

ಅದು 1849 ರ ಮೇ 29. ಅಂದು ವಿವಾಹದ ಶುಭಮುಹೂರ್ತವಿತ್ತು. ವಿವಾಹಕ್ಕೆಂದು ಸಕಲ ಸಿದ್ಧತೆಗಳು ಆಗಿದ್ದವು. ಅಹ್ವಾನಿತ ಅತಿಥಿಗಳು, ವಧು-ವರರ ಪರಿವಾರದವರೆಲ್ಲರೂ ಆಗಮಿಸಿದ್ದರು. ವಿವಾಹದ ವಿಧಿ-ವಿಧಾನಗಳನ್ನು ನೆರವೇರಿಸಲು ಪಾದ್ರಿ ಕೂಡ ಬಂದಾಗಿತ್ತು. ಎಲ್ಲರೂ ಮದುವೆ ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ ಕಾರ್ಯಕ್ರಮದ ಮುಖ್ಯ ವ್ಯಕ್ತಿ ಅಂದರೆ ವರನೇ ಅಲ್ಲಿ ಇರಲಿಲ್ಲ. ಕೆಲವರಿಗೆ ಗಾಬರಿ. ವರನಿಗಾಗಿ ಹುಡುಕಾಟ ಪ್ರಾರಂಭವಾಯಿತು. ಆಗ, ಈ ಮದುಮಗನ ಬಗ್ಗೆ ಸರಿಯಾಗಿ ತಿಳಿದ ಅವನ ಮಿತ್ರ ‘ಚಪ್ಪುಇಸ್’ ಎಂಬುವವ ಹೇಳಿದ, ‘ಅವನು ಎಲ್ಲಿದ್ದಾನೆ ಎಂದು ನನಗೆ ಗೊತ್ತು. ಬೇಕಾದರೆ ನೋಡಿ, ತನ್ನ ಪ್ರಯೋಗ ಶಾಲೆಯಲ್ಲಿ ಏನಾದರೂ ಹೊಸ ಪ್ರಯೋಗವನ್ನು ಮಾಡುತ್ತಾ ಕುಳಿತಿರುತ್ತಾನೆ’. ಸರಿ, ವರನ ಹುಡುಕಾಟಕ್ಕಾಗಿ ಎಲ್ಲರೂ ಅಲ್ಲಿಗೆ ಹೋದರು. ಸ್ನೇಹಿತನ ಮಾತು ಸತ್ಯವಾಗಿತ್ತು! ವರಮಹಾಶಯ ಅಲ್ಲಿಯೇ ಇದ್ದ. ಪ್ರಯೋಗದಲ್ಲಿ ಮಗ್ನನಾಗಿದ್ದ!
‘ಯಾಕ್ರೀ ಸಾಹೇಬರೇ? ಇಂದು ತಮ್ಮ ವಿವಾಹವಿರುವುದು ನೆನಪಿದೆಯೋ? ಇಲ್ಲವೋ?’ ಎಂದು ಕೇಳಿದಾಗ, ‘ಹಾಂ. ನೆನಪಿದೆ’ ಎಂದಷ್ಟೇ ಉತ್ತರ ಬಂತು. ‘ಮತ್ತೆ, ಅಲ್ಲಿ ವಿವಾಹಕ್ಕೆ ಎಲ್ಲ ತಯಾರಿ ಆಗಿದೆ. ಇಲ್ಲಿ ಏನು ಮಾಡುತ್ತಿದ್ದೀರಿ?’ ಎಂದು ಕೇಳಿದರು. ಆಗ, ‘ಬಂದೆ ಬಂದೆ ಇರಿ. ಈ ಕೆಲಸ ಮುಗಿಸಿ ಬಂದುಬಿಡುತ್ತೇನೆ. ಪ್ರಯೋಗವನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುವುದು ಸರಿ ಎನಿಸಲಿಲ್ಲ. ಇನ್ನೇನು ಪ್ರಯೋಗ ಮುಗಿಯುತ್ತದೆ. ಬರುತ್ತೇನೆ’ ಎಂದು ಮದುಮಗ ಉತ್ತರಿಸಿದ.
ಈ ರೀತಿ ಹೇಳಿದ ಮಹಾನ್ ವ್ಯಕ್ತಿ ಮತ್ತಾರೂ ಅಲ್ಲ. ಜನರನ್ನು ರೋಗಗಳಿಂದ, ಸಂಕಷ್ಟಗಳಿಂದ ಮುಕ್ತಮಾಡಲು ತನ್ನ ಬದುಕನ್ನೆಲ್ಲ ಮುಡಿಪಾಗಿಟ್ಟ ಸಂಶೋಧಕ ಲೂಯಿ ಪಾಶ್ಚರ್. ‘ಪ್ರಯೋಗಾಲಯಗಳಿಲ್ಲದಿದ್ದರೆ ವಿಜ್ಞಾನಿಗಳ ಸ್ಥಿತಿ ಶಸ್ತ್ರಗಳಿಲ್ಲದ ಸೈನಿಕರಂತೆ’ ಎಂದು ಪಾಶ್ಚರ್ ಹೇಳಿದ್ದರು.
ಮಹಾವ್ಯಕ್ತಿಗಳೇ ಹಾಗೆ. ಜೀವನದ ಗುರಿಯನ್ನು ಸಾಧಿಸುವಲ್ಲಿ ಮತ್ತು ಹಿಡಿದ ಕೆಲಸವನ್ನು ತುದಿಮುಟ್ಟಿಸುವ ನಿಟ್ಟಿನಲ್ಲಿ ವೈಯಕ್ತಿಕ ಸುಖಸಂತೋಷಗಳನ್ನು ತ್ಯಾಗಮಾಡಲೂ ಹಿಂಜರಿಯುವುದಿಲ್ಲ ಅಥವಾ ಅವುಗಳೊಂದಿಗೆ ರಾಜಿಮಾಡಿಕೊಳ್ಳಲೂ ಅವರು ಸಿದ್ಧ. ಗುರಿಯೆದುರು ಉಳಿದುದೆಲ್ಲ ಅವರಿಗೆ ಗೌಣ. ನಮ್ಮ ಜೀವನದಲ್ಲಿಯೂ ಹಾಗೆ. ಏನಾದರೂ ಗುರಿ ಇಟ್ಟುಕೊಂಡು, ಅದನ್ನು ಈಡೇರಿಸುವ ಕಾರ್ಯದಲ್ಲಿ ಅನೇಕ ಅಡೆತಡೆಗಳು ಬರಬಹುದು. ಆದರೆ ನಮ್ಮಲ್ಲಿನ ಪ್ರಯತ್ನಶೀಲತೆ ನಿರಂತರವಾಗಿರಬೇಕು. ನಮ್ಮ ವೈಯಕ್ತಿಕ ಬದುಕಿನ ಸಣ್ಣಪುಟ್ಟ ಸಮಸ್ಯೆಗಳನ್ನು ಕಾರಣವಾಗಿಸಿಕೊಂಡು ಕಾರ್ಯಕ್ಷಮತೆಯನ್ನು ಕಡಿಮೆ ಮಾಡಿಕೊಂಡರೆ ಹಿಡಿದ ಕೆಲಸ ಸಾಧಿಸಲಾಗದು. ಗುರಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಯಶದ ಕಿರುನಗೆ ಬೀರಲು ಸಾಧ್ಯ.
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)