ಎಳ್ಳಿನ ಚಿಕ್ಕಿ ತಿಂತಿರಾ? ಹಾಗಾದರೆ ನಿಮ್ಮ ದೇಹದಲ್ಲಿ ಏನೆಲ್ಲ ಚಮತ್ಕಾರ ನಡೆಯುತ್ತೆ ನೋಡಿ…

Chikki
Published on

ಡಿಸೆಂಬರ್​ನಿಂದ ಫೆಬ್ರವರಿವರೆಗೂ ಚಳಿಗಾಲ ಇರುತ್ತದೆ. ಈ ಸಮಯದಲ್ಲಿ ಸೂಕ್ತವಾದ ಆಹಾರ ಸೇವಿಸುವುದು ತುಂಬಾನೇ ಮುಖ್ಯ. ಎಳ್ಳು ಮತ್ತು ಬೆಲ್ಲ ಸೇವನೆಯು ಒಂದು ಉತ್ತಮ ಆಯ್ಕೆಯಾಗಿದೆ. ಎಳ್ಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡಿದರೆ, ಬೆಲ್ಲವು ತನ್ನ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎರಡನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳು ನಿಮ್ಮದಾಗುತ್ತದೆ.

ಎಳ್ಳಿನಲ್ಲಿರುವ ಪ್ರೋಟೀನ್ ಹಾನಿಗೊಳಗಾದ ಸ್ನಾಯುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯವನ್ನು ಸುಧಾರಿಸುತ್ತದೆ. ಇದಿಷ್ಟೇ ಅಲ್ಲದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಅಂದಹಾಗೆ ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯದ ಸಮಸ್ಯೆಗಳು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಎಳ್ಳು ತಿಂದರೆ ರಕ್ತ ಶುದ್ಧಿಯಾಗಿ ಆರೋಗ್ಯವೂ ಸುಧಾರಿಸುತ್ತದೆ.

ಎಳ್ಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ಎಳ್ಳಿನಿಂದ ಮಾಡಿದ ಎಣ್ಣೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಎಳ್ಳಿನ ಎಣ್ಣೆಯಿಂದ ಅನೇಕ ಆಯುರ್ವೇದ ಔಷಧಗಳನ್ನು ಸಹ ತಯಾರಿಸಲಾಗುತ್ತದೆ. ಈ ಎಣ್ಣೆಯು ದೇಹವನ್ನು ರಕ್ಷಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ. ಇದು ಚರ್ಮವನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಇನ್ನೂ ಎಳ್ಳನ್ನು ಬೆಲ್ಲದೊಂದಿಗೆ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ಯಾವುದನ್ನಾದರೂ ಬಿಸಿಮಾಡಲು ಇಂಧನ ಬೇಕಾಗುತ್ತದೆ. ಬೆಲ್ಲವು ದೇಹದಲ್ಲಿ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಬೆಲ್ಲದ ಸೇವನೆಯು ಎಳ್ಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮತ್ತು ದೇಹದ ಆರೋಗ್ಯವನ್ನು ಸುಧಾರಿಸುತ್ತದೆ.

ಎಳ್ಳು ಮತ್ತು ಬೆಲ್ಲವನ್ನು ಬೆರೆಸಿ ನಿಯಮಿತವಾಗಿ ಸೇವಿಸಿ. ಪ್ರತಿದಿನ ಎಳ್ಳು ಮತ್ತು ಬೆಲವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ಓದುತ್ತಿರುವ ಮಕ್ಕಳಿಗೆ ಇವುಗಳನ್ನು ನೀಡುವುದರಿಂದ ಜ್ಞಾಪಕಶಕ್ತಿ ಹೆಚ್ಚುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಇದು ಕ್ಯಾನ್ಸರ್ ಅಪಾಯವನ್ನೂ ಕಡಿಮೆ ಮಾಡುತ್ತದೆ. ಆದರೆ, ಯಾವುದನ್ನೇ ಆಗಲಿ ನಿಯಮಿತವಾಗಿ ಸೇವನೆ ಮಾಡಿದರೆ ಮಾತ್ರ ಆರೋಗ್ಯಕ್ಕೆ ಉತ್ತಮ ಎಂಬುದು ತಿಳಿದಿರಲಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net