ಇದು ಮಾನ್ಸೂನ್​ ಕಾಲ...ಆಹಾರದಲ್ಲಿ ಇರಲಿ ಎಚ್ಚರ; ಅಣಬೆ, ಸೊಪ್ಪುಗಳೆಲ್ಲ ಬೇಡ !

Leafy
Published on

ನವದೆಹಲಿ: ಕರೊನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಅದರೊಟ್ಟಿಗೆ ಜೀವನ ನಡೆಸುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮುಂಗಾರು ಮಳೆಯೂ ಪ್ರಾರಂಭವಾಗಿದ್ದು, ಸಾಮಾನ್ಯ ಶೀತ, ಜ್ವರಗಳೂ ದಾಂಗುಡಿಯಿಡುವ ಸಾಧ್ಯತೆಗಳೂ ಹೆಚ್ಚಾಗಿವೆ.

ಮಳೆಗಾಲದಲ್ಲಿ ನಮ್ಮ ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದ ದೃಷ್ಟಿಯಿಂದ ಕೆಲವು ಹಣ್ಣು, ತರಕಾರಿಗಳನ್ನು ತಿನ್ನದೆ ಇದ್ದರೇ ಒಳಿತು. ಕರೊನಾ ಸೋಂಕಿಗೂ, ಇವುಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಮಳೆಗಾಲ ಹಲವು ಕಾಯಿಲೆ, ಸೋಂಕುಗಳನ್ನು ಹೊತ್ತು ತರುತ್ತದೆ. ಅದೆಷ್ಟೋ ರೋಗಕಾರಕಗಳು ತಮ್ಮ ತಳಿವೃದ್ಧಿ ಮಾಡುವ ಕಾಲ ಇದು.

ಈ ಸಮಯದಲ್ಲಿ ಕೆಲವು ಹಣ್ಣು, ತರಕಾರಿಗಳು ಬೇಗನೇ ಕೊಳೆಯುತ್ತವೆ. ಅಂಥವುಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆ ಕೆಡುವುದು, ಅಜೀರ್ಣ, ವಾಂತಿ-ಭೇದಿಯಂತಹ ಕಾಯಿಲೆಗಳೂ ಶುರುವಾಗುತ್ತವೆ.

ಅದರಲ್ಲೂ ಈ ನಾಲ್ಕು ತರಹದ ತರಕಾರಿ, ಹಣ್ಣುಗಳನ್ನು ನೀವು ಮಳೆಗಾಲದಲ್ಲಿ ಸೇವಿಸದೆ ಇರುವುದೇ ಉತ್ತಮ. ಹಾಗೊಮ್ಮೆ ತಿನ್ನುವುದಾದರೆ ಕತ್ತರಿಸಿ, ಸ್ವಚ್ಛಗೊಳಿಸಬೇಕು. ಇಲ್ಲಿದೆ ನೋಡಿ ಅವು ಯಾವವು ಎಂಬುದರ ಬಗ್ಗೆ ಮಾಹಿತಿ.

1.ಸೊಪ್ಪುಗಳು

ಸೊಪ್ಪುಗಳು ಆರೋಗ್ಯಕ್ಕೆ ಒಳ್ಳೆಯದು ಎಂದೇ ಹೇಳಲಾಗುತ್ತದೆ. ಆದರೆ ಮಳೆಗಾಲದಲ್ಲಿ ಅವುಗಳನ್ನು ತಿನ್ನಬೇಡಿ ಎಂದು ತಜ್ಞ ವೈದ್ಯರು ಹೇಳುತ್ತಾರೆ.

ಮಳೆಗಾಲದಲ್ಲಿ ಸೊಪ್ಪುಗಳು ಸದಾ ತೇವಾಂಶದಿಂದ ಕೂಡಿರುತ್ತವೆ ಹಾಗೂ ಕಲ್ಮಶಗೊಂಡಿರುತ್ತವೆ. ಇದರಿಂದಾಗಿ ಬೇಗನೇ ಹಾಳಾಗಿರುವ ಸಾಧ್ಯತೆ ಇರುತ್ತದೆ.

ಪಾಲಕ್​, ಮೆಂತೆ ಸೊಪ್ಪು ಸೇರಿ ಹಲವು ಸೊಪ್ಪುಗಳು ಮಳೆಗಾಲದಲ್ಲಿ ಬಳಕೆಗೆ ಯೋಗ್ಯವಲ್ಲವೇ ಅಲ್ಲ. ಅದರ ಬದಲು ಸೋರೆಕಾಯಿಯಂತಹ ಆರೋಗ್ಯಕರ ತರಕಾರಿಯನ್ನು ಬಳಸಬಹುದು.

2. ಕತ್ತರಿಸಿಟ್ಟ ಹಣ್ಣುಗಳು ಮತ್ತು ಜ್ಯೂಸ್​

ನೀವು ಅದೆಷ್ಟೋ ಹಣ್ಣಿನ ಅಂಗಡಿಗಳಲ್ಲಿ, ರಸ್ತೆ ಬದಿಯಲ್ಲಿ ಹಣ್ಣು ಮಾರಾಟ ಮಾಡುವವರನ್ನು ನೋಡಿರಬಹುದು. ಅಲ್ಲಿ ಕಲ್ಲಂಗಡಿ, ಪಪ್ಪಾಯ, ಮಾವಿನಂತಹ ಕೆಲವು ಹಣ್ಣುಗಳನ್ನು ಕತ್ತರಿಸಿ ಇಡಲಾಗುತ್ತದೆ. ಹಾಗೇ ಕತ್ತರಿಸಿ ಇಟ್ಟ ಹಣ್ಣುಗಳನ್ನು ಯಾವಾಗ ಕೊಳ್ಳುವುದೂ ಸರಿಯಲ್ಲ. ಅದರಲ್ಲೂ ಮಳೆಗಾಲದಲ್ಲಂತೂ ಮುಟ್ಟಲೇಬೇಡಿ. ಹಾಗೇ ಜ್ಯೂಸ್​ ಅಂಗಡಿಗಳಲ್ಲಿ ಕತ್ತರಿಸಿಟ್ಟ ಹಣ್ಣುಗಳಿಂದ ಮಾಡಿದ  ಜ್ಯೂಸ್​ಗಳನ್ನೂ ಕುಡಿಯಬೇಡಿ.

ಕತ್ತರಿಸಿ ಇಡಲಾದ ಹಣ್ಣುಗಳು ಗಾಳಿಗೆ ತೆರೆದುಕೊಂಡಿರುತ್ತವೆ. ಇದರಿಂದಾಗಿ ಅದರಲ್ಲಿ ಕೀಟಾಣುಗಳು ಬೆಳೆಯುವ ಪ್ರಮಾಣ ಅಧಿಕವಾಗಿರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆಗಳೂ ಹೆಚ್ಚು. ಅಲ್ಲಲ್ಲಿ ನೀರು ನಿಂತು ನೊಣಗಳ ಪ್ರಮಾಣವೂ ಅಧಿಕವಾಗಿರುತ್ತದೆ. ಅಂಗಡಿಗಳಲ್ಲಿ ಕತ್ತರಿಸಿಟ್ಟ ಹಣ್ಣುಗಳ ಮೇಲೆ ಸೊಳ್ಳೆ, ಕೀಟ, ನೊಣಗಳು ಕುಳಿತು ಅದರಿಂದ ಅನೇಕ ರೋಗಗಳು ಹರಡುತ್ತವೆ.

3. ಶಿಲುಬೆ ತರಕಾರಿಗಳು

ಹೂಕೋಸು, ಗಡ್ಡೆಕೋಸು ಹಾಗೂ ಈ ಜಾತಿಗೆ ಸೇರಿದ ತರಕಾರಿಗಳಿಗೆ ಶಿಲುಬೆ ತರಕಾರಿಗಳು ಎಂದು ಕರೆಯಲಾಗುತ್ತದೆ. ಇಂಥ ತರಕಾರಿಗಳು ಒತ್ತೊತ್ತಾದ ಪದರಗಳಿಂದ ಕೂಡಿರುತ್ತವೆ. ಮುಂಗಾರು ಮಳೆಯ ಸಂದರ್ಭದಲ್ಲಿ ಇವುಗಳಲ್ಲಿ ಕೀಟಗಳು ಉತ್ಪತ್ತಿಯಾಗುವ ಪ್ರಮಾಣವೂ ಹೆಚ್ಚು. ಮನೆಯಲ್ಲೂ ಈ ತರಕಾರಿಗಳ ಅಡುಗೆ ಮಾಡುವುದನ್ನು ನಿಲ್ಲಿಸಬೇಕು. ಹಾಗೇ, ಇಂಥ ತರಕಾರಿಗಳಿಂದ ತಯಾರಾದ ತಿಂಡಿಗಳನ್ನು ಹೊರಗಡೆಯೂ ತಿನ್ನಬಾರದು.

4. ಅಣಬೆಗಳು

ತೇವವಾದ ಮಣ್ಣಿನಲ್ಲಿ ಅಣಬೆ ಬೆಳೆಯುತ್ತದೆ. ಹಾಗೇ ಮಾನ್ಸೂನ್​ನಲ್ಲಿ ಇವುಗಳ ಮೇಲೆ ಬ್ಯಾಕ್ಟೇರಿಯಾಗಳು ಬೆಳೆಯುವ ಪ್ರಮಾಣವೂ ಜಾಸ್ತಿ. ಹಾಗಾಗಿ ಆದಷ್ಟು ಮಳೆಗಾಲದಲ್ಲಿ ಅಣಬೆಗಳನ್ನು ತಿನ್ನಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net