈ ಎರಡೂ ಭಾಗಗಳು ತಮ್ಮದೇ ಆದ ವಿಶಿಷ್ಟ ವಿಶೇಷತೆಗಳು ಮತ್ತು ಪ್ರಯೋಜನಗಳನ್ನು ಹೊಂದಿದ್ದು, ನಿಮ್ಮ ಆರೋಗ್ಯದ ಕಾಳಜಿ ಅಥವಾ ಅಡುಗೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
ಚಿಕನ್ ಪ್ರಿಯರ ನಾಲಿಗೆಯ ರುಚಿ ಹೆಚ್ಚಿಸುವ ವಿಚಾರಕ್ಕೆ ಬಂದರೆ, ನಿಸ್ಸಂದೇಹವಾಗಿ 'ಲೆಗ್ ಪೀಸ್' (ಕಾಲು ಭಾಗ) ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ, ಕಾಲು ಭಾಗದಲ್ಲಿ ತೊಡೆ ಮತ್ತು ಡ್ರಮ್‌ಸ್ಟಿಕ್ ಇದ್ದು, ಎದೆ ಭಾಗಕ್ಕಿಂತ ಇದರಲ್ಲಿ ಸ್ವಲ್ಪ ಹೆಚ್ಚಿನ ಕೊಬ್ಬಿನಾಂಶವಿರುತ್ತದೆ. ಹೀಗಾಗಿ, ಇದನ್ನು ಬೇಯಿಸಿದಾಗ ಮಾಂಸವು ಹೆಚ್ಚು ರಸಭರಿತವಾಗಿ (Juicy) ಹಾಗೂ ಸಖತ್ ಟೇಸ್ಟಿಯಾಗಿ ಇರುತ್ತದೆ. ಚಿಕನ್ ಕರಿ, ಬಿರಿಯಾನಿ ಮತ್ತು ಫ್ರೈಸ್ ಮಾಡುವಾಗ ಹೆಚ್ಚು ಮಂದಿ ಲೆಗ್ ಪೀಸ್‌ಗಳನ್ನೇ ಇಷ್ಟಪಡಲು ಇದುವೇ ಮುಖ್ಯ ಕಾರಣವಾಗಿದೆ. ಅಲ್ಲದೆ, ಎಷ್ಟೇ ಹೊತ್ತು ಬೇಯಿಸಿದರೂ ಇದು ಬೇಗನೆ ಒಣಗಿಹೋಗುವುದಿಲ್ಲ.
ಮತ್ತೊಂದೆಡೆ, ಕಡಿಮೆ ಕೊಬ್ಬು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಾಂಸವನ್ನು ಬಯಸುವವರಿಗೆ 'ಚೆಸ್ಟ್ ಪೀಸ್' (ಎದೆ ಭಾಗ) ಹೇಳಿ ಮಾಡಿಸಿದಂತಿದೆ. ಮೂಳೆಗಳಿಲ್ಲದ ಬೋನ್‌ಲೆಸ್ ಚೆಸ್ಟ್ ಪೀಸ್ ತೆಗೆದುಕೊಂಡರೆ, ಕಡಿಮೆ ತೂಕದಲ್ಲೂ ತಿನ್ನಲು ಸಿಗುವ ಮಾಂಸದ ಪ್ರಮಾಣ ಅಧಿಕವಾಗಿರುತ್ತದೆ. ಎದೆ ಭಾಗದ ಮಾಂಸದಲ್ಲಿ ಕೊಬ್ಬಿನಾಂಶ ಅತ್ಯಂತ ಕಡಿಮೆ ಮತ್ತು ಪ್ರೋಟೀನ್ ಸಮೃದ್ಧವಾಗಿರುವುದರಿಂದ, ಫಿಟ್‌ನೆಸ್ ಹಾಗೂ ಡಯೆಟ್ ಮಾಡುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಆದರೆ, ಈ ಭಾಗದ ಮಾಂಸವನ್ನು ಹೆಚ್ಚು ಹೊತ್ತು ಬೇಯಿಸಿದರೆ ತುಸು ಒಣಗಿದಂತೆ ಮತ್ತು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಿಮಗೆ ಅತ್ಯಧಿಕ ರುಚಿ ಬೇಕಿದ್ದರೆ ನಿಸ್ಸಂದೇಹವಾಗಿ 'ಲೆಗ್ ಪೀಸ್' ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಅದೇ ನಿಮಗೆ ಹೆಚ್ಚು ಪ್ರೋಟೀನ್ಯುಕ್ತ ಮತ್ತು ಕಡಿಮೆ ಕೊಬ್ಬಿನಾಂಶ ಬೇಕಿದ್ದರೆ 'ಚೆಸ್ಟ್ ಪೀಸ್' ಉತ್ತಮ ಆಯ್ಕೆಯಾಗಿದೆ. ಕರಿ, ಬಿರಿಯಾನಿ ಹಾಗೂ ಮಸಾಲೆಯುಕ್ತ ಖಾದ್ಯಗಳಿಗೆ ಲೆಗ್ ಪೀಸ್ ಸೂಕ್ತವಾದರೆ, ಜಿಮ್ ಮಾಡುವವರಿಗೆ ಮತ್ತು ದೇಹದಾರ್ಢ್ಯ ಪಟುಗಳಿಗೆ ಚೆಸ್ಟ್ ಪೀಸ್ ಹೆಚ್ಚು ಬೆಂಬಲ ನೀಡುತ್ತದೆ.
ಹಾಗಿದ್ದರೂ, ಚೆಸ್ಟ್ ಪೀಸ್‌ನಲ್ಲಿ ಮಾತ್ರವೇ ಹೆಚ್ಚು ಚಿಕನ್ ಸಿಗುತ್ತದೆ ಎಂದು ಖಚಿತವಾಗಿ ಹೇಳಲುಸಾಧ್ಯವಿಲ್ಲ; ಸಿಗುವ ಮಾಂಸದ ನೈಜ ಪರಿಮಾಣವು ಕೋಳಿಯ ಒಟ್ಟಾರೆ ಗಾತ್ರ, ಕತ್ತರಿಸುವ ವಿಧಾನ ಹಾಗೂ ಮೂಳೆಯೊಂದಿಗೆ ಅಥವಾ ಬೋನ್‌ಲೆಸ್ ಎಂಬ ಅಂಶಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ, (ಏಜೆನ್ಸೀಸ್).