ಪ್ರೋಟೀನ್ ಸೇವಿಸಿದರೆ ಕಿಡ್ನಿ ವೈಫಲ್ಯವಾಗುತ್ತದೆಯೇ? ನೀವು ನಂಬಿರುವ ಈ 5 ಸುಳ್ಳುಗಳ ಹಿಂದಿನ ಅಸಲಿ ಸತ್ಯ ಇಲ್ಲಿದೆ! Protein

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ಜಾಗೃತಿಯಲ್ಲಿ ಪ್ರೋಟೀನ್ (Protein) ಎಂಬ ಪೋಷಕಾಂಶಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಸ್ನಾಯುಗಳ ಬೆಳವಣಿಗೆಯಿಂದ ಹಿಡಿದು ತೂಕ ಇಳಿಸುವವರೆಗೆ ಪ್ರೋಟೀನ್ ಅತ್ಯಗತ್ಯ. ಆದರೆ, ಪ್ರೋಟೀನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಜನರ ನಡುವೆ ಹರಡಿರುವ ಕೆಲವು ತಪ್ಪು ಅಥವಾ ಸುಳ್ಳು ಮಾಹಿತಿಗಳು ಜನರನ್ನು ಗೊಂದಲಕ್ಕೆ ಸಿಲುಕುವಂತೆ ಮಾಡುತ್ತಿದೆ.
ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಪ್ರೋಟೀನ್ ಬಗ್ಗೆ ನೀವು ನಂಬಿರುವ ಆ 5 ಪ್ರಮುಖ ಸುಳ್ಳುಗಳು ಮತ್ತು ಅವುಗಳ ಹಿಂದಿನ ವೈಜ್ಞಾನಿಕ ಸತ್ಯಗಳನ್ನು ಇಲ್ಲಿ ವಿವರಿಸಲಾಗಿದೆ.

ಸುಳ್ಳು 1. ಅತಿಯಾದ ಪ್ರೋಟೀನ್ ಸೇವನೆ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ

ಅನೇಕರು ಪ್ರೋಟೀನ್ ಹೆಚ್ಚಾಗಿ ಸೇವಿಸಿದರೆ ಮೂತ್ರಪಿಂಡಗಳ ಮೇಲೆ ಒತ್ತಡ ಬಿದ್ದು ಅವು ವೈಫಲ್ಯಗೊಳ್ಳುತ್ತವೆ ಎಂದು ಭಯಪಡುತ್ತಾರೆ. ವಾಸ್ತವವಾಗಿ, ಆರೋಗ್ಯವಂತ ವ್ಯಕ್ತಿಯಲ್ಲಿ ಪ್ರೋಟೀನ್ ಸೇವನೆಯು ಮೂತ್ರಪಿಂಡಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಹಲವಾರು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಈಗಾಗಲೇ ಕಿಡ್ನಿ ಸಂಬಂಧಿತ ಕಾಯಿಲೆ ಇರುವವರು ವೈದ್ಯರ ಸಲಹೆಯಂತೆ ಪ್ರೋಟೀನ್ ಪ್ರಮಾಣವನ್ನು ನಿಗಧಿ ಪಡಿಸಿಕೊಳ್ಳಬೇಕು.

ಸುಳ್ಳು 2. ಸಸ್ಯಹಾರಿ ಆಹಾರದಲ್ಲಿ ಗುಣಮಟ್ಟದ ಪ್ರೋಟೀನ್ ಸಿಗುವುದಿಲ್ಲ

ಮಾಂಸಾಹಾರಿಗಳಿಗೆ ಮಾತ್ರ ಉತ್ತಮ ಪ್ರೋಟೀನ್ ಸಿಗುತ್ತದೆ, ಸಸ್ಯಹಾರಿಗಳಿಗೆ ಪ್ರೋಟೀನ್ ಕೊರತೆ ಇದ್ದೇ ಇರುತ್ತದೆ ಎಂಬುದು ಹಳೆಯ ಮಾತು. ಆದರೆ ಇದು ಸಂಪೂರ್ಣ ತಪ್ಪು ಕಲ್ಪನೆ. ಬೇಳೆಕಾಳುಗಳು, ಸೋಯಾಬೀನ್, ಪನ್ನೀರ್, ಕಿನ್ವಾ, ಕಡಲೆಕಾಯಿ, ಬಾದಾಮಿ ಮತ್ತು ಚಿಯಾ ಬೀಜಗಳಲ್ಲಿ ಹೇರಳವಾದ ಪ್ರೋಟೀನ್ ಇರುತ್ತದೆ. ಮಾಂಸದಲ್ಲಿ ಸಂಪೂರ್ಣ ಪ್ರೋಟೀನ್ ಇರುವುದು ನಿಜ. ಆದರೆ ಸಸ್ಯಹಾರಿಗಳು ಬೇರೆ ಬೇರೆ ರೀತಿಯ ಆಹಾರಗಳನ್ನು ಸೇವಿಸುವ ಮೂಲಕ ದೇಹಕ್ಕೆ ಬೇಕಾದ ಎಲ್ಲಾ ಅಮಿನೋ ಆಸಿಡ್‌ಗಳನ್ನು ಸುಲಭವಾಗಿ ಪಡೆಯಬಹುದು.

ಸುಳ್ಳು 3. ವ್ಯಾಯಾಮ ಮುಗಿಸಿದ 30 ನಿಮಿಷದೊಳಗೆ ಪ್ರೋಟೀನ್ ಸೇವಿಸಲೇಬೇಕು

ಜಿಮ್‌ಗೆ ಹೋಗುವವರು ವರ್ಕೌಟ್ ಮುಗಿಸಿದ ತಕ್ಷಣ ಪ್ರೋಟೀನ್ ಶೇಕ್ ಕುಡಿಯದಿದ್ದರೆ ಸ್ನಾಯುಗಳು ಬೆಳೆಯುವುದಿಲ್ಲ ಅಥವಾ ವ್ಯರ್ಥವಾಗುತ್ತವೆ ಎಂದು ನಂಬುತ್ತಾರೆ. ದೇಹಕ್ಕೆ ಪ್ರೋಟೀನ್ ಅವಶ್ಯಕತೆ ಇರುವುದು ನಿಜ, ಆದರೆ ವ್ಯಾಯಾಮದ ನಂತರದ 30 ನಿಮಿಷಗಳಲ್ಲಿಯೇ ಅದನ್ನು ಸೇವಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವಿಲ್ಲ. ನೀವು ಇಡೀ ದಿನದಲ್ಲಿ ಒಟ್ಟಾರೆಯಾಗಿ ಎಷ್ಟು ಪ್ರೋಟೀನ್ ಸೇವಿಸುತ್ತೀರಿ ಎಂಬುದು ಮುಖ್ಯ. ವ್ಯಾಯಾಮದ ಕೆಲವು ಗಂಟೆಗಳ ಮೊದಲು ಅಥವಾ ನಂತರ ಪ್ರೋಟೀನ್ ಸೇವಿಸಿದರೂ ಅದು ಸ್ನಾಯುಗಳ ದುರಸ್ತಿಗೆ ಸಹಕಾರಿಯಾಗುತ್ತದೆ.

ಸುಳ್ಳು 4. ಪ್ರೋಟೀನ್ ಸೇವಿಸಿದ ತಕ್ಷಣ ದೇಹವು ದಪ್ಪವಾಗುತ್ತದೆ

ವಿಶೇಷವಾಗಿ ಮಹಿಳೆಯರು ಪ್ರೋಟೀನ್ ಪೌಡರ್ ಅಥವಾ ಹೆಚ್ಚಿನ ಪ್ರೋಟೀನ್ ಸೇವಿಸಿದರೆ ಪುರುಷರಂತೆ ದಪ್ಪನೆಯ ಸ್ನಾಯುಗಳು ಬರುತ್ತವೆ ಎಂದು ಹೆದರುತ್ತಾರೆ. ಕೇವಲ ಪ್ರೋಟೀನ್ ಸೇವನೆಯಿಂದ ಯಾರೂ ಬಾಡಿ ಬಿಲ್ಡರ್ ಆಗಲು ಸಾಧ್ಯವಿಲ್ಲ. ಸ್ನಾಯುಗಳು ದೊಡ್ಡದಾಗಲು ಕಠಿಣವಾದ ವೇಟ್ ಲಿಫ್ಟಿಂಗ್ ಮತ್ತು ಹಾರ್ಮೋನುಗಳ ಪಾತ್ರವಿರುತ್ತದೆ. ಮಹಿಳೆಯರಿಗೆ ಪ್ರೋಟೀನ್ ಅತ್ಯಗತ್ಯ, ಏಕೆಂದರೆ ಇದು ಚರ್ಮ, ಕೂದಲು ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ.

ಸುಳ್ಳು 5. ದೇಹವು ಒಮ್ಮೆಗೆ ಕೇವಲ 20-30 ಗ್ರಾಂ ಪ್ರೋಟೀನ್ ಮಾತ್ರ ಹೀರಿಕೊಳ್ಳುತ್ತದೆ

ಒಂದು ಊಟದಲ್ಲಿ 30 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ತಿಂದರೆ ಉಳಿದದ್ದು ವ್ಯರ್ಥವಾಗಿ ಮೂತ್ರದ ಮೂಲಕ ಹೊರಹೋಗುತ್ತದೆ ಎಂಬ ವಾದವಿದೆ. ಅದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯು ಅತ್ಯಂತ ಬುದ್ಧಿವಂತವಾಗಿದ್ದು, ನಾವು ಹೆಚ್ಚಿನ ಪ್ರೋಟೀನ್ ಸೇವಿಸಿದರೆ, ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಅಷ್ಟೇ. ಸ್ನಾಯುಗಳ ಬೆಳವಣಿಗೆಗೆ 20-30 ಗ್ರಾಂ ಸಾಕು ಎನ್ನುವುದು ನಿಜವಾದರೂ, ಉಳಿದ ಪ್ರೋಟೀನ್​ನ್ನು ದೇಹವು ಇತರೆ ಕಾರ್ಯಗಳಾದ ಹಾರ್ಮೋನ್ ಉತ್ಪಾದನೆ, ಕಿಣ್ವಗಳ ತಯಾರಿಕೆಗೆ ಬಳಸಿಕೊಳ್ಳುತ್ತದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net