ಬ್ಯಾಗಿ ಪ್ಯಾಂಟ್‌ಗೆ ಮನಸೋತ Gen Z! ಸ್ಕಿನ್ನಿ ಜೀನ್ಸ್‌ಗೇ ಬೈ-ಬೈ; ಟ್ರೆಂಡ್ ಆಗಿದ್ದು ಯಾಕೆ? | Gen Z baggy pants trend

ಸ್ಕಿನ್ನಿ ಜೀನ್ಸ್‌ಗೆ ಬೈ-ಬೈ ಹೇಳಿ ಬ್ಯಾಗಿ ಪ್ಯಾಂಟ್‌ಗೆ ಜೈ ಎಂದ ಜೆನ್‌ ಜಿ
ಸ್ಕಿನ್ನಿ ಜೀನ್ಸ್‌ಗೆ ಬೈ-ಬೈ ಹೇಳಿ ಬ್ಯಾಗಿ ಪ್ಯಾಂಟ್‌ಗೆ ಜೈ ಎಂದ ಜೆನ್‌ ಜಿ
Published on

ಪ್ರಮುಖ ಮುಖ್ಯಾಂಶಗಳು

  • ಜೆನ್‌ ಜಿ ಜನರಲ್ಲಿ ಹೆಚ್ಚಿದ ಬ್ಯಾಗಿ ಪ್ಯಾಂಟ್‌ಗಳ ಕ್ರೇಜ್
  • ಸ್ಕಿನ್ನಿ ಜೀನ್ಸ್‌ಗಿಂತ ಕಂಫರ್ಟ್ ಫ್ಯಾಷನ್‌ಗೆ ಆದ್ಯತೆ
  • 2000ರ ದಶಕದ ಟ್ರೆಂಡ್‌ಗಳು ಮತ್ತೆ ಜನಪ್ರಿಯ
Gen Z baggy pants trend: ಒಂದು ಕಾಲದಲ್ಲಿ ಸ್ಕಿನ್ನಿ ಜೀನ್ಸ್‌ ಧರಿಸಿದರೆ ಅದೇ ಫ್ಯಾಷನ್‌ ಎಂಬ ಮಾತಿತ್ತು. ಆದರೆ ಈಗ ಟ್ರೆಂಡ್‌ ಬದಲಾಗಿದೆ. ಜೀನ್ಸ್‌, ಕಾರ್ಗೋ ಪ್ಯಾಂಟ್‌ ಅಥವಾ ಟ್ರೌಸರ್‌ ಯಾವುದಾದರೂ ಇರಲಿ, ಸಡಿಲವಾದ ಮತ್ತು ಅಗಲವಾದ ವಿನ್ಯಾಸದ ಬಟ್ಟೆಗಳತ್ತ ಜೆನ್‌ ಜಿ ಯುವಜನರು ಹೆಚ್ಚು ಫಿದಾ ಆಗಿದ್ದಾರೆ.
ವಿಶೇಷವಾಗಿ ಬ್ಯಾಗಿ ಪ್ಯಾಂಟ್‌ಗಳು ಬೀದಿ ಫ್ಯಾಷನ್‌ನಿಂದ ಹಿಡಿದು ಹೈ-ಫ್ಯಾಷನ್‌ವರೆಗೂ ಜನಪ್ರಿಯವಾಗಿವೆ. ಆದರೆ ಇದು ಹೊಸ ಟ್ರೆಂಡ್‌ ಏನಲ್ಲ. ಬ್ಯಾಗಿ ಪ್ಯಾಂಟ್‌ಗಳ ಇತಿಹಾಸ ಬರೋಬ್ಬರಿ 100 ವರ್ಷಗಳಷ್ಟು ಹಳೆಯದು. ಆದರೆ ಇಂದಿಗೂ ಯುವ ಜನರ ಮನಸೇಳೆಯುತ್ತಿವೆ.

ಬ್ಯಾಗಿ ಪ್ಯಾಂಟ್‌ಗೆ ಇಷ್ಟೊಂದು ಬೇಡಿಕೆ ಏಕೆ?

ಆರಾಮವೇ ಮೊದಲ ಆದ್ಯತೆ: ಇಂದಿನ ಯುವಜನರು ಫ್ಯಾಷನ್‌ನಲ್ಲಿ ಲುಕ್‌ ಜೊತೆಗೆ ಕಂಫರ್ಟ್‌ಗೂ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಸ್ಕಿನ್ನಿ ಜೀನ್ಸ್‌ಗಿಂತ ಸಡಿಲ ಪ್ಯಾಂಟ್‌ಗಳು ಹೆಚ್ಚು ಆರಾಮದಾಯಕವಾಗಿದ್ದು, ಕಾಲೇಜು, ಆಫೀಸ್‌, ಔಟಿಂಗ್‌ ಹಾಗೂ ಟ್ರಾವೆಲ್‌ ಎಲ್ಲದಕ್ಕೂ ಹೊಂದಿಕೊಳ್ಳುತ್ತವೆ.

ಜೆನ್‌ ಜಿ ಯುವಜನರ ಮನಸೇಳೆದ ಬ್ಯಾಗಿ ಟ್ರೆಂಡ್

ಕೊರೊನಾ ಬಳಿಕ ಬದಲಾದ ಫ್ಯಾಷನ್

ಕೋವಿಡ್‌ ಸಮಯದಲ್ಲಿ ಟ್ರ್ಯಾಕ್‌ ಪ್ಯಾಂಟ್‌, ಜಾಗರ್ಸ್‌ ಮತ್ತು ಲೂಸ್‌ ಬಟ್ಟೆಗಳು ಜನರ ದಿನನಿತ್ಯದ ಉಡುಗೆಯಾದವು. ಲಾಕ್‌ಡೌನ್‌ ಬಳಿಕವೂ ಆ ಕಂಫರ್ಟ್‌ ಬಿಟ್ಟುಕೊಡಲು ಜನ ಸಿದ್ಧರಿರಲಿಲ್ಲ. ಹೀಗಾಗಿ ಕಂಫರ್ಟ್‌ ಫ್ಯಾಷನ್‌ ಮತ್ತಷ್ಟು ಜನಪ್ರಿಯವಾಯಿತು.

2000ರ ಫ್ಯಾಷನ್‌ ಮತ್ತೆ ಟ್ರೆಂಡ್‌

2000ರ (Y2K) ದಶಕದ ಫ್ಯಾಷನ್‌ ಮತ್ತೆ ವಾಪಸ್‌ ಬಂದಿರುವುದೂ ಬ್ಯಾಗಿ ಲುಕ್‌ಗೆ ದೊಡ್ಡ ಬೂಸ್ಟ್‌ ನೀಡಿದೆ. ಲೋ-ವೇಸ್ಟ್‌ ಜೀನ್ಸ್‌, ಓವರ್‌ಸೈಜ್‌ ಟೀ-ಶರ್ಟ್‌ಗಳು, ಬ್ಯಾಗಿ ಜೀನ್ಸ್‌ ಮತ್ತು ಸ್ಟ್ರೀಟ್‌ವೇರ್‌ ಶೈಲಿಯನ್ನು ಜೆನ್​ ಜಿ ಹೊಸ ರೀತಿಯಲ್ಲಿ ಅಳವಡಿಸಿಕೊಂಡಿದೆ.

ಸೋಷಿಯಲ್ ಮೀಡಿಯಾ ಬೂಸ್ಟ್

ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ಫ್ಯಾಷನ್‌ ಇನ್‌ಫ್ಲುಯೆನ್ಸರ್‌ಗಳು, ಸೆಲೆಬ್ರಿಟಿಗಳು ಹಾಗೂ ಕಂಟೆಂಟ್‌ ಕ್ರಿಯೇಟರ್‌ಗಳ ಬ್ಯಾಗಿ ಲುಕ್‌ಗಳು ವೈರಲ್‌ ಆಗುತ್ತಿವೆ. ಇದರಿಂದ ಟ್ರೆಂಡ್‌ ವೇಗವಾಗಿ ಜಾಗತಿಕ ಮಟ್ಟದಲ್ಲಿ ಹರಡುತ್ತಿದೆ.

ಜೆಂಡರ್-ನ್ಯೂಟ್ರಲ್ ಫ್ಯಾಷನ್

ಬ್ಯಾಗಿ ಪ್ಯಾಂಟ್‌ಗಳ ಮತ್ತೊಂದು ವಿಶೇಷತೆ ಅವು ಜೆಂಡರ್‌-ನ್ಯೂಟ್ರಲ್‌ ಆಗಿರುವುದು. ಅಂದರೆ ಗಂಡಸರು ಮತ್ತು ಹೆಂಗಸರು ಎನ್ನುವ ಬೇಧವಿಲ್ಲದೆ ಧರಿಸಬಹುದಾಗಿದ್ದು, ವಿಭಿನ್ನ ದೇಹದ ಆಕಾರಗಳಿಗೂ ಸುಲಭವಾಗಿ ಹೊಂದಿಕೊಳ್ಳುತ್ತವೆ.

ಬ್ಯಾಗಿ ಪ್ಯಾಂಟ್‌ಗೆ 100 ವರ್ಷಗಳ ಇತಿಹಾಸ

ಜೆನ್‌ ಜೀ ಕಂಡುಹಿಡಿದ ಫ್ಯಾಷನ್‌ ಇದಲ್ಲ. ಬ್ಯಾಗಿ ಪ್ಯಾಂಟ್‌ಗಳ ಇತಿಹಾಸ ಸುಮಾರು 100 ವರ್ಷಗಳಷ್ಟು ಹಳೆಯದು. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಸಡಿಲವಾದ, ಅಗಲವಾದ ಪ್ಯಾಂಟ್‌ಗಳು ‘ಆಕ್ಸ್‌ಫರ್ಡ್‌ ಬ್ಯಾಗ್ಸ್‌’ಹೆಸರಿನಲ್ಲಿ ಜನಪ್ರಿಯವಾಗಿದ್ದವು. ಬಳಿಕ ಈ ಶೈಲಿ ಕಾಲೇಜು ಕ್ಯಾಂಪಸ್‌ ದಾಟಿ ಯುವಜನರ ಫ್ಯಾಷನ್‌ನಲ್ಲೂ ಕಾಣಿಸಿಕೊಂಡಿತು. ಅದೇ ರೀತಿ, ಅಮೆರಿಕದಲ್ಲಿ ದೊಡ್ಡ ಜಾಕೆಟ್‌ ಮತ್ತು ಸಡಿಲವಾದ ಪ್ಯಾಂಟ್‌ಗಳ ‘ಜೂಟ್ ಸೂಟ್‌’ಶೈಲಿಯೂ ಯುವಜನರಲ್ಲಿ ಜನಪ್ರಿಯವಾಗಿತ್ತು.

1980–90ರ ದಶಕ, ಹಿಪ್‌-ಹಾಪ್‌

ಬ್ಯಾಗಿ ಪ್ಯಾಂಟ್‌ಗಳಿಗೆ ಜಾಗತಿಕ ಮಟ್ಟದ ದೊಡ್ಡ ಪಾಪ್ಯುಲಾರಿಟಿ ಸಿಕ್ಕಿದ್ದು ಹಿಪ್‌-ಹಾಪ್‌ ಮತ್ತು ಸ್ಟ್ರೀಟ್‌ವೇರ್‌ ಸಂಸ್ಕೃತಿಯಿಂದ. ರನ್-ಡಿ.ಎಂ.ಸಿ. ಮತ್ತು ಕ್ರಿಸ್ ಕ್ರಾಸ್ ಸೇರಿದಂತೆ ಹಲವು ಕಲಾವಿದರ ಓವರ್‌ಸೈಜ್‌ ಲುಕ್‌ಗಳು ಈ ಟ್ರೆಂಡ್‌ಗೆ ಮತ್ತಷ್ಟು ಬಲ ನೀಡಿದವು.

ಬೀದಿ ಫ್ಯಾಷನ್‌ ಮಾತ್ರವಲ್ಲ, ಹೈ-ಫ್ಯಾಷನ್‌ನಲ್ಲೂ ಬ್ಯಾಗಿ ಲುಕ್‌

ಇಂದು ಬ್ಯಾಗಿ ಪ್ಯಾಂಟ್‌ಗಳು ಕೇವಲ ಬೀದಿ ಫ್ಯಾಷನ್‌ಗೆ ಸೀಮಿತವಾಗಿಲ್ಲ. ಹಲವು ಪ್ರಮುಖ ಫ್ಯಾಷನ್‌ ಸಂಸ್ಥೆಗಳು ಅಗಲವಾದ ಮತ್ತು ಸಡಿಲವಾದ ವಿನ್ಯಾಸದ ಬಟ್ಟೆಗಳನ್ನು ತಮ್ಮ ಹೊಸ ಸಂಗ್ರಹಗಳಲ್ಲಿ ಬಳಸುತ್ತಿವೆ. ಹೀಗಾಗಿ ಒಮ್ಮೆ ಯುವಜನರ ಬೀದಿ ಫ್ಯಾಷನ್‌ ಎಂದು ಗುರುತಿಸಿಕೊಂಡಿದ್ದ ಬ್ಯಾಗಿ ಲುಕ್‌, ಈಗ ಹೈ-ಫ್ಯಾಷನ್‌ನಲ್ಲೂ ಜನಪ್ರಿಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net