ಪಿಸಿಒಎಸ್​ಯಿುಂದ ಫಲವತ್ತತೆ ಸಮಸ್ಯೆ: ಬದಲಾದ ಜೀವನಶೈಲಿ, ಆಹಾರ ಪದ್ಧತಿ, ತೂಕ ಹೆಚ್ಚಳ ಕಾರಣ

N 1
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣವಾಗಿರುವ ಪಿಸಿಒಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಹತ್ತು ಭಾರತೀಯ ಮಹಿಳೆಯರಲ್ಲಿ ಒಬ್ಬರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಇದು ಮಹಿಳೆಯರಲ್ಲಿ ಫಲವತ್ತತೆ ಸಮಸ್ಯೆಯ ಅಪಾಯ ಹೆಚ್ಚಿಸುತ್ತದೆ.

ಇದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಎಂಡೋಕ್ರೖೆನ್ ಸಿಸ್ಟಮ್ ಡಿಸಾರ್ಡರ್ ಸಮಸ್ಯೆಯಾಗಿದೆ. ಅನಿಯಮಿತ ಮುಟ್ಟು, ಹಠಾತ್ ತೂಕ ಹೆಚ್ಚಳ, ಮೊಡವೆಗಳು, ಮುಖ ಹಾಗೂ ದೇಹದ ಮೇಲೆ ಹೆಚ್ಚು ಕೂದಲು ಇವು ಪಿಸಿಒಎಸ್​ನ ಆರಂಭಿಕ ಲಕ್ಷಣಗಳಾಗಿದ್ದು, ಇವುಗಳನ್ನು ಮಹಿಳೆಯರು ನಿರ್ಲಕ್ಷಿಸುವುದರಿಂದ ಪದೇ ಪದೇ ಗರ್ಭಪಾತ ಉಂಟಾಗುತ್ತದೆ. ಪಿಸಿಒಎಸ್ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಎಂಡೊಮೆಟ್ರಿಯಲ್ ಕ್ಯಾನ್ಸರ್ ಅಥವಾ ಗರ್ಭಾಶಯದ ಒಳಪದರದ ಕ್ಯಾನ್ಸರ್ ಸಹ ಹೆಚ್ಚಿದೆ. ಹೀಗಾಗಿ ಆರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆದಲ್ಲಿ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂರ್ಪಸಬೇಕು ಎನ್ನುತ್ತಾರೆ ನಗರದ ಇಂದಿರಾ ಐವಿಎಫ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಬಿ.ಆರ್. ಸುಷ್ಮಾ.

ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಶೈಕ್ಷಣಿಕ ಹೊರೆ, ದೈಹಿಕ ವ್ಯಾಯಾಮದ ಕೊರತೆಯಿಂದ ಪಿಸಿಒಎಸ್ ಹದಿಹರೆಯದವರಲ್ಲಿ ಹೆಚ್ಚು ಕಂಡುಬರುತ್ತಿದೆ. ಸದ್ದಿಲ್ಲದೆ ಕೊಲ್ಲುವ ಈ ಸಮಸ್ಯೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ತೂಕ ನಿಯಂತ್ರಣ ಮಾಡಿಕೊಳ್ಳುವ ಮೂಲಕ ಚಿಕ್ಕ ವಯಸ್ಸಿನಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ತಡೆಗಟ್ಟ ಬಹುದಾಗಿದೆ. ಜತೆಗೆ ಆರಂಭಿಕ ಹಂತದಲ್ಲಿ ರೋಗ ನಿರ್ಣಯಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಂಜೆತನದೊಂದಿಗೆ, ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದ್ರೋಗದಂತಹ ಕಾಯಿಲೆಗಳಿಗೆ ಕಾರಣವಾಗಲಿದೆ ಎಂದರು.

ಹೀಗಾಗಿ ಸರಳ ವಿಧಾನಗಳಾದ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಮೂಲಕ ಆರಂಭಿಕ ಹಂತದಲ್ಲಿ ರೋಗ ನಿರ್ಣಯ ಮಾಡಿ ಚಿಕಿತ್ಸೆ ಪಡೆಯುವುದರಿಂದ ದೀರ್ಘಕಾಲಿನ ಸಮಸ್ಯೆಗಳನ್ನು ತಡೆಯಲು ಸಾಧ್ಯ. ಗರ್ಭಧರಿಸಲು ಸಾಧ್ಯವಾಗದ ಮಹಿಳೆಯರು ಫಲವತ್ತತೆಯನ್ನು ಸುಧಾರಿಸಲು ಅಗತ್ಯ ಔಷಧಗಳ ಸೇವನೆಯೊಂದಿಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದರ ಜತೆಗೆ ತಂತ್ರಜ್ಞಾನ ಆಧಾರಿತ ಐವಿಎಫ್ ನಂತಹ ಚಿಕಿತ್ಸೆಗಳು ಲಭ್ಯವಿದ್ದು, ಆದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net