ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ... Watermelon

Watermelon
Published on

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ ಜನರು ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲು ಮತ್ತು ಶಾಖದಿಂದಾಗಿ ಅನೇಕರು ತೀವ್ರ ಬಳಲಿಕೆಯನ್ನು ಅನುಭವಿಸುತ್ತಿದ್ದಾರೆ. ಬಿಸಿಲಿನ ಶಾಖವನ್ನು ನಿಭಾಯಿಸಲು ಬಹುತೇಕರು ಎಸಿ ಮತ್ತು ಕೂಲರ್‌ಗಳನ್ನು ಬಳಸಲು ಪ್ರಾರಂಭಿಸಿದ್ದು, ತಂಪು ಪಾನೀಯಗಳು ಮತ್ತು ನೀರಿನ ಕಾಕ್ಟೇಲ್‌ಗಳ ಮೊರೆ ಹೋಗುತ್ತಿದ್ದಾರೆ.

ಇನ್ನು ಬೇಸಿಗೆಯಲ್ಲಿ ಎಲ್ಲರೂ ಕಲ್ಲಂಗಡಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ, ಈ ಹಣ್ಣು ಹೆಚ್ಚಾಗಿ ಸಿಗುತ್ತದೆ. ಅಲ್ಲದೆ, ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ಬೇಸಿಗೆಯ ಬಳಲಿಕೆಯನ್ನು ನಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇದೆ. ಆದರೆ, ಖರೀದಿ ಮಾಡುವಾಗ ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿದರೆ, ಮನೆಗೆ ರುಚಿಯಿಲ್ಲದ, ಕೆಟ್ಟು ಹೋದ ಹಣ್ಣನ್ನು ತರಬೇಕಾಗುತ್ತದೆ ಎಚ್ಚರ. ಅಲ್ಲದೆ, ಮಾರುಕಟ್ಟೆಯಲ್ಲಿ ನಕಲಿ ಕಲ್ಲಂಗಡಿ ಹಣ್ಣುಗಳು ಸಹ ಮಾರಾಟವಾಗುತ್ತಿವೆ. ಎಚ್ಚರ ವಹಿಸದಿದ್ದರೆ ಹಣದ ಜೊತೆಗೆ ಆರೋಗ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ, ಹಣ್ಣನ್ನು ಖರೀದಿ ಮಾಡುವಾಗ ಅನುಸರಿಸಬೇಕಾದ ತಂತ್ರ ಯಾವುದು? ನಕಲಿ ಹಣ್ಣು ಮತ್ತು ಅಸಲಿ ಹಣ್ಣನ್ನು ಹೇಗೆ ಪತ್ತೆ ಹಚ್ಚುವುದನ್ನು ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತುಂಬಾ ಜನಪ್ರಿಯವಾಗಿರುವುದರಿಂದ, ಅದನ್ನು ಮಾರಾಟ ಮಾಡುವ ಕೆಲವರು ಅದಕ್ಕೆ ಕಲಬೆರಕೆಯನ್ನು ಸೇರಿಸುತ್ತಾರೆ. ಚಿಕ್ಕವರು, ಹಿರಿಯರು ಮತ್ತು ಗರ್ಭಿಣಿಯರು ಸೇರಿದಂತೆ ಎಲ್ಲ ವಯಸ್ಸಿನವರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ಈ ಹಣ್ಣನ್ನು ಕಲಬೆರಕೆ ಮಾಡಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಇದರಲ್ಲಿರುವ ರಾಸಾಯನಿಕ ಕಲಬೆರಕೆಯು ಜನರಿಗೆ ಹಾನಿಕಾರಕವಾಗಿದೆ. ಹಾಗಾದರೆ, ಮಾರುಕಟ್ಟೆಯಲ್ಲಿ ಕಲ್ಲಂಗಡಿ ಖರೀದಿಸಬೇಕಾದರೆ, ಕಲಬೆರಕೆ ಕಲ್ಲಂಗಡಿಯನ್ನು ಹೇಗೆ ಗುರುತಿಸುವುದು ಎಂಬುದನ್ನು ನಾವೀಗ ತಿಳಿಯೋಣ.

ಕಲ್ಲಂಗಡಿಗಳು ಹಣ್ಣಾಗಿ ಕಾಣುವಂತೆ ಮಾಡಲು ಎರಿಥ್ರೋಸಿನ್ ಎಂಬ ಕೆಂಪು ಬಣ್ಣವನ್ನು ಸೇರಿಸಲಾಗುತ್ತದೆ. ಇದನ್ನು ಹತ್ತಿಯ ಉಂಡೆಯಿಂದ ಗುರುತಿಸಬಹುದು. ನಿಜವಾದ ಕಲ್ಲಂಗಡಿಯ ಕೆಂಪು ಭಾಗದ ಮೇಲೆ ಹತ್ತಿಯನ್ನು ನಿಧಾನವಾಗಿ ಉಜ್ಜಿದರೆ, ಯಾವುದೇ ಬಣ್ಣ ಹೊರಬರುವುದಿಲ್ಲ. ಆದರೆ ನೀವು ನಕಲಿ ಕಲ್ಲಂಗಡಿ ಹಣ್ಣಿನ ಮೇಲೆ ಹತ್ತಿಯ ಉಜ್ಜಿದರೆ, ಕೆಂಪು ಬಣ್ಣವು ಅದಕ್ಕೆ ಅಂಟಿಕೊಂಡಿರುವುದನ್ನು ನೀವು ನೋಡುತ್ತೀರಿ.

ನೈಸರ್ಗಿಕ ಕಲ್ಲಂಗಡಿಯನ್ನು ಅದರ ರುಚಿಯಿಂದ ಗುರುತಿಸಬಹುದು. ಸಾಮಾನ್ಯವಾಗಿ ರುಚಿ ಕಡಿಮೆಯಾಗುವುದಿಲ್ಲ. ಆದರೆ ಕಲಬೆರಕೆ ಮಾಡಿದ ಕಲ್ಲಂಗಡಿಯಿಂದ ಯಾವುದೇ ರುಚಿ ಇರುವುದಿಲ್ಲ. ಅನೇಕ ಜನರು ಕಲ್ಲಂಗಡಿಗಳನ್ನು ಖರೀದಿಸಿ ಸಂಗ್ರಹಿಸುತ್ತಾರೆ. ನೈಸರ್ಗಿಕ ಕಲ್ಲಂಗಡಿಗಳು ಸುಲಭವಾಗಿ ಹಾಳಾಗುವುದಿಲ್ಲ. ಆದರೆ ಅದು ರಾಸಾಯನಿಕಗಳೊಂದಿಗೆ ಬೆರೆಸಿದ ಕಲ್ಲಂಗಡಿಯಾಗಿದ್ದರೆ, ಅದು ಬೇಗನೆ ಕೊಳೆಯುತ್ತದೆ.

ಒಂದು ಕಲ್ಲಂಗಡಿ ಖರೀದಿಸಿ ಎರಡು ದಿನಗಳವರೆಗೆ ಇಟ್ಟುಕೊಳ್ಳಿ. ರಾಸಾಯನಿಕವಾಗಿ ಕಲಬೆರಕೆ ಮಾಡಿದ್ದರೆ ಅದು ಬೇಗನೆ ಕೊಳೆಯುತ್ತದೆ. ಇಲ್ಲದಿದ್ದರೆ ಅದು ನಿಜವಾದ ಕಲ್ಲಂಗಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಬಿಸಿ ಮಾಡಿ ಅದಕ್ಕೆ ಒಂದು ಕಲ್ಲಂಗಡಿ ತುಂಡು ಸೇರಿಸಿ. ನೀರು ಬೇಗನೆ ಕೆಂಪು ಬಣ್ಣಕ್ಕೆ ತಿರುಗಿದರೆ, ಕಲ್ಲಂಗಡಿಗೆ ಬಣ್ಣ ಬಳಿದಿದೆ ಎಂದು ನೀವು ಹೇಳಬಹುದು. ಇಂತಹ ಇನ್ನೂ ಹಲವು ವಿಧಾನಗಳಿವೆ.

ಉತ್ತಮ ಕಲ್ಲಂಗಡಿ ಹಣ್ಣು ಖರೀದಿ ಮಾಡುವುದು ಹೇಗೆ?

ಅಂಗಡಿಗಳಲ್ಲಿ ಉತ್ತಮ ಕಲ್ಲಂಗಡಿ ಖರೀದಿಸಲು, ನೀವು ಕಲ್ಲಂಗಡಿಯ ಮೇಲ್ಭಾಗವನ್ನು ನಿಮ್ಮ ಬೆರಳುಗಳಿಂದ ತಟ್ಟಬೇಕು. ಈ ರೀತಿ ತಟ್ಟಿದಾಗ ಆಳವಾದ ಟೊಳ್ಳಾದ ಶಬ್ದ ಬಂದರೆ ಮಾತ್ರ ಅದು ಉತ್ತಮ ಕಲ್ಲಂಗಡಿ. ಸಾಮಾನ್ಯವಾಗಿ, ಒಳ್ಳೆಯ ಕಲ್ಲಂಗಡಿಗಳು ದಪ್ಪವಾಗಿದ್ದು, ಸ್ವಲ್ಪ ಹಳದಿ ಛಾಯೆಯನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಚೆನ್ನಾಗಿ ಮಾಗಿದ ಹಣ್ಣಿನ ಮೇಲಿನ ಹಸಿರು ಪಟ್ಟೆಗಳು ಬೆರಳಿನಷ್ಟು ಅಗಲವಾಗಿರುತ್ತವೆ. ತೆಳುವಾದ ಪಟ್ಟೆಗಳನ್ನು ಹೊಂದಿರುವ ಹಣ್ಣುಗಳು ಕಡಿಮೆ ಸಿಹಿಯಾಗಿರುತ್ತವೆ.

ಇನ್ನು ಕಲ್ಲಂಗಡಿ ಹಣ್ಣಿನ ರುಚಿಯನ್ನು ಅದರ ಕಾಂಡದಿಂದ ನಿರ್ಣಯಿಸಬಹುದು. ಹಣ್ಣು ಮತ್ತು ಬಳ್ಳಿ ಸಂಧಿಸುವ ಕಾಂಡವು ಚಿಕ್ಕದಾಗಿದ್ದರೆ ಮತ್ತು ಟೊಳ್ಳಾಗಿದ್ದರೆ, ಅದು ಸಿಹಿ ರುಚಿಯನ್ನು ಹೊಂದಿರುತ್ತದೆ. ಅಂದಹಾಗೆ ನೀವು ಕಲ್ಲಂಗಡಿ ಹಣ್ಣನ್ನು ತಟ್ಟಿದಾಗ, ಅದು ಬಿರುಕು ಬಿಡುವ ಶಬ್ದ ಮಾಡುತ್ತದೆ. ಈ ವೇಳೆ ಅದರಲ್ಲಿ ಯಾವುದಾದರೂ ರಂಧ್ರಗಳಿವೆಯೇ ಎಂಬುದನ್ನು ನೀವು ಪರಿಶೀಲಿಸಬೇಕು. ಇನ್ನು ದೊಡ್ಡ ಹಣ್ಣನ್ನು ಎತ್ತುವಾಗ ಅದು ಹಗುರವಾಗಿದ್ದರೆ, ಅದರಲ್ಲಿ ನೀರಿನ ಅಂಶ ಮತ್ತು ರುಚಿ ಕಡಿಮೆ ಇರುತ್ತದೆ ಎಂದರ್ಥ. ಒಂದು ವೇಳೆ ಚಿಕ್ಕ ಹಣ್ಣಾಗಿದ್ದರೂ ಸಾಕಷ್ಟು ಭಾರವಾಗಿದ್ದರೆ, ಅದು ಉತ್ತಮ ನೀರಿನ ಅಂಶ ಮತ್ತು ರುಚಿಯನ್ನು ಹೊಂದಿರುತ್ತದೆ ಎಂದರ್ಥ.

ಕಲ್ಲಂಗಡಿಯ ಕೆಳಭಾಗದಲ್ಲಿ ಹಳದಿ ಕಲೆಗಳಿದ್ದರೆ, ಅದು ಹೊಲದಲ್ಲಿ ಮಾಗಿದ ಹಣ್ಣು ಎಂದರ್ಥ. ಬಿಳಿ ಅಥವಾ ಹಸಿರು ಕಲೆಗಳಿದ್ದರೆ, ಅದು ಸಾಕಷ್ಟು ಮಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಕೆಲವು ಸ್ಥಳಗಳಲ್ಲಿ ಹಳದಿ ಕಲೆಗಳ ನಡುವೆ ಬಿಳಿ ಕಲೆಗಳು ಗೋಚರಿಸಿದರೆ, ಅವುಗಳನ್ನು ಚುಚ್ಚುಮದ್ದು ಮಾಡಿ ಹಣ್ಣಾಗಿಸಲಾಗುತ್ತಿದೆ ಎಂದರ್ಥ. ಅದೇ ರೀತಿ, ಕಲ್ಲಂಗಡಿ ಖರೀದಿಸುವ ಮೊದಲು ಅದರಲ್ಲಿ ಯಾವುದೇ ರಂಧ್ರಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ರಂಧ್ರಗಳು ಕೂಡ ಚುಚ್ಚುಮದ್ದಿನ ಸಂಕೇತ ಆಗಿರಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net